ಒಳ್ಳೆಯ ಉದ್ಯೋಗ (Job) ಹಾಗೂ ಉತ್ತಮ ಸಂಪಾದನೆ ಸಾಮಾನ್ಯವಾಗಿ ಎಲ್ಲರೂ ಬಯಸುವಂತಹ ಜೀವನ ಶೈಲಿಯಾಗಿದೆ. ವಿದ್ಯಾವಂತರಾಗಿ (Educate) ಉತ್ತಮ ಉದ್ಯೋಗ ಗಿಟ್ಟಿಸಿಕೊಂಡು ಜೀವನದಲ್ಲಿ ಸೆಟಲ್ ಆಗಬೇಕೆಂದೇ ಎಷ್ಟೋ ಜನರು ಹಗಲಿರುಳು ಕಷ್ಟಪಡುತ್ತಾರೆ. ಇದರ ನಡುವೆ ನಿರುದ್ಯೋಗ (Unemployment) ಲೇ-ಆಫ್‌ಗಳಂತಹ (Layoffs) ಸಮಸ್ಯೆಯಲ್ಲಿ ಸಿಲುಕಿಕೊಂಡು ಪಾಡು ಪಡುವ ಹೆಣಗಾಟ ಕೂಡ ಉದ್ಯೋಗಿಗಳ ಪಾಲಿಗೆ ಕಟ್ಟಿಟ್ಟ ಬುತ್ತಿಯಾಗಿದೆ. ಕೋವಿಡ್ ನಂತರದಲ್ಲಿ ಉದ್ಯೋಗ ಅವಕಾಶಗಳಲ್ಲಿ ಹೆಚ್ಚಿನ ಬದಲಾವಣೆಗಳಾಗಿದ್ದು, ಉತ್ತಮ ಉದ್ಯೋಗ ಗಿಟ್ಟಿಸಲು ಸಂದರ್ಶನಕ್ಕೆ (Interview) ಉತ್ತಮವಾಗಿ ತಯಾರಿಗೊಳ್ಳುವುದರ ಜೊತೆಗೆ ಅಭ್ಯರ್ಥಿ ಕೂಡ ಕ್ರಿಯಾತ್ಮಕರಾಗಿರಬೇಕಾಗುತ್ತದೆ.
ಸಂದರ್ಶಕರ ಪ್ರಶ್ನೆಗೆ ಸರಿಯಾಗಿ ಉತ್ತರಿಸಿದರೂ ನಿಮ್ಮಲ್ಲಿರುವ ಧೈರ್ಯ, ಆತ್ಮವಿಶ್ವಾಸ, ಕ್ರಿಯಾತ್ಮಕತೆ, ಮಾತಿನ ಧಾಟಿ ಕೂಡ ಮುಖ್ಯವಾಗಿರುತ್ತದೆ. ಹಾಗಿದ್ದರೆ ಸಂದರ್ಶನಕ್ಕೆ ಹೇಗೆ ಹಾಜರಾಗಬೇಕು ಎಂಬುದನ್ನು ತಜ್ಞರು ತಿಳಿಸಿದ್ದು, ಅದರ ಬಗ್ಗೆ ಇಲ್ಲಿ ತಿಳಿದುಕೊಳ್ಳೋಣ
ಸಂಸ್ಥೆ ಮತ್ತು ಉದ್ಯೋಗದ ಹೆಚ್ಚು ಸಂಶೋಧನೆ ಅಗತ್ಯ
ನೀವು ಅರ್ಜಿ ಹಾಕುತ್ತಿರುವ ಹುದ್ದೆಯನ್ನು ಅನುಸರಿಸಿ ಆ ಹುದ್ದೆಯ ಬಗ್ಗೆ, ಸಂಸ್ಥೆಯ ಬಗ್ಗೆ ಸಂಶೋಧನೆ ನಡೆಸಬೇಕು ಎಂಬುದು ತಜ್ಞರ ಅನಿಸಿಕೆಯಾಗಿದೆ. ಅಭ್ಯರ್ಥಿಗಳು ಸಂಸ್ಥೆಯ ವೆಬ್‌ಸೈಟ್ ಅನ್ನು ಸಂಶೋಧಿಸಬೇಕು ಹಾಗೂ ಉದ್ಯೋಗದ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಬೇಕು ಎಂದು ತಿಳಿಸಿದ್ದಾರೆ.
ನೀವು ನಿಜವಾಗಿಯೂ ಏನನ್ನು ತಿಳಿದುಕೊಳ್ಳಲು ಬಯಸುತ್ತೀರಿ ಎಂಬುದನ್ನು ಸಂದರ್ಶಕರ ಬಳಿ ಕೇಳಲು ಹಿಂಜರಿಯದಿರಿ. ಈ ರೀತಿ ಮಾಡುವುದರಿಂದ ಉದ್ಯೋಗ ದೊರೆಯಲಾರದು ಎಂಬ ಅನಿಸಿಕೆ ಬೇಡ ಎಂದು ತಜ್ಞರು ಸಲಹೆ ನೀಡುತ್ತಾರೆ. ಉದ್ಯೋಗ ಸಂಬಂಧಿತ ಯಾವುದೇ ಪ್ರಶ್ನೆಗಳು ಹಾಗೂ ಕುತೂಹಲಗಳನ್ನು ನೀವು ಸಂದರ್ಶಕರ ಬಳಿ ಚರ್ಚಿಸಬಹುದಾಗಿದೆ.
ಸಂಬಳದ ಬಗ್ಗೆ ಕೇಳುವ ಪ್ರಶ್ನೆಗಳಿಗೂ ನಿಖರ ಉತ್ತರ ನಿಮ್ಮಲ್ಲಿರಲಿ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ನಿಮ್ಮ ಅಗತ್ಯತೆಗಳು ಹಾಗೂ ಖರ್ಚುವೆಚ್ಚಗಳ ಬಗ್ಗೆ ಕೂಡ ಸಂದರ್ಶನದಲ್ಲಿ ಚರ್ಚಿಸಬಹುದು.
ಸಂದರ್ಶನಕ್ಕೆ ಸಿದ್ಧರಾಗುವುದು ಹೇಗೆ? ಫೋನ್ ವರ್ಸಸ್ ವಿಡಿಯೋ
ಫೋನ್ ಮುಖಾಂತರ ಮಾಡುವ ಸಂದರ್ಶನ ಕೂಡ ಒಮ್ಮೊಮ್ಮೆ ಅತಿಮುಖ್ಯವಾಗಿರುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಫೋನ್ ಸಂಭಾಷಣೆಯನ್ನು ಸಾಮಾನ್ಯವಾಗಿ ಸಂಸ್ಥೆಯ ಎಚ್‌ಆರ್‌ಗಳು ನಡೆಸುತ್ತಾರೆ. ಈ ಹುದ್ದೆಗೆ ನೀವು ಅರ್ಹರೋ ಹೌದೇ ಅಲ್ಲವೇ ಎಂಬುದನ್ನು ನಿಮ್ಮ ಸಂಭಾಷಣೆಗಳ ಮೂಲಕ ಎಚ್‌ಆರ್‌ಗಳು ತಿಳಿದುಕೊಳ್ಳುತ್ತಾರೆ. ಹಾಗಾಗಿ ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವಾಗ ಜಾಗರೂಕರಾಗಿರಬೇಕು.
ಸೂಕ್ಷ್ಮ ಸಂದರ್ಶನ ಪ್ರಶ್ನೆಗಳಿಗೆ ಉತ್ತರಿಸುವುದು ಹೇಗೆ?
ಸಂದರ್ಶನದ ಸಮಯದಲ್ಲಿ ಕೆಲವೊಂದು ಸೂಕ್ಷ್ಮ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪ್ರಸ್ತುತ ಉದ್ಯೋಗವನ್ನು ಏಕೆ ತ್ಯಜಿಸುತ್ತಿದ್ದೀರಿ? ಈ ಹುದ್ದೆಗೆ ಅರ್ಜಿ ಹಾಕಲು ಕಾರಣವೇನು?
ಈ ಸಂದರ್ಭದಲ್ಲಿ ನೇರ ಹಾಗೂ ಪ್ರಾಮಾಣಿಕ ಉತ್ತರ ನೀಡಿ ಎಂದು ಅನುಭವಿಗಳು ಸೂಚಿಸುತ್ತಾರೆ. ಎರಡು ವರ್ಷಗಳ ವೃತ್ತಿಜೀವನದ ವಿರಾಮದ ನಂತರ ಉದ್ಯೋಗ ಪುನರ್ ಆರಂಭಿಸುತ್ತಿದ್ದೀರಿ ಎಂದಾದರೆ ಅದನ್ನು ತಿಳಿಸಿ ಎಂದು ಸೂಚಿಸುತ್ತಾರೆ.
ಜೊತೆಗೆ ಯಾವುದೇ ಕಾರಣಕ್ಕೂ ನಿಮ್ಮ ಹಳೆಯ ಸಂಸ್ಥೆ ಅಥವಾ ಉದ್ಯೋಗದ ಬಗ್ಗೆ ಕೆಟ್ಟದಾಗಿ ಮಾತನಾಡಲು ಹೋಗಬಾರದು ಎಂದು ತಜ್ಞರು ತಿಳಿಸಿದ್ದಾರೆ.
ಟಿಪ್ಪಣಿ ಮಾಡಿಟ್ಟುಕೊಳ್ಳಿ
ಸಂದರ್ಶನದಲ್ಲಿ ಅಭ್ಯರ್ಥಿಯು ಟಿಪ್ಪಣಿಗಳನ್ನು ತೆಗೆದುಕೊಳ್ಳುವುದು ಸೂಕ್ತ ಎಂಬುದು ಪರಿಣಿತರ ಅಭಿಪ್ರಾಯವಾಗಿದೆ. ಸಂದರ್ಶಕರು ಹಾಗೂ ಅಭ್ಯರ್ಥಿಗಳ ನಡುವಿನ ಚರ್ಚೆಗಳನ್ನು ನೋಟ್ ಮಾಡುವುದು ಹಾಗೂ ಅವರು ಕೇಳಿದ ಪ್ರಶ್ನೆಗಳು ಹಾಗೂ ನೀವು ನೀಡಿದ ಉತ್ತರವನ್ನು ಟಿಪ್ಪಣಿ ಮಾಡಿಟ್ಟುಕೊಳ್ಳುವುದು ಒಳ್ಳೆಯ ಅಭ್ಯಾಸವಾಗಿದೆ ಎಂದು ಪರಿಣಿತರು ತಿಳಿಸುತ್ತಾರೆ.
ನೀವು ಸಾಕಷ್ಟು ಸಂದರ್ಶನಗಳಲ್ಲಿ ಭಾಗವಹಿಸಿದ್ದರೂ ನಿಮಗೆ ಉದ್ಯೋಗ ಸಿಗದಿದ್ದರೆ, ನೀವು ಉದ್ಯೋಗದಾತರನ್ನು ಆಕರ್ಷಿಸುವಲ್ಲಿ ವಿಫಲರಾಗಿದ್ದೀರಿ ಎಂದರ್ಥ. ಅವರಿಗೆ ನಿಮ್ಮ ಬಗ್ಗೆ ಸೂಕ್ತ ಮಾಹಿತಿ ಲಭ್ಯವಾಗಿಲ್ಲ ಎಂದರ್ಥ. ಹಾಗಾಗಿ ಸಂದರ್ಶನದಲ್ಲಿ ಅಭ್ಯರ್ಥಿಗಳು ನಿರ್ದಿಷ್ಟವಾಗಿರುವುದು ಮತ್ತು ವ್ಯಕ್ತಿನಿಷ್ಠವಾಗಿರುವುದು ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ