ಇತ್ತೀಚಿನ ದಿನಗಳಲ್ಲಿ ಉದ್ಯೋಗ ನಷ್ಟ (Layoffs) ರಾತ್ರಿ ಬೆಳಗಾಗುವುದರೊಳಗೆ ಸಂಭವಿಸುತ್ತಿದೆ. ಆರ್ಥಿಕ ಸಮಸ್ಯೆಯಿಂದ ಹೊರಬರುವುದಕ್ಕಾಗಿ ಅದೆಷ್ಟೋ ದೈತ್ಯ ಕಂಪನಿಗಳು ಉದ್ಯೋಗಿಗಳನ್ನು ತಮ್ಮ ಸಂಸ್ಥೆಗಳಿಂದ ನಿರ್ದಯವಾಗಿ ಹೊರಹಾಕುತ್ತಿದ್ದು, ಮುಂದೇನು ಮಾಡಬೇಕೆಂಬ ಅತಂತ್ರ ಸ್ಥಿತಿಯಲ್ಲಿ ಉದ್ಯೋಗಿಗಳು ಬದುಕುವಂತಾಗಿದೆ. ಆದರೆ ಹೊಸ ವರ್ಷ (New Year 2023) ಎಂಬುದು ಭರವಸೆಯ ಹೊಂಗಿರಣದಂತೆ. ಹಾಗಾಗಿ ಹಳೆಯ ಕಹಿ ಮರೆತು ಹೊಸ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಲು ಹೊಸ ವರ್ಷ ಉತ್ತಮವಾಗಿದೆ.
ಹೊಸ ವರ್ಷವೆಂಬುದು ಹೊಸ ಭರವಸೆಯ ಬೆಳಕು
ಹೌದು, ಹೊಸ ವರ್ಷದ ಜನವರಿ ತಿಂಗಳ ಆರಂಭವೆಂಬುದು ಯಾವುದೇ ಕೆಲಸದಲ್ಲೂ ಯಶಸ್ಸನ್ನು ಕೈಗೂಡಿಸುವ ತಿಂಗಳು ಎಂಬ ನಂಬಿಕೆ ಇದೆ. ನಿಮ್ಮ ವೃತ್ತಿಜೀವನವನ್ನು ಉತ್ತಮಗೊಳಿಸಲು ಈ ತಿಂಗಳು ನೆರವಾಗಲಿದೆ. ಉದ್ಯೋಗ ಹುಡುಕಾಟದಲ್ಲಿದ್ದರೆ ಜನವರಿ ತಿಂಗಳು ನಿಮಗೆ ಶುಭವನ್ನುಂಟು ಮಾಡಲಿದೆ.
ಹೊಸ ವರ್ಷದ ಹೊಸ ತಿಂಗಳಿನಲ್ಲಿ ಹೊಸದಾಗಿ ಉದ್ಯೋಗ ಹುಡುಕಾಟ ನಡೆಸುತ್ತಿದ್ದರೆ ಅದಕ್ಕಾಗಿ ಕೆಲವೊಂದು ಸಲಹೆಗಳನ್ನು ನೀವು ಪಾಲಿಸಬೇಕು ಅದೇನು ಎಂಬುದನ್ನು ನೋಡೋಣ
ಹೊಸ ವರ್ಷದಲ್ಲಿ ನೀವು ಹೊಸಬರಾಗಿ
ಉದ್ಯೋಗ ಹುಡುಕಾಟದಲ್ಲಿ ಏನಾದರೂ ಬದಲಾವಣೆ ಮಾಡಬೇಕು ಎಂದಾದಲ್ಲಿ ಹೊಸ ವರ್ಷದಲ್ಲಿ ಅದನ್ನು ನೆರವೇರಿಸಿ. ಹಳೆಯ ತಪ್ಪುಗಳನ್ನು ಮರುಕಳಿಸದಿರಿ. ನಿಮ್ಮ ರೆಸ್ಯೂಮೆಯಲ್ಲಿ ಕವರ್ ಲೆಟರ್ ಇದೆ ಹಾಗೂ ಸಿವಿ ಹೊಸ ವಿವರಗಳನ್ನೊಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳಿ. ವೃತ್ತಿಗೆ ಅನುಕೂಲಕರವಾಗಿರುವ ಕೋರ್ಸ್ಗಳು, ಇಂಟರ್ನ್ಶಿಪ್ಗಳನ್ನು ಕಲಿತುಕೊಳ್ಳಿ.
ಇದನ್ನೂ ಓದಿ: Resume Tips-6: ನೂರಾರು ರೆಸ್ಯೂಮ್ಗಳ ಮಧ್ಯೆ HR ನಿಮ್ಮದನ್ನು ಆಯ್ಕೆ ಮಾಡಬೇಕೇ, ಇಷ್ಟು ಮಾಡಿ ಸಾಕು
ನೀವು ಅಪ್ಲೈ ಮಾಡುತ್ತಿರುವ ಸಂಸ್ಥೆಗಳ ಡಾಕ್ಯುಮೆಂಟ್ ಇರಿಸಿಕೊಳ್ಳಿ. ಹಾಗೂ ಯಾವುದೆಲ್ಲಾ ಉದ್ಯೋಗಗಳಿಗೆ ಅರ್ಜಿಹಾಕಿದ್ದೀರಿ ಎಂಬುದನ್ನು ದಾಖಲಿಸಿ. ಇದರಿಂದ ಭವಿಷ್ಯದಲ್ಲಿ ನಿಮಗೆ ಇನ್ನಷ್ಟು ಉದ್ಯೋಗ ಹುಡುಕಾಟಕ್ಕೆ ಈ ಮಾಹಿತಿ ನೆರವಾಗಲಿದೆ.
ತಪ್ಪುಗಳಿಂದ ಕಲಿತುಕೊಳ್ಳಿ
ಯಾವುದೇ ತಪ್ಪುಗಳು ಮುಂದಿನ ಸರಿಯಾದ ದಾರಿಗೆ ದಾರಿದೀಪವಾಗಿದೆ. ಹಾಗಾಗಿ ಹಳೆಯ ಸಂದರ್ಶನಗಳಲ್ಲಿ ಮಾಡಿದ ತಪ್ಪುಗಳು ಎಡವಟ್ಟುಗಳನ್ನು ಈ ವರ್ಷದಲ್ಲಿ ಮಾಡದಿರಿ. ವೃತ್ತಿಪರರ ಸಲಹೆಗಳನ್ನು ಅನ್ವಯಿಸಿ. ಪ್ರತಿಯೊಂದು ವಿಷಯದ ಬಗ್ಗೆ ಅಪ್ಟು ಡೇಟ್ ಆಗಿರಿ.
ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದೊಡನೆ ಸಂದರ್ಶನ ನಡೆಯುತ್ತದೆ ಎಂದು ಯೋಚಿಸದಿರಿ. ಮರಳಿ ಪ್ರಯತ್ನವನ್ನು ನಡೆಸಿ. ಧೈರ್ಯಗೆಡಬೇಡಿ. ಆತ್ಮವಿಶ್ವಾಸದಿಂದ ಮುನ್ನುಗ್ಗಿ.
ನೇಮಕಾತಿ ನಿರ್ವಾಹಕರ ಬಗ್ಗೆ ತಿಳಿದುಕೊಳ್ಳಿ
ನೇಮಕಾತಿ ನಿರ್ವಾಹಕರು ಸಂಸ್ಥೆಯ ಲಾಭದತ್ತ ಹೆಚ್ಚಿ ದೃಷ್ಟಿಯನ್ನು ಹೊಂದಿರುತ್ತಾರೆ. ಹಾಗಾಗಿ ಹುದ್ದೆಗಳನ್ನು ಅದಕ್ಕೆ ಅನುಗುಣವಾಗಿ ನೇಮಕಾತಿ ಮಾಡುತ್ತಾರೆ. ತಂಡಕ್ಕೆ ಯಾರು ಬೇಕು ಹಾಗೂ ಯಾರು ಸಮರ್ಥರು ಎಂಬುದನ್ನು ಮನಗಂಡು ನೇಮಕಾತಿ ನಡೆಸುತ್ತಾರೆ.
ಈ ದಿಸೆಯಲ್ಲಿ ನೀವು ಕೂಡ ಅದಕ್ಕೆ ಅರ್ಹರಾಗಿರುವಂತೆ ನಿಮ್ಮನ್ನು ಸಿದ್ಧಪಡಿಸಿಕೊಳ್ಳಿ. ಸಂಸ್ಥೆಯ ಬಗ್ಗೆ ಹಾಗೂ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಯ ಬಗ್ಗೆ ಚೆನ್ನಾಗಿ ಅರಿತುಕೊಳ್ಳಿ.
ಹೊಸ ಹೊಸ ವೃತ್ತಿ ಸಂಪರ್ಕಗಳನ್ನು ಸಾಧಿಸಿ
ಹೊಸ ವರ್ಷದಲ್ಲಿ ಹೊಸ ಹೊಸ ಸಂರ್ಪಕಗಳನ್ನು ಪರಿಚಯ ಮಾಡಿಕೊಂಡಿದ್ದರೆ ಉದ್ಯೋಗ ಹುಡುಕಾಟಕ್ಕೆ ಆ ಸಂಪರ್ಕಗಳನ್ನು ಬಳಸಿಕೊಳ್ಳಿ. ಅವರಿಂದ ಸಲಹೆಗಳನ್ನು ಪಡೆದುಕೊಳ್ಳಿ ಹಾಗೂ ಅವರು ಉದ್ಯೋಗ ಮಾಡುತ್ತಿರುವ ಸಂಸ್ಥೆಗಳಲ್ಲಿ ಉದ್ಯೋಗ ಖಾಲಿ ಇದೆಯೇ ಎಂಬುದನ್ನು ವಿಚಾರಿಸುತ್ತಿರಿ.
ಉತ್ತಮ ಸಂಪರ್ಕ ಒಮ್ಮೊಮ್ಮೆ ಉದ್ಯೋಗ ಹುಡುಕಾಟದಲ್ಲಿ ನೆರವಾಗದೇ ಇದ್ದರೂ ವೃತ್ತಿಪರ ಸಂಪರ್ಕಗಳು ಹುಡುಕಾಟಕ್ಕೆ ಸಾಮರ್ಥ್ಯವನ್ನು ಒದಗಿಸುತ್ತದೆ ಹಾಗೂ ಇನ್ನಷ್ಟು ಗಟ್ಟಿಯಾಗಿ ನಿಮ್ಮ ವೃತ್ತಿಜೀವನವನ್ನು ನಿರ್ಮಿಸಬಹುದಾಗಿದೆ.
ಉದ್ಯೋಗ, ಹುದ್ದೆಯ ಬಗ್ಗೆ ಸಂಶೋಧನೆ ನಡೆಸಿ
ನೀವು ಉದ್ಯೋಗಕ್ಕೆ ಅರ್ಜಿ ಸಲ್ಲಿಸಿರುವ ಕಂಪನಿಯಲ್ಲಿ ಉದ್ಯೋಗ ಪರಿಸರ ಹೇಗಿದೆ ಎಂಬುದನ್ನು ಅರಿತುಕೊಳ್ಳಿ. ಏಕೆಂದರೆ ಉದ್ಯೋಗಕ್ಕೆ ಸೇರಿದ ನಂತರ ಕನಿಷ್ಠ ಪಕ್ಷ ಒಂದು ವರ್ಷವಾದರೂ ನೀವು ಅಲ್ಲಿ ಉದ್ಯೋಗ ಮಾಡಬೇಕು. ಪರಿಸರ ಚೆನ್ನಾಗಿಲ್ಲವೆಂದು ನಡುವೆಯೇ ಉದ್ಯೋಗ ತ್ಯಜಿಸುವಂತಹ ಪ್ರಮೇಯ ಬಂದೊದಗಬಾರದು.
ನೀವು ಅರ್ಜಿ ಹಾಕುತ್ತಿರುವ ಹುದ್ದೆ, ಸಂಸ್ಥೆಯ ಬಗ್ಗೆ, ನೇಮಕಾತಿದಾರರ ಬಗ್ಗೆ ಸಾಕಷ್ಟು ಮಾಹಿತಿಗಳನ್ನು ಕಲೆಹಾಕಿ. ಸಂದರ್ಶನದಲ್ಲಿ ಚೆನ್ನಾಗಿ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ನಿಮ್ಮಲ್ಲಿರಲಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ