ನಮ್ಮಲ್ಲಿ ಚೆನ್ನಾಗಿ ಓದಬೇಕು (Education), ದೊಡ್ಡವರಾದ ಮೇಲೆ ದೊಡ್ಡ ಕಂಪನಿಯಲ್ಲಿ ಕೆಲಸ (Job) ಮಾಡಬೇಕು ಎಂಬಂತೆಯೇ ಮಕ್ಕಳನ್ನು ಪೋಷಕರು ಬೆಳೆಸುತ್ತಾರೆ. ಒಳ್ಳೆಯ ಉದ್ಯೋಗ ಸಿಗಬೇಕು ಎಂದರೆ ಈಗಿನಿಂದ ಚೆನ್ನಾಗಿ ಓದಬೇಕು ಎಂದು ಮಕ್ಕಳಿಗೆ ಕಲಿಸಲಾಗುತ್ತದೆ. ಓದು ಮುಗಿದ ಬಳಿಕ ಉದ್ಯೋಗ ಬೇಟೆಗಿಳಿಯುವ (Job Search) ಯುವಜನತೆಗೆ ಆಗ ವಾಸ್ತವದ ಅರಿವಾಗುತ್ತದೆ. ಒಳ್ಳೆಯ ಕೆಲಸ ಸಿಗಲು ಓದು ಮಾತ್ರ ಸಾಲದು, ಸದ್ಯದ ಪರಿಸ್ಥಿತಿಯಲ್ಲಿ ಬೇಡಿಕೆಯಲ್ಲಿರುವ ಕೌಶಲ್ಯಗಳು ಬೇಕು ಎಂದು ತಿಳಿಯುತ್ತೆ. ಇಷ್ಟು ದಿನ ಗೊತ್ತಿಲ್ಲದನ್ನು ತಿಳಿಸಲು ಶಾಲಾ-ಕಾಲೇಜುಗಳಲ್ಲಿ ಶಿಕ್ಷಕರು-ಉಪನ್ಯಾಸಕರು ಇದ್ದರು. ಈಗ ನೀವು ಸ್ವತಂತ್ರ ವ್ಯಕ್ತಿ, ನಿಮ್ಮ ಕಾಲಿನ ಮೇಲೆ ನೀವೇ ನಿಲ್ಲಬೇಕು. ನಿಮ್ಮ ತಪ್ಪುಗಳಿಂದ ನೀವೇ ಕಲಿಯಬೇಕು.
ಉದ್ಯೋಗ ಹುಡುಕಾಟದಲ್ಲೂ ಸಾಮಾನ್ಯವಾಗಿ ಮೊದಮೊದಲು ಎಲ್ಲರೂ ಕೆಲ ತಪ್ಪುಗಳನ್ನು ಮಾಡುತ್ತಾರೆ. ತಪ್ಪುಗಳಿಂದ ಪಾಠ ಕಲಿಯುತ್ತಾರೆ. ತಮ್ಮನ್ನು ತಾವು ಸುಧಾರಿಸಿಕೊಳ್ಳುತ್ತಾರೆ. ಆದರೆ ಕೆಲವೊಂದು ವಿಷಯಗಳು, ಗೊತ್ತಿಲ್ಲದೇ ಮಾಡುತ್ತಿರುವ ತಪ್ಪುಗಳು ನಮ್ಮ ಅರಿವಿಗೆ ಬರಲ್ಲ. ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಉದ್ಯೋಗವನ್ನು ಹುಡುಕುವಾಗ ನಮ್ಮನ್ನು ನಾವು ಸಿದ್ಧಪಡಿಸಿಕೊಳ್ಳುವುದು ಅವಶ್ಯಕ.
ನಮ್ಮ ಜ್ಞಾನ ಮತ್ತು ಕೌಶಲ್ಯಗಳು ಉದ್ಯೋಗಗಳನ್ನು ಪಡೆಯಬಹುದಾದರೂ, ನಾವು ಪೂರ್ವಸಿದ್ಧತಾ ಕೆಲಸವನ್ನು ಸಂಪೂರ್ಣವಾಗಿ ಮಾಡಬೇಕು. ಹಾಗಾಗಿ ಕೆಲವೊಂದಿಷ್ಟು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.
1) ಬರೆದು ಇಟ್ಟುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳಿ: ನಾವು ಮುಂದೆ ಏನು ಮಾಡಬೇಕು ಎಂಬುದನ್ನು ಮನಸ್ಸಿನಲ್ಲಿ ಯೋಜಿಸಿ ನಂತರ ಅದನ್ನು ಮರೆತುಬಿಡುವುದು ಮಾನವನ ಸಹಜ ಸ್ವಭಾವ. ಹಾಗಾಗಿ ನಮ್ಮ ಯೋಜನೆಗಳೇನು ಎಂಬುದನ್ನು ಸಣ್ಣ ಕಾಗದದ ಮೇಲೆ ನೋಟ್ಸ್ ಮಾಡಿಕೊಳ್ಳಬೇಕು. ಉದಾಹರಣೆಗೆ, ನೀವು ಹೊಸ ಕಂಪನಿಗೆ ಸಂದರ್ಶನಕ್ಕೆ ಹೋಗುತ್ತಿದ್ದೀರಿ ಎಂದು ಭಾವಿಸೋಣ. ನೀವು ನಿಮ್ಮನ್ನು ಹೇಗೆ ಪರಿಚಯಿಸಿಕೊಳ್ಳುತ್ತೀರಿ, ನಿಮ್ಮ ಅನುಭವಗಳನ್ನು ಹೇಗೆ ಪ್ರಸ್ತುತಪಡಿಸುತ್ತೀರಿ. ಅವುಗಳನ್ನು ನೋಟ್ಸ್ ಮಾಡಿಟ್ಟುಕೊಂಡರೆ ನಿಮಗೆ ಒಂದು ಸ್ಪಷ್ಟತೆ ಬರುತ್ತದೆ.
2) ಗುಣಮಟ್ಟದ ರೆಸ್ಯೂಮ್ ತಯಾರಿ ಅಗತ್ಯ : ನಿಮ್ಮ ರೆಸ್ಯೂಮ್ ಪ್ರೊಫೈಲ್ ಉದ್ಯೋಗ ಜಗತ್ತಿಗೆ ನೀವು ಯಾರೆಂದು ಗುರುತಿಸುವಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಆದ್ದರಿಂದ ನೀವು ಅದನ್ನು ಉತ್ತಮ ಗುಣಮಟ್ಟದಲ್ಲಿ ರೆಸ್ಯೂಮ್ ಅನ್ನು ತಯಾರಿಸಬೇಕು. ನಿಮ್ಮ ರೆಸ್ಯೂಮ್ ಸಂಕ್ಷಿಪ್ತವಾಗಿ ನಿಮ್ಮ ಬಗ್ಗೆ ಎಲ್ಲಾ ಮಾಹಿತಿಯನ್ನು ಒಳಗೊಂಡಿರಬೇಕು.
3) ಕಂಪನಿ ಫ್ರೆಂಡ್ಲಿ ರೆಸ್ಯೂಮ್ ಮಾಡಿ: ಒಂದೇ ರೆಸ್ಯೂಮ್ ತಯಾರಿಸಿ ಎಲ್ಲ ಕಂಪನಿಗಳಿಗೆ ಕಳುಹಿಸಬೇಡಿ. ಪ್ರತಿ ಕಂಪನಿಯು ಏನನ್ನು ನಿರೀಕ್ಷಿಸುತ್ತದೆಯೋ ಅದಕ್ಕೆ ಅನುಗುಣವಾಗಿ ವ್ಯತ್ಯಾಸಗಳೊಂದಿಗೆ ಪ್ರತ್ಯೇಕ ರೆಸ್ಯೂಮ್‌ಗಳನ್ನು ನೀವು ಸಿದ್ಧಪಡಿಸಿ.
ಇದನ್ನೂ ಓದಿ: Workplace Stress: ಉದ್ಯೋಗಿಗಳೇ ಕೆಲಸದ ಒತ್ತಡದಲ್ಲೇ ನರಳಬೇಡಿ, ಜಸ್ಟ್ ಈ ಟಿಪ್ಸ್ ಫಾಲೋ ಮಾಡಿ
4) ರೆಸ್ಯೂಮ್ ಅನ್ನು 3 ಭಾಗಗಳಾಗಿ ವಿಂಗಡಿಸಿ : ಪ್ರೊಫೈಲ್ ನೋಟ್ ಹೇಗಿರಬೇಕು ಎಂಬುದರ ಬಗ್ಗೆ ಗೊಂದಲವಿದೆಯೇ, ಚಿಂತಿಸಬೇಡಿ. ನಿಮ್ಮ ರೆಸ್ಯೂಮ್ ಅನ್ನು 3 ಭಾಗಗಳಾಗಿ ವಿಂಗಡಿಸಿ. ಮೊದಲ ಭಾಗದಲ್ಲಿ, ನಿಮ್ಮನ್ನು ಎರಡು ಸಾಲುಗಳಲ್ಲಿ ವಿವರಿಸಿ. ನೀವು ಮುಂದೆ ಏನು ಮಾಡಲಿದ್ದೀರಿ ಎಂಬುದನ್ನು ಸಹ ಇಲ್ಲಿ ಉಲ್ಲೇಖಿಸಿ. ನೀವು ಹೊಂದಿರುವ ಕೌಶಲ್ಯಗಳನ್ನು ಎರಡನೇ ಪಟ್ಟಿ ಮಾಡಿ. ತಾಂತ್ರಿಕ ಕೌಶಲ್ಯಗಳನ್ನು ಸಹ ಇಲ್ಲಿ ವಿವರಿಸಬಹುದು. ಮೂರನೆಯದಾಗಿ ನಿಮ್ಮ ಕೆಲಸದ ಅನುಭವವನ್ನು ನಮೂದಿಸಿ. ಈ ಸಿಂಪಲ್ ಫಾರ್ಮೆಟ್ ನಲ್ಲಿ ರೆಸ್ಯೂಮ್ ಇದ್ದರೆ ಸಾಕು.
5) ಇವುಗಳನ್ನು ಮರೆಯದಿರಿ: ಉದ್ಯೋಗಾಕಾಂಕ್ಷಿಗಳು ತಮ್ಮ ಸಂವಹನ ಕೌಶಲ್ಯ, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಪ್ರಸ್ತುತ ಟ್ರೆಂಡ್‌ನಲ್ಲಿ ಕಂಪನಿಗಳು ಯಾವ ರೀತಿಯ ಬದಲಾವಣೆಗಳನ್ನು ನಿರೀಕ್ಷಿಸುತ್ತಿವೆ ಎಂಬುದನ್ನು ತಿಳಿದುಕೊಳ್ಳಿ. ಅದಕ್ಕೆ ತಕ್ಕಂತೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ಕಲಿಯುವಿಕೆ ನಿರಂತರ ಎಂಬುವುದನ್ನು ಮರೆಯಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ