ಇಂದು ಏನಿದ್ದರೂ ಡಿಜಿಟಲ್ ಯುಗ (Digital Era). ತಂತ್ರಜ್ಞಾನ ದಿನೇ ದಿನೇ ಬೆಳೆಯುತ್ತಿದ್ದಂತೆ ಡಿಜಿಟಲೀಕರಣವು ಅಗಾಧವಾಗಿ ಎಲ್ಲೆಡೆ ವ್ಯಾಪಿಸುತ್ತಿದೆ. ಆದರೆ ಅದೇನೋ ಹೇಳ್ತಾರಲ್ಲ, ಯಾವುದೇ ಒಂದು ಉತ್ಪನ್ನ ಅಥವಾ ವಿಷಯ ಇರಲಿ ಅದಕ್ಕೆ ಅದರದ್ದೇ ಆದ ಪ್ರಯೋಜನಗಳು ಹಾಗೂ ಅಡ್ಡ ಪರಿಣಾಮಗಳು (Advantage and Disadvantage) ಇದ್ದೇ ಇರುತ್ತವೆ ಅಂತ, ಇಲ್ಲಿಯೂ ಹಾಗೆಯೇ ಎನ್ನಬಹುದು.
ಡಿಜಿಟಲೀಕರಣ ಮುಂದುವರೆಯುತ್ತಿರುವಂತೆ ಅದರ ದುರುಪಯೋಗವೂ ಹೆಚ್ಚಾಗತೊಡಗಿದೆ. ಇಂದಿನ ಆನ್ಲೈನ್ ಯುಗದಲ್ಲಿ ಸೈಬರ್ ಖದೀಮರ ಸಂಖ್ಯೆಗೇನೂ ಕಮ್ಮಿ ಇಲ್ಲ. ಹಾಗಾಗಿ ಸೈಬರ್ ಸೆಕ್ಯುರಿಟಿ ಎಂಬುದು ಈ ಸಂದರ್ಭದಲ್ಲಿ ಹೆಚ್ಚು ಮಹತ್ವ ಪಡೆಯುತ್ತಿದೆ.
ಆದರೆ, ಒಂದು ವೃತ್ತಿಯ ಮಧ್ಯಂತರ ಅವಧಿಯಲ್ಲಿದ್ದಾಗ ಒಬ್ಬ ವೃತ್ತಿಪರನಿಗೆ ಹಠಾತ್ತಾಗಿ ಈ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಆಸಕ್ತಿ ಮೂಡಿದರೆ ಹೇಗೆ? ಆತ ಅದನ್ನು ತನ್ನ ಮುಂದಿನ ವೃತ್ತಿಯನ್ನಾಗಿ ಅದನ್ನು ಆಯ್ಕೆ ಮಾಡಿಕೊಳ್ಳಲು ಈ ಕ್ಷೇತ್ರ ಅನುವು ಮಾಡಿಕೊಡುತ್ತದೆಯೆ? ಅದಕ್ಕಾಗಿ ಆ ವ್ಯಕ್ತಿ ಏನೆಲ್ಲ ಮಾಡಬೇಕಾಗಬಹುದು? ಈ ಎಲ್ಲ ಅಂಶಗಳ ಬಗ್ಗೆ ಈ ಲೇಖನದ ಮೂಲಕ ಸ್ಫುಟವಾಗಿ ತಿಳಿಯಿರಿ.
ವೃತ್ತಿ ಅವಕಾಶಗಳು
ಬ್ಲ್ಯೂ ಸಫೈರ್ ಸಂಸ್ಥೆಯ ಉತ್ಪನ್ನ ಮಾರಾಟ ವಿಭಾಗದ ಮುಖ್ಯಸ್ಥರಾಗಿರುವ ಪ್ರವೀಣ್ ಯೆಲೆಶ್ವರಪು ಅವರು ಈ ಬಗ್ಗೆ ಮಾತನಾಡುತ್ತಾ, ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ವೃತ್ತಿ ಮಧ್ಯಂತರದ ಅವಕಾಶಗಳು ಇತ್ತೀಚಿಗಿನ ಸಮಯದಿಂದ ಹೆಚ್ಚಾಗುತ್ತಿದೆ, ಉದಾಹರಣೆಗೆ ಸೇಲ್ಸ್ ಕಾರ್ಯಾಚರಣೆ ಮತ್ತು ಕನ್ಸಲ್ಟಿಂಗ್ ವಿಭಾಗದಲ್ಲಿ ಎಂದು ಹೇಳುತ್ತಾರೆ.
"ಸೈಬರ್ ಸೆಕ್ಯುರಿಟಿಗೆ ಸಂಬಂಧಿಸಿದಂತೆ ಸೇಲ್ಸ್ ಕ್ಷೇತ್ರದಲ್ಲಿ ಅಪಾರವಾದ ಬೇಡಿಕೆಯಿದೆ. ಹಾಗಾಗಿ ಮಾರ್ಕೆಟಿಂಗ್ ಅಥವಾ ಸೇಲ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ವೃತ್ತಿಪರರು ಕೆಲ ಮೂಲ ಸೈಬರ್ ಸೆಕ್ಯುರಿಟಿ ಜ್ಞಾನ ಹೊಂದಿದ್ದರೆ, ತ್ವರಿತವಾಗಿ ಅವರು ತಮ್ಮ ಪ್ರಸ್ತುತ ವೃತ್ತಿಯಿಂದ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲಿ ಉನ್ನತ ಸ್ಥಾನಕ್ಕೇರಬಹುದು" ಪ್ರವೀಣ್ ಹೇಳುತ್ತಾರೆ.
ಪ್ರವೀಣ್ ಅವರ ಪ್ರಕಾರ ಪ್ರಸ್ತುತ ಹೊರಹೊಮ್ಮುತ್ತಿರುವ ಎರಡನೇಯ ಹಾಗೂ ಮತ್ತೊಂದು ಕ್ಷೇತ್ರವೆಂದರೆ ಪ್ರೀಸೇಲ್ಸ್. ಏಕೆಂದರೆ ಕೆಲ ಸಂಸ್ಥೆಗಳು ಸುರಕ್ಷತೆಯ ದೃಷ್ಟಿಯಿಂದಾಗಿ ಬಲಿಷ್ಠವಾದ ಸೈಬರ್ ಆಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡುತ್ತಿವೆ ಎಂದಾಗಿದೆ.
ಸೈಬರ್ ಸೆಕ್ಯೂರಿಟಿಗೆ ಏಕೆ ಇಷ್ಟೊಂದು ಮಹತ್ವ?
ಉತ್ಪನ್ನಾಧಾರಿತ ಸಂಸ್ಥೆಗಳಿಗೆ ಒಟ್ಟಾರೆ ಸೈಬರ್ ಸುರಕ್ಷತೆ ಸಾಕಷ್ಟು ಪ್ರಾಮುಖ್ಯತೆ ಹೊಂದಿದ್ದು ಪ್ರಿಸೇಲ್ಸ್ ಅವಧಿಯಲ್ಲೇ ಈ ಬಗ್ಗೆ ಪರಿಣಿತರನ್ನು ಪಡೆದಾಗ ಅವರು ತಾಂತ್ರಿಕ ದೃಷ್ಟಿಯಿಂದಲೂ ಕಾರ್ಯನಿರ್ವಹಿಸುತ್ತ ಮಾರಾಟ ವಿಭಾಗಕ್ಕೆ ಹೆಚ್ಚಿನ ಭದ್ರತೆ ಒದಗಿಸಿದಂತಾಗುತ್ತದೆ.
ಒಂದು ರೀತಿಯಲ್ಲಿ ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಪ್ರಿಸೇಲ್ಸ್ ವೃತ್ತಿಪರರನ್ನು ಆರ್ಕಿಟೆಕ್ಟ್ ಎನ್ನಬಹುದಾಗಿದೆ. ಅವರು ಸಂಸ್ಥೆಯ ಒಟ್ಟಾರೆ ರಚನೆಯ ಜ್ಞಾನ ಹೊಂದಿರುತ್ತಾರೆ. ಹಾಗಾಗಿ ಸಂಸ್ಥೆಗೆ ಯಾವುದು ಒಳಿತು ಹಾಗೂ ಕೆಡುಕು ಎಂಬುದರ ಅರಿವಿನ ಜೊತೆಗೆ ತಾಂತ್ರಿಕ ಕೌಶಲ್ಯತೆಯೂ ಅವರಲ್ಲಿದ್ದು ಹೆಚ್ಚಿನ ಸೇವೆ ಒದಗಿಸುವಲ್ಲಿ ಅವರು ನಿಷ್ಣಾತರಾಗಿರುತ್ತಾರೆ.
ವೃತ್ತಿ ವ್ಯಾಪ್ತಿ
ಇನ್ನು ಮೂರನೇಯ ಅವಕಾಶ ಎಂದರೆ ಸೈಬರ್ ಸೆಕ್ಯೂರಿಟಿ ಕ್ಷೇತ್ರದಲ್ಲಿ ಆರ್ಕಿಟೆಕ್ಟ್ ಗಳದ್ದು. ಕ್ಲೈಂಟ್ ದೃಷ್ಟಿಯಿಂದ ಈ ಆರ್ಕಿಟೆಕ್ಟ್ ಗಳು ಸೈಬರ್ ಸುರಕ್ಷತೆಗೆ ಸಂಬಂಧಿಸಿದಂತೆ ಉತ್ತಮ ಅಭ್ಯಾಸಗಳು ಹಾಗೂ ಕಾರ್ಯಕ್ರಮಗಳನ್ನು ರೂಪಿಸ ಬಲ್ಲವರಾಗಿರುತ್ತಾರೆ. ಇನ್ನು ಪ್ರವೀಣ್ ಅವರ ಪ್ರಕಾರ ನಾಲ್ಕನೆಯ ಅವಕಾಶ ಎಂದರೆ ಸೈಬರ್ ಸೆಕ್ಯುರಿಟಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳಬಹುದಾದ ಹುದ್ದೆಗಳು ಉದಾಹರಣೆಗೆ ವಿಶೇಷಕರು, ಪರಿಣಿತರು ಇತ್ಯಾದಿ.
ಈ ನಾಲ್ಕು ಅವಕಾಶಗಳನ್ನು ಹೊರತುಪಡಿಸಿ ಪ್ರವೀಣ್ ಅವರ ಪ್ರಕಾರ, ಉತ್ಪನ್ನ ಕ್ಷೇತ್ರಗಳಿಂದಲೂ ಹಲವು ಮಿಡ್ ಕರಿಯರ್ ಅವಕಾಶಗಳು ಹೊರಹೊಮ್ಮುತ್ತಿವೆ. ಸೈಬರ್ ಸೆಕ್ಯುರಿಟಿಗೆಂದೇ ನಿರ್ಮಿಸಲಾಗುತ್ತಿರುವ ಉತ್ಪನ್ನಗಳಿಗೆ ಸಂಬಂಧಿಸಿದಂತಹ ಅವಕಾಶಗಳು. ಇದು ಉತ್ಪನ್ನ ನಿರ್ವಾಹಕರು, ಡೆವೆಲಪರ್ ಗಳು ಯಾವುದೇ ಆಗಿರಬಹುದು.
ಹಾಗಾಗಿ ಮಾರ್ಕೆಟಿಂಗ್ ಅಥವಾ ಉತ್ಪನ್ನ ನಿರ್ವಹಣೆಯಲ್ಲಿರುವ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು ತಮ್ಮ ವೃತ್ತಿಯ ಮಧ್ಯಂತರ ಅವಧಿಯಲ್ಲೇ ಸೈಬರ್ ಸೆಕ್ಯುರಿಟಿ ಕ್ಷೇತ್ರದಲ್ಲೂ ತಮ್ಮ ಭವಿಷ್ಯ ಸುಭದ್ರಪಡಿಸಿಕೊಳ್ಳಬಹುದಾಗಿದೆ.
ವಿಶಾಲವಾದ ಮಾರುಕಟ್ಟೆ ಅವಕಾಶಗಳನ್ನು ಎತ್ತಿ ತೋರಿಸುತ್ತಾ, ಇಂಡಸ್ಲಾ ಪಾಲುದಾರರಾದ ಶ್ರೇಯಾ ಸೂರಿ ಅವರ ಪ್ರಕಾರ, ಸೈಬರ್ ಸೆಕ್ಯುರಿಟಿಯಲ್ಲಿ ಆಕರ್ಷಕ ವೃತ್ತಿಯನ್ನು ನೀಡಲು ಪ್ರಸ್ತುತ ಭಾರತದ ಆರ್ಥಿಕತೆಯು ತನ್ನನ್ನು ತಾನು ಹಿಂದೆಂದಿಗಿಂತಲೂ ಹೆಚ್ಚಾಗಿ ತೆರೆದುಕೊಂಡಿದೆ ಎಂದು ಹೇಳುತ್ತಾರೆ.
ಆಗಾಗ ಕಂಡುಬರುವ ಡೇಟಾ ಉಲ್ಲಂಘನೆಯಂತಹ ಘಟನೆಗಳನ್ನು ತಗ್ಗಿಸಲು ಮತ್ತು ಹೆಚ್ಚಿನ ಸೈಬರ್ ಭದ್ರತೆಗಾಗಿ ಉತ್ತಮ ಅಭ್ಯಾಸಗಳನ್ನು ಅನೇಕ ವಲಯಗಳಲ್ಲಿ ಅಳವಡಿಸಲಾಗಿದೆ ಎಂದು ಖಚಿತಪಡಿಸಿಕೊಳ್ಳಲು ಜಾಗತಿಕ ಮಾನದಂಡಗಳನ್ನು ಪೂರೈಸುವಲ್ಲಿ ಸರ್ಕಾರವು ಈಗ ಸಾಕಷ್ಟು ಗಮನಹರಿಸುತ್ತಿದೆ ಎಂಬುದು ಸೂರಿ ಅವರ ಮಾತಾಗಿದೆ.
ಭರವಸೆ ಮೂಡಿಸುತ್ತಿರುವ ಕ್ಷೇತ್ರ
ಆದಾಗ್ಯೂ, ಈ ವಲಯದಲ್ಲಿ ಪ್ರಸ್ತಾವಿತ ಹೊಸ ನಿಯಮಗಳು ವ್ಯಾಪ್ತಿಯನ್ನು ವಿಸ್ತರಿಸಿದ್ದು ಬಹು ವಲಯಗಳಲ್ಲಿ ಡೇಟಾ ಸುರಕ್ಷತೆ ಮತ್ತು ಸಮಗ್ರತೆಯ ಕ್ರಮಗಳಿಗಾಗಿ ಕನಿಷ್ಠ ಮಾನದಂಡಗಳನ್ನು ಪೂರೈಸುವ ನಿರಂತರತೆಯು ಹಲವಾರು ಅತ್ಯಾಧುನಿಕ ಸೈಬರ್ ಸೆಕ್ಯುರಿಟಿ ಸಂಸ್ಥೆಗಳಿಗೆ ಮತ್ತು ಕಾನೂನು ಸಂಸ್ಥೆಗಳಿಗೆ ಸ್ವತಂತ್ರ ವಿಶೇಷ ಅಭ್ಯಾಸ ಕ್ಷೇತ್ರಗಳಾಗಿ ಹೊರಹೊಮ್ಮಲು ಕಾರಣವಾಗಿದೆ.
ಇದನ್ನೂ ಓದಿ: MBA ಮಾಡೋದಾದ್ರೆ ಫೈನಾನ್ಸ್ನಲ್ಲಿ ಮಾಡುವುದು ಹೆಚ್ಚು ಲಾಭಕರವಂತೆ, ಏಕೆ ಗೊತ್ತೇ?
"ಭವಿಷ್ಯದಲ್ಲಿ, ದತ್ತಾಂಶ ರಕ್ಷಣೆ ಮತ್ತು ಮಾಹಿತಿ ತಂತ್ರಜ್ಞಾನದ ಸುರಕ್ಷತೆಗೆ ಸಂಬಂಧಿಸಿದಂತೆ ಕಾನೂನಿನ ವ್ಯಾಪ್ತಿಯಲ್ಲಿ ತನಿಖಾ ಸಂಸ್ಥೆಗಳು(DG ಮತ್ತು CCI ಯಂತೆಯೇ) ಸ್ಥಾಪಿಸುವಂತಹ ಸರ್ಕಾರದ ಹೊಸ ಉಪಕ್ರಮಗಳನ್ನು ನಾವು ನೋಡಬಹುದಾಗಿದೆ. ಡೇಟಾ ಫಾರ್ಮ್‌ಗಳು ಮತ್ತು ಸರ್ವರ್‌ಗಳ ಸ್ಥಾಪನೆಗೆ ಹೆಚ್ಚಿನ ಅಗತ್ಯತೆಯೊಂದಿಗೆ ಈ ವಲಯದಲ್ಲಿಯೇ ಹಲವಾರು ವೃತ್ತಿ ಅವಕಾಶಗಳನ್ನು ಇದು ಒಳಗೊಳ್ಳಲಿದೆ, ”ಎಂದು ಸೂರಿ ವಿವರಿಸುತ್ತಾರೆ.
ಒಟ್ಟಿನಲ್ಲಿ ಸೈಬರ್ ಸುರಕ್ಷತೆ ಎಂಬುದು ಸಾಕಷ್ಟು ಭರವಸೆ ಮೂಡಿಸುತ್ತಿರುವ ಕ್ಷೇತ್ರವಾಗಿದ್ದು ಈಗಾಗಲೇ ಕೆಲ ವೃತ್ತಿಯಲ್ಲಿರುವವರು ತಮ್ಮ ಮಧ್ಯಂತರ ಅವಧಿಯಲ್ಲೇ ಈ ಕ್ಷೇತ್ರದ ಬಗ್ಗೆ ಇನ್ನಷ್ಟು ತಿಳಿದು, ಕೌಶಲ್ಯಗಳನ್ನು ರೂಪಿಸಿಕೊಳ್ಳುವ ಮೂಲಕ ಉತ್ತಮ ಭವಿಷ್ಯದ ವೃತ್ತಿಯನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ