ಪ್ರತಿಯೊಬ್ಬರ ವೃತ್ತಿಜೀವನದ (Career) ಮಧ್ಯಭಾಗವನ್ನು ಪ್ರಮುಖ ಹಂತವೆಂದು ಪರಿಗಣಿಸಲಾಗುತ್ತದೆ. ಈ ಮಿಡ್ಲೈಫ್ (Midlife) ಅವಧಿಯಲ್ಲಿ ನಿಮ್ಮ ಕಲಿಕೆಗಳು ಮತ್ತು ಅನುಭವಗಳ ಆಧಾರದ ಮೇಲೆ ದೊಡ್ಡ ರೋಲ್‌ಗಳು, ಹೆಚ್ಚಿನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ನೀವು ನಿರ್ಧರಿಸುತ್ತೀರಿ. ಅದಕ್ಕಾಗಿಯೇ ಈ ಹಂತದಲ್ಲಿ ವೃತ್ತಿಯನ್ನು ಬದಲಾಯಿಸುವುದು ಅತ್ಯಂತ ಮಹತ್ವದ ನಿರ್ಧಾರ ಎಂದೂ ಹೇಳಲಾಗುತ್ತದೆ. ಇದು ಬಹಳ ಪ್ರಮುಖ ಹಂತ ಏಕೆಂದರೆ ಈ ಸಮಯದಲ್ಲಿ ವೃತ್ತಿ ಬದಲಾವಣೆಯನ್ನು (Career Change) ಕಾರ್ಯಗತಗೊಳಿಸುವಾಗ ತೆಗೆದುಕೊಳ್ಳುವ ನಿರ್ಧಾರಗಳು ನಿಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತವೆ.
ಇಂಥ ಸಂದರ್ಭಗಳಲ್ಲಿ ನಮ್ಮ ಕೌಶಲ್ಯಗಳನ್ನು ವಿಸ್ತರಿಸಲು, ಸಂಪರ್ಕಗಳನ್ನು ನಿರ್ಮಿಸಲು, ನಮ್ಮ ರೆಸ್ಯೂಮ್‌ಗಳನ್ನು ನವೀಕರಿಸಲು ಮತ್ತು ನಮ್ಮ ಹಣಕಾಸುಗಳನ್ನು ಸುರಕ್ಷಿತವಾಗಿರಿಸುವುದು ಮುಖ್ಯ. ಅದರ ಜೊತೆಗೆ ವೃತ್ತಿ ಬದಲಾವಣೆಯ ಸಂದರ್ಶನವು ಸಹ ಅಷ್ಟೇ ಮುಖ್ಯವಾಗಿದೆ.
ಅದರಲ್ಲೂ "ನೀವು ನಿಮ್ಮ ವೃತ್ತಿಜೀವನವನ್ನು ಏಕೆ ಬದಲಾಯಿಸಲು ಬಯಸುತ್ತೀರಿ" ಎಂಬ ಸರಳ ಪ್ರಶ್ನೆಯು ಇಲ್ಲಿ ಬಹಳ ನಿರ್ಣಾಯಕವಾಗಿರುತ್ತವೆ. ಹಾಗಿದ್ದರೆ ಹೊಸ ವೃತ್ತಿ ಕ್ಷೇತ್ರವನ್ನು ಸರಾಗವಾಗಿ ಪ್ರವೇಶಿಸಲು ನೀವು ಸಿದ್ಧತೆ ನಡೆಸಬೇಕು.
ಅದಕ್ಕಾಗಿ ಸಂದರ್ಶನದಲ್ಲಿ ಕೇಳಲಾಗುವ ಸಾಮಾನ್ಯ ಪ್ರಶ್ನೆಗಳು ಯಾವುವು ? ಅದಕ್ಕೆ ಹೇಗೆ ಪರಿಣಾಮಕಾರಿಯಾಗಿ ಉತ್ತರಿಸಬಹುದು ಎಂಬುದರ ಕುರಿತಾದ ಮಾಹಿತಿ ಇಲ್ಲಿವೆ.
ಪ್ರಶ್ನೆ: 1: ಈ ಹಂತದಲ್ಲಿ ನಿಮ್ಮ ವೃತ್ತಿಜೀವನವನ್ನು ಬದಲಾಯಿಸಲು ಕಾರಣವೇನು?
ವೃತ್ತಿ ಪ್ರಯಾಣದ ಮಧ್ಯದಲ್ಲಿ ವೃತ್ತಿಯನ್ನು ಯಾಕೆ ಬದಲಾಯಿಸುತ್ತಿದ್ದೀರಿ ಎಂದು ಕೇಳುವ ಮೂಲಕ ಉದ್ಯೋಗದಾತರು ಅದರ ವೃತ್ತಿ ಬದಲಾವಣೆಯ ಹಿಂದಿನ ಕಾರಣವೇನು ಎಂದು ಅರ್ಥಮಾಡಿಕೊಳ್ಳಲು ಬಯಸುವುದು ಸಹಜ. ಜೊತೆಗೆ, ನೀವು ಅವರ ಕಂಪನಿಗೆ ಸರಿಯಾದ ಫಿಟ್ ಎಂದು ಖಚಿತಪಡಿಸಿಕೊಳ್ಳಲು ಅವರು ಬಯಸುತ್ತಾರೆ.
ನೀವು ಈ ಕರೆಯನ್ನು ತೆಗೆದುಕೊಳ್ಳಲು ನಿಜವಾದ ಕಾರಣದ ಬಗ್ಗೆ ಮಾತನಾಡಿ. ನಿಮ್ಮ ಈ ಹೆಜ್ಜೆಯೊಂದಿಗೆ ನಿಮ್ಮ ಭವಿಷ್ಯವು ಹೇಗೆ ವಿಭಿನ್ನವಾಗಿರಬಹುದು ಎಂಬುದನ್ನು ವಿವರಿಸಿ. ಅಲ್ಲದೆ, ನಿಮ್ಮ ಕೌಶಲ್ಯ ಮತ್ತು ಸಾಮರ್ಥ್ಯಗಳನ್ನು ಹೊಸ ವೃತ್ತಿಯೊಂದಿಗೆ ಹೇಗೆ ಉತ್ತಮವಾಗಿ ಬಳಸಿಕೊಳ್ಳಬಹುದು ಎಂಬುದನ್ನು ಹೇಳಿ.
ಪ್ರಶ್ನೆ2: ಈ ಹೊಸ ಪಾತ್ರಕ್ಕಾಗಿ ನೀವು ಹೇಗೆ ತಯಾರಿ ಮಾಡಿಕೊಂಡಿದ್ದೀರಾ?
ಉದ್ಯೋಗದಾತರು ನೀವು ಸರಿಯಾದ ಜ್ಞಾನವನ್ನು ಮಾತ್ರವಲ್ಲದೆ ಅದನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಕೌಶಲ್ಯವನ್ನೂ ಸಹ ಹೊಂದಿದ್ದೀರಿ ಎಂದು ನಿರ್ಣಯಿಸಲು ಈ ಪ್ರಶ್ನೆಯನ್ನು ಕೇಳಬಹುದು.
ಇದಕ್ಕೆ ನೀವು ಹೊಸ ವೃತ್ತಿಗೆ ಸೂಕ್ತವಾಗುವಂತಹ ನಿಮ್ಮ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಮಾತನಾಡಿ. ಇದಲ್ಲದೆ, ಕಂಪನಿಯ ಬೆಳವಣಿಗೆಗೆ ಕೊಡುಗೆ ನೀಡಲು ನಿಮ್ಮ ಕೌಶಲ್ಯವನ್ನು ಹೆಚ್ಚಿಸುವ ನಿಮ್ಮ ಯೋಜನೆಗಳನ್ನು ಉಲ್ಲೇಖಿಸಿ.
ಅಲ್ಲದೇ ಸ್ವತಂತ್ರ ಕೆಲಸ, ಸಹಯೋಗ, ಸಮಯ ನಿರ್ವಹಣೆ, ಪ್ರಸ್ತುತಿ ಮತ್ತು ನಾಯಕತ್ವದಂತಹ ಕೆಲವು ಕೌಶಲ್ಯಗಳು ಬಹುತೇಕ ಎಲ್ಲಾ ವೃತ್ತಿಗಳಿಗೆ ಸಾಮಾನ್ಯವಾಗಿದೆ. ಆದ್ದರಿಂದ, ಈ ಬದಲಾವಣೆಗೆ ವರ್ಗಾಯಿಸಬಹುದಾದ ಕೌಶಲ್ಯಗಳನ್ನು ಗುರುತಿಸಿ ಅದನ್ನು ಅವರಿಗೆ ವಿವರಿಸಿ.
ಪ್ರಶ್ನೆ3: ಮತ್ತೆ ಮೊದಲಿನಿಂದ ಪ್ರಾರಂಭಿಸುವ ಬಗ್ಗೆ ನಿಮಗೇನನ್ನಿಸುತ್ತದೆ? ನಿಮಗಿಂತ ಚಿಕ್ಕವರು ಈ ಕ್ಷೇತ್ರದಲ್ಲಿ ನಿಮ್ಮ ಹಿರಿಯರಾಗಿರಬಹುದು. ಆದ್ದರಿಂದ, ನೀವು ಅಡ್ಜೆಸ್ಟ್ ಆಗುತ್ತೀರಾ?
ವೃತ್ತಿಜೀವನದ ಮಧ್ಯದಲ್ಲಿ ವೃತ್ತಿ ಬದಲಾವಣೆ ಹುಡುವಂಥ ಪ್ರತಿಯೊಬ್ಬರಿಗೂ ಇಂಥದ್ದೇ ಅನುಭವ ಆಗಬೇಕು ಎಂದೇನಿಲ್ಲ. ಆದಾಗ್ಯೂ ಕೆಲವೊಬ್ಬರು ಕಡಿಮೆ ಮಟ್ಟದಲ್ಲಿ ಪ್ರಾರಂಭಿಸಬೇಕಾದ ಸಾಧ್ಯತೆಗಳಿರುತ್ತವೆ.
ಹಾಗಾಗಿ ಇಂತಹ ಪರಿಸ್ಥಿತಿಯಲ್ಲಿ ನೀವು ಹೇಗೆ ಕಾರ್ಯನಿರ್ವಹಿಸುತ್ತೀರಿ ಎಂಬುದನ್ನು ತಿಳಿದುಕೊಳ್ಳಲು ನೇಮಕಾತಿದಾರರು ಕುತೂಹಲದಿಂದ ಈ ಪ್ರಶ್ನೆ ಕೇಳಬಹುದು. ಕೆಲವೊಮ್ಮೆ ಕಿರಿಯ ವೃತ್ತಿಪರರಿಂದ ನೀವು ಹೆಚ್ಚಿನದನ್ನು ಕಲಿತಿರಬಹುದು. ಅಂಥ ಉದಾಹರಣೆಗಳಿದ್ದರೆ ಅದನ್ನು ಉಲ್ಲೇಖಿಸಲು ಇದು ಸರಿಯಾದ ಸಮಯ.
ಇದು ಕೌಶಲ್ಯ, ನಿರ್ವಹಣೆ ತಂತ್ರ ಅಥವಾ ನಿರ್ಣಾಯಕ ಮಾಹಿತಿಯಾಗಿರಬಹುದು. ನಿಮ್ಮ ದೀರ್ಘಾವಧಿಯ ಗುರಿಗಳನ್ನು ಸಾಧಿಸಲು ಮೊದಲಿನಿಂದ ಪ್ರಾರಂಭಿಸಲು ನೀವು ಸಾಕಷ್ಟು ಉತ್ಸುಕರಾಗಿದ್ದೀರಿ ಎಂದು ಅವರು ಭಾವಿಸಬೇಕಷ್ಟೇ. ಹೊಸ ರೋಲ್‌ಗೆ ಇದು ಮುಖ್ಯವಾದುದಾದರೆ, ವಿವಿಧ ವ್ಯಕ್ತಿಗಳೊಂದಿಗೆ ಸಹಕರಿಸುವ ಮನೋಭಾವದೊಂದಿಗೆ ನಿಮ್ಮ ಇತರ ಕೌಶಲ್ಯಗಳನ್ನು ಹೈಲೈಟ್ ಮಾಡಿ.
4. ಪ್ರಶ್ನೆ: ವೇತನ ಕಡಿತವಾದರೆ ನಿಮಗೆ ಒಪ್ಪಿಗೆಯೇ?
ಇದು ನಿಮಗೆ ಕಷ್ಟಕರವಾದ ಪ್ರಶ್ನೆಯಾಗಿರಬಹುದು. ಈ ಪ್ರಶ್ನೆಗೆ ಉತ್ತರಿಸಲು ಒಂದು ಸ್ಮಾರ್ಟ್ ಮಾರ್ಗವೆಂದರೆ ಅದು ಸವಾಲಾಗಿದೆ ಎಂದು ಒಪ್ಪಿಕೊಳ್ಳುವುದು.
ನಿಮ್ಮ ಉಳಿತಾಯದ ಆಧಾರದ ಮೇಲೆ ಒಂದು ವಾಸ್ತವಿಕ ಲೆಕ್ಕಾಚಾರ ಮಾಡಿ. ಅದರ ಆಧಾರದ ಮೇಲೆ ನಿಮಗೆ ಬೇಕಾದ ಕನಿಷ್ಠ ಮೊತ್ತದ ವೇತನವನ್ನು ಹೊಂದಿರಿ. ಅದು ನೀವು ಮಾಡುವ ಕೆಲಸಕ್ಕೂ ಹೊಂದಿಕೆಯಾಗಬೇಕು. ಆದ್ದರಿಂದ ಈ ಪ್ರಶ್ನೆಗೆ ಸ್ವಲ್ಪ ಅಳೆದು ತೂಗಿ ಉತ್ತರಿಸಬೇಕಾಗುತ್ತದೆ.
ಇದನ್ನೂ ಓದಿ: Career Goals: ವಿಶ್ವದ ಯಶಸ್ವಿ ವ್ಯಕ್ತಿಗಳ ಸೀಕ್ರೆಟ್ ಇದು; ಜಸ್ಟ್ ಈ 5 ರೂಲ್ಸ್ ಪಾಲಿಸ್ತಾರೆ ಅಷ್ಟೇ!
ಅಂದಹಾಗೆ ಮಿಡ್‌ಲೈಫ್ ವೃತ್ತಿ ಬದಲಾವಣೆಯು ಇನ್ನು ಮುಂದೆ ಅಪರೂಪದ ದೃಶ್ಯವಲ್ಲ. ನಾವು ಹೆಚ್ಚು ಕಾಲ ಬದುಕುತ್ತಿದ್ದಂತೆ, ವೃತ್ತಿಗಳು ಇನ್ನು ಮುಂದೆ ಏಕಮುಖವಾಗಿರುವುದಿಲ್ಲ. ಇಂದು ಜನರು ವೃತ್ತಿಯನ್ನು ಬದಲಾಯಿಸಲು ಮತ್ತು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಾಮುಖ್ಯತೆ ನೀಡುತ್ತಿದ್ದಾರೆ.
ಒಟ್ಟಾರೆಯಾಗಿ ನೀವೂ ಕೂಡ ವೃತ್ತಿ ಪ್ರಯಾಣದ ಮಧ್ಯದಲ್ಲಿ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದರೆ ಈ ಪ್ರಶ್ನೋತ್ತರ ಸಲಹೆಗಳು ನಿಮಗೆ ಸಹಕಾರಿಯಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ