ಯಾವುದೇ ಕೆಲಸಕ್ಕಾಗಿ (Job) ನಡೆಯುವ ಯಾವುದೇ ಇಂಟರ್ವ್ಯೂ (Interview) ಇರಲಿ, ಎಷ್ಟೇ ತಯಾರಿ ನಡೆಸಿದ್ದರೂ ಕೂಡ ಈ ಪರಿಸ್ಥಿತಿ ಎದುರಾಗುತ್ತೆ. ಸಂದರ್ಶನದಲ್ಲಿ ನಿಮ್ಮ ಮುಂದೆ ಕುಳಿತಿರುವ ವ್ಯಕ್ತಿ ಕೇಳುವ ಎಲ್ಲಾ ಪ್ರಶ್ನೆಗಳಿಗೆ (Interview Questions) ಸೂಕ್ತ ಉತ್ತರ ನೀಡಲು ಸಾಧ್ಯವಾಗುವುದಿಲ್ಲ. ಅಭ್ಯರ್ಥಿಗೆ ಎಲ್ಲಾ ರೀತಿಯ ಪ್ರಶ್ನೆಗಳಿಗೆ ಉತ್ತರ ಗೊತ್ತಿರಬೇಕು ಅಂತೇನು ಇಲ್ಲ. ಪ್ರತಿಯೊಬ್ಬ ಉದ್ಯೋಗಿಯೂ ಔಪಚಾರಿಕವಾಗಿಯೋ, ಅನೌಪಚಾರಿಕವಾಗಿಯೋ ಕೆಲಸ ಸಿಗುವ ಮುನ್ನ ಸಂದರ್ಶನ ನೀಡಿರುತ್ತಾರೆ. ಕೆಲಸ ನೀಡಬೇಕೇ ಬೇಡವೇ ಎಂದು ನೀವು ನೀಡುವ ಸಂದರ್ಶನವೇ ನಿರ್ಧರಿಸುತ್ತದೆ.
ಎಲ್ಲಾ ಪ್ರಶ್ನೆಗಳಿಗೂ ಉತ್ತರ ಗೊತ್ತಿರಬೇಕು ಅಂತೇನು ಇಲ್ಲ
ಜಾಬ್ ಇಂಟರ್ ವ್ಯೂನಲ್ಲಿ ಕೇಳುವ ಎಲ್ಲಾ ಪ್ರಶ್ನೆಗಳಿಗೂ ನಿಮಗೆ ಉತ್ತರ ತಿಳಿದಿರಬೇಕು ಅಂತಿಲ್ಲ. ಉತ್ತರ ಗೊತ್ತಿಲ್ಲದ ಮಾತ್ರಕ್ಕೆ ತಡಬಡಾಗಿಸಿ ಸಂದರ್ಶನಕರ ಮುಂದೆ ಪೆಚ್ಚು ಮೊರೆ ಹಾಕಿ ನಿಲ್ಲುವ ಅಗತ್ಯವಿಲ್ಲ. ನೇರವಾಗಿ ಎರಡೇ ಪದಗಳಲ್ಲಿ ನಂಗೆ ಇದರ ಬಗ್ಗೆ ಗೊತ್ತಿಲ್ಲ ಎನ್ನುವುದು ಸೂಕ್ತಯಲ್ಲ. ನಿಮಗೆ ಗೊತ್ತಿಲ್ಲದ್ದನ್ನು ಗೊತ್ತಿಲ್ಲ ಎಂದು ಸರಿಯಾದ ರೀತಿಯಲ್ಲಿ ಹೇಳುವುದು ಹೇಗೆ ಎಂದು ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಗಳು ತಿಳಿದಿರಬೇಕು.
ಉತ್ತರ ಗೊತ್ತಿಲ್ಲದಿದ್ದರೆ ಏನು ಮಾಡಬೇಕು?
ಸಂದರ್ಶಕರು ಕೇಳುವ ಪ್ರಶ್ನೆ ಇಲ್ಲವೇ ಕೌಶಲ್ಯದ ಬಗ್ಗೆ ನಿಮಗೆ ತಿಳಿದಿರದಿದ್ದರೆ, ಸಮಾಧಾನವಾಗಿ ಪೂರ್ತಿ ಪ್ರಶ್ನೆಯನ್ನು ಕೇಳಿಸಿಕೊಳ್ಳಿ. ಅವರು ಕೇಳುತ್ತಿರುವ ಪ್ರಶ್ನೆ ನಿಮ್ಮ ಕೆಲಸಕ್ಕೆ ಸಂಬಂಧಪಡದಿದ್ದರೆ, ಆ ವಿಷಯ ನನ್ನ ಕೆಲಸದ ವ್ಯಾಪ್ತಿಗೆ ಬರುವುದಿಲ್ಲ. ಹೀಗಾಗಿ ಆ ಬಗ್ಗೆ ಹೆಚ್ಚಿನದ್ದನ್ನು ಇನ್ನೂ ತಿಳಿದುಕೊಳ್ಳಲು ಸಾಧ್ಯವಾಗಿಲ್ಲ ಎಂದು ಉತ್ತರಿಸಿ. ಸಂದರ್ಶಕರು ಕೇಳುವ ಪ್ರಶ್ನೆ ನಿಮ್ಮ ಕೆಲಸಕ್ಕೆ ನೇರವಾಗಿ ಸಂಬಂಧಿಸಿದ್ದಾಗಿದ್ದರೆ, ನಿಮಗೆ ಆ ಬಗ್ಗೆ ತಿಳಿಯದಿದ್ದರೆ. ಪ್ರಶ್ನೆಯನ್ನು ಪೂರ್ತಿಯ ಕೇಳಿಸಿಕೊಂಡ ಬಳಿಕ, ಆ ಬಗ್ಗೆ ಪ್ರಸ್ತಾಪಿಸಿದ್ದಕ್ಕೆ ಧನ್ಯವಾದಗಳು. ಆ ಬಗ್ಗೆ ನಾನು ಕಲಿಯಲಿ ಆಸಕ್ತನಾಗಿದ್ದೇನೆ ಎನ್ನಬೇಕು.
ಈ ರೀತಿ ಉತ್ತರಿಸುವುದು ಸೂಕ್ತ
ನೀವು ನನಗೆ ಕೆಲಸ ನೀಡಿದರೆ ಆ ಕೌಶಲ್ಯವನ್ನು ಸರಿಯಾದ ತರಬೇತಿ ಮೂಲಕ ಕಲಿಯುವೆ. ನಾನು ಕಲಿಕೆಯಲ್ಲಿ ಮುಂದಿದ್ದೇನೆ. ಹೊಸದನ್ನು ಕಲಿಯುವುದು ನನಗೆ ಯಾವಾಗಲೂ ಆಸಕ್ತಿಕರ ಎಂದು ಹೇಳಿ. ಈ ರೀತಿ ಗೊತ್ತಿಲ್ಲದ್ದನ್ನು ಪ್ರಮಾಣಿಕವಾಗಿ ಒಪ್ಪಿಕೊಂಡು, ಸಂಸ್ಥೆ ಬಯಸುವಂತೆ ಆ ಬಗ್ಗೆ ಕಲಿತುಕೊಳ್ಳುವೆ ಎಂಬ ಭರವಸೆಯನ್ನು ನೀಡಿದರೆ, ಸಂದರ್ಶಕರಿಗೆ ನಿಮ್ಮ ಮೇಲೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.
ಇದನ್ನೂ ಓದಿ: Interview Tips-17: ಕೆಲಸ ಬಿಟ್ಟಾಗ ಮಾಡುವ ಎಕ್ಸಿಟ್ ಇಂಟರ್ವ್ಯೂನಲ್ಲಿ ಬಾಸ್ ವಿರುದ್ಧ ದೂರ ಸಲ್ಲಿಸಬಹುದೇ?
ಸುಳ್ಳು ಹೇಳಬೇಡಿ
ಕೆಲಸ ಸಿಗಲೇಬೇಕು ಎಂದು ಗೊತ್ತಿಲ್ಲದ ಬಗ್ಗೆ ಗೊತ್ತಿದೆ ಎಂದು ಹೇಳುವುದು ಅಪಾಯಕಾರಿ. ಆಗ ಸಂದರ್ಶಕರು ನಿಮಗೆ ಗೊತ್ತಿಲ್ಲದ ವಿಷಯದ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಕೇಳಿ ಬಿಡಬಹುದು. ಆಗ ನೀವು ಫಜೀತಿಗೆ ಸಿಲುಕಿಕೊಳ್ಳುತ್ತೀರಿ ಹುಷಾರು. ಇನ್ನು ಕೆಲವರು ರೆಸ್ಯೂಮ್ ಸ್ಟ್ರಾಂಗ್ ಆಗಿ ಕಾಣಬೇಕು ಎಂದು ಗೊತ್ತಿಲ್ಲದ ಕೌಶಲ್ಯಗಳನ್ನು ನಮೂದಿಸುತ್ತಾರೆ. ಟ್ರೈನಿಂಗ್ ಆಗಿದೆ, ಕೋರ್ಸ್ ಮಾಡಿದ್ದೇನೆ ಎಂದೆಲ್ಲಾ ರೆಸ್ಯೂಮ್ ನಲ್ಲಿ ಸುಳ್ಳು ಹೇಳಿರುತ್ತಾರೆ. ಇದರಿಂದ ಭವಿಷ್ಯದಲ್ಲಿ ಸಮಸ್ಯೆ ಎದುರಾಗುತ್ತೆ.
ಸುಳ್ಳು ಅನುಭವ ಪತ್ರ ಕೊಡಬೇಡಿ
ಇತ್ತೀಚೆಗೆ ಕೆಲ ಟೆಕ್ ಕಂಪನಿಗಳು ಸುಳ್ಳು ಅನುಭವ ಪತ್ರ ನೀಡಿ ಉದ್ಯೋಗಕ್ಕೆ ಸೇರಿದ ಆಧಾರದ ಮೇಲೆ ಉದ್ಯೋಗಿಗಳನ್ನು ಕೆಲಸದಿಂದ ವಜಾ ಮಾಡಿದ್ದವು. ಹಾಗಾಗಿ ಯಾವುದೇ ಕಾರಣಕ್ಕೂ ಸುಳ್ಳು ಪ್ರಮಾಣ ಪತ್ರವನ್ನು ನೀಡಬೇಡಿ. ಇದು ಶಿಕ್ಷಾರ್ಹವಾದ ಅಪರಾಧ. ಗೊತ್ತಿಲ್ಲದೇ ಇರುವುದಕ್ಕೆ ಗೊತ್ತಿಲ್ಲ ಎಂದು ಹೇಳುವುದು, ಕಲಿಯುತ್ತೇನೆ ಎಂದು ಉತ್ತರಿಸುವುದು ನಿಜಕ್ಕೂ ಸುರಕ್ಷಿತ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ