ಈಗಾಗಲೇ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೇ ತುಂಬಾನೇ ಕಠಿಣವಾದ ಪರೀಕ್ಷೆ ಅಂತ ಹೇಳಲಾಗುವ ಯುಪಿಎಸ್‌ಸಿ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಗಳನ್ನು (UPSC Result ) ಬಿಡುಗಡೆ ಆಗಿದ್ದು ನಮಗೆಲ್ಲಾ ಗೊತ್ತೇ ಇದೆ.
ಪರೀಕ್ಷೆಯಲ್ಲಿ 184ನೇ ರ‍್ಯಾಂಕ್ ಪಡೆದ ಇಬ್ಬರ ರೋಲ್ ನಂಬರ್, ಹೆಸರು ಒಂದೆಯಂತೆ!
ಈ ಸ್ಪರ್ಧಾತ್ಮಕ ಪರೀಕ್ಷೆಯ ಒಂದು ದಿನದ ನಂತರ, ಒಂದೇ ಹೆಸರು ಮತ್ತು ಒಂದೇ ರೋಲ್ ನಂಬರ್ ಅನ್ನು ಹೊಂದಿರುವ ಇಬ್ಬರು ಮಹಿಳೆಯರು ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವುದಾಗಿ ಹೇಳಿಕೊಂಡಿದ್ದಾರೆ. ಈ ಇಬ್ಬರೂ ಮಹಿಳೆಯರು ಮಧ್ಯಪ್ರದೇಶದವರಾಗಿದ್ದು, 184ನೇ ರ‍್ಯಾಂಕ್ ಗಳಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಈ ಇಬ್ಬರೂ ಮಹಿಳೆಯರ ಕುಟುಂಬ ಸದಸ್ಯರು ತಮ್ಮ ತಮ್ಮ ಹೆಣ್ಣುಮಕ್ಕಳ ಯಶಸ್ಸನ್ನು ತುಂಬಾನೇ ಸಡಗರ, ಸಂತೋಷದಿಂದ ಆಚರಿಸುತ್ತಿದ್ದಾರೆ.
ಆಯೆಷಾ ಎಂಬ ಇಬ್ಬರು ಮಹಿಳೆಯರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 184ನೇ ರ‍್ಯಾಂಕ್ ಗಳಿಸಿದ್ದಾರೆ. ಸರಿ ಬಿಡಿ, ಇಬ್ಬರು ತುಂಬಾನೇ ಕಷ್ಟಪಟ್ಟು ಓದಿ ಆಕಸ್ಮಿಕ ಎಂಬಂತೆ ಇಬ್ಬರ ಹೆಸರು ಒಂದೇ ಆಗಿರಬಹುದು ಅಂತ ನೀವು ಅಂದುಕೊಳ್ಳಬಹುದು. ಆದರೆ ಕುತೂಹಲ ಮೂಡಿಸುವ ವಿಷಯ ಏನೆಂದರೆ ಈ ಇಬ್ಬರು ಮಹಿಳೆಯರ ರೋಲ್ ನಂಬರ್ ಸಹ ಒಂದೇ ಆಗಿದೆಯಂತೆ ನೋಡಿ.
ಈ ಸ್ಪರ್ಧಾತ್ಮಕ ಪರೀಕ್ಷೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಈ ಎರಡು ಕುಟುಂಬಗಳು ಸಂಭ್ರಮಾಚರಣೆ ಆರಂಭಿಸಿದವು. ದೇವಾಸ್ ನಿವಾಸಿ ನಜೀರುದ್ದೀನ್ ಅವರ ಪುತ್ರಿ ಆಯೆಷಾ ಫಾತಿಮಾ ಮತ್ತು ಇನ್ನೊಬ್ಬ ಮಹಿಳೆ ಅಲಿರಾಜ್ಪುರದ ನಿವಾಸಿಯಾಗಿದ್ದು, ಸಲೀಮುದ್ದಿನ್ ಅವರ ಮಗಳಂತೆ ಅಂತ ಹೇಳಲಾಗುತ್ತಿದೆ.
ಈ ಇಬ್ಬರು ಮಹಿಳೆಯರು ಪರೀಕ್ಷೆಯ ಬಗ್ಗೆ ಏನ್ ಹೇಳಿಕೊಂಡಿದ್ದಾರೆ ನೋಡಿ..
ಈ ಇಬ್ಬರೂ ತಾವು 184ನೇ ರ‍್ಯಾಂಕ್ ಪಡೆದಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಎಂದು ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ. ಅವರು ತಮ್ಮ ರೋಲ್ ಸಂಖ್ಯೆ 7811744 ಎಂದು ಹೇಳಿಕೊಂಡಿದ್ದಾರೆ. ಈ ಇಬ್ಬರೂ ತಾವು ಪರೀಕ್ಷೆಯನ್ನು ಬರೆದು ಯುಪಿಎಸ್‌ಸಿ ಸಂದರ್ಶನಕ್ಕೆ ಹಾಜರಾಗಿದ್ದೇವೆ ಎಂದು ಸಹ ಹೇಳಿಕೊಂಡಿದ್ದಾರೆ.
ಈ ಇಬ್ಬರು ಆಯೆಷಾ ಅವರ ಬಗ್ಗೆ ಮನೆಯವರು ಹೇಳಿದ್ದೇನು ನೋಡಿ..
ಆಯೆಷಾ ಮಕ್ರಾನಿ ಅವರ ಸಹೋದರ ಶಹಬುದ್ದೀನ್ ಮಕ್ರಾನಿ ಅವರು ತಮ್ಮ ಸಹೋದರಿ ದೇಶದ ಕಠಿಣ ಪರೀಕ್ಷೆಗಾಗಿ ತುಂಬಾನೇ ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ. ತನ್ನ ಸಹೋದರಿ 184ನೇ ರ‍್ಯಾಂಕ್ ಪಡೆದಿದ್ದಾರೆ ಎಂದು ಅವರು ಹೇಳಿದರು. ತನ್ನ ಸಹೋದರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವುದನ್ನು ಸಾಬೀತುಪಡಿಸಲು ಅಗತ್ಯವಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಅವರು ತಿಳಿಸಿದ್ದಾರೆ.
ತನ್ನ ಮಗಳು ಆಯೆಷಾ ಫಾತಿಮಾ ಅವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿದ್ದಾಳೆ ಎಂದು ನಜೀರುದ್ದೀನ್ ಅವರು ಹೇಳಿದ್ದಾರೆ. ಇನ್ನೊಬ್ಬ ಆಯೆಷಾ ಜೊತೆ ಏನಾದರೂ ಮೋಸ ನಡೆದಿದೆ ಎಂಬುದು ಅವರ ಮಾತಾಗಿದೆ.
ಸಮಗ್ರ ತನಿಖೆಯ ನಂತರವೇ ವಾಸ್ತವವು ಬೆಳಕಿಗೆ ಬರಲಿದೆ ಅಂತ ಈ ಎರಡು ಕುಟುಂಬದವರು ತಿಳಿಸಿದ್ದಾರೆ. ಸ್ಥಳೀಯ ಪತ್ರಿಕೆಯೊಂದು ಈ ಇಬ್ಬರ ಪ್ರವೇಶ ಪತ್ರಗಳನ್ನು ಸಹ ಪರಿಶೀಲಿಸಿತು. ಆಯೇಷಾ ಮಕ್ರಾನಿ ಅವರ ಕಾರ್ಡ್ ನಲ್ಲಿ ಸಂದರ್ಶನದ ದಿನ ಗುರುವಾರವಾಗಿತ್ತು. ಆಯೆಷಾ ಫಾತಿಮಾ ಅವರ ಕಾರ್ಡ್ ನಲ್ಲಿ ಅದು ಏಪ್ರಿಲ್ 25 ಎಂದರೆ ಮಂಗಳವಾರವಾಗಿತ್ತು.
ದೇವಾಸ್ ನಿವಾಸಿ ಆಯೇಷಾ ಅವರ ಪ್ರವೇಶ ಪತ್ರದಲ್ಲಿ ಯುಪಿಎಸ್‌ಸಿ ವಾಟರ್ ಮಾರ್ಕ್ ಮತ್ತು ಕ್ಯೂಆರ್ ಕೋಡ್ ಇದ್ದರೆ, ಅಲಿರಾಜ್ಪುರದ ಆಯೇಷಾ ಅವರ ಪರೀಕ್ಷೆಯ ಪ್ರವೇಶ ಕಾರ್ಡ್ ನಲ್ಲಿ ಈ ವಾಟರ್ ಮಾರ್ಕ್ ಮತ್ತು ಯಾವುದೇ ಕ್ಯೂಆರ್ ಕೋಡ್ ಸಹ ಇಲ್ಲ ಅಂತ ಹೇಳಲಾಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ