ಯಾವುದೇ ಉದ್ಯೋಗದಲ್ಲಾದರೂ (Job) ಹೆಚ್ಚು ಅಂತರ (Break) ತೆಗೆದುಕೊಂಡು ಮತ್ತೆ ಕೆಲಸಕ್ಕೆ ಬರುವುದು ಎಂದರೆ ಅದು ಒಂದು ರೀತಿಯ ಸವಾಲಿನ ಕೆಲಸ. ಒಂದೆರೆಡು ವರ್ಷದಲ್ಲಿ ಕೆಲಸ ಮಾದರಿ ಬದಲಾಗಿರಬಹುದು, ವ್ಯವಸ್ಥೆ, ಹೊಸ ಪ್ರತಿಭೆಗಳು, ಕೌಶಲ್ಯಗಳು ಉದ್ಯಮದಲ್ಲಿ ಇರುವಾಗ ಗ್ಯಾಪ್ ತೆಗೆದುಕೊಂಡು ಬಂದವರು ಸ್ವಲ್ಪ ಮೂಲೆಗುಂಪಾಗಬಹುದು.
ಬ್ರೇಕ್ ತೆಗೆದುಕೊಂಡ ನಂತರ ಕೆಲಸ ಹುಡುಕೋದು ಕಷ್ಟ
ದೀರ್ಘಾವಧಿಯ ಅನುಪಸ್ಥಿತಿಯ ಅನುಭವ ಪುರುಷ ಮತ್ತು ಮಹಿಳಾ ಅಭ್ಯರ್ಥಿ ಇಬ್ಬರಿಗೂ ಸವಾಲಾಗಿದೆ. ಆದರೆ ವಿಶೇಷವಾಗಿ ಮಹಿಳೆಯರಿಗೆ ತಮ್ಮ ವೃತ್ತಿ ಬದುಕಲ್ಲಿ ಬ್ರೇಕ್ ಎನ್ನುವುದು ಸಾಮಾನ್ಯ. ಕುಟುಂಬಕ್ಕಾಗಿ, ಮಗುವಿಗಾಗಿ ಹೀಗೆ ಕುಟುಂಬದ ಜೊತೆ ರಾಜಿ ಮಾಡಿಕೊಳ್ಳುವ ವೇಳೆಯಲ್ಲಿ ಮಹಿಳೆಯರು ತಮಗೂ ಒಂದು ಕೆರಿಯರ್ ಇದೇ ಎಂಬುದನ್ನು ಮರೆತು ಕುಟುಂಬಕ್ಕೆ ಸಮಯ ನೀಡುತ್ತಾರೆ.
ಮದುವೆ, ಮಕ್ಕಳಾದ ಮೇಲೆ ಒಂದೆರೆಡು ವರ್ಷ ಮಕ್ಕಳನ್ನು ಸಾಕಲು ಮಹಿಳೆಯರು ಕೆಲಸದಿಂದ ಅನಿವಾರ್ಯವಾಗಿ ಬ್ರೇಕ್ ತೆಗೆದುಕೊಳ್ಳುತ್ತಾರೆ. ನಂತರ ಮತ್ತೆ ಕೆಲಸ ಹುಡುಕಬೇಕು, ವೃತ್ತಿ ಶುರು ಮಾಡಬೇಕು ಎನ್ನುವ ಹಂತ ಮಾತ್ರ ಹೆಚ್ಚು ಸವಾಲಿನಿಂದ ಕೂಡಿರುತ್ತದೆ. ಇದರ ಬಗ್ಗೆ ಹಲವು ಅಧ್ಯಯನಗಳಲ್ಲಿ ಸ್ವತಃ ಮಹಿಳೆಯರು ಹೇಳಿಕೊಂಡಿದ್ದಾರೆ.
ಗರಿಮಾ ಮಾಸ್ಸೆ, ವ್ಯಾಪಾರ ಅಭಿವೃದ್ಧಿ ವ್ಯವಸ್ಥಾಪಕಿ, ಇವರು ಕೂಡ ಕೆಲಸದಲ್ಲಿ 8 ವರ್ಷಗಳ ಸುದೀರ್ಘ ಬ್ರೇಕ್ ತೆಗೆದುಕೊಂಡವರು. ಇಷ್ಟು ವರ್ಷ ಕೆಲಸ ಬಿಟ್ಟು ಇದ್ದ ನನಗೆ ಮತ್ತೆ ಕೆಲಸ ಹುಡುಕೋದು ಕಷ್ಟವಾಯಿತು, ನಾನು ಈ ಅವಧಿಯಲ್ಲಿ ಮತ್ತೊಂದು ಪ್ರಪಂಚವನ್ನೇ ನೋಡಿದೆ. ಯಾರೂ ಸಹ ಈ ವೇಳೆ ನನಗೆ ಬೆಂಬಲ ನೀಡಿಲ್ಲ ಎಂದು ಅಂತರದ ನಂತರ ಪಟ್ಟ ಕಷ್ಟವನ್ನು ನೆನಪಿಸಿಕೊಳ್ಳುತ್ತಾರೆ.
ಹೇಗೋ ನನ್ನ ಗಂಡ ಕೆಲಸ ಮಾಡುವ ಸ್ಥಳದಲ್ಲಿಯೇ ನಾನು ಕೆಲಸ ಆರಂಭಿಸಿದೆ. ಅದರೆ ಅಲ್ಲಿಯೂ ನನ್ನನ್ನು ಫ್ರೆಶರ್ ರೀತಿ ನೋಡಲಾಯಿತು. ಆರಂಭದಲ್ಲಿ ನನಗೆ ವೇತನ ರಚನೆ ಮತ್ತು ಅರ್ಹವಾದ ಹುದ್ದೆಯನ್ನು ನೀಡಲಿಲ್ಲ. ಹೇಗೋ ನಾನೇ ನನ್ನ ಸಾಮರ್ಥ್ಯದಿಂದ ಎಲ್ಲವನ್ನೂ ಪಡೆದುಕೊಂಡೆ. ಆದರೆ ಏಕೆ ಮಹಿಳೆಯರಿಗೆ ಅಂತರದ ಬಳಿಕ ಈ ರೀತಿ ನಡೆಸಿಕೊಳ್ಳಲಾಗುತ್ತದೆ ಎಂದು ಮಾಸ್ಸೆ ಪ್ರಶ್ನೆ ಮಾಡಿದ್ದಾರೆ.
ಮದುವೆ, ಮಕ್ಕಳಾದ ನಂತರ ಮಹಿಳಾ ಉದ್ಯೋಗಿಗಳನ್ನು ನಿರ್ಲಕ್ಯ ಮಾಡಲಾಗುತ್ತದೆಯೇ?
ಇದು ಕೇವಲ ಗರಿಮಾ ಮಾಸ್ಸೆ ಸಮಸ್ಯೆ ಮಾತ್ರವಲ್ಲ, ಕೆಲಸದಲ್ಲಿ ಗ್ಯಾಪ್ ತೆಗೆದುಕೊಂಡ ಪ್ರತಿ ಮಹಿಳೆಯರ ಕಷ್ಟ. ಗರ್ಭಾವಸ್ಥೆಯ ಕಾರಣದಿಂದಾಗಿ ಹೆಚ್ಚಿನ ಮಹಿಳೆಯರು ತಮ್ಮ ಕೆಲಸಕ್ಕೆ ರಾಜೀನಾಮೆ ನೀಡುವಂತೆ ಕಂಪನಿಗಳು ಒತ್ತಾಯಿಸುತ್ತವೆ ಎಂದು ಹಲವರು ಹೇಳಿದ್ದಾರೆ.
ಇನ್ನೂ ಮಗುವಾದ ನಂತರ ಮಹಿಳೆಯರನ್ನು ಹೆಚ್ಚಾಗಿ ಮನೆಯಲ್ಲೇ ಇರುವಂತೆ ಮಾಡಿ ಬಿಡುತ್ತವೆ. ತಮ್ಮ ಕರ್ತವ್ಯಗಳನ್ನು ಪೂರೈಸಿದ ನಂತರ ಮತ್ತೆ ಕೆಲಸಕ್ಕೆ ಮರಳಲು ಬಯಸಿದಾಗ ಸಮಾಜದಲ್ಲಿ ಉದ್ಯೋಗ ಹುಡುಕುವ ಮತ್ತೊಂದು ಸಮಸ್ಯೆ ಮಹಿಳೆಯರಿಗೆ ಎದುರಾಗುತ್ತದೆ.
ಮಾತೃತ್ವ (ತಿದ್ದುಪಡಿ) ಮಸೂದೆ, 2017
ಮಹಿಳೆಯರಿಗೆ ಅನುಕೂಲವಾಗಲೆಂದೆ, ಸರ್ಕಾರವು ಮಾತೃತ್ವ (ತಿದ್ದುಪಡಿ) ಮಸೂದೆ, 2017 ಅನ್ನು ಪರಿಚಯಿಸಿತು. ಇದರ ಪ್ರಕಾರ ಭಾರತದಲ್ಲಿ ಮಹಿಳೆಯರು 26 ವಾರಗಳ ಪಾವತಿಸಿದ ಹೆರಿಗೆ ರಜೆಯನ್ನು ಮಹಿಳೆಯರು ಪಡೆಯುತ್ತಾರೆ.
ಪಾವತಿಸಿದ ರಜೆಗಳ ಹೊರತಾಗಿ, ಮಹಿಳೆಯರಿಗೆ ಈ ಕಾಯಿದೆಯಡಿಯಲ್ಲಿ ಹಲವಾರು ಪ್ರಯೋಜನಗಳನ್ನು ನೀಡಲಾಗುತ್ತದೆ, ಉದಾಹರಣೆಗೆ ಮನೆಯಿಂದಲೇ ಕೆಲಸ ಮಾಡುವ ಆಯ್ಕೆ, ಹೆರಿಗೆ ಬೋನಸ್, ಆರೋಗ್ಯ ರಕ್ಷಣೆಯ ಪ್ರೋತ್ಸಾಹ, ಶಿಶುವಿಹಾರ ಸೌಲಭ್ಯ ಮತ್ತು ಒಂದು ತಿಂಗಳ ಗಂಭೀರ ಅನಾರೋಗ್ಯದ ಪ್ರಯೋಜನ ಲಭ್ಯವಿದೆ.
ಗರ್ಭಾವಸ್ಥೆಯ ನಂತರ ಕೆಲಸಕ್ಕೆ ಮರಳಲು ಹೆಚ್ಚಿನ ಮಹಿಳೆಯರನ್ನು ಪ್ರೇರೇಪಿಸುವ ದೃಷ್ಟಿಯಿಂದ ಈ ಮಸೂದೆಯನ್ನು ಪರಿಚಯಿಸಲಾಯಿತು ಮತ್ತು ಅಂಗೀಕರಿಸಲಾಯಿತು. ಆದರೆ ಈ ಕಾಯಿದೆಯನ್ನು ಕೆಲ ಉದ್ಯೋಗ ಕ್ಷೇತ್ರಗಳು ಅಷ್ಟಾಗಿ ಜಾರಿಗೆ ತಂದಿಲ್ಲ. ಇದೇ ಕಾರಣಕ್ಕೆ ಮಕ್ಕಳಾದ ನಂತರ ಮಹಿಳೆಯರು ಕೆಲಸದಿಂದ ದೂರ ಉಳಿದು ಬಿಡುತ್ತಾರೆ.
ಮಕ್ಕಳಾದ ನಂತರ ಕೆಲಸ ಬಿಡುತ್ತಿದ್ದಾರೆ 50% ಉದ್ಯೋಗಸ್ಥ ಮಹಿಳೆಯರು
Genpact ಸೆಂಟರ್ ಫಾರ್ ವುಮೆನ್ಸ್ ಲೀಡರ್‌ಶಿಪ್ ನಡೆಸಿದ ಅಧ್ಯಯನದ, ಭಾರತದಲ್ಲಿ ಸುಮಾರು 50% ಉದ್ಯೋಗಸ್ಥ ಮಹಿಳೆಯರು 30 ನೇ ವಯಸ್ಸಿನಲ್ಲಿ ತಮ್ಮ ಮಕ್ಕಳನ್ನು ನೋಡಿಕೊಳ್ಳಲು ತಮ್ಮ ಕೆರಿಯರ್ ಅನ್ನು ತ್ಯಾಗ ಮಾಡುತ್ತಿದ್ದಾರೆ ಎಂದು ತಿಳಿಸಿದೆ.
ತಾಯಂದಿರಾದ ನಂತರ, ಸುಮಾರು 27% ಜನರು ತಮ್ಮ ವೃತ್ತಿಜೀವನದಲ್ಲಿ ಮುನ್ನಡೆಯುತ್ತಾರೆ ಮತ್ತು ಕೇವಲ 16% ಮಾತ್ರ ಮರುಸೇರ್ಪಡೆಯಾದ ನಂತರ ಉನ್ನತ ಸ್ಥಾನಗಳನ್ನು ಪಡೆಯುತ್ತಾರೆ ಎಂದು ವರದಿಯು ತಿಳಿಸಿದೆ.
ಈ ಅಂಕಿಅಂಶಗಳು ಮದುವೆ, ಮಕ್ಕಳ ನಂತರ ಮಹಿಳೆಯರ ವೃತ್ತಿಜೀವನದ ಭವಿಷ್ಯ ಏನು ಎಂಬುದನ್ನು ತೋರಿಸುತ್ತವೆ ಎನ್ನಬಹುದು. ಹಲವು ಕಾರಣಗಳಿಂದಾಗಿ ಮಹಿಳೆಯರು ಕೆಲಸ ಬಿಟ್ಟು ಬಿಡುತ್ತಾರೆ ಅಥವಾ ಮತ್ತೆ ಮುಂದುವರಿಯಲು ಸಾಧ್ಯವಾಗುವುದಿಲ್ಲ, ಆ ಕಾರಣಗಳು ಹೀಗಿವೆ.
ಮಹಿಳೆ ಕೆಲಸಕ್ಕೆ ಮತ್ತೆ ಮರಳುವುದನ್ನು ತಡೆಯುವ ಅಂಶಗಳು ಹೀಗಿವೆ
- ಸೀಮಿತ ಸಂಖ್ಯೆಯ ಅವಕಾಶಗಳು: ಅಂದರೆ ಕೆಲಸದಲ್ಲಿ ಬ್ರೇಕ್ ತೆಗೆದುಕೊಂಡ ನಂತರ ಮಹಿಳೆಯರನ್ನು ನೇಮಿಸಿಕೊಳ್ಳಲು ಹೆಚ್ಚಿನ ಕಂಪನಿಗಳು ಹಿಂದೆ ಮುಂದೆ ನೋಡುವುದರಿಂದ
- ಸ್ವೀಕಾರದ ಭಯ: ಮಾತೃತ್ವಕ್ಕೆ ಪರಿವರ್ತನೆಯಾದ ನಂತರ ತಮ್ಮ ವೃತ್ತಿಪರ ಸಾಮರ್ಥ್ಯಗಳು ಮತ್ತು ಪ್ರತಿಭೆಗಳನ್ನು ಕಂಪನಿಗಳು ಗುರುತಿಸುವುದಿಲ್ಲ. ನಮ್ಮನ್ನು ಕಡೆಗಣಿಸಲಾಗುತ್ತದೆ ಎಂದು ಮಹಿಳೆಯರು ಹೇಳಿದ್ದಾರೆ.
- ಕೆಲಸದ ಸಂಸ್ಕೃತಿ : ಜಗತ್ತಿನಾದ್ಯಂತ ಹಲವಾರು ಕಂಪನಿಗಳಲ್ಲಿ, ಕೆಲಸದ ವ್ಯವಸ್ಥೆಗಳು, ಸಾಮಾನ್ಯ ನಮ್ಯತೆ, ಕಚೇರಿಯಲ್ಲಿ ಸರಿಯಾದ ಸ್ತನ್ಯಪಾನ ಕೇಂದ್ರಗಳು ಮತ್ತು ಶಿಶುವಿಹಾರದ ಸೌಲಭ್ಯ ಸರಿಯಾಗಿಲ್ಲದಿರುವುದು ಕೂಡ ಮಹಿಳೆಯರು ಕೆಲಸದಿಂದ ದೂರ ಉಳಿಯಲು ಕಾರಣವಾಗಿದೆ.
- ಕುಟುಂಬದ ಬೆಂಬಲದ ಕೊರತೆ- ಭಾರತೀಯರಲ್ಲಿ ಮಕ್ಕಳನ್ನು ಬೆಳೆಸುವುದು ಎಂದರೆ ಮಹಿಳೆಯರು ಮಾತ್ರ ಎಂಬ ಭಾವನೆ ಇದೆ. ಹೀಗಾಗಿ ಮಕ್ಕಳಾದ ನಂತರ ಮಹಿಳೆಯರಿಗೆ ಆಫಿಸ್, ಕೆಲಸ ಏನೂ ಬೇಡ ಮನೆಯಲ್ಲಿ ಇರಿ ಎಂಬ ಒತ್ತಡ ಹೇರುತ್ತಾರೆ.
- ಆತ್ಮವಿಶ್ವಾಸದ ಕೊರತೆ: ಹಲವು ವರ್ಷಗಳ ನಂತರ ಮಹಿಳಾ ಉದ್ಯೋಗಿಗಳಲ್ಲೂ ಒಂದು ರೀತಿಯ ಆತ್ಮವಿಶ್ವಾಸದ ಕೊರತೆ ಎದುರಾಗುತ್ತದೆ. ಇದು ಸಹ ಅವರನ್ನು ತಮ್ಮ ವೃತ್ತಿ ಜೀವನದಿಂದ ದೂರ ಇರುವಂತೆ ಮಾಡುತ್ತದೆ.
- ವೇತನ ರಚನೆಯಲ್ಲಿನ ಅಸಮಾನತೆ: ಗ್ಯಾಪ್ ತೆಗೆದುಕೊಂಡ ಬಂದ ಮಹಿಳೆಯರಿಗೆ ಗಣನೀಯವಾಗಿ ಕಡಿಮೆ ವೇತನ ನೀಡಲಾಗುತ್ತದೆ. ಇದು ಉದ್ಯೋಗಿಗಳ ನಿರುತ್ಸಾಹಕ್ಕೆ ಕಾರಣವಾಗಿದೆ.
ಮಹಿಳಾ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವುದು ಎಂದರೆ ಕಂಪನಿಯಲ್ಲು ಹೂಡಿಕೆ ಮಾಡಿದಂತೆ ಎಂದು ಹಲವರು ಹೇಳುತ್ತಾರೆ. ಇದೇ ಕಾರಣಕ್ಕೆ ಮಹಿಳೆಯರನ್ನು ಮತ್ತೆ ಕೆಲಸಕ್ಕೆ ಕರೆತರಲು ಭಾರತದಲ್ಲಿ, ಹಲವಾರು ಕಂಪನಿಗಳು ಈಗ ಪುನರಾರಂಭ ಅಥವಾ ರಿಟರ್ನ್‌ಶಿಪ್ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿವೆ.
ಅವರ ಅನುಪಸ್ಥಿತಿಯ ಹಿಂದಿನ ಕಾರಣಗಳನ್ನು ಲೆಕ್ಕಿಸದೆ, ದೀರ್ಘ ವಿರಾಮದ ನಂತರ ಉದ್ಯೋಗಿಗಳಿಗೆ ಪುನಃ ಸೇರಲು ಹೆಚ್ಚಿನ ಮಹಿಳೆಯರಿಗೆ ಸಹಾಯ ಮಾಡಲು ಮತ್ತು ಪ್ರೇರೇಪಿಸಲು ಈ ಯೋಜನೆಗಳನ್ನು ಜಾರಿತರಲಾಗಿದೆ.
ಏನಿದು ರಿಟರ್ನ್‌ಶಿಪ್ ಪ್ರೋಗ್ರಾಂ?
ಈಗಿನ ಮಹಿಳೆಯರು ಮನೆಯಲ್ಲಿ ಖಾಲಿ ಕೂರಲು ಬಯಸೋದೆ ಇಲ್ಲಾ. ಕೆಲಸ ಮಾಡಬೇಕು, ಸಂಪಾದನೆ ಮಾಡಬೇಕು ಎಂದು ಗುರಿ ಇಟ್ಟುಕೊಂಡಿರುತ್ತಾರೆ.
ಹೀಗಾಗಿ ಇಂತಹ ಮಹಿಳೆಯರನ್ನು ಪ್ರೋತ್ಸಾಹಿಸಲು ರಿಟರ್ನ್‌ಶಿಪ್ ಪ್ರೋಗ್ರಾಂ ಅನ್ನು ವಿನ್ಯಾಸಗೊಳಿಸಲಾಗಿದೆ. ರಿಟರ್ನ್‌ಶಿಪ್ ಪ್ರೋಗ್ರಾಂ ಹಲವು ವರ್ಷ ಬ್ರೇಕ್ ತೆಗೆದುಕೊಂಡ ಮಹಿಳೆಯರ ಆತ್ಮವಿಶ್ವಾಸವನ್ನು ಮರಳಿ ಪಡೆಯಲು, ಹೊಸ ಕೌಶಲ್ಯಗಳನ್ನು ಪಡೆಯಲು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ಕೆಲಸದ ಸ್ಥಳದಲ್ಲಿ ಸುಗಮವಾಗಿ ನೆಲೆಗೊಳ್ಳಲು ಅನುವು ಮಾಡಿಕೊಡಲು ವಿನ್ಯಾಸಗೊಳಿಸಲಾಗಿದೆ.
ಇದೊಂದು ಪಾವತಿ ಮಾಡಬೇಕಾದ ಕಾರ್ಯಕ್ರಮವಾಗಿದ್ದು, ನೀವು ಕೌಶಲ್ಯ, ಮರುಕೌಶಲ್ಯ, ತರಬೇತಿ, ಮತ್ತು ಇದಲ್ಲದೆ, ನಿಮಗೆ ವಿವಿಧ ಆರೋಗ್ಯ ಪ್ರಯೋಜನಗಳು ಮತ್ತು ಶಿಶುಪಾಲನಾ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಈ ಕಾರ್ಯಕ್ರಮವು ಕೆಲಸದಲ್ಲಿ ಅಂತರ ತೆಗೆದುಕೊಂಡವರಿಗೆ ಮತ್ತೊಮ್ಮೆ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ಅವಕಾಶವನ್ನು ನೀಡುತ್ತದೆ.
ರಿಟರ್ನ್‌ಶಿಪ್ ಕಾರ್ಯಕ್ರಮಗಳನ್ನು ನೀಡುವ ಭಾರತದ ಕಂಪನಿಗಳು
* ಡೆಲಾಯ್ಟ್ ಇಂಡಿಯಾ - ಕನಿಷ್ಠ ಎರಡು ವರ್ಷಗಳ ಕಾಲ ವೃತ್ತಿಜೀವನದ ವಿರಾಮವನ್ನು ತೆಗೆದುಕೊಂಡವರಿಗೆ ಮತ್ತು ಈಗ ತಮ್ಮ ವೃತ್ತಿಜೀವನವನ್ನು ಪುನರಾರಂಭಿಸಲು ಸಿದ್ಧರಿರುವವರಿಗೆ 16 ವಾರಗಳ ಪಾವತಿಸಿದ ಇಂಟರ್ನ್‌ಶಿಪ್ ಅನ್ನು ಈ ಕಂಪನಿ ನೀಡುತ್ತದೆ.
* ಅಮೆಜಾನ್ ಇಂಡಿಯಾ- ಇದು ಮಹಿಳೆಯರಿಗೆ ತಮ್ಮ ಕಾರ್ಪೊರೇಟ್ ಕಾರ್ಯಗಳನ್ನು ಪುನರಾರಂಭಿಸಲು ಸಹಾಯ ಮಾಡಲು 16 ವಾರಗಳ ಪಾವತಿಸಿದ ಇಂಟರ್ನ್‌ಶಿಪ್ ಅನ್ನು ಒದಗಿಸುತ್ತದೆ.
* ಗೋಲ್ಡ್‌ಮನ್ ಸ್ಯಾಕ್ಸ್ ಇಂಡಿಯಾ - ಕನಿಷ್ಠ ಎರಡು ವರ್ಷಗಳ ಕಾಲ ಬ್ರೆಕ್ ತೆಗೆದುಕೊಂಡ ಮಹಿಳಾ ಉದ್ಯೋಗಿಗಳಿಗೆ 12 ವಾರಗಳವರೆಗೆ ರಿಟರ್ನ್‌ಶಿಪ್ ನೀಡುತ್ತದೆ. ಈ ಸಂಪೂರ್ಣ ಪಾವತಿಸಿದ ಇಂಟರ್ನ್‌ಶಿಪ್ ಕಾರ್ಯಕ್ರಮದ ಕೊನೆಯಲ್ಲಿ ನಿಮಗೆ ಉದ್ಯೋಗದ ಕೊಡುಗೆಯನ್ನು ನೀಡುತ್ತದೆ.
* SAP ಇಂಡಿಯಾ – ಟೆಕ್ ಕಂಪನಿಯ ವೃತ್ತಿ ಪುನರಾರಂಭದ ಯೋಜನೆಯು ಮೂರು ತಿಂಗಳ ಪಾವತಿಸಿದ ಇಂಟರ್ನ್‌ಶಿಪ್ ಮತ್ತು ಅದರ ನಂತರ ಸಂಭವನೀಯ ಉದ್ಯೋಗದ ಕೊಡುಗೆಯನ್ನು ಹೊಂದಿದೆ.
5+ ಕೆಲಸದ ಅನುಭವ ಹೊಂದಿರುವ ವೃತ್ತಿಜೀವನದ ಮಧ್ಯದ ವೃತ್ತಿಪರರಿಗಾಗಿ ಇದನ್ನು ವಿಶೇಷವಾಗಿ ನೀಡಲಾಗುತ್ತದೆ. ಈ ಕಾರ್ಯಕ್ರಮಕ್ಕಾಗಿ ಕಂಪನಿಯು 55+ ಖಾಲಿ ಹುದ್ದೆಗಳನ್ನು ನಿಯೋಜಿಸಿದೆ.
ಇದನ್ನೂ ಓದಿ: Working Woman: ಉದ್ಯೋಗಕ್ಕಾಗಿ ತಾಯ್ತನವನ್ನು ಮುಂದೂಡುವುದು ಎಷ್ಟು ಸರಿ, ತಜ್ಞರು ಏನಂತಾರೆ?
* ಬಾರ್ಕ್ಲೇಸ್ ಇಂಡಿಯಾ - ಪ್ರತಿಯೊಂದು ರಿಟರ್ನ್‌ಶಿಪ್ ಕಾರ್ಯಕ್ರಮಗಳಂತೆ, ಇದು ತರಬೇತಿ, ಮಾರ್ಗದರ್ಶನ ಮತ್ತು ಅದ್ಭುತ ನೆಟ್‌ವರ್ಕಿಂಗ್ ಅವಕಾಶಗಳನ್ನು ನೀಡುತ್ತದೆ. ಇದರ ಮೂಲಕ, ನೀವು ಬಾರ್ಕ್ಲೇಸ್‌ನಲ್ಲಿ 12 ವಾರಗಳ ಪಾವತಿಸಿದ ಫೆಲೋಶಿಪ್ ಮತ್ತು ನಿಮ್ಮ ಕಾರ್ಯಕ್ಷಮತೆಯನ್ನು ಅವಲಂಬಿಸಿ ಪೂರ್ಣ ಸಮಯದ ಸ್ಥಾನವನ್ನು ಪಡೆಯಬಹುದು.
ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯಲು ಕಂಪನಿಗಳ ವೆಬ್‌ಸೈಟ್‌ಗಳಿಗೆ ಭೇಟಿ ನೀಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ