ಜೀವನದಲ್ಲಿ ನಾವು ಯಾವ ವಿಷಯದಲ್ಲಿ ಪದವಿಯನ್ನು ಮತ್ತು ಸ್ನಾತಕೋತ್ತರ ಪದವಿಯನ್ನು (Graduation) ಓದಬೇಕು . ನಂತರದಲ್ಲಿ ಅದಕ್ಕೆ ತಕ್ಕಂತೆ ಯಾವ ವೃತ್ತಿಜೀವನವನ್ನು (Career) ಆಯ್ಕೆ ಮಾಡಿಕೊಳ್ಳಬೇಕು ಅಂತ ಬಹುತೇಕರು ತಮ್ಮ ಕಾಲೇಜು ದಿನಗಳಲ್ಲಿಯೇ ಯೋಜಿಸಿಕೊಳ್ಳುತ್ತಾರೆ ಅಂತ ಹೇಳಬಹುದು. ಇನ್ನೂ ಕೆಲವರು ಇದನ್ನು ಸರಿಯಾಗಿ ಯೋಜಿಸದೆ ಆನಂತರ ಪರದಾಡಿದ್ದು ಸಹ ನಾವು ನೋಡಿರುತ್ತೇವೆ.
ಆದರೆ, ಮಕ್ಕಳು ತಮ್ಮ ಕಾಲೇಜಿನಲ್ಲಿ ಅಥವಾ ಕಾಲೇಜು ಅಧ್ಯಯನ ಮುಗಿದ ನಂತರದಲ್ಲಿ ಯಾವ ವೃತ್ತಿಜೀವನವನ್ನು ತಾವು ಆಯ್ಕೆ ಮಾಡಿಕೊಂಡರೆ ಒಳ್ಳೆಯದು ಅಂತ ಅರ್ಥಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಕೆಲಸವಲ್ಲ . ಇದಕ್ಕೆ ಆ ವೃತ್ತಿಜೀವನದಲ್ಲಿ ಇರುವ ಹಿರಿಯರ ಮಾರ್ಗದರ್ಶನ ತುಂಬಾನೇ ಅತ್ಯಗತ್ಯವಾಗುತ್ತದೆ. ಮನೆಯಲ್ಲಿ ಪೋಷಕರ ಬೆಂಬಲ ಸಲ ತುಂಬಾನೇ ಮುಖ್ಯವಾಗುತ್ತದೆ ಅಂತ ಹೇಳಬಹುದು.
ತಮ್ಮ ಮಕ್ಕಳು ಆಯ್ಕೆ ಮಾಡುವಾಗ ಕೆಲವೊಂದು ಬಾರಿ ಪೋಷಕರು ಸಹ ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ. ಹಾಗೆ ಮಾಡುವುದರಿಂದ ಮಕ್ಕಳಿಗೆ ವೃತ್ತಿಜೀವನದ ಆಯ್ಕೆ ಮಾಡುವ ಇನ್ನಷ್ಟು ಕಠಿಣವಾಗುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಎಲ್ಲವೂ ನಿರಂತರವಾಗಿ ವಿಕಸನಗೊಳ್ಳುತ್ತಿರುವ ಜಗತ್ತಿನಲ್ಲಿ ಸರಿಯಾದ ವೃತ್ತಿಜೀವನವನ್ನು ಆಯ್ಕೆ ಮಾಡುವುದು ಒಂದು ದೊಡ್ಡ ಸವಾಲಾಗಿದೆ ಅಂತ ಹೇಳಬಹುದು. ಒಬ್ಬ ವಿದ್ಯಾರ್ಥಿಗೆ ಅವರ ಜೀವನದಲ್ಲಿ ಶಿಕ್ಷಕರು ಮತ್ತು ಮಾರ್ಗದರ್ಶಕರಿಂದ ಮಾರ್ಗದರ್ಶನ ಮಾತ್ರವಲ್ಲದೆ, ಪೋಷಕರಿಂದಲೂ ಮಾರ್ಗದರ್ಶನ ಬೇಕು. ಮಕ್ಕಳು ವೃತ್ತಿಜೀವನದ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳುವಾಗ ಪೋಷಕರು ಈ 10 ತಪ್ಪುಗಳನ್ನು ಮಾಡಬಾರದು.
1. ಅನವಶ್ಯಕವಾಗಿ ಒತ್ತಡ ಹೇರುವುದು
ವೃತ್ತಿಜೀವನವು ಮಕ್ಕಳ ಜೀವನದ ಒಂದು ಅವಿಭಾಜ್ಯ ಹಂತವಾಗಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಈಗಾಗಲೇ ಮಕ್ಕಳು ಸರಿಯಾದ ವೃತ್ತಿಜೀವನದ ಮಾರ್ಗವನ್ನು ಆರಿಸುವಲ್ಲಿ ಭಯ ಮತ್ತು ಒತ್ತಡ ಅವರನ್ನು ಆವರಿಸಿರುತ್ತದೆ ಅಂತ ಹೇಳಬಹುದು. ಅಂತಹ ಸಮಯದಲ್ಲಿ ಅವರಿಗೆ ಅವರ ಪೋಷಕರಿಂದ ಹೆಚ್ಚಿನ ಪ್ರೇರಣೆ ಮತ್ತು ಪ್ರೋತ್ಸಾಹದ ಅಗತ್ಯವಿರುತ್ತದೆ.
ನಿಮ್ಮ ಮಕ್ಕಳನ್ನು ಅವರ ಒಪ್ಪಿಗೆಯಿಲ್ಲದ ಮತ್ತು ಇಚ್ಛೆಯಿಲ್ಲದೆ ನಿರ್ದಿಷ್ಟ ವೃತ್ತಿಜೀವನದ ಆಯ್ಕೆಗೆ ತಳ್ಳುವುದು ಅಸಮಾಧಾನ, ಹತಾಶೆ ಮತ್ತು ಪ್ರೇರಣೆಯ ಕೊರತೆಗೆ ಕಾರಣವಾಗಬಹುದು. ಆದ್ದರಿಂದ ಪೋಷಕರು ಮಕ್ಕಳ ಮೇಲೆ ಇಂತಹ ಸಂದರ್ಭಗಳಲ್ಲಿ ಅನವಶ್ಯಕವಾಗಿ ಒತ್ತಡ ಹೇರಬಾರದು.
2. ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವಸರ ಮಾಡುವುದು
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ, ವೃತ್ತಿಜೀವನವನ್ನು ಆಯ್ಕೆ ಮಾಡುವುದು ಒಂದು ದೊಡ್ಡ ನಿರ್ಧಾರವಾಗಿದೆ ಮತ್ತು ಆ ಪ್ರಕ್ರಿಯೆಯನ್ನು ಅವಸರಗೊಳಿಸದಿರುವುದು ತುಂಬಾನೇ ಮುಖ್ಯವಾಗುತ್ತದೆ. ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಅವರ ಸಮಯವನ್ನು ತೆಗೆದುಕೊಳ್ಳಲು ಮತ್ತು ಅವರ ಎಲ್ಲಾ ಆಯ್ಕೆಗಳನ್ನು ಅನ್ವೇಷಿಸಲು ನಿಮ್ಮ ಮಗುವನ್ನು ಪ್ರೋತ್ಸಾಹಿಸಿ.
3. ಶಿಕ್ಷಣವನ್ನು ನಿರ್ಲಕ್ಷಿಸುವುದು
ಭಾರತದಲ್ಲಿ ಶೈಕ್ಷಣಿಕ ದೃಶ್ಯವು ಆಧುನಿಕ ಪ್ರಗತಿಪರ ಕಲಿಕೆಯ ಹಾದಿಯಲ್ಲಿ ತುಂಬಾನೇ ವೇಗವಾಗಿ ಸಾಗುತ್ತಿದೆ ಅಂತ ಹೇಳಬಹುದು. ತಂತ್ರಜ್ಞಾನ ಮತ್ತು ಅಂತರ್ಜಾಲವು ಬಹಳ ಹಿಂದಿನಿಂದಲೂ ತಮ್ಮ ಅಸ್ತಿತ್ವವನ್ನು ಅನುಭವಿಸಿದೆ. ಈಗ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಲು ಬೇರೆ ಬೇರೆ ರೀತಿಯ ಅನೇಕ ಸ್ಟ್ರೀಮ್ ಗಳನ್ನು ಹೊಂದಿದ್ದಾರೆ.
ಮೆಟಾವರ್ಸ್ ಖಂಡಿತವಾಗಿಯೂ ವ್ಯಾಪಕ ಬದಲಾವಣೆಗಳನ್ನು ತರಲಿದ್ದರೂ ಸಹ, ಮಾನವ ಸಂಪನ್ಮೂಲ, ಹಣಕಾಸು, ಮಾರ್ಕೆಟಿಂಗ್, ಯಂತ್ರ ಕಲಿಕೆ, ಡೇಟಾ ಸೈನ್ಸ್, ಸೈಬರ್ ಭದ್ರತೆ ಮತ್ತು ಯುಎಕ್ಸ್ ಯುಐ ಮುಂತಾದ ಕೆಲವು ಕೋರ್ಸ್ ಗಳಿಗೂ ಹೆಚ್ಚಿನ ಬೇಡಿಕೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ.
4. ಅವಾಸ್ತವಿಕ ನಿರೀಕ್ಷೆಗಳು
ಅನೇಕ ಮಕ್ಕಳು ತಮ್ಮ ಹೆತ್ತವರ ಅವಾಸ್ತವಿಕ ನಿರೀಕ್ಷೆಗಳ ಹೊರೆಯನ್ನು ಹೊತ್ತಿಕೊಂಡು ಜೀವನ ನಡೆಸುತ್ತಿರುತ್ತಾರೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಕೆಲವು ಮಕ್ಕಳಿಗೆ ಅವರು ತರಬೇತಿ ನೀಡುತ್ತಿರುವ ಕೋರ್ಸ್ ಗೆ ಅಗತ್ಯವಾದ ಕೌಶಲ್ಯಗಳು ಅಥವಾ ಆಪ್ಟಿಟ್ಯೂಡ್ ಇಲ್ಲದಿರಬಹುದು. ಈ ನಿರೀಕ್ಷೆಗಳು ಅವರಿಗೆ ಒತ್ತಡದ ಪರಿಸ್ಥಿತಿಯನ್ನು ಸೃಷ್ಟಿಸುತ್ತವೆ.
ನಿಮ್ಮ ಮಗುವಿನ ವೃತ್ತಿಜೀವನದ ಗುರಿಗಳನ್ನು ಇತರರೊಂದಿಗೆ ಹೋಲಿಸುವುದು ಅವರನ್ನು ನಿರುತ್ಸಾಹಗೊಳಿಸುತ್ತದೆ ಮತ್ತು ಅವರು ಯಾವುದರಲ್ಲೂ ಉತ್ತಮರಲ್ಲ ಎಂಬ ಭಾವನೆಯನ್ನು ಅವರಲ್ಲಿ ಅದು ಮೂಡಿಸುತ್ತದೆ.
ಒಂದು ಮಗುವಿಗೆ ಯಾವುದು ಕೆಲಸ ಚೆನ್ನಾಗಿ ಮಾಡಲು ಬರುತ್ತದೆಯೋ, ಆ ಕೆಲಸವನ್ನು ಇನ್ನೊಂದು ಮಗು ಮಾಡುವುದಿಲ್ಲ ಎಂಬುದನ್ನು ಪೋಷಕರು ನೆನಪಿನಲ್ಲಿಟ್ಟುಕೊಳ್ಳಬೇಕು.
5. ವೃತ್ತಿ ಸಮಾಲೋಚನೆ ಮುಖ್ಯವಾಗುತ್ತದೆ
ವೃತ್ತಿ ಸಲಹೆಗಾರನು ಪ್ರತಿ ವೃತ್ತಿಜೀವನದ ಶೈಕ್ಷಣಿಕ ಮತ್ತು ವೃತ್ತಿಪರ ಅವಶ್ಯಕತೆಗಳ ಬಗ್ಗೆ ಮಾಹಿತಿಯನ್ನು ಒದಗಿಸಬಹುದು ಮತ್ತು ವಿದ್ಯಾರ್ಥಿಗಳಿಗೆ ಅವರ ಕೌಶಲ್ಯಗಳು ಮತ್ತು ಆಸಕ್ತಿಗಳ ಆಧಾರದ ಮೇಲೆ ವಾಸ್ತವಿಕ ವೃತ್ತಿಜೀವನದ ಗುರಿಗಳನ್ನು ನಿಗದಿಪಡಿಸಲು ಸಹಾಯ ಮಾಡಬಹುದು ಮತ್ತು ಆ ಗುರಿಗಳನ್ನು ಸಾಧಿಸಲು ಯೋಜನೆಯನ್ನು ರಚಿಸಲು ಸಹಾಯ ಮಾಡಬಹುದು. ವೃತ್ತಿ ಸಮಾಲೋಚನೆಯು ನಿರ್ಧಾರಗಳನ್ನು ತೆಗೆದುಕೊಳ್ಳಲು ಮಕ್ಕಳಲ್ಲಿ ಆತ್ಮಸ್ಥೈರ್ಯ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
6. ಮಕ್ಕಳಿಗೆ ಬೆಂಬಲ ನೀಡಲು ಮರೆಯಬೇಡಿ
ನಿಮ್ಮ ಮಕ್ಕಳು ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳುವುದು ತುಂಬಾನೇ ಒತ್ತಡದ ಕೆಲಸವಾಗಿರುತ್ತದೆ. ಆದ್ದರಿಂದ ಈ ರೀತಿಯ ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳುವ ಪ್ರಕ್ರಿಯೆಯುದ್ದಕ್ಕೂ ನಿಮ್ಮ ಮಗುವಿಗೆ ಬೆಂಬಲ ಮತ್ತು ಪ್ರೋತ್ಸಾಹವನ್ನು ನೀಡುವುದು ತುಂಬಾನೇ ಮುಖ್ಯವಾಗುತ್ತದೆ. ನೀವು ಸದಾ ಅವರೊಂದಿಗೆ ಇದ್ದೀರಿ ಮತ್ತು ನೀವು ಅವರ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಬೆಂಬಲಿಸುತ್ತೀರಿ ಎಂದು ಅವರಿಗೆ ನೆನಪಿಸಿ.
7. ಮಕ್ಕಳ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ತಿಳಿದುಕೊಳ್ಳಿ
ವೃತ್ತಿಜೀವನವನ್ನು ಆಯ್ಕೆ ಮಾಡಲು ಸಹಾಯ ಮಾಡುವಾಗ ನಿಮ್ಮ ಮಗುವಿನ ಶೈಕ್ಷಣಿಕ ಸಾಮರ್ಥ್ಯಗಳು, ವ್ಯಕ್ತಿತ್ವದ ಗುಣಲಕ್ಷಣಗಳು ಮತ್ತು ಆಸಕ್ತಿಗಳನ್ನು ಪರಿಗಣಿಸುವುದನ್ನು ಮರೆಯಬೇಡಿ. ಇದು ಅವರ ಆಯ್ಕೆಗಳನ್ನು ಸಂಕುಚಿತಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವರು ಉತ್ತಮ ಹೊಂದಾಣಿಕೆಯ ವೃತ್ತಿಜೀವನವನ್ನು ಕಂಡುಕೊಳ್ಳುತ್ತಾರೆ ಎಂದು ಖಚಿತಪಡಿಸಿಕೊಳ್ಳಬಹುದು.
ಪೋಷಕರು ಹೆಚ್ಚಾಗಿ ತಮ್ಮ ಮಗುವಿನ ಯೋಗ್ಯತೆ ಅಥವಾ ಕೌಶಲ್ಯಗಳ ಮೇಲೆ ಕೇಂದ್ರೀಕರಿಸುವ ಬದಲು ಮಾರುಕಟ್ಟೆ ಪ್ರವೃತ್ತಿಗಳಿಂದ ಪ್ರಭಾವಿತರಾಗುತ್ತಾರೆ. ನಿಮ್ಮ ಮಗು ಶಿಕ್ಷಣದಲ್ಲಿ ಉತ್ತಮವಾಗಿಲ್ಲದಿದ್ದರೆ, ಅದು ಪ್ರಪಂಚದ ಅಂತ್ಯ ಎಂದು ಅರ್ಥವಲ್ಲ. ಆಯ್ಕೆ ಮಾಡಿಕೊಳ್ಳಲು ಕ್ರೀಡೆ, ತಂತ್ರಜ್ಞಾನ, ಛಾಯಾಗ್ರಹಣ, ಈವೆಂಟ್ ಮ್ಯಾನೇಜ್ಮೆಂಟ್ ಮುಂತಾದ ಅನೇಕ ಕ್ಷೇತ್ರಗಳಿವೆ. ನಿಮ್ಮ ಮಗುವಿನ ಸಾಮರ್ಥ್ಯ ಮತ್ತು ದೌರ್ಬಲ್ಯಗಳನ್ನು ವಿಶ್ಲೇಷಿಸಿ ನಂತರ ನಿರ್ಧಾರಕ್ಕೆ ಬರುವುದು ಮುಖ್ಯವಾಗುತ್ತದೆ.
8. ನಿಮ್ಮ ವೃತ್ತಿಜೀವನದ ಆಯ್ಕೆಗಳನ್ನು ಮಕ್ಕಳ ಮೇಲೆ ಹೇರುವುದು
ನಿಮ್ಮ ಮಗುವಿಗೆ ಅವರದೇ ಆದ ಕೆಲವು ವಿಶಿಷ್ಟ ಆಸಕ್ತಿಗಳು, ಕೌಶಲ್ಯಗಳು ಮತ್ತು ಭಾವೋದ್ರೇಕಗಳಿರುತ್ತವೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯವಾಗುತ್ತದೆ. ನಿಮ್ಮ ಸ್ವಂತ ವೃತ್ತಿಜೀವನದ ಆಯ್ಕೆಗಳನ್ನು ಅವರ ಮೇಲೆ ಹೇರದಿರುವುದು ಮುಖ್ಯ. ಅವರು ತಮ್ಮ ಗುರಿಗಳನ್ನು ಮತ್ತು ಕನಸುಗಳಲ್ಲಿ ಮುಂದುವರೆಯಲು ಮತ್ತು ಅದರಲ್ಲಿ ಆಯ್ಕೆಗಳನ್ನು ಅನ್ವೇಷಿಸಲು ಬಿಡುವುದು ಒಳ್ಳೆಯದು.
9. ಪ್ರಾಯೋಗಿಕ ವೃತ್ತಿಜೀವನದ ಆಯ್ಕೆಗಳನ್ನು ನಿರ್ಲಕ್ಷಿಸಬೇಡಿ
ನಿಮ್ಮ ಮಗು ವೃತ್ತಿಜೀವನವನ್ನು ಆಯ್ಕೆ ಮಾಡುವಾಗ ಸ್ಥಳ, ಜೀವನಶೈಲಿ ಮತ್ತು ಕೆಲಸ-ಜೀವನ ಸಮತೋಲನದಂತಹ ಪ್ರಾಯೋಗಿಕ ಅಂಶಗಳನ್ನು ಪರಿಗಣಿಸುವುದು ಮುಖ್ಯವಾಗುತ್ತದೆ.
ಈ ಅಂಶಗಳು ಕೆಲಸದಲ್ಲಿ ತೃಪ್ತಿ ಮತ್ತು ಒಟ್ಟಾರೆ ಯೋಗಕ್ಷೇಮದ ಮೇಲೆ ಗಮನಾರ್ಹ ಪರಿಣಾಮ ಬೀರಬಹುದು. ವೃತ್ತಿಜೀವನವನ್ನು ಆಯ್ಕೆ ಮಾಡುವಾಗ ಹಣಕಾಸಿನ ಸ್ಥಿರತೆಯನ್ನು ಸಹ ಪರಿಗಣಿಸುವುದು ಮುಖ್ಯ, ಆದರೆ ಇದೊಂದೆ ಮುಖ್ಯ ಪರಿಗಣನೆಯಾಗಬಾರದು.
ಇದನ್ನೂ ಓದಿ: BTM Course: ಪಿಯು ಬಳಿಕ ಈ ಡಿಗ್ರಿ ಮಾಡಿದ್ರೆ ಭರ್ಜರಿ ಉದ್ಯೋಗಾವಕಾಶಗಳು, ಲಕ್ಷಗಳಲ್ಲಿ ಸಂಬಳ ಪಕ್ಕಾ
10. ಸಮಾಜ ಏನು ಯೋಚಿಸುತ್ತದೆ ಅಂತ ಭಯ ಪಡಬೇಡಿ
"ಸಮಾಜವು ಏನು ಯೋಚಿಸುತ್ತದೆ?" ಎಂದು ಕೆಲವು ಪೋಷಕರು ಪ್ರತಿಯೊಂದಕ್ಕೂ ಯೋಚನೆ ಮಾಡುತ್ತಿರುತ್ತಾರೆ. ಅಂತಹ ಪೋಷಕರು ತಮ್ಮ ಮಕ್ಕಳನ್ನು ತಮ್ಮ ಮಗು ಬಯಸದ ನಿರ್ದಿಷ್ಟ ಸ್ಟ್ರೀಮ್ ಅಥವಾ ವೃತ್ತಿಜೀವನವನ್ನು ಆಯ್ಕೆ ಮಾಡಿಕೊಳ್ಳಲು ಒತ್ತಾಯಿಸುತ್ತಾರೆ.
ಇದು ಅವರ ಮೇಲೆ ಅನವಶ್ಯಕವಾದ ಒತ್ತಡ ಹೇರುತ್ತದೆ ಮತ್ತು ಭವಿಷ್ಯದಲ್ಲಿ ಅವರ ಯಶಸ್ಸಿಗೆ ಅಡ್ಡಿಯಾಗುತ್ತದೆ. ಸಾಮಾಜಿಕ ಆತಂಕಗಳಿಂದ ನಿಮ್ಮನ್ನು ಬೇರ್ಪಡಿಸುವುದು ಮತ್ತು ನಿಮ್ಮ ಮಗುವಿಗೆ ಅವರ ಕನಸನ್ನು ಆಯ್ಕೆ ಮಾಡಿಕೊಳ್ಳಲು ಬಿಡುವುದು ಒಳ್ಳೆಯದು.
ಈ ತಪ್ಪುಗಳನ್ನು ಮಾಡದಿರುವುದರಿಂದ ಪೋಷಕರು ತಮ್ಮ ಮಕ್ಕಳಿಗೆ ಸರಿಯಾದ ವೃತ್ತಿಜೀವನದ ಮಾರ್ಗವನ್ನು ಆಯ್ಕೆ ಮಾಡಲು ಸಹಾಯ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ