ಇಂಟರ್ನ್ಶಿಪ್ (Internship), ಯಾವುದೇ ಪದವಿ ಮತ್ತು ಕೋರ್ಸ್ ಮುಗಿದ ತಕ್ಷಣ ಅಥವಾ ಅಭ್ಯಾಸ ಮಾಡುತ್ತಿರುವಾಗಲೇ ಅಗತ್ಯವಾಗಿ ಪಡೆಯಬೇಕಾದ ಒಂದು ಕಲಿಕೆ. ಇದು ವಿದ್ಯಾರ್ಥಿಗಳ ಭವಿಷ್ಯದ ವೃತ್ತಿಜೀವನಕ್ಕೆ (Career) ದೊಡ್ಡ ಕೊಡುಗೆ ನೀಡುತ್ತದೆ. ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲೂ ಸಹ ಪ್ರತಿಯೊಂದು ಕೋರ್ಸ್ಗಳನ್ನು (Courses) ಕಡ್ಡಾಯವಾಗಿ ಇಂಟರ್ನ್ಶಿಪ್ ಪೂರ್ಣಗೊಳಿಸುವಂತೆ ವಿನ್ಯಾಸಗೊಳಿಸಲಾಗಿದೆ. ಇದು ವಿದ್ಯಾರ್ಥಿಗಳಿಗೆ ಕಲಿಕೆಗೆ ಮತ್ತೊಂದು ಹಂತವನ್ನು ನೀಡುತ್ತದೆ ಎನ್ನಬಹುದು.
ಇಂಟರ್ನ್ಶಿಪ್ ಎಂದರೇನು?
ಇಂಟರ್ನ್ಶಿಪ್ ಎಂದರೆ ವ್ಯಾಸಂಗದ ನಡುವೆ, ರಜಾ ಅವಧಿಯಲ್ಲಿ, ತಾತ್ಕಾಲಿಕವಾಗಿ ಪ್ರಾಯೋಗಿಕ ತರಬೇತಿ ಪಡೆಯುವುದಾಗಿದೆ. ಕೆಲವು ಕಂಪನಿಗಳು ವಿದ್ಯಾರ್ಥಿಗಳಿಗೆ ಆಹ್ವಾನ ನೀಡಿ ಉದ್ಯೋಗಕ್ಕೆ ಸಜ್ಜುಗೊಳಿಸುವ ನಿಟ್ಟಿನಲ್ಲಿ, ಇಂಟರ್ನಿ ಆಗಿ ನೇಮಕ ಮಾಡಿಕೊಳ್ಳುತ್ತವೆ. ಕೆಲ ಕಂಪನಿಗಳು ಇಂಟರ್ನ್ಶಿಪ್ಗೆ ಬರುವವರಿಗೆ ವೇತನ ಸಹ ನೀಡುತ್ತವೆ.
ಹೌದು, ಇಂಟರ್ನ್ ಅಭ್ಯರ್ಥಿಗಳಿಗೆ ಸ್ಟೈಫಂಡ್ ಪಾವತಿಸುವ ವಿಷಯದಲ್ಲಿ ಕಂಪನಿಗಳು ಹಿಂದೆ ಬಿದ್ದಿಲ್ಲ ಎನ್ನಬಹುದು. ಅಭ್ಯರ್ಥಿಗಳಿಗೆ ತಮ್ಮ ವೆಚ್ಚಗಳನ್ನು ಭರಿಸಲು ನಿಯಮಿತ ಸ್ಥಿರ ಮೊತ್ತವನ್ನು ಕಂಪನಿಗಳು ಪಾವತಿಸುತ್ತಿವೆ. ಈ ಕ್ರಮ ವಿದ್ಯಾರ್ಥಿಗಳಿಗೆ ಅಥವಾ ಅಭ್ಯರ್ಥಿಗಳಿಗೆ ಕಲಿಕೆ ಮತ್ತು ಗಳಿಕೆ ಎರಡಕ್ಕೂ ಸಹಾಯ ಮಾಡುತ್ತದೆ.
ಒಟ್ಟಾರೆ ಇಂಟರ್ನ್ಶಿಪ್ಗಳು ವಿದ್ಯಾರ್ಥಿಗಳಿಗೆ, ಅವರು ಕಾಲೇಜಿನಲ್ಲಿ ಪಡೆಯುವ ಸೈದ್ಧಾಂತಿಕ ಜ್ಞಾನವನ್ನು ಮೌಲ್ಯೀಕರಿಸಲು ಪ್ರಾಯೋಗಿಕ ಮಾನ್ಯತೆ ಪಡೆಯುವ ಆದರ್ಶ ಮಾರ್ಗವಾದರೆ, ಕಂಪನಿಗಳಿಗೆ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಅವಕಾಶವಾಗಿದೆ.
ಈ ಮೇಲಿನ ವಿವರಣೆ ಇಂಟರ್ನ್ಶಿಪ್ನ ಕೆಲ ಪ್ರಯೋಜನಗಳನ್ನು ತಿಳಿಸಿದೆ, ಹಾಗಿದ್ದರೆ ನೀವು ಇಂಟರ್ನ್ಶಿಪ್ಗಾಗಿ ಹೇಗೆ ತಯಾರಿರಬೇಕು ಎಂಬುದರ ಬಗ್ಗೆ ಮುಂದೆ ನೋಡೋಣ.
ಇಂಟರ್ನ್ಶಿಪ್ಗಾಗಿ ವಿದ್ಯಾರ್ಥಿಗಳು ಹೇಗೆ ತಯಾರಿರಬೇಕು? ಸಲಹೆಗಳೇನು?
ಪ್ರಸ್ತುತ ಇಂಟರ್ನ್ ಅನ್ನು ನೇಮಿಸಿಕೊಳ್ಳುವ ಪ್ರಕ್ರಿಯೆಯು ಹೆಚ್ಚು ವಿಭಿನ್ನವಾಗಿದೆ. ವೃತ್ತಿಪರತೆಯು ಉದ್ಯೋಗದಾತರ ಮೊದಲ ಮತ್ತು ಅಗ್ರಗಣ್ಯ ಅವಶ್ಯಕತೆಯಾಗಿದೆ. ಹೀಗಾಗಿ ವಿದ್ಯಾರ್ಥಿಗಳು ಇಂಟರ್ನ್ಶಿಪ್ಗೆ ಚೆನ್ನಾಗಿ ಸಿದ್ಧರಾಗುವುದು ಅವಶ್ಯವಾಗಿದೆ.
1. ಆಸಕ್ತಿ ವಲಯವನ್ನು ಆರಿಸಿಕೊಳ್ಳಿ
ಇಂಟರ್ನ್ಶಿಪ್ಗಾಗಿ ನಿಮಗೆ ಆಸಕ್ತಿ ಇರುವ ಪ್ರದೇಶಗಳನ್ನು ಮೊದಲಿಗೆ ಶಾರ್ಟ್ಲಿಸ್ಟ್ ಮಾಡಬೇಕು. ಮತ್ತು ನಂತರ ಆ ಪಟ್ಟಿಯಲ್ಲಿ ನಿಮಗೆ ಹೆಚ್ಚಿನ ಆಸಕ್ತಿ ಇರುವ ವಲಯವನ್ನು ಅಥವಾ ನಿಮಗಿರುವ ಕೌಶಲ್ಯಗಳಿಗೆ ಯಾವ ವಲಯ ಸರಿಹೊಂದುತ್ತದೆ ಎಂಬುದನ್ನು ನೋಡಿಕೊಳ್ಳಬೇಕು.
2. ನಿಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಿ
ಉದ್ಯೋಗವಕಾಶಗಳನ್ನು ಹೆಚ್ಚಿನ ರೀತಿಯಲ್ಲಿ ಪಡೆಯಲು ಓದಿನ ಜೊತೆ ಕೆಲ ಕೌಶಲ್ಯಗಳನ್ನು ವಿದ್ಯಾರ್ಥಿ ಜೀವನದಲ್ಲಿಯೇ ಪಡೆಯುವುದು ಮುಖ್ಯವಾಗುತ್ತದೆ. ಇದು ಇಂಟರ್ನ್ಶಿಪ್ಗೂ ಸಹಾಯ ಮಾಡುತ್ತದೆ.
ಅದಕ್ಕಾಗಿ ನೀವು ಯಾವುದೇ ಎನ್ಜಿಒಗಳು ಮತ್ತು ಎನ್ಪಿಒಗಳೊಂದಿಗೆ ಫ್ರೀಲ್ಯಾನ್ಸಿಂಗ್ ಪ್ರಾಜೆಕ್ಟ್ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಬಹುದು ಅಥವಾ ಕಾಲೇಜು ಕಾರ್ಯಕ್ರಮಗಳಿಗೆ ಸ್ವಯಂಸೇವಕರಾಗಿ ಸೇರಿಕೊಳ್ಳಬಹುದು.
ಇದನ್ನೂ ಓದಿ: Resume Tips-11: ನಿಮ್ಮ ರೆಸ್ಯೂಮ್ನಲ್ಲಿರುವ ಈ 5 ವಿಷಯಗಳನ್ನು ಮೊದಲು ಡಿಲೀಟ್ ಮಾಡಿ, ಆಗಲೇ ಕೆಲಸ ಸಿಗೋದು
3. ಪವರ್ಫುಲ್ ರೆಸ್ಯೂಮ್ ಮತ್ತು ಕವರ್ ಲೆಟರ್ ಸಿದ್ಧ ಮಾಡಿಕೊಳ್ಳಿ
ರೆಸ್ಯೂಮ್ ಅನ್ನೋದು ಎಲ್ಲಾ ಕೆಲಸಗಳಿಗೂ ಮುನ್ನಡಿ. ಹೀಗೆ ಇಂಟರ್ನ್ಶಿಪ್ನಲ್ಲೂ ರೆಸ್ಯೂಮ್ ಪಾತ್ರ ದೊಡ್ಡದು. ನೀವು ಇಂಟರ್ನ್ಶಿಪ್ ಹೋಗಲು ಬಯಸಿದರೆ ಸಂಕ್ಷಿಪ್ತ ಮತ್ತು ಆಕರ್ಷಕವಾದ ರೆಸ್ಯೂಮ್ ಅನ್ನು ಸಿದ್ಧಪಡಿಸಿ.
ಈ ರೆಸ್ಯೂಮ್ ಮತ್ತು ಕವರ್ ಲೆಟರ್ ನಿಮ್ಮ ಸಂಪರ್ಕ ವಿವರ, ಶೈಕ್ಷಣಿಕ ಹಿನ್ನೆಲೆ, ನೀವು ಹೊಂದಿರುವ ಕೌಶಲ್ಯಗಳು, ನೀವು ಕೈಗೊಂಡಿರುವ ಪೂರ್ವ ಇಂಟರ್ನ್ಶಿಪ್/ತರಬೇತಿ/ಪ್ರಮಾಣೀಕರಣಗಳು, ಪ್ರಶಸ್ತಿಗಳು ಮತ್ತು ಪುರಸ್ಕಾರಗಳು, ಜೊತೆಗೆ ನೀವು ಕೆಲಸ ಮಾಡಿದ ಅಥವಾ ಮುಂದಾಳತ್ವ ವಹಿಸಿರುವ ಪ್ರಮುಖ ಯೋಜನೆಗಳ ಬಗ್ಗೆ ಎಲ್ಲಾ ವಿವರಗಳನ್ನು ಹೈಲೈಟ್ ಮಾಡಬೇಕು.
4. ಕಂಪನಿ ಬಗ್ಗೆ ಮೊದಲೇ ತಿಳಿದುಕೊಳ್ಳಿ
ಕಂಪನಿಯ ಇಂಟರ್ವ್ಯೂಗೆ ಹೋಗುವ ಮುನ್ನ ಸಂಸ್ಥೆಯ ಬಗ್ಗೆ ಹೆಚ್ಚೆಚ್ಚು ತಿಳಿದುಕೊಂಡಿರಿ. ಅವರ ವೆಬ್ಸೈಟ್, ಸಾಮಾಜಿಕ ಮಾಧ್ಯಮ ಪುಟಗಳು, ಇತ್ತೀಚಿನ ಮಾಧ್ಯಮ ಕವರೇಜ್ ಇತ್ಯಾದಿಗಳನ್ನು ಓದಿಕೊಂಡಿರಿ. ಇದು ಸಂಸ್ಥೆಯ ಪ್ರಮುಖ ಮೌಲ್ಯಗಳು, ಧ್ಯೇಯ ಮತ್ತು ದೃಷ್ಟಿಯ ಜೊತೆಗೆ ಕಂಪನಿ ಬಗ್ಗೆ ಆಳವಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಅಷ್ಟೇ ಅಲ್ಲ, ಸಂದರ್ಶಕರು ಕಂಪನಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಕೇಳಿದರೆ, ನೀವು ಸುಲಭವಾಗಿ ಮತ್ತು ಆತ್ಮವಿಶ್ವಾಸದಿಂದ ಉತ್ತರಿಸಲು ಸಾಧ್ಯವಾಗುತ್ತದೆ.
5. ವೃತ್ತಿಪರತೆ ಮತ್ತು ಸಂವಹನ
ನಿಮ್ಮ ನೀತಿ ಸಂಹಿತೆ ವೃತ್ತಿಪರವಾಗಿರಬೇಕು. ಸಂದರ್ಶನಗಳ ಮೊದಲು, ಸಮಯದಲ್ಲಿ ಮತ್ತು ನಂತರ ಇಮೇಲ್ಗಳು, ಸಂದೇಶಗಳು, ಕರೆಗಳು ಅಥವಾ ದೈಹಿಕ ಸಂವಹನಗಳಲ್ಲಿ ಪರಿಣಾಮಕಾರಿಯಾಗಿ ಮತ್ತು ಔಪಚಾರಿಕವಾಗಿ ಸಂವಹನ ಮಾಡಿ. ನಿಮಗೆ ಒಂದೊಮ್ಮೆ ಅಲ್ಲಿ ಇಂಟರ್ನ್ಶಿಪ್ ಅವಕಾಶ ಸಿಕ್ಕರೆ ಕಂಪನಿಗೆ ಕೃತಜ್ಞತೆಯ ಮೇಲ್ ಅನ್ನು ಕಳುಹಿಸುವುದನ್ನು ಮರೆಯಬೇಡಿ.
ಈ ನಿಮ್ಮ ಸ್ವಭಾವ ಮುಂದೆ ನಿಮಗೆ ಅನುಕೂಲವಾಗಬಹುದು. ಏಕೆಂದರೆ ಕೆಲವು ಸಂಸ್ಥೆಗಳು ವಾಸ್ತವವಾಗಿ ತಮ್ಮ ಅಧಿಕಾರಾವಧಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ಇಂಟರ್ನಿಗಳಿಗೆ ಪೂರ್ಣ ಸಮಯದ ಉದ್ಯೋಗಾವಕಾಶಗಳನ್ನು ನೀಡುತ್ತವೆ.
ಇಂಟರ್ನ್ಶಿಪ್ಗಳು ನಿಮ್ಮ ವೃತ್ತಿಪರ ಯಶಸ್ಸಿಗೆ ಮೆಟ್ಟಿಲುಗಳಾಗಿವೆ. ಇಲ್ಲಿ ನೀವು ವೃತ್ತಿಪರತೆ, ಸಮಯ ನಿರ್ವಹಣೆ, ಟೀಮ್ವರ್ಕ್, ಸಂವಹನ ಇತ್ಯಾದಿಗಳಂತಹ ವೃತ್ತಿ ಕೌಶಲ್ಯಗಳ ಬಗ್ಗೆ ಕಲಿಯುತ್ತೀರಿ. ಇಂಟರ್ನ್ಶಿಪ್ನಲ್ಲಿ ನೀವು ಕಲಿತ ಕೆಲಸದ ಅನುಭವ ಪ್ರಗತಿಪರ ಭವಿಷ್ಯಕ್ಕೆ ಮುನ್ನಡಿಯಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ