ದೇಶದಲ್ಲಿ ನಡೆಯುತ್ತಿರುವ ಉದ್ಯೋಗ ವಜಾಗೊಳಿಸುವಿಕೆ (Layoffs) ಬಗ್ಗೆ ಹೆಚ್ಚೆನೂ ಹೇಳೋದೆ ಬೇಡ. ಲೇಆಫ್ ಅಂದ್ರೆ ಎಲ್ಲರಿಗೂ ಅರ್ಥವಾಗುವ ಪದವಾಗಿ ಬಿಟ್ಟಿದೆ. ಕಳೆದ ಕೆಲವು ತಿಂಗಳಿಂದ ಗೂಗಲ್, ಮೆಟಾ ಮತ್ತು ಟ್ವಿಟರ್‌ನಂತಹ ದೊಡ್ಡ ಟೆಕ್ ದೈತ್ಯರು ಸಹ ಅನೇಕ ಕಾರಣಗಳಿಗಾಗಿ ತಮ್ಮ ಉದ್ಯೋಗಿಗಳನ್ನು ವಜಾಗೊಳಿಸುತ್ತಾ ಬಂದಿದ್ದಾರೆ. ಅನೇಕ ಜನ ಉದ್ಯೋಗ (JOBS) ಕಳೆದುಕೊಂಡು ಅದೆಷ್ಟೋ ಸಾಲಗಾರರಾಗಿದ್ದಾರೆ, ದಿಕ್ಕು ತೋಚದ ಸ್ಥಿತಿಯಲ್ಲಿದ್ದಾರೆ.
ಕಂಪನಿಗಳು ನಡೆಸುತ್ತಿರುವ ಈ ಉದ್ಯೋಗಿಗಳ ವಜಾಗೊಳಿಸುವಿಕೆ ನಿಂತರೆ ಸಾಕು ಎನ್ನುವ ಮಟ್ಟಿಗೆ ಪ್ರತಿ ಉದ್ಯೋಗಿಯೂ ಬೇಡುತ್ತಿದ್ದಾರೆ. ಹಾಗೆಯೇ ತಂತ್ರಜ್ಞಾನದಿಂದಾಗಿ ಮಾನವ ಹುದ್ದೆಗಳು ನಶಿಸಿ ಹೋಗುತ್ತವೆ ಎಂಬ ಅಂಶದ ಮೇಲೂ ಬೆಳಕು ಚೆಲ್ಲಿದ ವರದಿ, ಇದು ಕೂಡ ಜವಾಗೊಳಿಸುವಿಕೆ ಮತ್ತು ಉದ್ಯೋಗ ಕಣ್ಮರೆಗೆ ಕಾರಣವಾಗುತ್ತದೆ ಎಂದು ವರದಿ ತಿಳಿಸಿದೆ. ಆದರೆ ಈಗ ಬಂದ ವರದಿಯೊಂದು ಉದ್ಯೋಗ ಕಡಿತದ ಕುರಿತಾಗಿ ಆತಂಕ ಸೃಷ್ಟಿ ಮಾಡಿದೆ.
ಮುಂದಿನ 5 ವರ್ಷಗಳಲ್ಲಿ 1.4 ಕೋಟಿ ಉದ್ಯೋಗಗಳು ಕಣ್ಮರೆ
ಮುಂದಿನ 5 ವರ್ಷಗಳಲ್ಲಿ 1.4 ಕೋಟಿ ಉದ್ಯೋಗಗಳು ಕಣ್ಮರೆಯಾಗಲಿವೆ ಎಂದು ವಿಶ್ವ ಆರ್ಥಿಕ ವೇದಿಕೆ (WEF) ತಿಳಿಸಿದೆ. ಹೌದು, ಉದ್ಯೋಗ ವಜಾ ಪರ್ವ ಇನ್ನೂ ಉದ್ಯಮ ಕ್ಷೇತ್ರದಲ್ಲಿದ್ದು, ಈ ವಿದ್ಯಾಮಾನ ಇನ್ನೂ ಸಹ ಮುಂದುವರೆಯುತ್ತದೆ ಎಂದು ವರದಿ ತಿಳಿಸಿದೆ.
69 ಮಿಲಿಯನ್ ಹೊಸ ಉದ್ಯೋಗ ಸೃಷ್ಟಿ
2027 ರ ವೇಳೆಗೆ ಉದ್ಯೋಗದಾತರು 69 ಮಿಲಿಯನ್ ಹೊಸ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ವಿಶ್ವ ಆರ್ಥಿಕ ವೇದಿಕೆ ವರದಿ ಹೇಳಿದ್ದು, ಡೇಟಾಸೆಟ್‌ಗೆ ಅನುಗುಣವಾದ 673 ಮಿಲಿಯನ್ ಉದ್ಯೋಗಗಳಲ್ಲಿ 83 ಮಿಲಿಯನ್ ಸ್ಥಾನಗಳನ್ನು ತೆಗೆದುಹಾಕುವ ನಿರೀಕ್ಷೆಯಿದೆ ಎಂದು ಅದು ಹೇಳಿದೆ.
ಇದು 14 ಮಿಲಿಯನ್ ಉದ್ಯೋಗಗಳ ನಿವ್ವಳ ನಷ್ಟಕ್ಕೆ ಕಾರಣವಾಗುತ್ತದೆ, ಇದು ಪ್ರಸ್ತುತ ಉದ್ಯೋಗದ ಶೇಕಡಾ 2 ಕ್ಕೆ ಸಮನಾಗಿರುತ್ತದೆ ಎಂದು ವರದಿ ತಿಳಿಸಿದೆ.
ಉದ್ಯೋಗಗಳು ಕಣ್ಮರೆಯಾಗಲು ಕಾರಣ ಏನು?
800ಕ್ಕೂ ಹೆಚ್ಚು ಕಂಪನಿಗಳ ಸಮೀಕ್ಷೆಯನ್ನು ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಉದ್ಯೋಗಿಗಳ ಅಥವಾ ಹುದ್ದೆಯನ್ನು ಮಂಥನ ಮಾಡಲು ಕಾರಣ ಆರ್ಥಿಕತೆಯ ದುರ್ಬಲತೆ ಮತ್ತು ಕೃತಕ ಬುದ್ಧಿಮತ್ತೆ (AI) ಯಂತಹ ತಂತ್ರಜ್ಞಾನಗಳನ್ನು ಕಂಪನಿಗಳು ಅಳವಡಿಸಿಕೊಂಡಿರುವುದು ಎಂದು ಹೊಸ ವರದಿ, ಫ್ಯೂಚರ್ ಆಫ್ ಜಾಬ್ಸ್ ಬಹಿರಂಗಪಡಿಸಿದೆ.
ಯಾವ ಹುದ್ದೆಗೆ ಅಪಾಯ?
ಬ್ಯಾಂಕ್ ಟೆಲ್ಲರ್‌ಗಳು, ಕ್ಯಾಷಿಯರ್‌ಗಳು ಮತ್ತು ಡೇಟಾ ಎಂಟ್ರಿ ಕ್ಲರ್ಕ್‌ಗಳಂತಹ ಕ್ಲೆರಿಕಲ್ ಅಥವಾ ಸೆಕ್ರೆಟರಿ ಪಾತ್ರಗಳಲ್ಲಿನ ಉದ್ಯೋಗಗಳು ಕೆಲಸ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ಹುದ್ದೆಗಳು ಹೆಚ್ಚಾಗಿ ತಂತ್ರಜ್ಞಾನದ ಮೇಲೆ ಅವಲಂಬಿತವಾಗಿರುವುದರಿಂದ ಈ ಉದ್ಯೋಗಳು ಕಣ್ಮರೆಯಾಗುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.
ಉದ್ಯೋಗಗಳು ಕ್ಷೀಣಿಸುವುದು ಒಂದು ಕಡೆಯಾದರೆ, ಇದಕ್ಕೆ ವ್ಯತಿರಿಕ್ತವಾಗಿ, ಡೇಟಾ ವಿಶ್ಲೇಷಕರು ಮತ್ತು ವಿಜ್ಞಾನಿಗಳು, ದೊಡ್ಡ ಡೇಟಾ ತಜ್ಞರು, AI ಯಂತ್ರ ಕಲಿಕೆ ತಜ್ಞರು ಮತ್ತು ಸೈಬರ್ ಭದ್ರತೆ ವೃತ್ತಿಪರರ ಉದ್ಯೋಗವು 2027 ರ ವೇಳೆಗೆ ಸರಾಸರಿ 30 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ: Unemployment: ಭಾರತದಲ್ಲಿ ಉದ್ಯೋಗಿಗಳ ಸಂಖ್ಯೆ ಕುಸಿತ; ದುಡಿಯುವವರನ್ನು ಅವಲಂಬಿಸಿರುವವರೇ ಹೆಚ್ಚು ಏಕೆ?
ಭಾರತೀಯ ಉದ್ಯೋಗ ಮಾರುಕಟ್ಟೆಯು ಮುಂದಿನ ಐದು ವರ್ಷಗಳಲ್ಲಿ ಶೇಕಡಾ 22 ರಷ್ಟು ಮಂಥನಕ್ಕೆ ಸಾಕ್ಷಿಯಾಗಲಿದೆ ಎಂದು ಅಂದಾಜಿಸಲಾಗಿದೆ. ಜಾಗತಿಕವಾಗಿ, ಉದ್ಯೋಗ ಮಾರುಕಟ್ಟೆ ಮಂಥನವು ಶೇಕಡಾ 23 ರಷ್ಟಿದೆ ಎಂದು ಅಂದಾಜಿಸಲಾಗಿದೆ. "ಸುಮಾರು ಕಾಲು ಭಾಗದಷ್ಟು ಉದ್ಯೋಗಗಳು (23 ಶೇಕಡಾ) ಮುಂದಿನ ಐದು ವರ್ಷಗಳಲ್ಲಿ 10.2 ಶೇಕಡಾ ಬೆಳವಣಿಗೆ ಮತ್ತು 12.3 ಶೇಕಡಾ (ಜಾಗತಿಕವಾಗಿ) ಕುಸಿತದ ಮೂಲಕ ಬದಲಾಗುವ ನಿರೀಕ್ಷೆಯಿದೆ" ಎಂದು WEF ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ