ನೀವು ಈಗ ಇರುವ ಕೆಲಸ (Job) ಬಿಟ್ಟು ಮತ್ತೊಂದು ಕೆಲಸಕ್ಕೆ ಪ್ರಯತ್ನಿಸುತ್ತಿದ್ದರೆ, ಸ್ಯಾಲರಿ ಹೈಕ್ (Salary Hike) ಪ್ರಮುಖವಾದ ವಿಷಯವಾಗಿರುತ್ತದೆ. ಅದರಲ್ಲೂ ಹೊಸ ಕೆಲಸಕ್ಕೆ ಸಂಬಳ ಕೇಳುವಾಗ ಅಲಿಖಿತ ನಿಯಮವೊಂದಿದೆ. ಅದುವೇ ಈಗ ಇರುವ ಸಂಬಳದ ಮೇಲೆ ಶೇ.30ರಷ್ಟು ಹೈಕ್ ಮಾತ್ರನೇ ಹೊಸ ಕಂಪನಿಯವರು ಕೊಡ್ತಾರೆ ಅಂತ. ಹೌದು, ನಾವು ಬಹುತೇಕರು ಕೇಳಿಸಿಕೊಂಡಿರುವ ಮಾತಿದು. ಹೆಚ್ಚಿನ ಸಂಬಳ ಕೇಳಿದ್ರೂ ಕಂಪನಿಗಳು ಹಿಂದಿನ ಸಂಬಳದ ಮೇಲೆ ಶೇ.30ರಷ್ಟು ಹೈಕ್ ಮಾತ್ರ ಕೊಡ್ತಾರೆ ಎಂದು ಭಾವಿಸುತ್ತೇವೆ. ವಾಸ್ತವದಲ್ಲಿ ಇದು ಸತ್ಯವಲ್ಲ. ಇದನ್ನೇ ನಂಬಿಕೊಂಡು ನಿಮ್ಮ ಮೌಲ್ಯವನ್ನು ನೀವೇ ಕಡಿಮೆ ಮಾಡಿಕೊಳ್ಳಬೇಡಿ.
ಶೇ.30 ಎಂಬ ತಂತ್ರದಿಂದ ಬಚಾವ್ ಆಗಿ
ಶೇ.30ರಷ್ಟೇ ಹೈಕ್ ಕೊಡ್ತೀವಿ ಎನ್ನೋದು ಕಂಪನಿಗಳು/ HRಗಳ ತಂತ್ರ. ಇದನ್ನೇ ಪಾಲಿಸಬೇಕು ಎಂಬ ನಿಯಮವೇನು ಇಲ್ಲ. ಒಂದಷ್ಟು ಸೂಕ್ತವಾದ ಕಾರಣಗಳು, ಸಂಬಳದ ಬಗ್ಗೆ ಮಾತನಾಡುವ ಕಲೆ ಮೂಲಕ ನೀವು ಈ 30% ಹಳ್ಳದಿಂದ ಬಚಾವ್ ಆಗಬಹುದು. ಸ್ಯಾಲರಿ ನೆಗೋಷಿಯೇಷನ್ ಕಲೆಯನ್ನು ಪ್ರತಿಯೊಬ್ಬರು ಕಲಿತಿರಲೇಬೇಕು. ಶೇ.30ರಷ್ಟೇ ಹೈಕ್ ಬದಲು ನೀವು ನಿಮ್ಮ ಅರ್ಹತೆಗೆ ತಕ್ಕಂತೆ 50, 70 ಮಾತ್ರವಲ್ಲ ಕೆಲವೊಮ್ಮೆ ಶೇ.100ರಷ್ಟು ಹೆಚ್ಚು ಸಂಬಳವನ್ನು ಪಡೆಯಬಹುದು.
ನೀವು ಈ ಕಾರಣಗಳನ್ನು ನೀಡಬಹುದು
1) ಶೇ.30ರಷ್ಟು ಸ್ಯಾಲರಿ ಹೈಕ್ ಸೂಕ್ತವೆಸುವುದಿಲ್ಲ. ನಾನು ಹಿಂದಿನ ಕೆಲಸಕ್ಕೆ ಸೇರಿದಾಗ ಜಾಬ್ ಮಾರ್ಕೆಟ್ ಮೌಲ್ಯ ಬೇರೆಯದ್ದೇ ಆಗಿತ್ತು. ಈಗ ಅದರ ಮೇಲೆಯ ಹೈಕ್ ಕೊಡುವುದು ಸರಿ ಬರುವುದಿಲ್ಲ.
2) ಉದ್ಯೋಗಿಯಾಗಿ ನಾನು ಈಗ ಹೆಚ್ಚಿನ ಕೌಶಲ್ಯಗಳನ್ನು ಕಲಿತಿದ್ದೇನೆ. ಈಗ ನಾನು ಅನುಭವಸ್ಥ ಉದ್ಯೋಗಿ ಎಂಬುವುದನ್ನು ಮನವರಿಕೆ ಮಾಡಿಕೊಡಬಹುದು.
3) ನಾನು ಹಿಂದಿನ ಕೆಲಸಕ್ಕೆ ಸೇರಿದಾಗ ವರ್ಕಿಂಗ್ ಪೀಲ್ಡ್ ಬದಲಿಸಿದ್ದೆ. ಹೀಗಾಗಿ ನನಗೆ ಬೇಸಿಕ್ ಸ್ಯಾಲರಿ ಸಿಕ್ಕಿತ್ತು. ಈ ಹಿನ್ನೆಲೆ ಈಗ ನಾನು ಹೆಚ್ಚಿನ ಸಂಬಳಕ್ಕೆ ಅರ್ಹನು ಎಂದು ಹೇಳಬಹುದು.
4) ಕೋವಿಡ್ ಸಮಯದಲ್ಲಿ ನಾನು ಹಿಂದಿನ ಕೆಲಸಕ್ಕೆ ಸೇರಿದ್ದೆ. ಆಗ ಜಾಬ್ ಮಾರ್ಕೆಟ್ ಮೌಲ್ಯ ಕಡಿಮೆ ಇತ್ತು. ಹೀಗಾಗಿ ಹೆಚ್ಚಿನ ಸಂಬಳ ಸಿಕ್ಕಿರಲಿಲ್ಲ. ಈಗ ಆ ಸಂಬಳದ ಮೇಲೆ ಹೈಕ್ ಕೊಡುವುದು ಸೂಕ್ತವಲ್ಲ ಎಂದು ಹೇಳಬಹುದು.
5) ನಾನು ನಿಮ್ಮ ಕಂಪನಿಯಲ್ಲಿ ನಿರ್ವಹಿಸಲಿರುವ ಹುದ್ದೆಗೆ ಬೇರೆ ಕಂಪನಿಗಳಲ್ಲಿ ಹೆಚ್ಚಿನ ಮೌಲ್ಯ ಇದೆ. ಹೀಗಾಗಿ ನೀವು ಅದನ್ನು ಪರಿಗಣನೆ ತೆಗೆದುಕೊಂಡು ಶೇ.30ಕ್ಕಿಂತ ಹೆಚ್ಚು ಸಂಬಳ ನೀಡಬೇಕು ಎಂದು ಹೇಳಬಹುದು.
ಈ ಕಾರಣಗಳನ್ನು ನೀಡಬೇಡಿ
1) ವೈಯಕ್ತಿಕ ಕಾರಣಗಳನ್ನು ಹೇಳಬಾರದು. ಸಾಲ ಇದೆ, ಕುಟುಂಬದ ನಿರ್ವಹಣೆಗಾಗಿ ಹೆಚ್ಚಿನ ಸಂಬಳ ಬೇಕು ಎಂದು ಕೇಳುವುದು ಅಷ್ಟೇನು ಸೂಕ್ತವಲ್ಲ.
2) ಸಂಬಳ ಹೈಕ್ಗಾಗೇ ನಾನು ಕೆಲಸ ಬದಲಿಸುತ್ತಿದ್ದೇನೆ. ಅದೇ ಸಿಗದಿದ್ದರೆ ಹೇಗೆ ಎಂದು ಸಹ ಕೇಳಬಾರದು.
3) ನಿಮ್ಮ ಕಂಪನಿಯಲ್ಲಿ ನಾನು ಚೆನ್ನಾಗಿ ಕೆಲಸ ಮಾಡುತ್ತೇನೆ, ಅದಕ್ಕಾಗಿ ಹೆಚ್ಚಿನ ಸಂಬಳ ಕೊಡಿ ಅಂತ ಹೇಳಬಾರದು.
ಮೇಲಿನ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂಬಳದ ಬಗ್ಗೆ ಮಾತನಾಡಿ. ಕೆಲಸಗಾರರಾಗಿ ನಿಮ್ಮ ಮೌಲ್ಯ ಶೇ.30ರ ಅಂತರದಲ್ಲೇ ಬೆಳೆಯಬೇಕು ಎಂಬ ನಿಯಮವಿಲ್ಲ. ನೀವು ಅದನ್ನು ಮೀರಿ ಹೆಚ್ಚಿನ ಸಂಬಳವನ್ನು ಪಡೆಯಬಹುದು ಎಂಬುವುದನ್ನು ಮರೆಯಬೇಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ