ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾಗಿರುವ ಯಪಿಎಸ್‌ಸಿ ಪರೀಕ್ಷೆಯನ್ನು (UPSC Exam) ಪ್ರತಿವರ್ಷ ಸಾವಿರಾರು ಅಭ್ಯರ್ಥಿಗಳು ಎದುರಿಸುತ್ತಿದ್ದಾರೆ. ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾಗಿರುವ ಯುಪಿಎಸ್‌ಸಿ ಪರೀಕ್ಷೆಯ ನೇಮಕಾತಿ ಪ್ರಕ್ರಿಯೆ (Recruitment Process) ಕುರಿತು ಕೇಂದ್ರ ಲೋಕ ಸೇವಾ ಆಯೋಗ ಹಲವಾರು ಬದಲಾವಣೆಗಳನ್ನು, ಹೊಸ ಹೊಸ ನೀತಿ ನಿಯಮಗಳನ್ನು ಜಾರಿಗೊಳಿಸುತ್ತಲೇ ಇರುತ್ತದೆ. ಯುಪಿಎಸ್‌ಸಿ ಇತ್ತೀಚೆಗೆ ಹೊರತಂದ ಆದೇಶ ಸಂಸದೀಯ ಸಮಿತಿಯ ಜೊತೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
"UPSC ಸಲ್ಲಿಸಿದ ಉತ್ತರದ ಕೀಲಿಯೇ ಫೈನಲ್"
ಇತ್ತೀಚಿನ ಒಂದು ಆದೇಶದಲ್ಲಿ ಪೂರ್ವಭಾವಿ ಪರೀಕ್ಷೆ ಬರೆದ ಅಭ್ಯರ್ಥಿಗಳು ತಾವು ಉತ್ತರಿಸಿದ ಉತ್ತರ ಸರಿಯೋ, ತಪ್ಪೋ ಎಂಬ ಉತ್ತರ ಕೀಲಿಯನ್ನು ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಮುಗಿದ ಬಳಿಕವೇ ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಉತ್ತರದ ಕೀಗೆ ಆಕ್ಷೇಪಣೆಗಳನ್ನು ಎತ್ತುವಂತಿಲ್ಲ. UPSC ಸಲ್ಲಿಸಿದ ಉತ್ತರದ ಕೀಲಿಯು ಅಂತಿಮವಾಗಿದೆ. ಯಾರೂ ಅದಕ್ಕೆ ಯಾವುದೇ ಆಕ್ಷೇಪಣೆಗಳನ್ನು ಎತ್ತುವಂತಿಲ್ಲ ಎಂದು ಕೇಂದ್ರ ಲೋಕಸೇವಾ ಆಯೋಗ ತಿಳಿಸಿದೆ.
ಯುಪಿಎಸ್‌ಸಿ ಕ್ರಮಕ್ಕೆ ಖಂಡನೆ
ಕೇಂದ್ರ ಲೋಕಸೇವಾ ಆಯೋಗದ ಈ ಕ್ರಮಕ್ಕೆ ಹಲವು ವಿರೋಧಗಳು ವ್ಯಕ್ತವಾಗಿದ್ದು, "ಇದು ಭಾರತದ ಉನ್ನತ ನಾಗರಿಕ ಸೇವಕರನ್ನು ಆಯ್ಕೆ ಮಾಡುವ ಪರೀಕ್ಷೆಯ ಸಿಂಧುತ್ವ ಮತ್ತು ನ್ಯಾಯಸಮ್ಮತತೆಯನ್ನು ರಾಜಿ ಮಾಡಿಕೊಳ್ಳುತ್ತದೆ" ಎಂದು ಸಂಸದೀಯ ಸಮಿತಿ ಸೇರಿ ಹಲವರು ಟೀಕಿಸಿದ್ದಾರೆ.
ಆಯೋಗವು ಈ ಪರೀಕ್ಷೆಯ ಮುಂದಿನ ಹಂತಕ್ಕೆ ಮುಂದುವರಿಯುವ ಮೊದಲು ಕೀ ಉತ್ತರವನ್ನು ನೋಡುವ ಅವಕಾಶವನ್ನು ಅಭ್ಯರ್ಥಿಗಳಿಂದ ವಂಚಿತಗೊಳಿಸುತ್ತಿದೆ ಎಂದು ಸಾರ್ವಜನಿಕ ಕುಂದುಕೊರತೆಗಳು, ಕಾನೂನು ಮತ್ತು ನ್ಯಾಯದ ಸ್ಥಾಯಿ ಸಮಿತಿಯ ಬಿಜೆಪಿ ಸದಸ್ಯ ಸುಶೀಲ್ ಕುಮಾರ್ ಮೋದಿ ಕಳೆದ ವಾರ ಸಂಸತ್ತಿನಲ್ಲಿ ಮಂಡಿಸಿದ ವರದಿಯಲ್ಲಿ ಹೇಳಿದ್ದಾರೆ.
"ಈ ಅಭ್ಯಾಸವು ಅಭ್ಯರ್ಥಿಗಳ ಉತ್ಸಾಹವನ್ನು ನಿರುತ್ಸಾಹಗೊಳಿಸುವುದಲ್ಲದೆ ಪರೀಕ್ಷಾ ಪ್ರಕ್ರಿಯೆಯ ಸಿಂಧುತ್ವ ಮತ್ತು ನ್ಯಾಯಸಮ್ಮತತೆಯನ್ನು ರಾಜಿ ಮಾಡುತ್ತದೆ." ಎಂದು ತಿಳಿಸಿದ್ದಾರೆ.
ಆದೇಶ ಹಿಂದಕ್ಕೆ ತೆಗೆದುಕೊಳ್ಳುವಂತೆ ಸಂಸದೀಯ ಸಮಿತಿ ಒತ್ತಾಯ
ಕೇಂದ್ರ ಲೋಕಸೇವಾ ಆಯೋಗದ ಈ ಆದೇಶದ ಬೆನ್ನಲ್ಲೇ ಸಂಸದೀಯ ಸಮಿತಿ ಈ ಕ್ರಮವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಿದೆ. ನಾಗರಿಕ ಸೇವಾ ಪರೀಕ್ಷೆಯ ಪ್ರಾಥಮಿಕ ಹಂತದ ನಂತರ ಉತ್ತರದ ಕೀಲಿಯನ್ನು ಪ್ರಕಟಿಸಲು ಮತ್ತು ಅಭ್ಯರ್ಥಿಗಳಿಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಅವಕಾಶ ಮಾಡಿಕೊಡಲು ಯುಪಿಎಸ್‌ಸಿ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಈಗ ಹೊರಡಿಸಿರುವ ಆದೇಶವನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಸಂಸದೀಯ ಸಮಿತಿ ತಿಳಿಸಿದೆ.
ಜೊತೆಗೆ ಐಎಎಸ್ ಮತ್ತು ಐಪಿಎಸ್‌ನಂತಹ ಉನ್ನತ ನಾಗರಿಕ ಸೇವೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಪರೀಕ್ಷೆಯ ವೇಳಾಪಟ್ಟಿಯನ್ನು ಬಿಗಿಗೊಳಿಸಬೇಕು ಎಂದು ಸಮಿತಿಯು ಶಿಫಾರಸು ಮಾಡಿದೆ.
ಅಭ್ಯರ್ಥಿಗಳಿಗೆ ಅವರ ಶೈಕ್ಷಣಿಕ ಹಿನ್ನೆಲೆಯನ್ನು ಲೆಕ್ಕಿಸದೆ ಸಮಾನ ಸ್ಪರ್ಧೆಯನ್ನು ಒದಗಿಸಲು ನಾಗರಿಕ ಸೇವಾ ಪರೀಕ್ಷೆಯ ಪ್ರಶ್ನೆ ಮಾದರಿ ಮತ್ತು ಪಠ್ಯಕ್ರಮವನ್ನು ನಿರ್ಣಯಿಸಲು ತಜ್ಞರ ಗುಂಪನ್ನು ನೇಮಿಸಬೇಕು ಎಂದು ಸಂಸದೀಯ ಸಮಿತಿ ಹೇಳಿದೆ.
"ಅಭ್ಯರ್ಥಿಗಳಿಗೆ ತಮ್ಮ ತಪ್ಪುಗಳನ್ನು ತಿದ್ದಿಕೊಳ್ಳಲು ಅವಕಾಶ ಮಾಡಿಕೊಡಿ"
ಯುಪಿಎಸ್‌ಸಿಯ ಈ ಕ್ರಮಕ್ಕೆ ಖಾಸಗಿ ಕೋಚಿಂಗ್ ಸೆಂಟರ್‌ನ ಶಿಕ್ಷಕರು, ಪರಿಣಿತರು ವಿರೋಧ ವ್ಯಕ್ತಪಡಿಸಿದ್ದಾರೆ. ಅಭ್ಯರ್ಥಿಯು ಪೂರ್ವಭಾವಿ ಪರೀಕ್ಷೆ ಉತ್ತರ ಕೀಲಿ ಬಗ್ಗೆ ಅಸಮಾಧಾನಗೊಂಡಿದ್ದರೆ ಯಾವುದೇ ಪತ್ರಿಕೆ ಅಥವಾ ಉತ್ತರದ ಮರು ಮೌಲ್ಯಮಾಪನಕ್ಕೆ ಯುಪಿಎಸ್‌ಸಿ ಅವಕಾಶ ನೀಡಬೇಕು.
ಇದರಿಂದ ಅಭ್ಯರ್ಥಿಗಳಿಗೆ ತಮ್ಮ ದೌರ್ಬಲ್ಯದ ಕ್ಷೇತ್ರಗಳಲ್ಲಿ ಸುಧಾರಿಸುವ ಅವಕಾಶ ಲಭಿಸುತ್ತದೆ ಮತ್ತು ಓದಿನ ಕಡೆ ಮತ್ತಷ್ಟು ಜಾಗೃತರಾಗಬಹುದು ಎಂದು ತಿಳಿಸಿದ್ದಾರೆ.
ಪರೀಕ್ಷೆಯ ಆಯ್ಕೆ ಸಮಯ ತಗ್ಗಿಸುವಂತೆ ಶಿಫಾರಸು
ಸಂಸದೀಯ ಸಮಿತಿ ಮತ್ತೊಂದು ಮಹತ್ವದ ಶಿಫಾರಸು ಮಾಡಿದೆ. ಕೇಂದ್ರ ಲೋಕಸೇವಾ ಆಯೋಗಕ್ಕೆ ಅಭ್ಯರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಪರಿಗಣಿಸಿ ನಾಗರಿಕ ಸೇವೆಗಳ ಪರೀಕ್ಷೆಯ ಆಯ್ಕೆ ಚಕ್ರದ ಅವಧಿಯನ್ನು ಕಡಿಮೆ ಮಾಡುವಂತೆ ಕೇಳಿಕೊಂಡಿದೆ.
ಇದನ್ನೂ ಓದಿ: UPSC Success Story: ಸತತ ಸೋಲುಗಳ ಬಳಿಕ 6ನೇ ಪ್ರಯತ್ನದಲ್ಲಿ IAS ಆದ ಛಲಗಾತಿ ರಮ್ಯಾ
ಸಿವಿಲ್ ಸರ್ವೀಸಸ್ ಪರೀಕ್ಷೆಗೆ ಅಧಿಸೂಚನೆಯಿಂದ ಫಲಿತಾಂಶಗಳ ಘೋಷಣೆಯವರೆಗೆ ಸರಾಸರಿ ಸುಮಾರು 15 ತಿಂಗಳುಗಳು ಬೇಕಾಗಬಹುದು. ಈ ಅವಧಿಯನ್ನು ಕಡಿಮೆಗೊಳಿಸಿ, ನೇಮಕಾತಿ ಪರೀಕ್ಷೆಯ ಅವಧಿ ಆರು ತಿಂಗಳು ಮೀರದಂತೆ ನೋಡಿಕೊಳ್ಳಿ ಎಂದು ಸಮಿತಿ ಹೇಳಿದೆ.
ಸದ್ಯ ಕೇಂದ್ರ ಲೋಕಸೇವಾ ಆಯೋಗದ ಪ್ರಕಾರ ಅಂತಿಮ ಫಲಿತಾಂಶ ಪ್ರಕಟವಾದ ನಂತರ ಪ್ರಾಥಮಿಕ ಪರೀಕ್ಷೆಯ ಉತ್ತರದ ಕೀಲಿಯನ್ನು ಬಿಡುಗಡೆ ಮಾಡಲಾಗುತ್ತದೆ. ವರ್ಷದಲ್ಲಿ ಸುಮಾರು 5 ಲಕ್ಷ ಅಭ್ಯರ್ಥಿಗಳು ಪೂರ್ವಭಾವಿ ಪರೀಕ್ಷೆಯನ್ನು ತೆಗೆದುಕೊಂಡರೆ, ಅದರಲ್ಲಿ ಸುಮಾರು 12,000 ಜನರು ಮಾತ್ರ ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ