ನೀವು ಹಿಂದಿ ಚಿತ್ರ ‘ಥ್ರೀ ಇಡಿಯಟ್ಸ್’ (Three Idiots) ನೋಡಿದ್ದರೆ, ಅದರಲ್ಲಿ ನಟ ಮಾಧವನ್ ನಿರ್ವಹಿಸಿದ ಫರ್ಹಾನ್ ಪಾತ್ರ ಖಂಡಿತವಾಗಿಯೂ ನಿಮಗೆ ನೆನಪಿನಲ್ಲಿ ಇರುತ್ತದೆ. ಏಕೆಂದರೆ ಆ ಪಾತ್ರ ಎಂಜಿನಿಯರಿಂಗ್ ನಲ್ಲಿ ಆಸಕ್ತಿ ಇಲ್ಲದ ಮತ್ತು ವೈಲ್ಡ್‌ಲೈಫ್ ಫೋಟೋಗ್ರಾಫಿಯಲ್ಲಿ ಆಸಕ್ತಿ ಇರುವಂತಹ ಒಬ್ಬ ವಿದ್ಯಾರ್ಥಿಯ ಪಾತ್ರವಾಗಿತ್ತು. ಅವರಿಗೆ, ಅಲ್ಲಿ ತನ್ನ ಆಸಕ್ತಿ ಯಾವ ವಿಷಯದಲ್ಲಿದೆ ಅಂತ ತನ್ನ ಪೋಷಕರಿಗೆ ಅರ್ಥಮಾಡಿಸುವ ಸಾಮರ್ಥ್ಯ ಇತ್ತು. ಹಾಗಾಗಿ ಅವರು ಅಲ್ಲಿ ತಮಗೆ ಇಷ್ಟವಾದ ಕರಿಯರ್ (Career) ಅನ್ನು ಆಯ್ಕೆ ಮಾಡಿಕೊಂಡರು.
ಹಾಗೆಯೇ ನಮ್ಮಲ್ಲಿ ಅನೇಕ ಜನರಿಗೆ ಯಾವುದೋ ವಿಷಯದಲ್ಲಿ ಆಸಕ್ತಿ ಇರುತ್ತದೆ, ಮತ್ತ್ಯಾವುದೋ ಕರಿಯರ್ ಅನ್ನು ಕೆಲವರ ಒತ್ತಾಯದಿಂದ ಆಯ್ಕೆ ಮಾಡಿಕೊಳ್ಳುತ್ತಾರೆ ಮತ್ತು ಆನಂತರ ಅವರಿಗೆ ಒತ್ತಾಯ ಪೂರ್ವಕವಾಗಿ ಅರಿಸಿಕೊಂಡ ಕರಿಯರ್ ನಲ್ಲಿ ಆಸಕ್ತಿ ಇಲ್ಲದಂತಾಗುತ್ತದೆ. ಬರೀ ಎಂಜಿನಿಯರ್ ಮತ್ತು ಡಾಕ್ಟರ್ ಆಗಬೇಕೆಂಬ ದಿನಗಳು ಈಗ ಹೋದವು. ಈಗ ಏನೇ ಇದ್ದರೂ, ಅನೇಕ ಕ್ಷೇತ್ರಗಳು ಬಂದಿವೆ ಮತ್ತು ಅನೇಕ ರೀತಿಯ ಕರಿಯರ್ ಆಯ್ಕೆಗಳು ನಮ್ಮ ಮುಂದಿವೆ. ನಮಗೆ ಆಸಕ್ತಿ ಇರುವ ಕೆಲಸವನ್ನು ನಮ್ಮ ಕರಿಯರ್ ಆಗಿ ಆಯ್ಕೆ ಮಾಡಿಕೊಳ್ಳಬೇಕು ಅಷ್ಟೇ.
ಅನೇಕ ರೀತಿಯ ವೃತ್ತಿಗಳು ಇವೆ ಅಂತ ಕೆಲವೊಮ್ಮೆ ನಮಗೆ ಗೊತ್ತೇ ಇರುವುದಿಲ್ಲ ನೋಡಿ. ಆದರೆ ಅಂತಹ ವೃತ್ತಿಗಳಿಗೆ ತುಂಬಾನೇ ಬೇಡಿಕೆ ಮತ್ತು ಡಿಮ್ಯಾಂಡ್ ಇರುತ್ತದೆ. ಆ ಡಿಮ್ಯಾಂಡ್ ಮತ್ತು ನಮ್ಮ ಆಸಕ್ತಿ ಯಾವ ಕೆಲಸದಲ್ಲಿದೆ ಅಂತ ಅರ್ಥ ಮಾಡಿಕೊಂಡು ಆ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು.
ಇಂತಹ ಕ್ರಿಯೆಟಿವ್ ಮತ್ತು ಕಡಿಮೆ ಜನರಿಗೆ ಗೊತ್ತಿರುವ ವೃತ್ತಿಜೀವನದ ಆಯ್ಕೆಗಳು ಮತ್ತು ಅವುಗಳಿಗೆ ಇರುವಂತಹ ಬೇಡಿಕೆ ಬಗ್ಗೆ ನಾವು ಇಲ್ಲಿ ತಿಳಿದುಕೊಳ್ಳೋಣ ಬನ್ನಿ.
ಈವೆಂಟ್ ಪ್ಲ್ಯಾನರ್: ನೀವು ತುಂಬಾನೇ ಕ್ರಿಯೆಟಿವ್ ಆಗಿದ್ದರೆ, ನಿಮಗೆ ಈ ಈವೆಂಟ್ ಪ್ಲ್ಯಾನರ್ ಕೆಲಸ ಹೇಳಿ ಮಾಡಿಸಿದ ಕೆಲಸವಾಗಿರುತ್ತದೆ. ಇಲ್ಲಿ ನಿಮಗೆ ಒಂದು ಕಾರ್ಯಕ್ರಮವನ್ನು ಸರಿಯಾಗಿ ಜನರಿಗೆ ಇಷ್ಟವಾಗುವ ರೀತಿಯಲ್ಲಿ ಮತ್ತು ಅನುಕೂಲಕರವಾಗಿ ಯೋಜಿಸಬೇಕಾಗಿರುತ್ತದೆ.
ಇಲ್ಲಿ ನೀವು ಹುಟ್ಟುಹಬ್ಬಗಳನ್ನು, ಮದುವೆ ಸಮಾರಂಭಗಳು, ಮದುವೆ ವಾರ್ಷಿಕೋತ್ಸವ, ಕಾರ್ಪೊರೇಟ್ ಪಾರ್ಟಿಗಳು ಹೀಗೆ ಅನೇಕ ರೀತಿಯ ಸಭೆ ಮತ್ತು ಸಮಾರಂಭಗಳನ್ನು ಆಯೋಜಿಸಬೇಕಾಗಬಹುದು.
ನೀವು ಹೀಗೆ ಈವೆಂಟ್ ಪ್ಲ್ಯಾನರ್ ಕಂಪನಿ ಶುರು ಮಾಡಬಹುದು ಅಥವಾ ಸ್ವತಂತ್ರವಾಗಿ ಸಹ ಈ ಕೆಲಸವನ್ನು ನೀವು ಮಾಡಬಹುದು. ಈವೆಂಟ್ ಮ್ಯಾನೇಜ್ಮೆಂಟ್, ಹಾಸ್ಪಿಟ್ಯಾಲಿಟಿ ಮ್ಯಾನೇಜ್ಮೆಂಟ್, ಪಬ್ಲಿಕ್ ರಿಲೇಷನ್ ನಲ್ಲಿ ಪದವಿ ಓದಿರಬೇಕು.
ಎಥಿಕಲ್ ಹ್ಯಾಕರ್: ಈಗಂತೂ ಸೈಬರ್ ಕ್ರೈಂ ಗಳು ತುಂಬಾನೇ ನಡೆಯುತ್ತಿದ್ದು, ಇದನ್ನೆಲ್ಲಾ ತಡೆಯಲು ಎಥಿಕಲ್ ಹ್ಯಾಕರ್ ಗಳ ಅವಶ್ಯಕತೆ ತುಂಬಾನೇ ಇದೆ. ನಿಮಗೆ ಐಟಿಯಲ್ಲಿ ಆಸಕ್ತಿ ಇದ್ದರೆ, ನೀವು ಸೈಬರ್ ಸೆಕ್ಯೂರಿಟಿಯ ವಿಭಾಗದಲ್ಲಿ ಕೆಲಸಕ್ಕೆ ಸೇರಿಕೊಳ್ಳಬಹುದು.
ಇದು ನಿಮಗೆ ತುಂಬಾನೇ ಆಸಕ್ತಿಭರಿತವಾದ ವಿಷಯವಾಗಿರುತ್ತದೆ ಮತ್ತು ಅಲ್ಲದೆ ಸೈಬರ್ ಕ್ರೈಂ ಗಳ ವಿರುದ್ದ ಹೋರಾಡಲು ಒಳ್ಳೆಯ ಅವಕಾಶವನ್ನು ಸಹ ಇದು ನೀಡುತ್ತದೆ. ಈ ಕೆಲಸ ಮಾಡಲು ನೀವು ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು ಮತ್ತು ಎಥಿಕಲ್ ಹ್ಯಾಕಿಂಗ್ ನಲ್ಲಿ ಕೋರ್ಸ್ ಮಾಡಿರಬೇಕು.
ಫಿಟ್ನೆಸ್ ಟ್ರೈನರ್: ಈಗೆಲ್ಲಾ ಜನರು ತಮ್ಮ ಆರೋಗ್ಯದ ಬಗ್ಗೆ ಹಿಂದೆಗಿಂತಲೂ ಈಗ ತುಂಬಾನೇ ಕಾಳಜಿ ಮಾಡುತ್ತಿದ್ದಾರೆ. ಹಾಗಾಗಿ ಬಹುತೇಕರು ತಮಗೆ ಫಿಟ್ನೆಸ್ ಪಾಠ ಹೇಳಿಕೊಡಲು ತಮ್ಮದೇ ಆದ ಪರ್ಸ್ನಲ್ ಟ್ರೈನರ್ ಬೇಕು ಅಂತ ಹೇಳುತ್ತಿದ್ದಾರೆ.
ಹಾಗಾಗಿ ಈ ಫಿಟ್ನೆಸ್ ಟ್ರೈನರ್ ಗಳಿಗೆ ತುಂಬಾನೇ ಬೇಡಿಕೆ ಇದೆ. ಈ ಕರಿಯರ್ ನಿಮ್ಮನ್ನು ಆದಷ್ಟು ಫಿಟ್ ಆಗಿರಲು ಸಹಾಯ ಮಾಡುವುದಲ್ಲದೆ, ನಿಮಗೆ ಬೇಕಾದ ಸಮಯದಲ್ಲಿ ಕೆಲಸ ಮಾಡಲು ಅವಕಾಶ ಮಾಡಿಕೊಡುತ್ತದೆ. ನೀವು ಇದಕ್ಕೆ ನ್ಯೂಟ್ರಿಷನ್ ಮತ್ತು ಫಿಟ್ನೆಸ್ ಕೋರ್ಸ್ ನಲ್ಲಿ ತರಬೇತಿ ಪಡೆಯಬೇಕು.
ವೈಲ್ಡ್‌ಲೈಫ್ ಫೋಟೋಗ್ರಾಫರ್: ನಿಮಗೆ ಪ್ರಯಾಣಿಸಲು ಮತ್ತು ಅದರೊಟ್ಟಿಗೆ ಫೋಟೋಗ್ರಾಫಿಯಲ್ಲಿ ಆಸಕ್ತಿ ಇದ್ದಲ್ಲಿ, ನೀವು ವೈಲ್ಡ್‌ಲೈಫ್ ಫೋಟೋಗ್ರಾಫರ್ ಆಗಬಹುದು ನೋಡಿ.
ನಿಮಗೆ ಆಸಕ್ತಿಯಿರುವ ಕೆಲಸವಾದ್ದರಿಂದ, ನೀವು ಎಷ್ಟು ಗಂಟೆಗಳ ಕಾಲ ಬೇಕಾದರೂ ಸಹ ಮಜವಾಗಿ ಕೆಲಸ ಮಾಡಬಹುದು. ನೀವು ಜನರ ಆಸಕ್ತಿಗೆ ಅನುಗುಣವಾಗಿಯೇ ಫೋಟೋಗಳನ್ನು ತೆಗೆಯಲು ಕಲಿಯಬೇಕಷ್ಟೆ. ಇದಕ್ಕೆ ನೀವು ಫೋಟೋಗ್ರಾಫಿಯಲ್ಲಿ ಪದವಿ ಪಡೆದಿರಬೇಕು ಅಥವಾ ಕೋರ್ಸ್ ಗಳನ್ನು ಮಾಡಿರಬೇಕು.
ವೀಡಿಯೋಗೇಮ್ ಡಿಸೈನರ್: ಈಗ ಮಕ್ಕಳಿಗೆ ಮೊಬೈಲ್ ಫೋನ್ ಅಥವಾ ವೀಡಿಯೋ ಗೇಮ್ ಗಳಲ್ಲಿ ಬರುವ ಆಟಗಳು ಎಂದರೆ ತುಂಬಾನೇ ಅಚ್ಚುಮೆಚ್ಚು.
ಹಾಗಾಗಿ ನಿಮಗೆ ಗೆಮಿಂಗ್ ನಲ್ಲಿ ಆಸಕ್ತಿ ಇದ್ದಲ್ಲಿ, ವೀಡಿಯೋಗೇಮ್ ಡಿಸೈನರ್ ಆಗಬಹುದು. ಇದರಲ್ಲಿ ನೀವು ಪ್ರತಿದಿನ ನಿಮ್ಮ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಬೇಕಾಗಬಹುದು. ಇದನ್ನು ಮಾಡಲು ಕಂಪ್ಯೂಟರ್ ಸೈನ್ಸ್ ನಲ್ಲಿ ಪದವಿ ಮಾಡಿರಬೇಕು ಅಥವಾ ಗೆಮಿಂಗ್ ಡಿಸೈನ್ ನಲ್ಲಿ ಕೋರ್ಸ್ ಗಳನ್ನು ಮಾಡಿರಬೇಕು.
ಇದನ್ನೂ ಓದಿ: 2nd PUC ಪರೀಕ್ಷೆ ಮುಗಿದಿದೆ, ಮುಂದೇನು ಅನ್ನೋರಿಗೆ ಇಲ್ಲಿದೆ ನೋಡಿ ಉತ್ತರ
ಟೀ ಟೇಸ್ಟರ್: ಈ ಕೆಲಸದಲ್ಲಿ ಬರೀ ವಿವಿಧ ರೀತಿಯ ಟೀ ಎಂದರೆ ಚಹಾಗಳನ್ನು ನಾವು ರುಚಿ ನೋಡುವುದು ಮತ್ತು ಅವುಗಳ ಗುಣಮಟ್ಟವನ್ನು ತಿಳಿಸುವುದು ಮತ್ತು ಅವುಗಳ ಗುಣಮಟ್ಟವನ್ನು ಇನ್ನಷ್ಟು ಅಭಿವೃದ್ದಿ ಪಡಿಸುವುದು ಆಗಿದೆ.
ಹೀಗೆ ಈ ಕೆಲಸವನ್ನು ನೀವೇ ಕಂಪನಿಯಲ್ಲಿ ಸೇರಿಕೊಂಡು ಸಹ ಮಾಡಬಹುದು ಅಥವಾ ಸ್ವತಂತ್ರರಾಗಿ ಸಹ ಮಾಡಬಹುದು. ಫುಡ್ ಸೈನ್ಸ್ ನಲ್ಲಿ ಪದವಿ ಪಡೆದಿರಬೇಕು ಅಥವಾ ಟೀ ಟೆಸ್ಟಿಂಗ್ ನಲ್ಲಿ ಡಿಪ್ಲೋಮಾ ಕೋರ್ಸ್ ಗಳನ್ನು ಮಾಡಿ ಈ ಕೆಲಸಕ್ಕೆ ಸೇರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ