ನಿಮ್ಮಲ್ಲಿರುವ ವ್ಯಕ್ತಿತ್ವ ( Personality) , ಮೌಲ್ಯಗಳು, ನಂಬಿಕೆಗಳು, ಭಾವನೆಗಳು ಮತ್ತು ಆಲೋಚನೆಗಳನ್ನು ಒಳಗೊಂಡಂತೆ ನಿಮ್ಮನ್ನು ಒಬ್ಬ ವ್ಯಕ್ತಿಯನ್ನಾಗಿ ರೂಪಿಸುವ ಕೆಲವೊಂದು ಅಂಶಗಳಿರುತ್ತವೆ. ಇಂತಹ ಅಂಶಗಳನ್ನು ಗ್ರಹಿಸುವ ಅರ್ಥಮಾಡಿಕೊಳ್ಳುವ ಸಾಮರ್ಥ್ಯವೇ ಸ್ವಯಂ ತಿಳುವಳಿಕೆ (Self Awareness) ಅಥವಾ ಅರಿವು ಎಂದೆನಿಸಿದೆ.ಒಟ್ಟಿನಲ್ಲಿ ಸರಳವಾಗಿ ಹೇಳುವುದಾದರೆ ಸ್ವಯಂ (Self) ಅರಿವು ಎಂದರೆ ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವ ವಿಧಾನವಾಗಿದೆ.
ಹಾರ್ವರ್ಡ್ ಬ್ಯುಸಿನೆಸ್ ರಿವ್ಯೂನಲ್ಲಿ(Research) ಪ್ರಕಟವಾದ ಸಂಶೋಧನೆಯ ಪ್ರಕಾರ, ಸ್ವಯಂ ತಿಳುವಿಕೆ ಎಂಬುದು ಅತ್ಯಂತ ಅಪರೂಪದ ಗುಣವಾಗಿದೆ. ಏಕೆಂದರೆ ಹೆಚ್ಚಿನ ಜನರು ತಮ್ಮಲ್ಲಿ ಸ್ವಯಂ ತಿಳುವಳಿಕೆ ಇದೆ ಎಂಬುದಾಗಿ ಭಾವಿಸಿದರೂ 10-15% ದಷ್ಟು ಜನರು ಮಾತ್ರವೇ ಈ ಮಾನದಂಡಕ್ಕೆ ಅನುಗುಣವಾಗಿದ್ದಾರೆ ಎಂಬುದು ವರದಿಯಾಗಿದೆ.
ಸ್ವಯಂ ಅರಿವು ವೃತ್ತಿಜೀವನದ ಯಶಸ್ಸಿಗೆ ಕೊಡುಗೆ ನೀಡುವ ಅನೇಕ ಪ್ರಯೋಜನಗಳನ್ನು ಹೊಂದಿದೆ. ಇದು ಹೇಗೆ ವೃತ್ತಿಜೀವನಕ್ಕೆ ಸಹಕಾರಿ ಎಂಬುದನ್ನು ಕೆಲವೊಂದು ಅಂಶಗಳ ಮೂಲಕ ತಿಳಿದುಕೊಳ್ಳೋಣ.
ಸಹಾನುಭೂತಿಗೆ ಇದು ನೆರವು ನೀಡುತ್ತದೆ
ಜರ್ನಲ್ ಆಫ್ ಕಾಗ್ನಿಟಿವ್ ಎನ್‌ಹಾನ್ಸ್‌ಮೆಂಟ್‌ನಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ ಸ್ವಯಂ ತಿಳುವಳಿಕೆ ಎಂಬುದು ಸಹಾನುಭೂತಿಯ ಅಂಶಗಳಲ್ಲಿ ಒಂದೆನಿಸಿದೆ. ಇತರರನ್ನು ಅರ್ಥಮಾಡಿಕೊಳ್ಳುವ ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ಹಾಗಿದ್ದಾಗ ಮಾತ್ರವೇ ಇತರರೆಡೆಗೆ ನಮಗೆ ಅನುಕಂಪ ಉಂಟಾಗುತ್ತದೆ.
ಸಹೋದ್ಯೋಗಿಗಳನ್ನು ಅರಿತುಕೊಳ್ಳಲು ಅವರೊಂದಿಗೆ ಭಾವನಾತ್ಮಕವಾಗಿ ಬೆರೆಯಲು ಸ್ವಯಂ ಅರಿವು ಸಹಕಾರಿಯಾಗಿದೆ. ಕಚೇರಿಗಳಲ್ಲಿ ಉತ್ತಮ ಸಂವಹನಕಾರರಾಗಲು ಇದು ನಮಗೆ ಅವಕಾಶವನ್ನೀಯುತ್ತದೆ.
ಸಂವಹನ ಕೌಶಲ್ಯಗಳನ್ನು ಸುಧಾರಿಸುತ್ತದೆ
ನೀವು ಹೇಗೆ ಸಂವಹನ ಮಾಡುತ್ತೀರಿ ಅಂತೆಯೇ ನಿಮ್ಮ ಸಂವಹನ ಶೈಲಿಯ ಬಗ್ಗೆ ನಿಮಗೆ ತಿಳಿದಿರುವಾಗ, ಇತರರಿಗೆ ಬೇಕಾದಂತೆ ವ್ಯವಹರಿಸಲು ಅನುಕೂಲವಾಗುತ್ತದೆ.
ವೈವಿಧ್ಯಮಯ ತಂಡಗಳೊಂದಿಗೆ ಕೆಲಸ ಮಾಡುವಾಗ ಈ ಕೌಶಲ್ಯ ಅತ್ಯಗತ್ಯ. ನಿಮ್ಮನ್ನು ನೀವು ಅರ್ಥಮಾಡಿಕೊಳ್ಳುವುದು ಉತ್ತಮ ಸಕ್ರಿಯ ಆಲಿಸುವ ಕೌಶಲ್ಯಗಳನ್ನು ಸಹ ಅನುಮತಿಸುತ್ತದೆ. ಹೆಚ್ಚು ತೊಡಗಿಸಿಕೊಳ್ಳುವ ಮೂಲಕ, ನಿಮ್ಮ ತಂಡದೊಂದಿಗೆ ನೀವು ಸುಲಭವಾಗಿ ನಂಬಿಕೆ ಮತ್ತು ನಿಷ್ಠೆಯನ್ನು ಬೆಳೆಸಿಕೊಳ್ಳಬಹುದು.
ಒತ್ತಡ ನಿರ್ವಹಣೆಗೆ ಸಹಾಯ ಮಾಡುತ್ತದೆ
ಸ್ವಯಂ ಜಾಗೃತಿಯನ್ನು ಅಭ್ಯಾಸ ಮಾಡುವ ಮೂಲಕ, ನಿಮ್ಮ ಒಟ್ಟಾರೆ ಆರೋಗ್ಯದ ಮಾಹಿತಿ ನಿಮಗೆ ತಿಳಿಯುತ್ತದೆ ಅಂತೆಯೇ ನಿಮ್ಮಲ್ಲಿರುವ ಭಾವನೆಗಳು ಮತ್ತು ನಡವಳಿಕೆಗಳನ್ನು ನೀವು ಗಮನಿಸಲು ಪ್ರಾರಂಭಿಸುತ್ತೀರಿ.
ಈ ಸಮಯದಲ್ಲಿ ಇತರರ ಕಷ್ಟಗಳಿಗೆ ಸ್ಪಂದಿಸುತ್ತೀರಿ. ನಿಮ್ಮ ಮಾನಸಿಕ ಹಾಗೂ ದೈಹಿಕ ಕುಗ್ಗುವಿಕೆಗಳೇನು ಎಂಬುದು ನಿಮ್ಮ ಅರಿವಿಗೆ ಬರುತ್ತದೆ. ಇದರಿಂದ ಅಂತಹವುಗಳನ್ನು ಸರಿಪಡಿಸಿಕೊಳ್ಳಬಹುದಾಗಿದೆ.
ಉತ್ತಮ ಸಮಯ ನಿರ್ವಹಣೆಗೆ ಕಾರಣವಾಗುತ್ತದೆ
ನಿಮ್ಮನ್ನು ನೀವು ಅರಿತುಕೊಳ್ಳುವುದರಿಂದ ಸಮಯಕ್ಕೆ ಬೆಲೆ ನೀಡುವವರು ನೀವಾಗುತ್ತೀರಿ. ನಿಮಗೆ ಗೊತ್ತಿಲ್ಲದೆಯೇ ನೀವು ಸಮಯಕ್ಕೆ ಪ್ರಾಶಸ್ತ್ಯ ನೀಡುತ್ತೀರಿ ಹಾಗೂ ಹೆಚ್ಚು ದಕ್ಷತೆಯಿಂದ ಕೆಲಸ ಮಾಡಲು ಆರಂಭಿಸುತ್ತೀರಿ. ಹೆಚ್ಚು ಉತ್ಪಾದಕತೆ ನಿಮ್ಮಲ್ಲಿ ಒಡಮೂಡುತ್ತದೆ.
ನೀವು ಹಗಲಿನಲ್ಲಿ ಹೆಚ್ಚು ಕ್ರಿಯಾತ್ಮಕರಾಗಿದ್ದಾರೆ ಹೆಚ್ಚು ಕಷ್ಟವೆನಿಸುವ ಜಟಿಲವೆನಿಸುವ ಕಚೇರಿ ಕೆಲಸಗಳನ್ನು ಮಾಡಬಹುದು. ಈ ಸಮಯದಲ್ಲಿ ಮನಸ್ಸು ನಿರಾಳವಾಗಿರುವುದರಿಂದ ತ್ವರಿತವಾಗಿ ಕೆಲಸ ಮುಗಿಯುತ್ತದೆ ಅಂತೆಯೇ ಮಧ್ಯಾಹ್ನ ಹಾಗೂ ಸಂಜೆಯ ಸಮಯದಲ್ಲಿ ಯಾವೆಲ್ಲಾ ಕೆಲಸ ಮಾಡಬಹುದು ಎಂಬ ಯೋಜನೆ ನಿಮಗೆ ದೊರೆಯುತ್ತದೆ.
ನಿರ್ಧಾರ ಕೈಗೊಳ್ಳಲು ಅನುಕೂಲವಾಗುತ್ತದೆ
ಯಶಸ್ವಿ ಜನರು ತಮ್ಮನ್ನು ತಾವು ಅರಿತುಕೊಳ್ಳುವ ಮೂಲಕ ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ತಮ್ಮ ಭಾವನೆಗಳ ಬಗೆಗೆ ಹಾಗೂ ತಮಗೆ ಪ್ರಾಶಸ್ತ್ಯ ನೀಡುವ ಅಂಶಗಳತ್ತ ಅವರು ಹೆಚ್ಚು ಒಲವು ತೋರುತ್ತಾರೆ.
ಯಾವುದು ಸರಿ ಯಾವುದು ತಪ್ಪು ಎಂಬುದರ ವಿವೇಚನೆ ಅವರಲ್ಲಿರುತ್ತದೆ. ಯಾವ ರೀತಿಯಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂಬುದು ಅವರ ಮನದಲ್ಲಿ ಯೋಜಿತವಾಗಿರುತ್ತದೆ.
ಸ್ವಯಂ ನಿಯಂತ್ರಣವನ್ನು ಹೆಚ್ಚಿಸುತ್ತದೆ
ತಮ್ಮನ್ನು ತಾವು ಅರಿತುಕೊಳ್ಳುವುದು ಸಹ ಜನರು ತಾಳ್ಮೆಯನ್ನು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ. ಅದಕ್ಕಾಗಿಯೇ ನಿಮ್ಮ ಪ್ರತಿಕ್ರಿಯೆಗಳ ಬಗ್ಗೆ ಯೋಚಿಸುವುದು ಮತ್ತು ಸಾಧ್ಯವಾದಷ್ಟು ಸೂಕ್ತವಾದ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯವಿರುತ್ತದೆ. ಇದರಿಂದ ಕೂಡಲೇ ಕೋಪಗೊಳ್ಳುವುದಿಲ್ಲ ಹಾಗೂ ಸಮಾಧಾನವಾಗಿ ಯಾವುದೇ ವಿಷಯವನ್ನು ಬಗೆಹರಿಸುತ್ತೀರಿ.
ಇದನ್ನೂ ಓದಿ: Career Tips: ಕೆರಿಯರ್ ಪಾತಿಂಗ್ ಎಂದರೇನು? ಒಬ್ಬ ಉದ್ಯೋಗಿಗೆ ಇದು ಹೇಗೆ ಸಹಾಯಕವಾಗುತ್ತದೆ?
ಉತ್ಪಾದಕತೆಯನ್ನು ಹೆಚ್ಚಿಸುತ್ತದೆ
ಸ್ವಯಂ ಅರಿವಿನಲ್ಲಿ ಸಾಧಕರಾಗಿದ್ದರೆ ನಿಮ್ಮ ಶಕ್ತಿ ಮತ್ತು ನ್ಯೂನತೆಗಳನ್ನು ನೀವು ತಿಳಿದಿರುತ್ತೀರಿ. ಆ ರೀತಿಯಲ್ಲಿ, ನಿಮ್ಮ ಮೇಲೆ ನಿಯಂತ್ರಣ ಸಾಧಿಸಬಹುದು ಮತ್ತು ನಿಮ್ಮ ಪರಿಣತಿಯ ಕ್ಷೇತ್ರದಲ್ಲಿಲ್ಲದ ಕಾರ್ಯಗಳನ್ನು ನಿಯೋಜಿಸಬಹುದು. ಇತರರ ಸ್ಥೈರ್ಯ ಹಾಗೂ ದುರ್ಬಲತೆಯ ಬಗ್ಗೆ ನಿಮಗೆ ಅರಿವು ಉಂಟಾಗುತ್ತದೆ ಇದರಿಂದ ನೀವು ಅತ್ಯುತ್ತಮ ನಿರ್ವಾಹಕರಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ