ನಮ್ಮ ದೇಶದ ಆಡಳಿತ ವ್ಯವಸ್ಥೆಯಲ್ಲಿ ( Indian Administrative Service) ಉನ್ನತ ಹುದ್ದೆಗಳಾದ IAS, IPS ಸಿಗಬೇಕು ಎಂದರೆ ಕಠಿಣ ಪರೀಕ್ಷೆಯಾದ UPSC ಪರೀಕ್ಷೆಯಲ್ಲಿ ಯಶಸ್ವಿಯಾಗಲೇಬೇಕು. ವಿಶ್ವದಲ್ಲೇ ಅತ್ಯಂತ ಕಠಿಣ ಪರೀಕ್ಷೆ ಎಂದು ಕರೆಯಲಾಗುವ UPSC Exam ಅನ್ನು ಹಿಂದಿನ ದಿನ ಕೂತು ಓದಿ ಪಾಸ್ ಮಾಡಲು ಸಾಧ್ಯವೇ ಇಲ್ಲ. ವರ್ಷಗಳ ಕಠಿಣ ಪರಿಶ್ರಮ, ಸರಿಯಾದ ಯೋಜನೆಯ ಓದು, ನಿರಂತರ ಅಭ್ಯಾಸ, ತಾಳ್ಮೆ ಎಲ್ಲವೂ ಇದ್ದರೆ ಮಾತ್ರ ಯುಪಿಎಸ್‌ಸಿ ಎಂಬ ಮಹಾಸಾಗರವನ್ನು ಈಜಬಹುದು, ಈಜಿ ಜಯಿಸಬಹುದು.
ಪ್ರತಿವರ್ಷ ನಡೆಯುವ ಈ ಪರೀಕ್ಷೆಗೆ ಅರ್ಜಿ ಹಾಕುವವರು ಸಾವಿರಾರು ಅಭ್ಯರ್ಥಿಗಳಾದರೂ ಅಲ್ಲಿ ಯಶಸ್ಸು ಕಾಣುವವರು ಮಾತ್ರ ಕೆಲವರು. ಈ ಕೆಲವರಲ್ಲಿ ಯುಪಿಎಸ್‌ಸಿ ಪರೀಕ್ಷೆ ಮಾಡಿದ ಸಾಧಕರ ಬಗ್ಗೆ ಪ್ರತಿಯೊಬ್ಬ ಪರೀಕ್ಷಾ ಆಕಾಂಕ್ಷಿಯು ತಿಳಿಯಬೇಕು. ಇವರ ಸಕ್ಸಸ್ ಸ್ಟೋರಿ ಒಬ್ಬರ ಜೀವನಕ್ಕೆ ಸ್ಪೂರ್ತಿ ನೀಡುತ್ತದೆ. ಹೀಗೆ ಸ್ಪೂರ್ತಿ ಚಿಲುಮೆ, ಯುಪಿಎಸ್‌ಸಿ ಟಾಪರ್ ಒಬ್ಬರ ಯಶಸ್ಸಿನ ಕಥೆಯನ್ನು ನಾವಿಲ್ಲಿ ಮೆಲುಕು ಹಾಕೋಣ ಬನ್ನಿ.
ಯುಪಿಎಸ್‌ಸಿಯ ಟಾಪರ್ ಸಮ್ಯಕ್ ಜೈನ್
ಯುಪಿಎಸ್‌ಸಿ ಪರೀಕ್ಷೆಯಲ್ಲಿ 7 ನೇ ರ್‍ಯಾಂಕ್ ಹೋಲ್ಡರ್ ಆಗಿರುವ ಸಮ್ಯಕ್ ಜೈನ್ ಅವರೇ ನಮ್ಮ ಇಂದಿನ ಸಾಧಕರು. ಸರಿಯಾಗಿ ಕಣ್ಣು, ಕಿವಿ ಇರುವ ಅದೆಷ್ಟೋ ಜನ ಅಪ್ರಯೋಜಕವಾಗಿ ಜೀವನ ಸಾಗಿಸುತ್ತಾರೆ.
ಅಂಥವರ ನಡುವೆ ದೃಷ್ಟಿಹೀನರಾಗಿದ್ದರೂ CSE 2021ರಲ್ಲಿ ಅಖಿಲ ಭಾರತ 7 ನೇ ಶ್ರೇಣಿಯನ್ನು ಪಡೆದು ಎಲ್ಲರಿಗೂ ನಿದರ್ಶನವಾಗಿ ನಿಂತಿದ್ದಾರೆ ಸಮ್ಯಕ್ ಜೈನ್. ಮೊದಲ ಪ್ರಯತ್ನದಲ್ಲಿ ಯಶಸ್ಸು ಕಾಣುವಲ್ಲಿ ವಿಫಲರಾದ ಜೈನ್ ಛಲ ಬಿಡದೇ ಅದೇ ಪ್ರಯತ್ನ ಮಾಡಿ ಎರಡನೇ ಬಾರಿಗೆ ಯುಪಿಎಸ್‌ಸಿ ಎಂಬ ಯುದ್ಧವನ್ನು ಗೆದ್ದಿದ್ದಾರೆ.
ಸಮ್ಯಕ್ ಜೈನ್ ಅವರ ಹಿನ್ನೆಲೆ
ಸಮ್ಯಕ್ ಜೈನ್ ದೆಹಲಿ ಮೂಲದವರಾಗಿದ್ದು, ರಾಷ್ಟ್ರ ರಾಜಧಾನಿಯಲ್ಲಿಯೇ ಹುಟ್ಟಿ ಬೆಳೆದಿದ್ದಾರೆ. ಜೈನ್ ಅವರ ತಾಯಿ ಮತ್ತು ತಂದೆ ಇಬ್ಬರೂ ಏರ್ ಇಂಡಿಯಾದಲ್ಲಿ ಕೆಲಸ ಮಾಡುತ್ತಿದ್ದಾರೆ.
ಜೈನ್‌ಗೆ ಹುಟ್ಟಿನಿಂದಲೆ ದೃಷ್ಟಿ ಸಮಸ್ಯೆ ಇರಲಿಲ್ಲವಾದರೂ 18ನೇ ವಯಸ್ಸಿನಲ್ಲಿ, ಅವರಿಗೆ ದೃಷ್ಟಿ ಸಮಸ್ಯೆ ಆರಂಭವಾಯಿತು. ಹಾಗೇ ಈ ಸಮಸ್ಯೆ ಗಂಭಿರವಾಗಿ ಅವರು ಓದುವ ಮತ್ತು ಬರೆಯುವ ಸಾಮರ್ಥ್ಯವನ್ನೇ ಕಳೆದುಕೊಂಡರು. ಆದರೂ ಕೂಡ ಒಂದಿಷ್ಟು ಅಂಜದೇ ಓದನ್ನು ಮುಂದುವರೆಸಿದರು.
ಸಮ್ಯಕ್ ಜೈನ್ ವಿದ್ಯಾಭ್ಯಾಸ
ಸಮ್ಯಕ್ ಅವರು ದೆಹಲಿಯಿಂದ ಬಿಎ ಇಂಗ್ಲಿಷ್ (ಆನರ್ಸ್) ನಲ್ಲಿ ಪದವಿಯನ್ನು ಪೂರ್ಣಗೊಳಿಸಿ ನಂತರ ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮಾಸ್ ಕಮ್ಯುನಿಕೇಷನ್‌ನಲ್ಲಿ ಇಂಗ್ಲಿಷ್ ಪತ್ರಿಕೋದ್ಯಮದಲ್ಲಿ ಪಿಜಿ ಡಿಪ್ಲೊಮಾ ಮಾಡಿದರು. ಇದನ್ನು ಪೂರ್ಣಗೊಳಿಸಿದ ನಂತರ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿಯನ್ನು ಸಹ ಪೂರ್ಣಗೊಳಿಸಿದರು.
ಕೇವಲ ಆಡಿಯೋ ಮೂಲಕ ಪರೀಕ್ಷೆ ಬರೆದು ಟಾಪ್ ಆಗಿ ಬಂದ ಜೈನ್
ಕೋವಿಡ್ ಸಂದರ್ಭದಲ್ಲಿ ಜಗತ್ತೇ ನಿಂತು ಹೋಗಿದ್ದ ವೇಳೆ ಜೈನ್ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. 2020 ರಲ್ಲಿ ತಯಾರಿ ನಡೆಸುತ್ತಿರುವಾಗಲೇ ಪರೀಕ್ಷೆ ತೆಗೆದುಕೊಂಡ ಜೈನ್ ಅದರಲ್ಲಿ ಸಕ್ಸಸ್ ಕಾಣುವಲ್ಲಿ ವಿಫಲರಾದರು.
ಇದನ್ನೂ ಓದಿ: UPSC Success Story: ಬ್ಯಾಂಕ್ ಉದ್ಯೋಗ ಮಾಡಿಕೊಂಡು, ಯಾವುದೇ ಕೋಚಿಂಗ್ ಸಹಾಯವಿಲ್ಲದೆ IRS ಆದ ಚಂದ್ರಶೇಖರ್
ಇದನ್ನು ಒಂದು ಪ್ರಾಯೋಗಿಕ ಪರೀಕ್ಷೆಯಾಗಿ ತೆಗೆದುಕೊಂಡು ಜೈನ್ ಮತ್ತೆ ಅಭ್ಯಾಸ ಆರಂಭಿಸಿದರು. ಈ ಬಾರಿ ಪರೀಕ್ಷೆ ಪಾಸ್ ಮಾಡಲೇಬೇಕು ಎಂಬ ನಿಟ್ಟಿನಲ್ಲಿ ಅಭ್ಯಾಸ ಆರಂಭಿಸಿದ ಜೈನ್ ಅವರ ಶ್ರದ್ಧೆ, ಪರಿಶ್ರಮಕ್ಕೆ 2021ರ ಪರೀಕ್ಷೆಯಲ್ಲಿ ಫಲ ದೊರೆಯುತ್ತದೆ. ಸಮ್ಯಕ್ ಜೈನ್ ಅವರು ಕಣ್ಣಿನ ಸಮಸ್ಯೆಯಿಂದಾಗಿ ಆಡಿಯೊ ಕೇಳುವ ಮೂಲಕ ಓದುತ್ತಿದ್ದು, ಇನ್ನೂ ಇವರ ಪರೀಕ್ಷೆಯನ್ನು ಅವರ ತಾಯಿ ಬರೆದಿದ್ದಾರೆ ಎನ್ನಲಾಗಿದೆ.
ಹೇಗೆ ತಯಾರಿ ನಡೆಸಿದ್ದರು ಜೈನ್?
ತಮ್ಮ ಅಭ್ಯಾಸದ ಬಗ್ಗೆ ವಿವರಿಸಿದ ಜೈನ್ ಯಶಸ್ಸಿಗೆ ಸ್ಥಿರತೆ ಮತ್ತು ನಿರಂತರ ಅಭ್ಯಾಸ ಕಾರಣ ಎಂದಿದ್ದಾರೆ. ಜೈನ್ ದಿನಕ್ಕೆ ಎಳು ಗಂಟೆಗಳ ಕಾಲ ತಯಾರಿ ನಡೆಸುತ್ತಿದ್ದರು. ಜೊತೆಗೆ ಆಗಾಗ್ಗೆ ಅಣುಕು ಪರೀಕ್ಷೆಗಳನ್ನು ಸಹ ತೆಗೆದುಕೊಳ್ಳುತ್ತಿದ್ದರಂತೆ. ಅಣುಕು ಪರೀಕ್ಷೆಗಳು ಅಭ್ಯರ್ಥಿಗಳಿಗೆ ಧೈರ್ಯ ಮತ್ತು ಅವರ ಜ್ಞಾನದ ಬಗ್ಗೆ ಮೌಲ್ಯಮಾಪನ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಾರೆ. ಸಂದರ್ಶನದಲ್ಲೂ ಸಹ ನಿಮ್ಮದೇ ವಿಶ್ಲೇಷಣೆ ರೀತಿಯಲ್ಲಿ ಉತ್ತರ ನೀಡುವ ಪ್ರಯತ್ನ ಮಾಡಿ ಅಂತಾ ಸಲಹೆ ನೀಡುತ್ತಾರೆ ಈ ಟಾಪರ್.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ