ಇಂದು ತಂತ್ರಜ್ಞಾನ (Technology) ಹಿಂದೆಂದಿಗಿಂತಲೂ ಮುಂದುವರೆಯುತ್ತಿದೆ. ಅಂತೆಯೇ ಪ್ರಸ್ತುತ ಜಗತ್ತಿನ ಎಲ್ಲ ಕ್ಷೇತ್ರಗಳನ್ನು ನೋಡಿದಾಗ ತಂತ್ರಜ್ಞಾನ ಆಧಾರಿತ ವೃತ್ತಿ (Career) ಕ್ಷೇತ್ರಗಳಲ್ಲಿ ಅಪಾರವಾದ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಅದರಲ್ಲೂ ವಿಶೇಷವಾಗಿ ಕಂಪ್ಯೂಟರ್ ಅಥವಾ ಐಟಿ ಉದ್ಯಮ ದಿನೇ ದಿನೇ ಬೆಳವಣಿಗೆ ಕಾಣುತ್ತಿದ್ದು ಕೌಶಲ್ಯಭರಿತ ಪ್ರತಿಭೆಗಳಿಗೆ ನಿರೀಕ್ಷಿಸಲಾರದಂತಹ ವೇತನಗಳನ್ನು (Salary) ನೀಡುತ್ತಿರುವುದು ಸುಳ್ಳಲ್ಲ.
ನಮ್ಮ ದೇಶದಲ್ಲಿ ಐಐಟಿಯಲ್ಲಿ, ಐಐಎಂ ನಲ್ಲಿ (IIT-IIM) ಓದಿ ದೊಡ್ಡ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡು ವರ್ಷಕ್ಕೆ ಕೋಟ್ಯಂತರ ಸಂಬಳ ಪಡೆಯುವ ಯುವಕ-ಯುವತಿಯರ ಬಗ್ಗೆ ಮಾಧ್ಯಮಗಳಲ್ಲಿ ಓದಿರುತ್ತೀರಿ, ಕೇಳಿರುತ್ತೀರಿ. ಐಐಟಿ ವಿದ್ಯಾರ್ಥಿಗಳು ದೊಡ್ಡ ಮೊಟ್ಟದ ಸಂಬಳಕ್ಕೆ ಆಯ್ಕೆಯಾಗುವ ಮೂಲಕ ಆಗಾಗೇ ಸುದ್ದಿಯಲ್ಲಿ ಇರುತ್ತಾರೆ.
ಸ್ವಲ್ಪ ದಿನಗಳ ಹಿಂದಷ್ಟೇ ರೂರ್ಕಿಯ ವಿದ್ಯಾರ್ಥಿಯೊಬ್ಬನಿಗೆ ಅಂತರಾಷ್ಟ್ರೀಯ ಟೆಕ್ ಕಂಪನಿಯೊಂದು ವಾರ್ಷಿಕ 2.15 ಕೋಟಿ ಸಂಬಳ ನೀಡುವ ಮೂಲಕ ಕೆಲಸಕ್ಕೆ ಆಯ್ಕೆ ಮಾಡಿಕೊಂಡಿತ್ತು. ಬಾಂಬೆಯ ಐಐಟಿ ವಿದ್ಯಾರ್ಥಿ ಕೂಡ ವಾರ್ಷಿಕ 2.05 ಕೋಟಿ ರೂಪಾಯಿ ಸಂಬಳ ಪಡೆದು ಕ್ಯಾಂಪಸ್ ಇಂಟರ್‌ವ್ಯೂನಲ್ಲಿ ಆಯ್ಕೆಯಾಗಿದ್ದ.
ಇಷ್ಟೇ ಅಲ್ಲ ಗುವಾಹಟಿ ಮೂಲದ ಐಐಟಿ ವಿದ್ಯಾರ್ಥಿಯೊಬ್ಬನಿಗೆ ಕಂಪನಿಯೊಂದು ವಾರ್ಷಿಕ 2 ಕೋಟಿ ರೂಪಾಯಿ ಪ್ಯಾಕೇಜ್ ನೀಡಿತ್ತು. ಇತ್ತೀಚೆಗೆ ತಮಿಳುನಾಡಿನ ಐಐಟಿಯ, ಸಾಮಾನ್ಯ ರೈತನ ಮಗಳೊಬ್ಬಳಿಗೆ ಸಿಂಗಾಪೂರ ಮೂಲದ ಕಂಪೆನಿಯೊಂದು ಬರೋಬ್ಬರಿ 64.15 ಲಕ್ಷ ರೂಪಾಯಿ ಪ್ಯಾಕೇಜ್‌ನ ಸಂಬಳದ ಆಫರ್ ನೀಡಿತ್ತು.
ಆದರೆ, ಇವುಗಳ ನಡುವೆ ಹೇಳಿಕೊಳ್ಳುವಂತಹ ಯಾವುದೇ ಸೌಲಭ್ಯಗಳಿಲ್ಲದ ಸಾಮಾನ್ಯ ಕಾಲೇಜಿನಲ್ಲಿ ಓದಿ ಐಐಟಿ, ಐಐಎಂ ವಿದ್ಯಾರ್ಥಿಗಳಿಗೆ ಸಮಾನವಾಗಿ ಕೋಟಿಗಟ್ಟಲೆ ಸಂಬಳ ಪಡೆಯುವುದು ಸಾಧನೆಯೇ ಸರಿ. ಅಂತಹ ಸಾಧನೆಗೈದು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ ಇಲ್ಲೊಬ್ಬ ವಿದ್ಯಾರ್ಥಿ.
1.13 ಕೋಟಿಯ ಭರ್ಜರಿ ಜಾಬ್ ಆಫರ್!
ಹೌದು, ಮಧ್ಯಪ್ರದೇಶದ ಇಂದೋರ್‌ನಲ್ಲಿರುವ ದೇವಿ ಅಹಲ್ಯಾ ವಿಶ್ವವಿದ್ಯಾಲಯ (ಡಿಎವಿವಿ) ವಿದ್ಯಾರ್ಥಿಯಾಗಿರುವ ಸಾಹಿಲ್ ಅಲಿ ಅವರು ನೆದರ್‌ಲ್ಯಾಂಡ್‌ನ ತಂತ್ರಜ್ಞಾನ ಸಂಸ್ಥೆ ಅಡ್ಯೆನ್‌ನಿಂದ ವಾರ್ಷಿಕ 1.13 ಕೋಟಿ ಪ್ಯಾಕೇಜ್‌ನ್ನು ಪಡೆಯುವ ಮೂಲಕ ಇತಿಹಾಸ ಸೃಷ್ಟಿಸಿದ್ದಾರೆ. ಸಾಹಿಲ್ ಅಲಿ ಫೆಬ್ರವರಿ 2023 ರಲ್ಲಿ ಅಡ್ಯೆನ್‌ಗೆ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ನೇಮಕೊಂಡಿದ್ದಾರೆ.
ಹೆಚ್ಚಿನ ಸಂಬಳದ ಕೆಲಸ ಪಡೆದ ಮೊದಲ ವಿದ್ಯಾರ್ಥಿ ಸಾಹಿಲ್! ದಾಖಲೆ ನಿರ್ಮಾಣ
ಹೌದು, ಸಾಹಿಲ್ ಅಲಿ ಅವರು ಮಧ್ಯಪ್ರದೇಶದ ಇಂದೋರ್‌ನ ಡಿಎವಿವಿಯಿಂದ ಇಷ್ಟೊಂದು ಹೆಚ್ಚಿನ ಸಂಬಳದ ಕೆಲಸ ಗಿಟ್ಟಿಸಿದ ಮೊದಲ ವಿದ್ಯಾರ್ಥಿಯಾಗಿದ್ದಾರೆ. ಈ ಮೂಲಕ ವಿಶ್ವವಿದ್ಯಾನಿಲಯದಲ್ಲಿ ತಮ್ಮ ಹೆಸರಿನಲ್ಲಿ ದಾಖಲೆಯೊಂದನ್ನು ನಿರ್ಮಿಸಿದ್ದಾರೆ.
ಇದನ್ನೂ ಓದಿSuccess Story: ಇಂಟರ್ನಿ ಆಗಿದ್ದಾಗಲೇ 1 ಕೋಟಿ ಸಂಬಳದ ಆಫರ್ ತಿರಸ್ಕರಿಸಿದ್ದ ವಿನಿತಾ; ಮುಂದೆ ಏನ್ಮಾಡಿದ್ರು?
ಓದಿನಲ್ಲಿ ಮೊದಲಿನಂದಲೂ ಮೇಲುಗೈ
ಸಾಹಿಲ್ ಅಲಿ ತಮ್ಮ ಎಂಟೆಕ್ ಪದವಿ ಪಡೆದಿದ್ದು, ಡಿಎವಿವಿಯ ಐಐಪಿಎಸ್ ಕಾಲೇಜಿನಲ್ಲಿ. ಅವರು ತಮ್ಮ ಪ್ರಾರಂಭದ ದಿನಗಳಿಂದಲೂ ಬುದ್ದಿವಂತ ವಿದ್ಯಾರ್ಥಿಯಾಗಿದ್ದರಂತೆ. ಸ್ವಾರಸ್ಯವೆಂದರೆ, ನೆದರ್ಲ್ಯಾಂಡ್ ನ ಕಂಪೆನಿಯ 1.13 ಕೋಟಿ ಪ್ಯಾಕೇಜ್ ಆಫರ್ ಬರುವುಕ್ಕಿಂದ ಮೊದಲು ಇವರಿಗೆ ಬೆಂಗಳೂರಿನ ಕಂಪನಿಯೊಂದು 46 ಲಕ್ಷ ರೂ. ಸಂಬಳದ ಆಫರ್ ನೀಡಿತ್ತು.
“ನನಗೆ ಡಾಟ್ ಗಳಿಗೆ ಸಂಪರ್ಕ ನೀಡುವ ಕೆಲಸ ಬಲು ಇಷ್ಟ. ಅದು ವಿಭಿನ್ನ ವಿಭಾಗಗಳ ಆಲೋಚನೆಗಳಾಗಿರಲೀ, ವಿಭಿನ್ನ ತಂಡಗಳ ಜನರಾಗಿರಲೀ ಅಥವಾ ವಿವಿಧ ಕೈಗಾರಿಕೆಗಳ ಅಪ್ಲಿಕೇಶನ್‌ಗಳಾಗಲೀ, ಈ ಕೆಲಸ ನನಗೆ ಪ್ರಿಯವಾದುದು.
ತಾಂತ್ರಿಕ ಕೌಶಲ್ಯಗಳೇ ನನ್ನ ಪ್ಲಸ್ ಪಾಯಿಂಟ್. ಸಾಫ್ಟ್‌ವೇರ್ ಎಂಜಿನಿಯರಿಂಗ್ ಮತ್ತು ಯಂತ್ರ ಕಲಿಕೆಯ ಶೈಕ್ಷಣಿಕ ಹಿನ್ನೆಲೆ ಇದೆ” ಎಂದು ಸಾಹಿಲ್ ಅಲಿ ತಮ್ಮ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿ ಬರೆದುಕೊಂಡಿದ್ದಾರೆ.
ಇತ್ತೀಚೆಗೆ ಭಾರತ ಸೇರಿದಂತೆ ವಿದೇಶದ ಬಹಳಷ್ಟು ಕಂಪೆನಿಗಳು ಹೀಗೆ ಇಲ್ಲಿನ ವಿದ್ಯಾರ್ಥಿಗಳಿಗೆ ಕೋಟಿಗಟ್ಟಲೆ ಆಫರ್ ನೀಡಿ ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದು, ಯುವಕರಲ್ಲಿ ಉದ್ಯೋಗದ ಕುರಿತು ಸಾಕಷ್ಟು ಆಶಾ-ಭಾವನೆ ಮೂಡಿಸುತ್ತಿರುವುದಂತೂ ಸುಳ್ಳಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ