ಜಗತ್ತಿನಲ್ಲಿರುವ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯ ಯಶಸ್ಸಿಗಾಗಿ ಹಾತೊರೆಯುತ್ತಾರೆ. ಯಶಸ್ಸೆಂಬುದು ಹಣಕೊಟ್ಟು ಖರೀದಿಸುವಂಥದ್ದಲ್ಲ ಅಥವಾ ಯಾರೋ ನಮಗೆ ದಾನವಾಗಿ ನೀಡುವಂತದ್ದೂ ಅಲ್ಲ. ಯಶಸ್ಸಿನ (Success) ಸೂತ್ರವಿರುವುದು ಬರೀ ಸ್ವ ಪ್ರಯತ್ನದಲ್ಲಿ ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಸಾಧನೆಯ ಬಗೆಗಿನ ಕನಸುಗಳನ್ನು ನಾವು ಕಾಣುತ್ತೇವೆಯಾದರೂ ಅವುಗಳನ್ನು ನನಸಾಗಿಸಲು ಪ್ರಯತ್ನವನ್ನೇ (Effort) ಮಾಡುವುದಿಲ್ಲ. ನಮ್ಮ ಕನಸುಗಳನ್ನು (Dream) ಸಾಕಾರಗೊಳಿಸಲು ಯಾರು ಸಹಾಯ ಮಾಡಿಯಾರೆಂಬ ನಿರೀಕ್ಷೆಯಲ್ಲಿಯೇ ದಿನ ಕಳೆಯುತ್ತಿರುತ್ತೇವೆ.
ಪುಸ್ತಕಗಳನ್ನು ಓದುವುದರಿಂದ, ಅನುಭವ ಇದೆ ಎಂದ ಮಾತ್ರಕ್ಕೆ ಯಶಸ್ಸು ದೊರಕುವುದಿಲ್ಲ. ಸಾಧಕರ ಸಾಧನೆಯ ಮಾರ್ಗಗಳು, ನಡೆದು ಬಂದ ರೀತಿಗಳು ನಮಗೆ ಪ್ರೇರಣೆಯಾಗಬೇಕು ಮಾತ್ರವಲ್ಲದೆ ಆವುಗಳ ಅನುಷ್ಠಾನವೂ ಕೂಡ. ನಮಗೆ ಯಾರಾದರೂ ಸಹಾಯ ಮಾಡುವವರು ಇದ್ದಾಗ ನಾವು ಸ್ವಪ್ರಯತ್ನವನ್ನೇ ಮಾಡುವುದಿಲ್ಲ. ಮನಸ್ಸು ಮತ್ತು ನಮ್ಮ ಚಟುವಟಿಕೆಗಳು ನಿಷ್ಕ್ರಿಯವಾಗಿರುತ್ತವೆ.
ಕಠಿಣ ಪರಿಸ್ಥಿತಿಗಳಲ್ಲಿ ಸಿಕ್ಕಿ ಬಿದ್ದಾಗ, ಯಾರಿಂದಲೂ ನೆರವು ದೊರಕದಿದ್ದಾಗ ನಮ್ಮಲ್ಲಿರುವ ಪ್ರಯತ್ನಶೀಲ ಮನಸ್ಸು ಜಾಗೃತವಾಗುತ್ತದೆ. ಪ್ರತೀ ಕ್ಷಣ ಮೈ-ಮನಸ್ಸು ಚಟುವಟಿಕೆಗಳ ಗೂಡಾಗಿರುತ್ತದೆ.
ಇದನ್ನೂ ಓದಿ: ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ನಲ್ಲಿ ಈ ಕೋರ್ಸ್ಗಳನ್ನು ಮಾಡಿದ್ರೆ ಕೆಲಸ ಸಿಗೋದು ಪಕ್ಕಾ
ಯಶಸ್ವಿ ಜನರು ಗುರಿಗಳನ್ನು ತಲುಪಲು ತಮ್ಗೆ ಏನು ಬೇಕು ಎಂಬುದರ ಸ್ಪಷ್ಟ ತಿಳುವಳಿಕೆಯನ್ನು ಹೊಂದಿರುತ್ತಾರೆ. ಯಶಸ್ಸು ಪಡೆಯಲು ಬೇಕಾದ ಜ್ಞಾನವನ್ನು ಸಹ ಬೆಳೆಸಿಕೊಳ್ಳುತ್ತಾರೆ. ಆದರೆ ಅವರು ನೇರವಾಗಿ ಯಶಸ್ಸು ಪಡೆಯಲು ಬೇಕಾದ ವಿಷಯಗಳನ್ನು ಎಲ್ಲೂ ಹೇಳುವುದಿಲ್ಲ. ಆದರೆ ಅವುಗಳ ಬಗ್ಗೆ ಕುತೂಹಲದಿಂದ ಕೇಳುವವರಿಗೆ ಅವುಗಳ ಬಗ್ಗೆ ಸೂಕ್ಷ್ಮವಾಗಿ ಸುಳಿವನ್ನು ನೀಡಿಯೇ ನೀಡುತ್ತಾರೆ.
ಈ ಲೇಖನದಲ್ಲಿ ಯಶಸ್ವಿ ವ್ಯಕ್ತಿಗಳು ಗೌಪ್ಯವಾಗಿಡುವ ಮತ್ತು ಯಶಸ್ಸು ಪಡೆಯಲು ಬೇಕಾದ ಪ್ರಮುಖ 17 ವಿಷಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಅವುಗಳ ಬಗ್ಗೆ ನಾವಿಂದು ಸಂಕ್ಷಿಪ್ತವಾಗಿ ತಿಳಿಯೋಣ ಬನ್ನಿ.
ಯಶಸ್ವಿ ವ್ಯಕ್ತಿಗಳು ಗೌಪ್ಯವಾಗಿಡುವ ಯಶಸ್ಸು ಪಡೆಯಲು ಬೇಕಾದ ಪ್ರಮುಖ 17 ವಿಷಯಗಳು ಯಾವುವು?
1) ಯಶಸ್ಸು ಎಂಬುದು ಬರೀ ಸುಳ್ಳು
ಹೌದು, ಯಶಸ್ಸು ಎಂಬುದು ಕೇವಲ ನಮ್ಮ ಕೆಲಸಕ್ಕೆ ಸಿಗುವ ಒಂದು ವಿಶಿಷ್ಟ ಬೆಲೆ ಅಷ್ಟೆ. ಅದನ್ನೆ ನಾವು ದೊಡ್ಡ ಯಶಸ್ಸು ಎಂದುಕೊಂಡು ನೆಕ್ಟ್ಸ್ ಕೆಲಸ ಮಾಡೋದೇ ನಿಲ್ಲಿಸುತ್ತೆವೆ. ಇದನ್ನು ತಡೆಯಲು ಯಶಸ್ವಿ ವ್ಯಕ್ತಿಗಳು ಯಶಸ್ಸು ಸತತ ಪ್ರಯತ್ನದಿಂದ ಮಾತ್ರ ಸಿಗುವಂತಹದ್ದು. ನೀವು ಯಾವಾಗ ಕೆಲಸ ಮಾಡುವುದನ್ನು ನಿಲ್ಲಿಸುತ್ತಿರೋ ಆಗ ನಿಮ್ಮ ಯಶಸ್ಸು ಸಹ ನಿಲ್ಲುತ್ತದೆ. ಆದ್ದರಿಂದ ಯಶಸ್ವಿ ವ್ಯಕ್ತಿಗಳು ಈ ವಿಷಯದ ಬಗ್ಗೆ ಎಲ್ಲೂ ಬಾಯಿ ಬಿಡುವುದಿಲ್ಲ.
2) ಯಶಸ್ಸು ಯಾವಾಗಲೂ ಅಭ್ಯಾಸದಿಂದ ಪ್ರಾರಂಭವಾಗುತ್ತದೆ
ಇದು ನಿಜ ಕೂಡ ಹೌದು. ನಮ್ಮ ದಿನನಿತ್ಯದ ಅಭ್ಯಾಸಗಳೇ ನಮ್ಮ ಯಶಸ್ಸಿನ ಮೆಟ್ಟಿಲುಗಳು ಎಂದು ಹೇಳಬಹುದು. ಇದರ ಕುರಿತು ಖ್ಯಾತ ಲೇಖಕರೊಬ್ಬರು “ನಾವು ದಿನನಿತ್ಯ ಯಾವ ಕೆಲಸವನ್ನು ಪದೇ ಪದೇ ಮಾಡಿ ಅಭ್ಯಾಸ ಮಾಡಿಕೊಳ್ಳುತ್ತಿವೋ, ಅದೇ ಶ್ರೇಷ್ಠ ಕೆಲಸವಾಗುತ್ತದೆ” ಎಂದು ಹೇಳಿದ್ದಾರೆ.
ಉದಾಹರಣೆಗೆ, ಸಣ್ಣ ಮತ್ತು ಉದ್ದೇಶಪೂರ್ವಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ನಿಮ್ಮ ಜೀವನವನ್ನು ಸುಧಾರಿಸುವ ಒಂದು ಪ್ರಕ್ರಿಯೆ ಆಗಿದೆ. ಯಾವುದೇ ಕೆಲಸವನ್ನು ಶಿಸ್ತಿನಿಂದ ಮಾಡಿ. ಅಗತ್ಯ ಕೆಲಸಗಳಿಗೆ ನಿಮ್ಮ ಸಮಯವನ್ನು ಪರಿಣಾಮಕಾರಿಯಾಗಿ ಬಳಸಿ. ಇಂತಹ ಅಭ್ಯಾಸಗಳೇ ಜೀವನದಲ್ಲಿ ಯಶಸ್ಸು ಪಡೆಯಲು ಸಹಾಯಕಾರಿ. ಆದರೆ ಇದರ ಬಗ್ಗೆ ಯಶಸ್ವಿ ವ್ಯಕ್ತಿಗಳು ಎಲ್ಲಿಯೂ ಹೇಳುವುದಿಲ್ಲ. ಹೇಳಿದರೂ ಕೆಲಸ ಮಾಡಿ ಅಂತ ಮಾತ್ರ ಹೇಳುತ್ತಾರೆ.
3) ಸ್ಥಿರತೆ ಎಂಬುದು ಯಶಸ್ಸಿಗೆ ಬಹು ಮುಖ್ಯ
ಪ್ರಸಿದ್ಧ ಯುಟ್ಯೂಬರ್ ಜಿಮ್ಮಿ ಡೊನಾಲ್ಡ್ಸನ್, ಅಕಾ ಮಿಸ್ಟರ್ ಬೀಸ್ಟ್, 2012 ರಲ್ಲಿ ಯುಟ್ಯೂಬ್ ಪ್ಲಾಟ್‌ಫಾರ್ಮ್‌ಗೆ ವೀಡಿಯೊಗಳನ್ನು ಅಪ್‌ಲೋಡ್ ಮಾಡಲು ಪ್ರಾರಂಭಿಸಿದರು. ಅವರು 2017 ರಲ್ಲಿ ವೈರಲ್ ಆದರು.
ಅವರಿಗೆ ಯಶಸ್ಸು ಎಂಬುದು ಬೇಗನೆ ಸಿಗಲಿಲ್ಲ. ಅವರು ಅದನ್ನು ಪಡೆಯಲು ಸತತ ಪ್ರಯತ್ನದ ಜೊತೆ ವಿಡಿಯೋಗಳನ್ನು ಅಪ್‌ಲೋಡ್ ಮಾಡುವುದನ್ನು ತಮ್ಮ ದಿನನಿತ್ಯದ ಅಭ್ಯಾಸವನ್ನಾಗಿ ಮಾಡಿಕೊಂಡು, ತಮ್ಮ ಕೆಲಸದಲ್ಲಿ ಸ್ಥಿರತೆಯನ್ನು ಕಾಪಾಡಿಕೊಂಡಿದ್ದರಿಂದಲೇ ಅವರು ಅದರಲ್ಲಿ ಯಶಸ್ಸನ್ನು ಸಾಧಿಸಿದರು.
ನಿಮ್ಮ ಗುರಿಗಳ ಕಡೆಗೆ ನಂಬಿಕೆ, ವಿಶ್ವಾಸಾರ್ಹತೆ ಮತ್ತು ಪ್ರಗತಿಯನ್ನು ನಿರ್ಮಿಸಲು ಸ್ಥಿರವಾದ ಕೆಲಸಗಳು ಯಾವಾಗಲೂ ತಿಂಗಳುಗಳು, ವರ್ಷಗಳು ತೆಗೆದುಕೊಳ್ಳಬಹುದು. ನಿರಂತರವಾಗಿ ಒಂದೇ ಕೆಲಸವನ್ನು ಪದೇ ಪದೇ ಮಾಡುವುದರಿಂದ ನಿಮ್ಮನ್ನು ಗುರುತಿಸಲಾಗುತ್ತದೆ.
4) ಯಶಸ್ಸು ಎಂಬುದು ವ್ಯಕ್ತಿಯೊಬ್ಬರ ಪ್ರದರ್ಶನವಲ್ಲ
ನಿಮಗೆ ಸೆಲೆಬ್ರಿಟಿಗಳು, ರಾಜಕಾರಣಿಗಳು ಅಥವಾ ನಿಮ್ಮ ನೆಚ್ಚಿನ ಉದ್ಯಮಿಗಳು ಯಾವ ಸಮಯದಲ್ಲಿ ಎಲ್ಲಿದ್ದಾರೆ ಎಂಬುದನ್ನು ತಿಳಿಯಲು ಕೆಲವೊಮ್ಮೆ ಆಗದೇ ಇರಬಹುದು. ಆದರೆ ನಿಮ್ಮ ಸಂಪರ್ಕದಲ್ಲಿರುವ ವ್ಯಕ್ತಿಗಳ ಬಗ್ಗೆ ನಿಮಗೆ ಸೂಕ್ತ ಮಾಹಿತಿ ಇದ್ದೇ ಇರುತ್ತದೆ.
ನೀವು ಯಾರ ಜೊತೆ ಕೆಲಸ ಮಾಡಲು ಬಯಸುತ್ತಿರೋ, ಆ ಜನರಿರುವ ಈವೆಂಟ್‌ಗಳಿಗೆ ಹಾಜರಾಗುವ ಮೂಲಕ ಪ್ರಾರಂಭಿಸಿ. ಯಶಸ್ಸು ಕೇವಲ ಒಬ್ಬರಿಂದ ಮಾತ್ರ ಸಾಧ್ಯವಿಲ್ಲ. ನಮ್ಮ ಯಶಸ್ಸಿಗೆ ಹಲವಾರು ಜನರ ಪರಿಶ್ರಮ, ತ್ಯಾಗ ಇದ್ದೆ ಇರುತ್ತದೆ.
5) ಅನೇಕ ಐಡಿಯಾಗಳಿಂದ ಮಾತ್ರ ಯಶಸ್ಸು ದೊರಕುತ್ತದೆ
ಯಶಸ್ವಿ ಜನರು ಕೇವಲ ಒಂದೇ ಐಡಿಯಾದಿಂದ ಯಶಸ್ಸನ್ನು ಗಳಿಸಿರುವುದಿಲ್ಲ. ಅವರು ಅನೇಕ ಐಡಿಯಾಗಳನ್ನು ತಮ್ಮ ಕೆಲಸದಲ್ಲಿ ಕಾರ್ಯಗತಗೊಳಿಸಿರುತ್ತಾರೆ. ಫ್ಯಾಷನ್ ಮಾಡೆಲ್ ಮತ್ತು ಸ್ಟಾಕ್ ಬ್ರೋಕರ್ ಆಗಿ ಕೆಲಸ ಮಾಡುತ್ತಿರುವ ಫೇಮಸ್ ಮಾರ್ಥಾ ಸ್ಟೀವರ್ಟ್ ಅವರು ಮೊದಲಿಗೆ ಗೃಹಿಣಿ ಆಗಿ ಮನೆಯಲ್ಲಿಯೇ ಇರುತ್ತಿದ್ದರು.
ಅವರು ತಮ್ಮ ಅನೇಕ ಐಡಿಯಾಗಳಿಂದ ಬಾಹ್ಯ ಜಗತ್ತಿಗೆ ಪರಿಚಯ ಆಗಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಆದ್ದರಿಂದ ನಿಮ್ಮ ಆಲೋಚನೆಗಳೇ ನಿಮ್ಮ ಯಶಸ್ಸನ್ನು ನಿರ್ಮಿಸುವ ಮೆಟ್ಟಿಲುಗಳು ಎಂದು ಯಾವತ್ತಿಗೂ ಮರೆಯಬೇಡಿ.
6) ಯಶಸ್ಸು ಪಡೆಯಲು ಮುಖ್ಯವಾಗಿ ತ್ಯಾಗ ಗುಣವಿರಬೇಕು
ಇದು ಅಕ್ಷರಶಃ ಸತ್ಯ. ಯಶಸ್ಸು ಎಂಬುದು ಯಾವಾಗಲೂ ನೀವು ಊಹಿಸುವುದಕ್ಕಿಂತ ಹೆಚ್ಚು ಬೆಲೆಯನ್ನು ಪಡೆಯುತ್ತದೆ. ಯಶಸ್ವಿ ಜನರು ಸಾಮಾನ್ಯವಾಗಿ ಬೇರೆ ಎಲ್ಲ ಕೆಲಸಕ್ಕಿಂತ ತಮ್ಮ ಗುರಿಯ ಕಡೆಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಅನೇಕ ವಿಚಾರಗಳನ್ನು ಅವರು ತ್ಯಾಗ ಮಾಡಿರುತ್ತಾರೆ. ಯಶಸ್ವಿ ಜನರಿಗೆ ಯಶಸ್ಸು ಈಸಿಯಾಗಿ ಸಿಕ್ಕಿದೆ ಎಂದು ಎಂದಿಗೂ ಭಾವಿಸಬೇಡಿ.
7) ಯಶಸ್ಸು ಬೇಕೆಂದರೆ ರಿಸ್ಕ್ ತೆಗೆದುಕೊಳ್ಳುವುದು ಅಗತ್ಯ
ಜೀವನದಲ್ಲಿ ಯಾರಿಗೆ ಯಶಸ್ಸು ಬೇಡ ಹೇಳಿ. ಆದರೆ ಅದಕ್ಕೆ ಅಗತ್ಯವಾಗಿ ಬೇಕಾಗುವ ರಿಸ್ಕ್‌ಗಳನ್ನು ತೆಗೆದುಕೊಳ್ಳಲು ಎಲ್ಲರೂ ಸಿದ್ದರಿರುವುದಿಲ್ಲ. ಆದರೆ ನಾವು ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ, ಕೆಲಸದಲ್ಲಿ ಪ್ರಗತಿ ಸಿಗಬೇಕೆಂದ್ರೆ ರಿಸ್ಕ್ ತೆಗೆದುಕೊಳ್ಳಬೇಕಿರುವುದು ಅಗತ್ಯ ಎಂದು ಯಶಸ್ವಿ ವ್ಯಕ್ತಿಗಳು ಎಲ್ಲೂ ಮುಕ್ತವಾಗಿ ಹೇಳುವುದಿಲ್ಲ.
ಆದರೆ ಅವರ ಜೀವನವನ್ನು ಗಮನಿಸಿದಾಗ ಸಾಮಾನ್ಯ ವ್ಯಕ್ತಿಗಳಿಗಿಂತ ಹೆಚ್ಚು ರಿಸ್ಕ್ ಅನ್ನು ಅವರು ತೆಗೆದುಕೊಂಡು ಮುಂದೆ ಬಂದಿರುತ್ತಾರೆ ಎಂಬುದು ಎಲ್ಲ ಯಶಸ್ವಿ ವ್ಯಕ್ತಿಗಳ ಕತೆಯಿಂದ ತಿಳಿಯುವಂತಹದ್ದು.
8) ಯಶಸ್ಸು ಅದೃಷ್ಟವನ್ನೇ ಬಂಡವಾಳನ್ನಾಗಿಸಿಕೊಳ್ಳುತ್ತದೆ
ಕೇವಲ ಹಾರ್ಡ್‌ವರ್ಕ್ ಮಾಡೋದ್ರಿಂದ ಯಶಸ್ಸು ಸಿಗುತ್ತದೆ ಎಂಬುದು ನಮ್ಮ ಮೂರ್ಖತನ. ಕೆಲವೊಮ್ಮೆ ನಮ್ಮ ಅದೃಷ್ಟದಿಂದ ನಮಗೆ ಯಶಸ್ಸು ಸಿಗುತ್ತದೆ. ಅಂದ್ರೆ ಸಾಮಾನ್ಯ ಕೆಲಸಗಳನ್ನು ಅದ್ಬುತವಾಗಿ ಮಾಡುವುದರಿಂದ ಅದ್ಬುತವಾದ ಯಶಸ್ಸು ಲಭಿಸುತ್ತದೆ. ಅದೃಷ್ಟವು ನಿಮ್ಮ ಧೈರ್ಯವನ್ನು ನಂಬಲು ಮತ್ತು ಅವಕಾಶಗಳ ಮೇಲೆ ಕಾರ್ಯನಿರ್ವಹಿಸಲು ಬಯಸುತ್ತದೆ.
9) ಯಶಸ್ಸು ಪಡೆಯಲು ಕಷ್ಟಪಡಲೇಬೇಕು
"ಬುದ್ಧಿವಂತಿಕೆಯಿಂದ ಕೆಲಸ ಮಾಡುವುದು ಎಷ್ಟು ಮುಖ್ಯವೋ ಅಷ್ಟೆ ಮುಖ್ಯ ಕಷ್ಟಪಟ್ಟು ಕೆಲಸ ಮಾಡುವುದು ಕೂಡ ಆಗಿದೆ. ಯಶಸ್ವಿ ಜನರು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಅವರು ನಿಮಗಿಂತ ಉತ್ತಮವಾಗಿರಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಯಶಸ್ಸನ್ನು ಪಡೆಯುವ ಜನರು ನೀವು ಅಂದುಕೊಂಡಿದ್ದಕ್ಕಿಂತ ಹೆಚ್ಚು ಪ್ರಯತ್ನ ಪಟ್ಟಿರುತ್ತಾರೆ.
10) ಯಶಸ್ವಿ ಜನರು ಪರಿಪೂರ್ಣತೆ ಕಡೆ ಹೆಚ್ಚು ಗಮನ ನೀಡುವುದಿಲ್ಲ.
ಯಶಸ್ವಿ ಜನರು ಪರಿಪೂರ್ಣರಾಗುವುದರ ಕಡೆಗೆ ಹೆಚ್ಚು ಚಿಂತಿಸುವುದಿಲ್ಲ. ನಮ್ಮ ಕೆಲಸದಲ್ಲಿ ಪರಿಪೂರ್ಣತೆ ಅಗತ್ಯವಾದ್ರೂ ಸಹ ಅದೇ ಒಂದು ಗೀಳಾಗಿ ನಮ್ಮನ್ನು ಕಾಡಬಾರದು. ಉದಾಹರಣೆಗೆ ಲೇಖಕರು ಬಹು ಡ್ರಾಫ್ಟ್‌ಗಳನ್ನು ಬರೆಯುತ್ತಾರೆ, ಸಂಶೋಧಕರು ಪ್ರಯೋಗ ಮಾಡುತ್ತಾರೆ ಮತ್ತು ಕುಶಲಕರ್ಮಿಗಳು ಮೇರುಕೃತಿಯನ್ನು ರಚಿಸುವ ಮೊದಲು ಅನೇಕ ವಿಫಲ ಯೋಜನೆಗಳನ್ನು ಮಾಡಿರುತ್ತಾರೆ.
ಹೀಗೆ ಪರಿಪೂರ್ಣ ಕಲ್ಪನೆಯನ್ನು ಯೋಚಿಸಲು ಅಥವಾ ಪರಿಪೂರ್ಣ ಉತ್ಪನ್ನವನ್ನು ರಚಿಸಲು ಎಂದಿಗೂ ಪ್ರಯತ್ನಿಸಬೇಡಿ. ಅದರ ಬದಲು ಜನರು ಬಳಸಲು ಮತ್ತು ಪಾವತಿಸಲು ಬಯಸುವ ಸೇವೆ ಅಥವಾ ಉತ್ಪನ್ನವನ್ನು ಸೂಕ್ತವಾಗಿ ನೀಡುವುದರ ಬಗ್ಗೆ ನಿಮ್ಮ ಸಂಪೂರ್ಣ ಗಮನವಿರಲಿ.
11) ಯಶಸ್ಸಿಗೆ ಒಂದೇ ಮಾರ್ಗವಿಲ್ಲ.
ಯಶಸ್ಸಿಗೆ ಯಾವುದೇ ಆದರ್ಶ ಮಾರ್ಗವಿಲ್ಲ. ಯಶಸ್ಸಿನ ಪ್ರಯಾಣವು ಎಲ್ಲರಿಗೂ ವಿಭಿನ್ನವಾಗಿರುತ್ತದೆ. ಬೇರೊಬ್ಬರಂತೆ ನಾವು ಅವರ ಮಾರ್ಗಗಳನ್ನು ಅನುಸರಿಸುವುದು ಸುಲಭವಾದ್ರೂ ಸಹ ನಿಜವಾಗಿಯೂ ಆಗೆ ಮಾಡುವುದು ಸರಿಯಲ್ಲ. ಯಶಸ್ಸು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತಿರುತ್ತದೆ.
12) ಯಶಸ್ಸು ಪಡೆಯಬೇಕೆಂದ್ರೆ ರಿಸಲ್ಟ್ ಬಗ್ಗೆ ಹೆಚ್ಚು ಗಮನಹರಿಸಬಾರದು.
ನಾವೇನಾದ್ರೂ ಜೀವನದಲ್ಲಿ ಮಾಡುತ್ತೆವೆ ಎಂದಾದರೆ, ಅದರ ರಿಸಲ್ಟ್ ಬಗ್ಗೆ ಒಂದಿಲ್ಲ ಒಂದು ಸಲ ಯೋಚ್ನೆ ಮಾಡಿಯೇ ಇರುತ್ತೆವೆ. ಒಂದು ವೇಳೇ ನಾವು ಮಾಡುವ ಕೆಲಸ ವಿಫಲವಾದ್ರೆ ಅಂತ ಯೋಚಿಸುತ್ತೆವೆ. ಆದರೆ ಯಶಸ್ವಿ ವ್ಯಕ್ತಿಗಳು ಇತರರು ತಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಬಗ್ಗೆ ಕೇರ್ ಮಾಡುವುದಿಲ್ಲ. ನೀವು ಯಶಸ್ವಿ ವ್ಯಕ್ತಿಗಳಾಗಬೇಕಾದ್ರೆ ಈ ಗುಣವನ್ನು ಬೆಳೆಸಿಕೊಳ್ಳಿ.
13) ನಿಮ್ಮ ಹವ್ಯಾಸವನ್ನು ಯಶಸ್ಸು ಆಗಿ ಪರಿವರ್ತಿಸಬೇಕು.
ಹೌದು, ಕೆಲವರು ತಮ್ಮ ಹವ್ಯಾಸವನ್ನೆ ತಮ್ಮ ಯಶಸ್ಸು ಮಾಡಿಕೊಂಡಿರುತ್ತಾರೆ. ನಿಮ್ಮ ದಿನಗಳನ್ನು ಚಿತ್ರಕಲೆಯಲ್ಲಿ ಕಳೆಯಲು ನೀವು ಇಷ್ಟಪಡುವೀರಾ? ಅಥವಾ ಪುಸ್ತಕ ಬರೆಯಲು ನಿಮ್ಮ ಸಮಯವನ್ನು ವಿನಿಯೋಗಿಸಿಕೊಳ್ಳುತ್ತಿರಾ? ಹೀಗೆ ನಿಮ್ಮ ಹವ್ಯಾಸಗಳನ್ನೇ ನಿಮ್ಮ ಯಶಸ್ಸು ಆಗಿ ಪರಿವರ್ತಿಸಿಕೊಳ್ಳಬೇಕು.
14) ನೀವು ಇಲ್ಲ ಎಂದು ಹೇಳುವುದನ್ನು ಕಲಿತಾಗ ಯಶಸ್ಸು ಸಿಗುತ್ತದೆ.
ನೀವು ಇಲ್ಲ ಎಂದು ಹೇಳುವುದನ್ನು ಕಲಿತಾಗ ಮಾತ್ರ, ಯಶಸ್ಸು ಸಿಗುತ್ತದೆ. ಅನಾವಶ್ಯಕ ವ್ಯಕ್ತಿಗಳು ಮತ್ತು ವಿಚಾರಗಳಿಗೆ “ಇಲ್ಲ” ಎಂದು ಹೇಳುವುದನ್ನು ಕಲಿತಾಗ ಮಾತ್ರ ಯಶಸ್ಸು ಸಿಗುತ್ತದೆ. ಇಲ್ಲದಿದ್ದರೆ ನಮ್ಮ ಸಮಯವನ್ನು ಬೇರೆಯವರು ವ್ಯರ್ಥ ಮಾಡಲು ನಾವೇ ದಾರಿ ಮಾಡಿಕೊಟ್ಟಂತಾಗುತ್ತದೆ.
15) ಯಶಸ್ವಿ ಜನರು ಯಾವಾಗಲೂ ಪ್ರಸೆಂಟ್‌ನಲ್ಲಿ ಬದುಕುತ್ತಾರೆ.
ಭೂತಕಾಲವೆಂದ್ರೆ ಈಗಾಗಲೇ ನಡೆದು ಹೋದ ಕಾಲವಾಗಿರುತ್ತದೆ. ಅದರ ಬಗ್ಗೆ ಯೋಚನೆ ಮಾಡುವುದು ಕೂಡ ವೇಸ್ಟ್. ಆದರೆ ಯಶಸ್ವಿ ವ್ಯಕ್ತಿಗಳು ಯಾವಾಗಲೂ ಪ್ರಸೆಂಟ್ ಅಲ್ಲಿ ತಮ್ಮ ಕೆಲಸಗಳನ್ನು ಮಾಡುತ್ತಾ, ಪ್ರಸೆಂಟ್ ಅಲ್ಲಿ ಬದುಕುತ್ತಾರೆ. ಜೀವನದಲ್ಲಿ ನೀವು ಏನಾದರೂ ವಿಫಲವಾದಾಗ, 5 ನಿಮಿಷಗಳ ಕಾಲ ಅದರ ಬಗ್ಗೆ ದುಃಖಿಸಿ. ಅಲ್ಲಿಗೆ ಅದನ್ನು ಬಿಟ್ಟು ಮುಂದೆ ನಡೆಯಿರಿ.
16) ಯಶಸ್ಸು ನಿಮ್ಮ ಕಲ್ಪನೆಗಳ ರಿಯಾಲಿಟಿ ಆಗಿರುತ್ತದೆ.
ನಿಮ್ಮ ಗುರಿಗಳ ಮೇಲೆ ನೀವು ಗಮನಹರಿಸಿದರೆ, ನೀವು ಅರಿವಿಲ್ಲದೆ ಅವುಗಳನ್ನು ತಲುಪುತ್ತೀರಿ. ಯಶಸ್ವಿ ಜನರು ತಮ್ಮ ಗುರಿಗಳ ಬಗ್ಗೆ ಸ್ಪಷ್ಟವಾಗಿರುತ್ತಾರೆ. ಅವರು ತಮಗೆ ಬೇಕಾದುದದರ ಕಡೆಗೆ ಫೋಕಸ್ ಮಾಡಿ, ಜೀವನದಲ್ಲಿ ಯಶಸ್ಸನ್ನು ಪಡೆಯುತ್ತಾರೆ.
17) ಯಶಸ್ಸಿಗೆ ಸಕಾರಾತ್ಮಕತೆ ಬಹಳ ಮುಖ್ಯ.
ಯಶಸ್ವಿ ವ್ಯಕ್ತಿಗಳು ಯಾವಾಗಲೂ ಸಕಾರಾತ್ಮಕತೆಯಿಂದ ತಮ್ಮ ಕೆಲಸಗಳನ್ನು ಮಾಡುತ್ತಿರುತ್ತಾರೆ. ಸಕಾರಾತ್ಮಕ ಜನರು ಹೆಚ್ಚು ಯಶಸ್ವಿಯಾಗುತ್ತಾರೆ. ಜೀವನದಲ್ಲಿ ಪಾಸಿಟಿವ್ ಆಗಿರುವುದು ಬಹಲ ಮುಖ್ಯ. ಇದುವೇ ಯಶಸ್ಸಿಗೆ ಮೂಲ ಮಂತ್ರವಾಗಿರುತ್ತದೆ.
Story link: https://ideapod.com/things-successful-people-wont-tell-you-about-success/
Sharada Gangavathi
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ