ಒಂದು ಕಂಪನಿಯಲ್ಲಿ ಸಾಮಾನ್ಯ ಉದ್ಯೋಗಿಯಾಗಿ ಬಂದು ಪರಿಶ್ರಮ, ಕೆಲಸ, ಚಾಣಕ್ಯತನದಿಂದ ಅದೇ ಕಂಪನಿಯ (Company) ಪ್ರತಿಷ್ಠಿತ ಹುದ್ದೆಗೆ ನೇಮಕವಾಗುವುದು ಎಂದರೆ ನಿಜಕ್ಕೂ ಇದೊಂದು ಸಾಧನೆ. ಉದ್ಯೋಗಿಗಳನ್ನೇ (Employee) ಕಂಪನಿಯ ಸ್ಥಾಪಕರ ಹುದ್ದೆಗೆ ಉನ್ನತೀಕರಣಗೊಳಿಸುವ ಪರಂಪರೆ ಉದ್ಯಮದಲ್ಲಿ ಪ್ರಾರಂಭವಾಗಿದೆ. ಸ್ವಿಗ್ಗಿ, ಜೊಮ್ಯಾಟೋ (Zomato), ರೆಬೆಲ್ ಫುಡ್ಸ್, ಹೋಮ್ ಲೇನ್, ಹೌಸ್‌ಜಾಯ್‌ನಂತಹ ಸ್ಟಾರ್ಟ್‌ಅಪ್‌ಗಳು ಅಂತಹ ಕಂಪನಿಗಳ ಸಾಲಿಗೆ ಸೇರಿವೆ.
ಉದ್ಯೋಗಿಯಾಗಿ ಬಂದು ಕಂಪನಿ ಜವಾಬ್ದಾರಿ ಹೊತ್ತು ನಿಭಾಯಿಸಿರುವ ಇಂತಹ ಉದಾಹರಣೆಗಳು ಅದೆಷ್ಟೋ ಇವೆ. ಇಂತಹ ವ್ಯಕ್ತಿಗಳ ಸಾಲಲ್ಲಿ ಮಹಿಳಾ ಉದ್ಯೋಗಿ ಆಕೃತಿ ಚೋಪ್ರಾ ಕೂಡ ಸೇರಿದ್ದಾರೆ.
ಜೊಮ್ಯಾಟೋ ಸಹ-ಸಂಸ್ಥಾಪಕಿ ಸ್ಥಾನಕ್ಕೆ ಆಕೃತಿ ಚೋಪ್ರಾ
ಆಕೃತಿ ಚೋಪ್ರಾ, ಫುಡ್‌ಟೆಕ್ ಯುನಿಕಾರ್ನ್ ಜೊಮ್ಯಾಟೋದಲ್ಲಿ ಉದ್ಯೋಗಿಯಾಗಿ ಸೇರಿ ನಂತರ ಹಣಕಾಸು ಮತ್ತು ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಕಂಪನಿಯ ಸಹ-ಸಂಸ್ಥಾಪಕರಾಗಿದ್ದಾರೆ.
ಇದನ್ನೂ ಓದಿ: ಡಾಕ್ಟರ್ ಓದಿದ ಬಳಿಕ IPS, IAS ಆದ ಅಸ್ಗರ್ಗೆ ಪ್ರಧಾನಿ ಮೋದಿಯಿಂದ ಸನ್ಮಾನ
2011 ರಲ್ಲಿ ಜೊಮ್ಯಾಟೋದಲ್ಲಿ ಉದ್ಯೋಗಿಯಾಗಿ ಸೇರಿದ ಇವರು, ಅಲ್ಲಿಂದ ಸತತವಾಗಿ ಕಂಪನಿಯ ಏಳಿಗೆಗೆ ದುಡಿದವರಲ್ಲಿ ಒಬ್ಬರೆನಿಸಿದರು. ಇದರ ಫಲವಾಗಿ ಹತ್ತು ವರ್ಷಗಳ ಕೆಲಸದ ಫಲಪ್ರದವಾಗಿ 45,590 ಕೋಟಿ ಮೌಲ್ಯದ ಕಂಪನಿಯಲ್ಲಿ ಹಣಕಾಸು ಮತ್ತು ಕಾರ್ಯಾಚರಣೆಗಳ ಉಪಾಧ್ಯಕ್ಷರಾಗಿ ನೇಮಕಗೊಂಡರು. ಪ್ರಸ್ತುತ ಇವರನ್ನು ಮೂರು ವರ್ಷಗಳ ಹಿಂದೆ ಜೊಮ್ಯಾಟೋದ ಸಹ-ಸಂಸ್ಥಾಪಕಿ ಮತ್ತು ಸಿಎಫ್ಒ ಸ್ಥಾನಕ್ಕೆ ಅಲಂಕರಿಸಲಾಗಿದೆ.
ಜನನ ಮತ್ತು ವಿದ್ಯಾಭ್ಯಾಸ
1988 ರಲ್ಲಿ ಗುರ್ಗಾಂವ್‌ನಲ್ಲಿ ಜನಿಸಿದ ಆಕೃತಿ ಚೋಪ್ರಾ, ದೆಹಲಿಯ ಲೇಡಿ ಶ್ರೀ ರಾಮ್ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದರು. ಆಕೃತಿ ಇವರು ಚಾರ್ಟರ್ಡ್ ಅಕೌಂಟೆಂಟ್ ಕೂಡ ಆಗಿದ್ದಾರೆ.
PwC ಕಂಪನಿಯಲ್ಲಿ ಕೆಲಸದ ಅನುಭವ ಹೊಂದಿರುವ ಚೋಪ್ರಾ
ಜೊಮ್ಯಾಟೋ ಕಂಪನಿಗೆ ಸೇರುವ ಮೊದಲು ಲವ್‌ಲಾಕ್ ಮತ್ತು ಲೆವಿಸ್ ಎಂಬ ನೆಟ್‌ವರ್ಕ್ ಕಂಪನಿ ಮತ್ತು PwC ಕಂಪನಿಯಲ್ಲಿ ಆಕ್ರಿತಿ ಕೆಲಸ ಮಾಡುತ್ತಿದ್ದರು. ಮೂರು ವರ್ಷಗಳ ಕಾಲ PWCಯಲ್ಲಿ ಕೆಲಸ ಮಾಡಿದ ನಂತರ 2011 ರಲ್ಲಿ ಜೊಮ್ಯಾಟೋದಲ್ಲಿ ಉದ್ಯೋಗಿಯಾಗಿ ಸೇರ್ಪಡೆಯಾದರು.
ಕಂಪನಿಯ ಹಲವು ವಿಭಾಗಗಳಲ್ಲಿ ಕಾರ್ಯ ನಿರ್ವಹಿಸಿರುವ ಚೋಪ್ರಾ
ಸುಮಾರು ಒಂದು ದಶಕದವರೆಗೆ ಒಂದೊಂದೆ ಪಾತ್ರಗಳನ್ನು ಕಂಪನಿಯಲ್ಲಿ ನಿಭಾಯಿಸುತ್ತಾ ಬಂದ ಇವರು ಜೊಮ್ಯಾಟೋದ ಅತ್ಯಂತ ಹಿರಿಯ ಉದ್ಯೋಗಿಗಳಲ್ಲಿ ಒಬ್ಬರು. ಆಕೃತಿ ಚೋಪ್ರಾ ಕಂಪನಿಯ ಹಣಕಾಸು ಮತ್ತು ಕಾರ್ಯಾಚರಣೆ ವಿಭಾಗದ ಹಿರಿಯ ವ್ಯವಸ್ಥಾಪಕಿಯಾಗಿ ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದರು. ಸಮೀರ್ ಮಹೇಶ್ವರಿ ಅವರು ಕೆಳಗಿಳಿದ ನಂತರ ಆ ಸ್ಥಾನಕ್ಕೆ ಆಕೃತಿ ಚೋಪ್ರಾ ನೇಮಕಗೊಂಡರು.
ಒಟ್ಟಾರೆ ಕಂಪನಿಯ ಇವರ ಕೆಲಸ ಗುರುತಿಸಿ ಉಪಾಧ್ಯಕ್ಷರಾಗಿ ಬಡ್ತಿ ನೀಡಿ , 2021ರಲ್ಲಿ ಇನ್ ಚೀಫ್ ಪೀಪಲ್ಸ್ ಆಫೀಸ್ (CPO) ಆಗಿ ನೇಮಕ ಮಾಡಿತು. ಅಲ್ಲದೆ, ಅವರು ಸಹ ಸಂಸ್ಥಾಪಕ ಹುದ್ದೆಗೆ ಕೂಡ ಬಡ್ತಿ ಪಡೆದರು.
Blinkit ನ ಸಂಸ್ಥಾಪಕರ ಜೊತೆ ವಿವಾಹ
ಇತ್ತೀಚೆಗೆ ಜೋಮ್ಯಾಟೋ ಸ್ವಾಧೀನಪಡಿಸಿಕೊಂಡ ಬ್ಲಿನ್‌ಕಿಟ್‌ನ ಸಂಸ್ಥಾಪಕ ಅಲ್ಬಿಂದರ್ ದಿಂಡ್ಸಾ ಅವರನ್ನು ಆಕ್ರಿತಿ ಚೋಪ್ರಾ ವಿವಾಹವಾದರು. ಜೊಮ್ಯಾಟೋ ಬ್ಲಿನ್‌ಕಿಟ್ನ ಮೂಲ ಕಂಪನಿ BCPL ನ ಎಲ್ಲಾ ಷೇರುಗಳನ್ನು 4,447 ಕೋಟಿ ರೂಪಾಯಿಗೆ ಖರೀದಿ ಮಾಡಿತು.
149 ಕೋಟಿ ರೂಪಾಯಿ ಇಎಸ್‌ಒಪಿ ಹೊಂದಿರುವ ಆಕ್ರತಿ
2021 ರ ಹೊತ್ತಿಗೆ ಆಕೃತಿ ಚೋಪ್ರಾ 149 ಕೋಟಿ ರೂ. ಉದ್ಯೋಗಿ ಸ್ಟಾಕ್ ಮಾಲೀಕತ್ವ (ESOPs) ಹೊಂದಿದ್ದಾರೆ ಎಂದು ತಿಳಿದು ಬಂದಿದೆ. ಷೇರುಗಳ ಅತ್ಯಧಿಕ ಮೌಲ್ಯವನ್ನು ಹೊಂದಿರುವ ಉದ್ಯೋಗಿಗಳಲ್ಲಿ ಇವರೂ ಒಬ್ಬರು.
ಆಕೃತಿ ಚೋಪ್ರಾ ಸಂಬಳ
ಆಕೃತಿ ಚೋಪ್ರಾ 2021ರಲ್ಲಿ 1.63 ಕೋಟಿ ಸಂಬಳ ಪಡೆಯುತ್ತಿದ್ದರು. ಪ್ರಸ್ತುತ ಅವರು 2 ಕೋಟಿಗಿಂತ ಹೆಚ್ಚಿನ ಸಂಬಳ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ