ಆರ್ಟಿಫಿಶಿಯಲ್ ಇಂಟಲಿಜನ್ಸ್ ಅಥವಾ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಯುಗದಲ್ಲಿ ವೇಗವಾಗಿ ಬೆಳೆಯುತ್ತಿದೆ. ಇದು ಬುದ್ಧಿವಂತ ಕಂಪ್ಯೂಟರ್ ಪ್ರೋಗ್ರಾಂಗಳನ್ನು ತಯಾರಿಸುವ ವಿಜ್ಞಾನ ಮತ್ತು ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಂಬಂಧಿಸಿರುವ ಕೌಶಲ್ಯವಾಗಿದ್ದು ಮಾನವ ಬುದ್ಧಿಮತ್ತೆಯನ್ನು ಕಂಪ್ಯೂಟರ್‌ಗಳಲ್ಲಿ ಬಳಸುವ ಪ್ರಯೋಗವಾಗಿದೆ. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಕ್ಷೇತ್ರದ ಎಲ್ಲಾ ವಿಭಾಗದಲ್ಲಿಯೂ ಚಾಪು ಮೂಡಿಸುತ್ತಿದ್ದು ಶೀಘ್ರದಲ್ಲೇ ಇದು ಉದ್ಯೋಗ ಕೊರತೆಯನ್ನು ದೂರಮಾಡಲಿದೆ ಎಂದು ಐಬಿಎಮ್ ಸಿಇಒ ಅರವಿಂದ್ ಕೃಷ್ಣ ಅಭಿಪ್ರಾಯ ಪಟ್ಟಿದ್ದಾರೆ.
ಪ್ರಭಾವಕ್ಕೊಳಗಾಗಲಿರುವ ಉದ್ಯೋಗ ಕ್ಷೇತ್ರಗಳು
ಕೃಷ್ಣ ಅವರು ತಿಳಿಸಿರುವಂತೆ ಕೆಲವೊಂದು ಉದ್ಯೋಗ ಕ್ಷೇತ್ರಗಳಾದ ಗ್ರಾಹಕ ಸೇವೆ, ಮಾನವ ಸಂಪನ್ಮೂಲ ವಿಭಾಗ, ಹಣಕಾಸು, ಆರೋಗ್ಯ ಕ್ಷೇತ್ರಗಳು ಯಾಂತ್ರೀಕರಣಗೊಳ್ಳಲಿದ್ದು ಮಾನವರಹಿತವಾಗಿ ಯಂತ್ರಗಳ ಮೂಲಕವೇ ಕಾರ್ಯನಿರ್ವಹಿಸಬಹುದು ಎಂದು ತಿಳಿಸಿದ್ದಾರೆ.
ಕಾರ್ಮಿಕ ಸಮಸ್ಯೆಯನ್ನು ಪರಿಹರಿಸಲಿದೆ
ಜಾಗತಿಕವಾಗಿ ಕಾರ್ಮಿಕ ಸಮಸ್ಯೆಯನ್ನು ಪರಿಹರಿಸಲಿರುವ ಎಐ (ಕೃತಕ ಬುದ್ಧಿಮತ್ತೆ) ಪ್ರಸ್ತುತ ಜಗತ್ತು ಎದುರಿಸುತ್ತಿರುವ ಹೆಚ್ಚಿನ ಜನಸಂಖ್ಯೆಯಿಂದಾಗಿ ಉಂಟಾಗಿರುವ ಕಾರ್ಮಿಕ ಸಮಸ್ಯೆಯನ್ನು ಪರಿಹರಿಸಲಿದೆ. ಕಾರ್ಮಿಕರು ಅಗತ್ಯವಾಗಿದ್ದ ಕೆಲವೊಂದು ವಿಭಾಗಗಳಿಗೆ ಬದಲಿ ವ್ಯವಸ್ಥೆಯನ್ನು ಎಐ ರೂಪಿಸಲಿದ್ದು, ಈ ಸಮಯದಲ್ಲಿ ಈ ಕ್ರಮ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. AI ಆರೋಗ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಉದ್ಯೋಗಗಳನ್ನು ಬದಲಿಸುತ್ತಿದೆ ಎಂದು ಮಾಹಿತಿ ನೀಡಿದರು.
IBM, 2021 ರಲ್ಲಿ ಮೆಕ್‌ಡೊನಾಲ್ಡ್ಸ್‌ನೊಂದಿಗೆ ಪಾಲುದಾರಿಕೆ ಮಾಡಿಕೊಂಡಿದ್ದು, ಸಂಸ್ಥೆಯ ಡ್ರೈವ್-ಥ್ರೂ ಲೇನ್‌ಗಳನ್ನು (ಕಾರಿನೊಳಗೆಯೇ ಆಹಾರ ವಿತರಣೆ) ಸ್ವಯಂಚಾಲಿತಗೊಳಿಸಲು ಸಹಾಯ ಮಾಡಿತು. ಸೂಪರ್ ಕಂಪ್ಯೂಟರ್ ಡೀಪ್ ಬ್ಲೂ ಆವಿಷ್ಕಾರಕ್ಕೂ ಐಬಿಎಮ್ ಕಾರಣೀಕರ್ತ ಎಂದೆನಿಸಿದೆ.
ಇದನ್ನೂ ಓದಿ: WhatsApp Business: ಇನ್ಮುಂದೆ ವಾಟ್ಸಾಪ್ನಲ್ಲೇ ಮೆಟ್ರೋ ಡಿಜಿಟಲ್ ಸೇವೆ! ಇಲ್ಲಿದೆ ಸಂಪೂರ್ಣ ಮಾಹಿತಿ
ಜನರನ್ನು ಉತ್ತೇಜಿಸಲು, ಜನರನ್ನು ನೇಮಿಸಿಕೊಳ್ಳಲು, ಜನರನ್ನು ಸ್ಥಳಾಂತರಿಸಲು ಅಗತ್ಯವಿರುವ 90% ಡೇಟಾ ಸಂಸ್ಕರಣೆಯನ್ನು ತಂತ್ರಜ್ಞಾನ ಮಾಡಬಹುದಾಗಿದ್ದರೂ ಅಂತಿಮವಾಗಿ ಕೆಲವೊಂದು ತೀರ್ಮಾನಗಳನ್ನು ನಡೆಸುವುದು ಮಾನವರ ಕೈಯಲ್ಲಿಯೇ ಇವೆ ಎಂದು ತಿಳಿಸಿದ್ದಾರೆ. ಇದಲ್ಲದೆ, AI ಗ್ರಾಹಕ ಸೇವೆಗಳನ್ನು ಸಹ ಸ್ವಾಧೀನಪಡಿಸಿಕೊಳ್ಳಬಹುದು ಎಂಬುದು ಕೃಷ್ಣ ಅಭಿಮತವಾಗಿದೆ.
ವೈಟ್ ಕಾಲರ್ ಹುದ್ದೆಗಳಿಗೆ ಸಂಚಕಾರ ಎದುರಾಗಲಿದೆಯೇ?
2013 ರ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಅಧ್ಯಯನವು ಮುಂದಿನ 20 ವರ್ಷಗಳಲ್ಲಿ 47% US ಉದ್ಯೋಗಗಳನ್ನು AI ಸ್ವಾಧೀನಪಡಿಸಿಕೊಳ್ಳಲಿದೆ ಎಂದು ತಿಳಿಸಿದೆ.
ಚಾಟ್‌ಜಿಪಿಟಿಯಂತಹ ಉದಯೋನ್ಮುಖ AI ತಂತ್ರಜ್ಞಾನಗಳು ವೈಟ್ ಕಾಲರ್ ಹುದ್ದೆಗಳ ಜಾಗದಲ್ಲಿ (ಕಚೇರಿಯಲ್ಲಿ ಕೆಲಸ ಮಾಡುವವರು) ಪ್ರಾಬಲ್ಯ ಸ್ಥಾಪಿಸಬಹುದು ಎಂಬ ಅಭಿಮತ ಕೂಡ ಮಾರುಕಟ್ಟೆ ತಜ್ಞರಿಂದ ಲಭ್ಯವಾಗಿದೆ.
ಕೋಡಿಂಗ್ ಮತ್ತು ಕಂಪ್ಯೂಟರ್ ಪ್ರೋಗ್ರಾಮಿಂಗ್‌ಗಳು ಬೇಡಿಕೆಯಲ್ಲಿರುವ ಕೌಶಲ್ಯಗಳಾಗಿವೆ, ಆದರೆ ಮುಂದಿನ ದಿನಗಳಲ್ಲಿ ಚಾಟ್‌ಜಿಪಿಟಿ (ChatGPT) ಮತ್ತು ಅಂತಹುದೇ AI ಪರಿಕರಗಳು ಈ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಲಿವೆ.
ಮಾನವರಿಗಿಂತ ವೇಗವಾಗಿ ಕಾರ್ಯನಿರ್ವಹಿಸಬಲ್ಲ ಚಾಟ್‌ಜಿಪಿಟಿ
ಸಾಫ್ಟ್‌ವೇರ್ ಡೆವಲಪರ್‌ಗಳು, ವೆಬ್ ಡೆವಲಪರ್‌ಗಳು, ಕಂಪ್ಯೂಟರ್ ಪ್ರೋಗ್ರಾಮರ್‌ಗಳು, ಕೋಡರ್‌ಗಳು ಮತ್ತು ಡೇಟಾ ವಿಜ್ಞಾನಿಗಳಂತಹ ಟೆಕ್ ಉದ್ಯೋಗಗಳು AI ತಂತ್ರಜ್ಞಾನಗಳನ್ನು ಅವಲಂಬಿಸಲಿವೆ ಎಂಬುದು ಟೆಕ್ ವಿಶ್ಲೇಷಕರ ಅಭಿಮತವಾಗಿದೆ. ಚಾಟ್‌ಜಿಪಿಟಿಯಂತಹ ಸುಧಾರಿತ ತಂತ್ರಜ್ಞಾನಗಳು ಮಾನವರಿಗಿಂತ ವೇಗವಾಗಿ ಕೋಡ್ ಅನ್ನು ಉತ್ಪಾದಿಸಬಹುದು. ಇದರಿಂದ ಕಡಿಮೆ ಉದ್ಯೋಗಿಗಳ ಮೂಲಕ ಕೆಲಸವನ್ನು ಸಾಧಿಸಬಹುದು ಎಂದು ಕೃಷ್ಣ ವಿವರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ