2022ನೇ ಸಾಲಿನ ಯುಪಿಎಸ್ ಸಿ ಮುಖ್ಯ (UPSC Mains) ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು, ಶೀಘ್ರವೇ ಸಂದರ್ಶನ (UPSC Interview) ನಡೆಯಲಿದೆ. ಈಗಾಗಲೇ ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನಕ್ಕೆ ಹಾಜರಾಗುವಂತೆ ಲೆಟರ್ ಹೊರಡಿಸಲಾಗಿದೆ. ಈ ಹಿನ್ನೆಲೆ ಅಭ್ಯರ್ಥಿಗಳು ಭರ್ಜರಿ ತಯಾರಿಯಲ್ಲಿ ತೊಡಗಿದ್ದಾರೆ. ಅಭ್ಯರ್ಥಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನುಭವಸ್ಥರ ಸಲಹೆಗಳನ್ನು ನಾವು ಹೊತ್ತು ತಂದಿದ್ದೇವೆ. ಯುಪಿಎಸ್ ಸಿ ಸಂದರ್ಶನ ಸಮಯದಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಗಳು ಮಾಡುವ ತಪ್ಪುಗಳು ಹಾಗೂ ಅವುಗಳನ್ನು ಹೇಗೆ ತಪ್ಪಿಸಬೇಕು ಎಂದು ಐಎಎಸ್ ಅಧಿಕಾರಿ ಮನೋಜ್ ಜಿಂದಾಲ್ ಸಲಹೆಗಳನ್ನು ನೀಡಿದ್ದಾರೆ.
2017ರ UPSC ಪರೀಕ್ಷೆಯಲ್ಲಿ 52 ನೇ ರ್ಯಾಂಕ್ ಪಡೆದ IAS ಮನೋಜ್ ಜಿಂದಾಲ್ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ಪೂರ್ವ ಮತ್ತು ಮುಖ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರು. ಆದರೆ, ಮೊದಲ ಪ್ರಯತ್ನದಲ್ಲೇ ಸಂದರ್ಶನದಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಸಾಧ್ಯವಾಗಲಿಲ್ಲ. ಇದು ಬಹುತೇಕ ಅಭ್ಯರ್ಥಿಗಳ ಸಮಸ್ಯೆ. ಹಾಗಾಗಿ 5 ವಿಷಯಗಳನ್ನು ಅಭ್ಯರ್ಥಿಗಳು ನಿರ್ಲಕ್ಷಿಸಬಾರದು ಅಂತಾರೆ ಜಿಂದಾಲ್ ಅವರು.
ಜಿಂದಾಲ್ ಅವರು UPSC ಪರ್ಸನಾಲಿಟಿ ಟೆಸ್ಟ್ಗೆ ಹೇಗೆ ತಯಾರಿ ನಡೆಸಿದ್ದರು. ಜೊತೆಗೆ ಆಕಾಂಕ್ಷಿಗಳು ಮಾಡುವ ತಪ್ಪುಗಳ ಬಗ್ಗೆಯೂ ತಿಳಿಯೋಣ ಬನ್ನಿ.
1) ಮೊದಲಿಗೆ ನಿಮ್ಮನ್ನು ನೀವೇ ಕಡಿಮೆ ಅಂದಾಜು ಮಾಡಿಕೊಳ್ಳಬೇಡಿ. ಸಂದರ್ಶನದಲ್ಲಿ ಯಶಸ್ವಿಯಾಗಲು ಬೇಕಿರುವ ಬಹು ಮುಖ್ಯವಾದ ಕೌಶಲ್ಯ ಆತ್ಮವಿಶ್ವಾಸ. ಅಭ್ಯರ್ಥಿಯಲ್ಲಿನ ಆತ್ಮವಿಶ್ವಾಸದ ಕೊರತೆಯನ್ನು ಮಂಡಳಿಯು ಬಹಳ ಸುಲಭವಾಗಿ ಗ್ರಹಿಸಬಲ್ಲದು. ಎದುರಿಗಿರುವ ವ್ಯಕ್ತಿ ಎಂಥವರು ಎಂಬುದು ದೇಹ ಭಾಷೆಯಿಂದಲೇ ಗೊತ್ತಾಗುತ್ತದೆ. ಏಕೆಂದರೆ ಆತ್ಮವಿಶ್ವಾಸದ ಕೊರತೆ ಇರುವವರು ಉತ್ತರಿಸುವಾಗ ಹಲವು ಬಾರಿ ಗೊಂದಲದಲ್ಲಿ ಕಾಣಿಸಿಕೊಳ್ಳುತ್ತಾರೆ. ನೀವು ಸಂಪೂರ್ಣ ಆತ್ಮವಿಶ್ವಾಸದಿಂದ ಸಂದರ್ಶನಕ್ಕೆ ಹೋಗಬೇಕು ಎಂಬುದು ನನ್ನ ಸಲಹೆ ಎನ್ನುತ್ತಾರೆ ಐಎಎಸ್ ಮನುಜ್ ಜಿಂದಾಲ್.
ಇದನ್ನೂ ಓದಿ: UPSC Success Story: ಟಿವಿ ಶೋ ಮೂಲಕ ಕೋಟ್ಯಾಧಿಪತಿ ಆದ IPS ಅಧಿಕಾರಿ ಮೋಹಿತಾ ಶರ್ಮಾ
2) ನಿಮ್ಮ DAF ನಲ್ಲಿ ಬರೆದಿರುವ ವಿಷಯಗಳನ್ನು ನೆನಪಿಡಿ: UPSC ಸಂದರ್ಶನಕ್ಕೆ ಹೋಗುವ ಅಭ್ಯರ್ಥಿಗಳು ಮೊದಲು DAF ಫಾರ್ಮ್ ಅನ್ನು ಭರ್ತಿ ಮಾಡಿರುತ್ತಾರೆ. DAF ಒಂದು ವಿವರವಾದ ಅರ್ಜಿ ನಮೂನೆಯಾಗಿದ್ದು, ಇದರಲ್ಲಿ ಅಭ್ಯರ್ಥಿಯು ಈಗಾಗಲೇ ಮಂಡಳಿಗೆ ಸಂಬಂಧಿಸಿದ ವಿವಿಧ ರೀತಿಯ ಮಾಹಿತಿಯನ್ನು ಒದಗಿಸಿರುತ್ತಾರೆ. ಇದು ನಿಮ್ಮ ಹವ್ಯಾಸದಿಂದ ಹಿಡಿದು ನೆಚ್ಚಿನ ವಿಷಯಗಳ ಮಾಹಿತಿಯನ್ನು ಒಳಗೊಂಡಿದೆ. ಅದಕ್ಕಾಗಿಯೇ ನಿಮ್ಮ DAF ಫಾರ್ಮ್ ಅನ್ನು ಸರಿಯಾಗಿ ನೆನಪಿಲ್ಲುಕೊಳ್ಳುವುದು ಮುಖ್ಯ. ಏಕೆಂದರೆ ಹೆಚ್ಚಿನ ಪ್ರಶ್ನೆಗಳು ಅದಕ್ಕೆ ಸಂಬಂಧಿಸಿರುತ್ತವೆ.
3) ಸಂದರ್ಶನದಲ್ಲಿ ಆದಷ್ಟು ಸಹಜವಾಗಿರಿ. ತುಂಬಾ ಯಾಂತ್ರಿಕವಾಗಿ ಅಥವಾ ಕಟ್ಟುನಿಟ್ಟಾಗಿ ಕಾಣಿಸಿಕೊಳ್ಳಬೇಡಿ. ಅನೇಕ ಅಭ್ಯರ್ಥಿಗಳು ಆತ್ಮವಿಶ್ವಾಸವನ್ನು ಪ್ರದರ್ಶಿಸುವ ಸಲುವಾಗಿ ತಮ್ಮನ್ನು ತಾವು ಸ್ಟ್ರಾಂಗ್ ವ್ಯಕ್ತಿಯಾಗಿ ತೋರಿಸಿಕೊಳ್ಳುತ್ತಾರೆ. ವಾಸ್ತವದಲ್ಲಿರುವ ನಿಮ್ಮ ವ್ಯಕ್ತಿತ್ವವನ್ನು ಹೊರತರಲು ಪ್ರಯತ್ನಿಸಿ. ಏಕೆಂದರೆ ಇದನ್ನು ವ್ಯಕ್ತಿತ್ವ ಪರೀಕ್ಷೆ ಎಂದು ಕರೆಯಲಾಗುತ್ತದೆ, ಆದ್ದರಿಂದ ಇದರಲ್ಲಿ ನಿಮ್ಮ ನೈಜ ವ್ಯಕ್ತಿತ್ವವನ್ನು ನೋಡಲು ಬಯಸುತ್ತಾರೆ.
4) ಧರಿಸಿನ ಬಗ್ಗೆ ಕಾಳಜಿ ಇರಲಿ. ಸಂದರ್ಶನದ ಸಮಯದಲ್ಲಿ ತುಂಬಾ ಡೀಸೆಂಟ್ ಆಗಿ ಕಾಣುಸಿಕೊಳ್ಳುವುದು ಮುಖ್ಯ. ಇದಕ್ಕಾಗಿ, ನಿಮ್ಮ ಬಟ್ಟೆಗಳು ತಿಳಿ ಬಣ್ಣದಲ್ಲಿರಬೇಕು. ತುಂಬಾ ಗಾಢವಾದ ಬಣ್ಣಗಳ ಬಟ್ಟೆ ಅಥವಾ ಆಭರಣಗಳನ್ನು ಧರಿಸಬೇಡಿ. ನಿಮ್ಮ ವ್ಯಕ್ತಿತ್ವಕ್ಕೆ ಯೋಗ್ಯವಾಗಿ ಕಾಣುವ ಆರಾಮಾದಾಯಕ ಬಟ್ಟೆ ಧರಿಸುವುದು ಸೂಕ್ತ.
5) ಕೊನೆಯಲ್ಲಿ ಧನ್ಯವಾದ ಹೇಳಲು ಮರೆಯಬೇಡಿ: ಸಂದರ್ಶನವನ್ನು ಪರೀಕ್ಷೆಯ ಪ್ರಕ್ರಿಯೆ ಎಂದು ಪರಿಗಣಿಸುವ ಬದಲು, ಮಂಡಳಿಯು ನಿಮ್ಮ ಸಂಪೂರ್ಣ ವ್ಯಕ್ತಿತ್ವವನ್ನು ಪರೀಕ್ಷಿಸಲು ಪ್ರಯತ್ನಿಸುವ ಪ್ರಮುಖ ಭಾಗವಾಗಿ ಪರಿಗಣಿಸಿ. ನೀವು ಒಬ್ಬ ವ್ಯಕ್ತಿಯಾಗಿಯೂ ಯೋಗ್ಯವಾಗಿ ಕಾಣುತ್ತೀರಿ. ಸಂದರ್ಶನ ಆರಂಭದಲ್ಲಿ ಗುಡ್ ಮಾರ್ನಿಂಗ್ ಎಂದು ಶುರು ಮಾಡಿ. ಕೊನೆಯಲ್ಲಿಯೂ ನಿಮ್ಮ ಸಮಯಕ್ಕೆ ಧನ್ಯವಾದ ಎಂದು ಹೇಳುವುದನ್ನು ಮರೆಯಬೇಡಿ. ಈ ಸಣ್ಣ ವಿಷಯಗಳು ನಿಮ್ಮ ವ್ಯಕ್ತಿತ್ವವನ್ನು ಪ್ರತಿಬಿಂಬಿಸುತ್ತವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ