ಈಗೆಲ್ಲಾ ದೊಡ್ಡ ದೊಡ್ಡ ಐಟಿ ಕಂಪನಿಗಳು (IT Companies) ಆರ್ಥಿಕ ಸಂಕಷ್ಟದ ಕಾರಣವನ್ನು ಮುಂದಿಟ್ಟುಕೊಂಡು ತಮ್ಮ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನು ಕೆಲಸದಿಂದ ರಾತ್ರೋ ರಾತ್ರಿ ವಜಾ ಗೊಳಿಸಿರುವ (Layoffs) ಘಟನೆಗಳನ್ನೇ ನಾವೆಲ್ಲಾ ಹೆಚ್ಚಾಗಿ ನೋಡುತ್ತಿದ್ದೇವೆ. ಇದನ್ನೆಲ್ಲಾ ನೋಡುತ್ತಿರುವ ಈಗಿನ ಬಿ.ಟೆಕ್ (B.Tech) ವಿದ್ಯಾರ್ಥಿಗಳಿಗೆ ‘ಎಂಜಿನಿಯರಿಂಗ್ ಮುಗಿಸಿದ ನಂತರ ಹೇಗಪ್ಪಾ ಕೆಲಸ ಹುಡುಕೋದು, ಎಲ್ಲಿ ನಮಗೆ ಕೆಲಸ ಸಿಗುತ್ತದೆ’ ಅನ್ನೋ ಯೋಚನೆ ಕಾಡುತ್ತಿರುವುದಂತೂ ನಿಜ.
ಆದರೆ ವಿದ್ಯಾರ್ಥಿಗಳು ತಮ್ಮ ವೃತ್ತಿಜೀವನದ ಬಗ್ಗೆ ಇಟ್ಟುಕೊಂಡಿರುವ ಗುರಿಯ ಮೇಲಿಂದ ಸ್ವಲ್ಪವೂ ತಮ್ಮ ದೃಷ್ಟಿಯನ್ನು ವಿಚಲಿತವಾಗಲು ಅವಕಾಶ ಮಾಡಿ ಕೊಡಬಾರದು. ಏಕೆಂದರೆ ವೃತ್ತಿಜೀವನದಲ್ಲಿ ಕೆಲಸ ಸಿಗುವುದು, ಕೆಲಸ ಕಳೆದುಕೊಳ್ಳುವುದು ಎಲ್ಲವೂ ಸಾಮಾನ್ಯವಾಗಿರುತ್ತವೆ. ನಿಮಗೆ ಕೌಶಲ್ಯಗಳಿದ್ದರೆ, ಕೆಲಸ ತಾನಾಗಿಯೇ ಹುಡುಕಿಕೊಂಡು ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.
ಹಾಗಾಗಿ ಈ ಲೇ-ಆಫ್ ಗಳ ಚಿಂತೆ ಬಿಟ್ಟು ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳು ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಹೆಚ್ಚಿಗೆ ಬೆಳೆಸಿಕೊಳ್ಳಲು ಪ್ರಯತ್ನಪಡಬೇಕು. ಇಷ್ಟೆಲ್ಲಾ ನಿಮಗೇಕೆ ಹೇಳುತ್ತಿದ್ದೇವೆ ಅಂತ ನಿಮಗೆ ಅನ್ನಿಸಬಹುದು.
ಮೈಕ್ರೋಸಾಫ್ಟ್ ನಲ್ಲಿ ಕೆಲಸ ಗಿಟ್ಟಿಸಿಕೊಂಡ ಬುದ್ದಿವಂತೆ..
ಇಂತಹ ಲೇ-ಆಫ್ ಗಳ ಮಧ್ಯೆಯೂ ಇಲ್ಲೊಬ್ಬ ಐಐಎಂ ವಿದ್ಯಾರ್ಥಿ ಮೈಕ್ರೋಸಾಫ್ಟ್ ನಂತಹ ದೊಡ್ಡ ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡಿದ್ದಾಳೆ. ಬರೀ ಕೆಲಸ ಗಿಟ್ಟಿಸಿರುವುದಲ್ಲ, ಈಕೆಗೆ ಇರುವ ಸಂಬಳ ಕೇಳಿದರೆ ನೀವು ಒಂದು ಕ್ಷಣ ಬೆಚ್ಚಿ ಬೀಳುವುದಂತೂ ಗ್ಯಾರೆಂಟಿ.
ಐಐಎಂ ವಿದ್ಯಾರ್ಥಿನಿ ಅವನಿ ಮಲ್ಹೋತ್ರಾ ಅವರನ್ನು ಮೈಕ್ರೋಸಾಫ್ಟ್ 64.61 ಲಕ್ಷ ರೂಪಾಯಿಗಳ ಪ್ಯಾಕೇಜ್ ನೊಂದಿಗೆ ಕೆಲಸಕ್ಕೆ ನೇಮಿಸಿಕೊಂಡಿದೆ. ಐಐಎಂ ಸಂಬಲ್ಪುರ್ ತನ್ನ ಟ್ವಿಟ್ಟರ್ ಖಾತೆಯ ಪುಟದಲ್ಲಿ ಈ ಹೆಮ್ಮೆ ಪಡುವಂತಹ ಮಾಹಿತಿಯನ್ನು ಹಂಚಿಕೊಂಡಿದೆ ಮತ್ತು "ಈ ವರ್ಷ ಪಡೆದ ಅತ್ಯಧಿಕ ಸಂಬಳ" ಎಂದು ಅದಕ್ಕೆ ಶೀರ್ಷಿಕೆ ಸಹ ಬರೆದಿದೆ. ಸಂಸ್ಥೆಯ ಪ್ರಕಾರ, ಈ ಪ್ಲೇಸ್ಮೆಂಟ್ ಕೊಡುಗೆಯು ಕಳೆದ ವರ್ಷಕ್ಕೆ ಹೋಲಿಸಿದರೆ ಶೇಕಡಾ 146.7 ರಷ್ಟು ಹೆಚ್ಚಳವಾಗಿದೆ.
ಕೆಲಸ ಪಡೆಯಲು ಆರು ಸುತ್ತಿನ ಇಂಟರ್ವ್ಯೂವ್ ಪಾಸ್ ಮಾಡಿರುವ ಅವನಿ
ಜೈಪುರ ಮೂಲದ ಅವನಿ ಮಲ್ಹೋತ್ರಾ ಆರು ಸುತ್ತಿನ ಸಂದರ್ಶನಗಳನ್ನು ಪೂರ್ಣಗೊಳಿಸಿದ ನಂತರ ಈ ಕೆಲಸವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ. ವರದಿಗಳ ಪ್ರಕಾರ, ಮಲ್ಹೋತ್ರಾ ಅವರು ಇನ್ಫೋಸಿಸ್ ನಲ್ಲಿ ಮೂರು ವರ್ಷಗಳ ಹಿಂದಿನ ಅನುಭವ ಮತ್ತು ಅವರ ಸಾಮರ್ಥ್ಯದಿಂದಾಗಿ ಈ ಉದ್ಯೋಗವನ್ನು ಪಡೆದರು.
ಇದನ್ನೂ ಓದಿ: UPSC Success Story: ಮದುವೆ ಬಳಿಕ ಡಿಗ್ರಿ ಪೂರ್ಣಗೊಳಿಸಿ IAS ಅಧಿಕಾರಿಯಾದ ಚಂದ್ರಕಲಾ
ಅವನಿ ಮಲ್ಹೋತ್ರಾ ಕಂಪ್ಯೂಟರ್ ಸೈನ್ಸ್ ನಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. "ದೋಷರಹಿತ ಟ್ರ್ಯಾಕ್ ರೆಕಾರ್ಡ್ ನೊಂದಿಗೆ ಈ ವರ್ಷ ಪಡೆದ ಅತ್ಯಧಿಕ ವೇತನವು 64.61 ಎಲ್‌ಪಿಎ ಆಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು 146.7 ಪ್ರಶಿಶತದಷ್ಟು ಹೆಚ್ಚಳವಾಗಿದೆ. ಸರಾಸರಿ ವೇತನದಲ್ಲಿ 26 ಪ್ರತಿಶತದಷ್ಟು ಮತ್ತು ಸರಾಸರಿ ವೇತನದಲ್ಲಿ 29 ಪ್ರತಿಶತದಷ್ಟು ಹೆಚ್ಚಳವಿದೆ" ಎಂದು ಸಂಸ್ಥೆ ಟ್ವಿಟರ್ ನಲ್ಲಿ ಬರೆದಿದೆ.
ಐಐಎಂ ಸಂಬಲ್ಪುರ್ ಗೆ ಈ ವರ್ಷ ಕ್ಯಾಂಪಸ್ ಪ್ಲೇಸ್ಮೆಂಟ್ ಗೆ ಬಂದ ದೊಡ್ಡ ಕಂಪನಿಗಳಿವು..
ಅವನಿ ಅವರ ಬ್ಯಾಚ್ ಎಂಬಿಎ ವಿದ್ಯಾರ್ಥಿಗಳಿಗೆ ನೀಡಲಾಗುವ ಸರಾಸರಿ ವೇತನ 16 ಲಕ್ಷ ರೂಪಾಯಿಗಳಾಗಿದ್ದರೆ, ಮಹಿಳಾ ವಿದ್ಯಾರ್ಥಿಗಳ ಸರಾಸರಿ ವೇತನವು 18.25 ಲಕ್ಷ ರೂಪಾಯಿಗೆ ಏರಿದೆ. ಐಐಎಂ ಸಂಬಲ್ಪುರ್ ಈ ವರ್ಷ ಕ್ಯಾಂಪಸ್ ಪ್ಲೇಸ್ಮೆಂಟ್ ಗೆ ಬಂದ ಪ್ರಮುಖ ನೇಮಕಾತಿಗಳೆಂದರೆ ಡೆಲಾಯ್ಟ್, ಅಮೆಜಾನ್, ಇವೈ, ಆಕ್ಸೆಂಚರ್, ಅಮುಲ್, ಮೈಕ್ರೋಸಾಫ್ಟ್ ಮತ್ತು ವೇದಾಂತ.
ಐಐಎಂ ಸಂಬಲ್ಪುರ್ 2021-23 ನೇ ವರ್ಷದ ಬ್ಯಾಚ್ ನಲ್ಲಿ ಶೇಕಡಾ 100 ರಷ್ಟು ಪ್ಲೇಸ್ಮೆಂಟ್ ಅನ್ನು ದಾಖಲಿಸಿದೆ ಎಂದು ಸಂಸ್ಥೆ ಟ್ವೀಟ್ ಮಾಡಿದೆ. "ಈ ವರ್ಷದ ಪ್ಲೇಸ್ಮೆಂಟ್ ಋತುವಿನಲ್ಲಿ 130 ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸಿದ್ದು, ಮೊದಲ ಬಾರಿಗೆ ನೇಮಕಾತಿ ಮಾಡುವವರಲ್ಲಿ ಶೇಕಡಾ 56 ರಷ್ಟು ಹೆಚ್ಚಳವಾಗಿದೆ" ಎಂದು ಸಂಸ್ಥೆ ಟ್ವೀಟ್ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ