ಉದ್ಯೋಗ ಸಂದರ್ಶನಕ್ಕೆ (Job Interview) ಹೋಗುವುದು ಎಂದರೆ ಸುಲಭದ ಮಾತಲ್ಲ. ಅದಕ್ಕಾಗಿ ಒಂದಿಷ್ಟು ತಯಾರಿ ಇರಲೇಬೇಕು. ಸಂದರ್ಶನಕ್ಕೆ ತಯಾರಿ ಮಾಡುವುದೆಂದರೆ ಸಾಮಾನ್ಯವಾಗಿ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳಿಗೆ (Question-Answer) ಸಿದ್ಧರಾಗಿರಬೇಕು. ಸಂದರ್ಶನದಲ್ಲಿ ಸಾಮಾನ್ಯವಾಗಿ ಹೆಸರು, ಅರ್ಹತೆ, ಆಸಕ್ತಿಗಳಂಥ ವಿಷಯಗಳ ಹೊರತಾಗಿ ಒಂದಿಷ್ಟು ಮುಖ್ಯವಾದ ಪ್ರಶ್ನೆಗಳನ್ನು ಕೇಳಿಯೇ ಕೇಳುತ್ತಾರೆ. ಹಾಗಾಗಿ ಸಂದರ್ಶನಕ್ಕೆ ಹೋಗುವ ಮೊದಲು ಉದ್ಯೋಗ ಆಕಾಂಕ್ಷಿಗಳು ಯಾವಾಗಲೂ ಉತ್ತರಗಳನ್ನು ಸಿದ್ಧಪಡಿಸಬೇಕು.
ಹಾಗಿದ್ದರೆ ಸಂದರ್ಶನಗಳಲ್ಲಿ ಸಾಮಾನ್ಯವಾಗಿ ಯಾವ ವಿಷಯಗಳಿಗೆ ಸಂಬಂಧಪಟ್ಟ ಪ್ರಶ್ನೆಗಳನ್ನು ಕೇಳಲಾಗುತ್ತದೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
1. ವ್ಯಕ್ತಿತ್ವ ಮೌಲ್ಯಮಾಪನ: ನಿಮ್ಮ ಬಗ್ಗೆ ವಿವರವಾಗಿ ತಿಳಿಯಲು ಸಂದರ್ಶಕರು ನಿಮ್ಮ ವ್ಯಕ್ತಿತ್ವ ಮೌಲ್ಯಮಾಪನ ಮಾಡುವಂಥ ಪ್ರಶ್ನೆಗಳನ್ನು ಕೇಳುತ್ತಾರೆ. ಆ ಪ್ರಶ್ನೆಗಳು ಹೀಗಿರಬಹುದು: ನಿಮ್ಮ ಬಗ್ಗೆ ಹೇಳಿ, ನಿಮ್ಮ ಸಾಮರ್ಥ್ಯಗಳೇನು ಮತ್ತು ಈ ಕಂಪನಿಯಲ್ಲಿ ಅದನ್ನು ಹೇಗೆ ಬಳಸಿಕೊಳ್ಳಬಹುದು? ನಿಮ್ಮ ಸಹೋದ್ಯೋಗಿಗಳ ಬಗ್ಗೆ ನಿಮ್ಮ ಅನಿಸಿಕೆ ಏನು?
ನೀವು ಯಾವ ವಿಷಯಗಳಲ್ಲಿ ಉತ್ಸಾಹ, ಆಸಕ್ತಿಯನ್ನು ಹೊಂದಿದ್ದೀರಿ? ಈ ಕೆಲಸಕ್ಕೆ ನೀವು ಹೇಗೆ ಪರಿಪೂರ್ಣ ಎನಿಸುತ್ತೀರಿ? ನೀವು ಈ ಕೆಲಸಕ್ಕೆ ಹೇಗೆ ಪರಿಪೂರ್ಣರಾಗಿದ್ದೀರಿ, ನೀವು ಎಂದಾದರೂ ಇತರರ ನಕಾರಾತ್ಮಕ ಅಭಿಪ್ರಾಯವನ್ನು ಬದಲಾಯಿಸಿದ್ದೀರಾ? ಈ ಕೆಲಸದಲ್ಲಿ ನೀವು ಯಾವ ಸವಾಲುಗಳನ್ನು ನಿರೀಕ್ಷಿಸುತ್ತಿದ್ದೀರಿ? ಮುಂತಾದ ಪ್ರಶ್ನೆಗಳನ್ನು ಕೇಳಬಹುದು.
2. ನಿಮ್ಮ ಸಾಮರ್ಥ್ಯಗಳ ಬಗೆಗಿನ ಪ್ರಶ್ನೆಗಳು: ನೀವು ಕೆಲಸಕ್ಕೆ ಸೂಕ್ತ ಅಭ್ಯರ್ಥಿಯೇ ಅಥವಾ ಇಲ್ಲವೇ ಎಂಬುದನ್ನು ನಿಮ್ಮ ಸಾಮರ್ಥ್ಯಗಳು ನಿರ್ಧರಿಸುತ್ತವೆ. ಆದ್ದರಿಂದ ಈ ಮುಂದಿನ ಪ್ರಶ್ನೆಗಳು ನಿಮ್ಮ ಸಾಮರ್ಥ್ಯಗಳಿಗೆ ಸಂಬಂಧಿಸಿವೆ.
ಸಾಮರ್ಥ್ಯಕ್ಕೆ ಸಂಬಂಧಿಸಿದ ಪ್ರಶ್ನೆಗಳು ಹೀಗಿರಬಹುದು. ಹಿಂದಿನ ಕೆಲಸದಲ್ಲಿ ನಿಮ್ಮ ಜವಾಬ್ದಾರಿಗಳನ್ನು ವಿವರಿಸುವುದು, ನೀವು ತಂಡವನ್ನು ಹೇಗೆ ಮುನ್ನಡೆಸಿದ್ದೀರಿ? ಯಾವ ಸಾಫ್ಟ್‌ವೇರ್‌ನಲ್ಲಿ ಹೆಚ್ಚು ಪ್ರವೀಣರು? ನಿಮ್ಮ ಕೌಶಲ್ಯಗಳೇನು? ಕೆಲಸದ ಸಾಧನೆಗಳೇನು? ನೀವು ಎದುರಿಸಿದ ಸವಾಲುಗಳು ಮತ್ತು ನೀವು ಅವುಗಳನ್ನು ಹೇಗೆ ಪರಿಹರಿಸಿದ್ದೀರಿ? ನೀವು ಗ್ರಾಹಕರೊಂದಿಗೆ ಹೇಗೆ ಸಂವಹನ ನಡೆಸುತ್ತೀರಿ? ಎಂಬಿತ್ಯಾದಿ ಪ್ರಶ್ನೆಗಳನ್ನು ನೀವು ನಿರೀಕ್ಷಿಸಬಹುದು.
ಇದನ್ನೂ ಓದಿ: Interview Tips-30: ಜಾಬ್ ಇಂಟರ್ವ್ಯೂನಲ್ಲಿ ಇವುಗಳ ಬಗ್ಗೆ ಮಾತನಾಡಿದ್ರೆ, ಖಂಡಿತಾ ಕೆಲಸ ಸಿಗಲ್ಲ
3. ಅರ್ಹತೆಗೆ ಸಂಬಂಧಿಸಿದ ಪ್ರಶ್ನೆಗಳು: ಸಂದರ್ಶಕರು ಈ ಪ್ರಶ್ನೆಗಳನ್ನು ಕೇಳುವುದರೊಂದಿಗೆ ಆ ಸ್ಥಾನಕ್ಕೆ ನೀವು ಸೂಕ್ತರೇ ಎಂದು ನಿರ್ಣಯಿಸಲು ಬಯಸುತ್ತಾರೆ.
ಅಂಥ ಪ್ರಶ್ನೆಗಳು ಹೀಗಿರಬಹುದು: ನಿಮ್ಮ ಕೆಲಸದ ತರಬೇತಿ, ಸರ್ಟಿಫಿಕೇಟ್‌ಗಳು, ಉನ್ನತ ಶಿಕ್ಷಣದ ಮಟ್ಟ, ಹಿಂದಿನ ಕಂಪನಿಯಲ್ಲಿನ ಅನುಭವ, ಸಮಸ್ಯೆಗಳು ಎದುರಾದಾಗ ಅದನ್ನು ಪರಿಹರಿಸುವ ಕುರಿತಾದ ಪ್ರಶ್ನೆಗಳನ್ನು ಕೇಳಬಹುದು.
4. ವರ್ತನೆಯ ಮೌಲ್ಯಮಾಪನ: ನಿಮ್ಮ ಕೌಶಲ್ಯ ಮತ್ತು ಅರ್ಹತೆಗಳಂತೆಯೇ ಕೆಲಸದ ಕಡೆಗೆ ನಿಮ್ಮ ಕೆಲಸದ ವಿಧಾನವೂ ಅಷ್ಟೇ ಮುಖ್ಯವಾಗಿದೆ. ಅದಕ್ಕಾಗಿಯೇ ನೇಮಕಾತಿದಾರರು ತಮ್ಮ ಕಂಪನಿಯಲ್ಲಿ ಕೆಲಸ ಮಾಡಲು ಬಯಸುವ ಪ್ರತಿಯೊಬ್ಬ ಅಭ್ಯರ್ಥಿಯ ನಡವಳಿಕೆಯ ಮೌಲ್ಯಮಾಪನ ಮಾಡಲು ಇಷ್ಟ ಪಡುತ್ತಾರೆ. ಸಂದರ್ಶಕರು ನಿಮ್ಮ ವೃತ್ತಿಪರ ಗುರಿಗಳನ್ನು ಕೇಳಬಹುದು. ನೀವು ವಿಫಲವಾದಾಗ ಅದನ್ನು ಹೇಗೆ ನಿರ್ವಹಿಸುತ್ತೀರಿ? ನಿರೀಕ್ಷೆಗಳನ್ನು ಪೂರೈಸುವುದು ಅಥವಾ ಗುರಿಯನ್ನು ತಲುಪುವ ಬಗ್ಗೆ ಕೇಳಬಹುದು.
ಕೆಲಸದಲ್ಲಿ ಆದ್ಯತೆಗಳನ್ನು ಹೇಗೆ ಹೊಂದಿಸುತ್ತೀರಿ? ಕೆಲಸದಲ್ಲಿನ ಸಂಘರ್ಷವನ್ನು ಹೇಗೆ ಎದುರಿಸುತ್ತೀರಿ? ಕಟ್ಟುನಿಟ್ಟಾದ ಗಡುವು ಮತ್ತು ಕೆಲಸದ ಪರಿಸರದಲ್ಲಿನ ಬದಲಾವಣೆಗಳಂತಹ ಸಮಸ್ಯೆಗಳನ್ನು ನೀವು ಹೇಗೆ ನಿರ್ವಹಿಸುತ್ತೀರಿ ಎಂಬ ಬಗ್ಗೆ ಕೇಳಬಹುದು.
5. ಉದ್ಯಮದ ಬಗ್ಗೆ ನಿಮ್ಮ ಜ್ಞಾನವನ್ನು ಪರಿಶೀಲಿಸಲಾಗುತ್ತದೆ: ಸಂದರ್ಶನದಲ್ಲಿ ಚರ್ಚಿಸಲಾಗುವ ಮತ್ತೊಂದು ಪ್ರಮುಖ ವಿಷಯವು ನಿಮ್ಮ ಉದ್ಯಮದ ಜ್ಞಾನಕ್ಕೆ ಸಂಬಂಧಿಸಿದೆ. ಸಂದರ್ಶಕರು ಉದ್ಯಮಕ್ಕೆ ಸಂಬಂಧಿಸಿದ ನಿಮ್ಮ ಜ್ಞಾನದ ಆಳವನ್ನು ತಿಳಿಯಲು ಬಯಸುತ್ತಾರೆ.
ಇಂದು ನಮ್ಮ ಉದ್ಯಮವನ್ನು ಕಾಡುತ್ತಿರುವ ಪ್ರಸ್ತುತ ದೊಡ್ಡ ಸಮಸ್ಯೆಗಳು ಯಾವುವು? ಮೇಲ್ವಿಚಾರಕರಾಗಿ ಅವುಗಳನ್ನು ನಿವಾರಿಸಲು ನಿಮ್ಮ ಯೋಜನೆಗಳು ಯಾವುವು? ನೀವು ಹೆಚ್ಚು ಯಶಸ್ವಿಯಾಗಲು ಹೇಗೆ ಪ್ರಯತ್ನಿಸುತ್ತೀರಿ ಎಂಬಂತಹ ಪ್ರಶ್ನೆಗಳನ್ನು ಕೇಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ