• ಹೋಂ
  • »
  • ನ್ಯೂಸ್
  • »
  • Jobs
  • »
  • Moonlighting Effect: ದುಡ್ಡಿನಾಸೆಗೆ ಎರಡೆರಡು ಕಡೆ ಕೆಲಸ ಮಾಡಿದವರ ಪಾಡು ಈಗ ಏನಾಗಿದೆ ನೋಡಿ!

Moonlighting Effect: ದುಡ್ಡಿನಾಸೆಗೆ ಎರಡೆರಡು ಕಡೆ ಕೆಲಸ ಮಾಡಿದವರ ಪಾಡು ಈಗ ಏನಾಗಿದೆ ನೋಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹೆಚ್ಚು ಹಣ ಗಳಿಸುವ ಆಸೆಯಿಂದ ಅನೇಕರು ತಮ್ಮ ಆರೋಗ್ಯ ಮತ್ತು ವೃತ್ತಿಜೀವನ ಎರಡಕ್ಕೂ ಅಪಾಯ ತೊಂದುಕೊಂಡಿದ್ದಾರೆ.

  • Share this:

ಮೊದಲೆಲ್ಲಾ ಜನರು ‘ಹಾಸಿಗೆ ಇದ್ದಷ್ಟು ಕಾಲು ಚಾಚು’ ಅನ್ನೋ ಗಾದೆಯನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು.  ತಮಗೆ ಬಂದ ಸಂಬಳದಲ್ಲಿ (Salary) ಮನೆ ನಡೆಸಿಕೊಂಡು, ತಿಂಗಳ ಕೊನೆಯಲ್ಲಿ ಮಿಕ್ಕಿದ್ದನ್ನು ಉಳಿತಾಯ (Savings) ಮಾಡಿ ನೆಮ್ಮದಿಯಿಂದ ಮತ್ತು ಆರೋಗ್ಯದಿಂದ ಇರುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಸಂಬಳ ನಿಧಾನವಾಗಿ ಜಾಸ್ತಿಯಾಗುತ್ತಿದ್ದರೆ, ಜೀವನ ನಡೆಸಲು ಬೇಕಾಗುವ ಅವಶ್ಯಕ ವಸ್ತುಗಳ ಬೆಲೆ ಮಾತ್ರ ಪೆಟ್ರೋಲ್ ಪಂಪ್ ನಲ್ಲಿರುವ ಮೀಟರ್ ರೀತಿಯಲ್ಲಿ ವೇಗವಾಗಿ ದಿನೇ ದಿನೇ ಜಾಸ್ತಿಯಾಗುತ್ತಲೇ ಇವೆ.


ಇದೇ ಕಾರಣಕ್ಕಾಗಿಯೇ ಕೆಲವರು ಬೆಳಗ್ಗೆಯಿಂದ ಸಂಜೆಯವರೆಗೆ ಕೆಲಸ ಮಾಡಿ ಬಂದು ಮನೆಯಲ್ಲಿ ಮಕ್ಕಳಿಗೆ ಟ್ಯೂಷನ್ ಹೇಳುತ್ತಾ, ಮಹಿಳೆಯರು ಸೀರೆಗೆ ಫಾಲ್ ಹಚ್ಚುತ್ತಾ, ರವಿಕೆ ಹೊಲೆಯುತ್ತಾ ಜೀವನಕ್ಕೆ ಎರಡನೇ ಆದಾಯ ಇರಲಿ ಅಂತ ದುಡಿಯಲು ಶುರು ಮಾಡಿದರು. ಈ ಕೆಲಸಗಳು ಆರೋಗ್ಯವನ್ನು ಹಾಳು ಮಾಡುವುದಿಲ್ಲ ಅನ್ನೋದು ತೃಪ್ತಿಕರವಾದ ವಿಷಯ.


ಕೋವಿಡ್-19 ಸಾಂಕ್ರಾಮಿಕ ರೋಗದ ನಂತರ ಶುರುವಾಯ್ತು ಈ ಮೂನ್‌ಲೈಟಿಂಗ್


ಆದರೆ ಈ ಕೋವಿಡ್-19 ಸಾಂಕ್ರಾಮಿಕ ರೋಗದ ಹಾವಳಿ ಶುರುವಾಗಿ ಮನೆಯಿಂದ ಹೊರ ಹೋಗದೆ ಮನೆಯಲ್ಲಿಯೇ ಕುಳಿತು ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಗಳಲ್ಲಿ ಯಾವಾಗ ಕೆಲಸ ಮಾಡಲು ಜನರು ಶುರು ಮಾಡಿದರು ನೋಡಿ, ಅಲ್ಲಿಗೆ ಅವರಲ್ಲಿ ಇಡೀ ದಿನ ಕೂತು ಒಂದೇ ಕೆಲಸ ಮಾಡೋದೆ, ಇನ್ನೊಂದು ಕೆಲಸ ಮಾಡಿದರೆ ಯಾರಿಗೆ ಗೊತ್ತಾಗುತ್ತೆ. ಅಲ್ಲದೆ ಕೋವಿಡ್ ನಿಂದಾಗಿ ಕೆಲಸಗಳು ಮತ್ತು ಸಂಬಳ ಎರಡು ಕಡಿಮೆಯಾಗಿವೆ ಅಂತ ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡಲು ಶುರು ಮಾಡಿದರು.


ಹೀಗೆ ಒಟ್ಟಿಗೆ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುವುದನ್ನು ಟೆಕ್ನಿಕಲ್ ಭಾಷೆಯಲ್ಲಿ ‘ಮೂನ್‌ಲೈಟಿಂಗ್’ ಅಂತ ಕರೆಯುವುದಕ್ಕೆ ಶುರು ಮಾಡಿದರು. ಈ ಮೂನ್‌ಲೈಟಿಂಗ್ ಈ ಕಳೆದ ಮೂರು ವರ್ಷಗಳಿಂದ ತುಂಬಾನೇ ಹೆಚ್ಚಾಗಿದೆ. ಹೆಚ್ಚುತ್ತಿರುವ ಜೀವನ ವೆಚ್ಚಗಳು ಮತ್ತು ಅಗತ್ಯಗಳನ್ನು ಪೂರೈಸುವ ಅಗತ್ಯದೊಂದಿಗೆ, ಅನೇಕರು ತಮ್ಮ ಆದಾಯಕ್ಕೆ ಪೂರಕವಾಗಿ ಹೆಚ್ಚುವರಿ ಕೆಲಸವನ್ನು ಆರಿಸಿಕೊಳ್ಳುತ್ತಿದ್ದಾರೆ. ಆದರೆ ಹಣ ಗಳಿಸುವ ಚಿಂತೆಯಲ್ಲಿ ಅನೇಕರು ತಮ್ಮ ಆರೋಗ್ಯ ಮತ್ತು ಅವರ ವೃತ್ತಿಜೀವನ ಎರಡಕ್ಕೂ ಅಪಾಯ ಮಾಡಿಕೊಳ್ಳುತ್ತಿದ್ದಾರೆ ಅಂತ ಅವರಿಗೆ ಅರ್ಥವಾಗುತ್ತಿಲ್ಲ.


ಏನಿದು ಮೂನ್‌ಲೈಟಿಂಗ್? ಇದರಿಂದ ಏನೆಲ್ಲಾ ಅಪಾಯಗಳಿವೆ ನೋಡಿ


ಇನ್ನೂ ವಿವರವಾಗಿ ಈ ಮೂನ್‌ಲೈಟಿಂಗ್ ಬಗ್ಗೆ ಹೇಳುವುದಾದರೆ, ಒಬ್ಬರ ಕಂಪನಿಯಲ್ಲಿ ಖಾಯಂ ಉದ್ಯೋಗಿಯಾಗಿ ಕೆಲಸ ಮಾಡುತ್ತಿರುವಾಗಲೇ ಇನ್ನೊಂದು ಕಂಪನಿಯಲ್ಲಿ ಅರೆಕಾಲಿಕ ಅಥವಾ ಅಲ್ಲಿಯೂ ಖಾಯಂ ಉದ್ಯೋಗಿಯಾಗಿ ಕೆಲಸ ಮಾಡುವುದು. ಕೋವಿಡ್ ಸಾಂಕ್ರಾಮಿಕ ರೋಗದ ನಂತರ, ರಿಮೋಟ್ ಕೆಲಸ ಮತ್ತು ಕಡಿಮೆ ಉದ್ಯೋಗ ಭದ್ರತೆಯಿಂದಾಗಿ ಈ ಅಭ್ಯಾಸವು ವೇಗವನ್ನು ಪಡೆಯಿತು.


ಪ್ರಾತಿನಿಧಿಕ ಚಿತ್ರ


ಅನೇಕ ಬಹುರಾಷ್ಟ್ರೀಯ ಕಂಪನಿಗಳು ಈ ವಿಷಯದ ಬಗ್ಗೆ ನೀತಿ ಆದೇಶಗಳನ್ನು ಅಂಗೀಕರಿಸಿವೆ ಮತ್ತು ಈ ಪ್ರಕ್ರಿಯೆಯಲ್ಲಿ ಕೆಲವು ಜನರು ತಮ್ಮ ಉದ್ಯೋಗವನ್ನು ಸಹ ಕಳೆದು ಕೊಂಡಿದ್ದಾರೆ. ಮೂನ್‌ಲೈಟಿಂಗ್ ಉದ್ಯೋಗಿಯ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ನಿಮ್ಮನ್ನು ಖಾಯಂ ಕೆಲಸಕ್ಕೆ ನೇಮಿಸಿಕೊಂಡವರು ಇದನ್ನು ನಿಮ್ಮ ಖಾಯಂ ಕೆಲಸಕ್ಕೆ ಬದ್ಧತೆಯ ಕೊರತೆ ಎಂದು ನೋಡಬಹುದು . ಕೆಲಸದ ಹೊರೆಯನ್ನು ನಿಭಾಯಿಸುವ ಉದ್ಯೋಗಿಯ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಬಹುದು.


ಇದಲ್ಲದೆ, ಎರಡೆರಡು ಕೆಲಸಗಳನ್ನು ಒಟ್ಟಿಗೆ ಮಾಡುವುದರಿಂದ ನಿಮ್ಮ ಮೊದಲ ಮತ್ತು ಖಾಯಂ ಕೆಲಸಕ್ಕೆ ಮೀಸಲಿಡುವ ಸಮಯ ಮತ್ತು ಶಕ್ತಿಯನ್ನು ಕಡಿಮೆ ಮಾಡಬಹುದು, ಇದರಿಂದಾಗಿ ನಿಮ್ಮ ಕೆಲಸದ ಗಡುವುಗಳನ್ನು ತಪ್ಪಿಸಿಕೊಳ್ಳಬಹುದು, ಕೆಲಸದ ಕ್ಷಮತೆ ಕಡಿಮೆಯಾಗುವುದು ಮತ್ತು ಸಹೋದ್ಯೋಗಿಗಳೊಂದಿಗಿನ ಸಂಬಂಧಗಳನ್ನು ಸಹ ಇದು ಹದಗೆಡಿಸುತ್ತದೆ.


ಇದನ್ನೂ ಓದಿ: Career Tips: ಕೆಲಸ ಮತ್ತು ಜೀವನವನ್ನು ಸರಿದೂಗಿಸಿಕೊಂಡು ಹೋಗಲು 7 ಸಲಹೆಗಳು; ಇದನ್ನು ಪಾಲಿಸಿದ್ರೆ ಟೆನ್ಷನ್ ಇರಲ್ಲ


ಅಲ್ಲದೆ ಈ ಮೂನ್‌ಲೈಟಿಂಗ್ ಉದ್ಯೋಗಿಯ ಮೇಲೆ ಕಾನೂನು ರೀತಿಯ ಪರಿಣಾಮಗಳನ್ನು ಸಹ ಬೀರಬಹುದು ಎಂಬುದು ಗಮನಿಸಬೇಕಾದ ಅಂಶವಾಗಿದೆ. ಎರಡನೇ ಕೆಲಸದ ಸ್ವರೂಪವನ್ನು ಅವಲಂಬಿಸಿ, ಉದ್ಯೋಗಿಯು ಹೆಚ್ಚುವರಿ ಪ್ರಮಾಣೀಕರಣಗಳು ಅಥವಾ ಪರವಾನಗಿಗಳನ್ನು ಪಡೆಯಬೇಕಾಗಬಹುದು. ಹಾಗೆ ಮಾಡಲು ಒಂದು ವೇಳೆ ಉದ್ಯೋಗಿಯು ವಿಫಲವಾದರೆ ದಂಡ, ಕಾನೂನು ಕ್ರಮವನ್ನು ಎದುರಿಸಬಹುದು.


ಮೂನ್‌ಲೈಟಿಂಗ್ ಉದ್ಯೋಗಿಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ..


ದೀರ್ಘಕಾಲದವರೆಗೆ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಮುಂದೆ ಕುಳಿತುಕೊಂಡು ಕೆಲಸ ಮಾಡುವುದರಿಂದ ಬಳಲಿಕೆ ಮತ್ತು ಬೆನ್ನು, ಕತ್ತು ಮತ್ತು ಕಣ್ಣು ನೋವು ಬರುತ್ತವೆ. ಇದು ಕೆಲಸದ ಉತ್ಪಾದಕತೆಯನ್ನು ಕಡಿಮೆ ಮಾಡುತ್ತದೆ, ಅಷ್ಟೇ ಅಲ್ಲದೆ ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಖಿನ್ನತೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದಲ್ಲದೆ, ಎರಡು ಕೆಲಸಗಳನ್ನು ಒಟ್ಟಿಗೆ ಮಾಡುವುದು ನಿದ್ರೆಯ ಕೊರತೆಗೂ ಸಹ ಕಾರಣವಾಗಬಹುದು, ಇದು ವ್ಯಕ್ತಿಯ ಅರಿವಿನ ಕಾರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ಮಾಡುತ್ತಿರುವ ಕೆಲಸಗಳ ಮೇಲೆ ಗಮನವನ್ನು ಕೇಂದ್ರೀಕರಿಸಲು ಕಷ್ಟವಾಗುತ್ತದೆ.


ಮೂನ್‌ಲೈಟಿಂಗ್ ಮಾಡುವ ಉದ್ಯೋಗಿಗಳು ಹೆಚ್ಚಾಗಿ ಮೆದುಳು ಮತ್ತು ಹೃದಯ ಸಂಬಂಧಿತ ಕಾಯಿಲೆಗಳಿಂದ ಬಳಲುತ್ತಿರುವ ಅನೇಕ ರೋಗಿಗಳಿಗೆ ಚಿಕಿತ್ಸೆ ನೀಡಿದ ಹೈದರಾಬಾದ್ ನ ವೈದ್ಯರು ಎಚ್ಚರಿಕೆಯ ಮಾತುಗಳನ್ನಾಡಿದ್ದಾರೆ ನೋಡಿ.


ದೇಶದ ಪ್ರಮುಖ ಐಟಿ ತಾಣವಾಗಿರುವ ಹೈದರಾಬಾದ್ ಲಕ್ಷಾಂತರ ತಂತ್ರಜ್ಞಾನ ವೃತ್ತಿಪರರಿಗೆ ನೆಲೆಯಾಗಿದೆ. ಒಂದಕ್ಕಿಂತ ಹೆಚ್ಚು ಕಂಪನಿಗಳಿಗೆ ಕೆಲಸ ಮಾಡುವ ಸಾವಿರಾರು ವೃತ್ತಿಪರರು ಇಲ್ಲಿ ಇದ್ದಾರೆ ಮತ್ತು ಕೋವಿಡ್-19 ಸಾಂಕ್ರಾಮಿಕ ರೋಗವು ಅಪ್ಪಳಿಸಿದಾಗ 2020 ರ ಪ್ರಾರಂಭದಿಂದ ಈ ಪ್ರವೃತ್ತಿ ದ್ವಿಗುಣಗೊಳ್ಳುತ್ತಿದೆ ಮತ್ತು ಮನೆಯಿಂದ ಕೆಲಸ ಮಾಡುವುದು ಸಹ ಸಾಮಾನ್ಯವಾಯಿತು.


ಈ‌ಗ ಹೈದರಾಬಾದ್ ನ ಆಸ್ಪತ್ರೆಗಳು ಹೀಗೆ ಎರಡೆರಡು ಕೆಲಸ ಮಾಡುವ ಉದ್ಯೋಗಿಗಳು ಅನೇಕ ಕಾಯಿಲೆಗಳಿಂದ ಬಳಲುತ್ತಿರುವುದನ್ನು ಗಮನಿಸಿವೆ ಮತ್ತು ಇದನ್ನು ಮೂನ್‌ಲೈಟಿಂಗ್ ನ ಅಡ್ಡಪರಿಣಾಮಗಳು ಎಂದು ಹೇಳುತ್ತಿದ್ದಾರೆ.


ಮೂನ್‌ಲೈಟಿಂಗ್ ಅಡ್ಡಪರಿಣಾಮಗಳ ಬಗ್ಗೆ ವೈದ್ಯರು ಏನ್ ಹೇಳ್ತಿದ್ದಾರೆ ನೋಡಿ


ಅತ್ಯಂತ ಸಾಮಾನ್ಯ ಅಂಶವೆಂದರೆ ಅವರೆಲ್ಲರೂ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರೆಲ್ಲರೂ ಒಂದಕ್ಕಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ ಮತ್ತು ವಾರಕ್ಕೆ 60 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುತ್ತಿದ್ದಾರೆ ಮತ್ತು ತಡರಾತ್ರಿಯವರೆಗೂ ಕೆಲಸ ಮಾಡುತ್ತಿದ್ದಾರೆ. ಹೊಸ ತಲೆಮಾರಿನ ವೃತ್ತಿಪರರಲ್ಲಿ ಬೆಳೆಯುತ್ತಿರುವ ಈ ಮೂನ್‌ಲೈಟಿಂಗ್ ಅವರ ಆರೋಗ್ಯದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದೆ ಎಂದು ಈ ಮೂರು ಸಾಮಾನ್ಯ ಅಂಶಗಳು ಸೂಚಿಸುತ್ತವೆ.


ವಾರಕ್ಕೆ 60 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡುವುದು ವ್ಯಕ್ತಿಯ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಮತ್ತು ಕೆಲಸದ ಗುಣಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಉಚ್ಚ್ವಾಸ್ ಟ್ರಾನ್ಸಿಷನಲ್ ಕೇರ್ ನಲ್ಲಿ ಫಿಸಿಕಲ್ ಮೆಡಿಸಿನ್ ಆಂಡ್ ರಿಯಾಬಿಲಿಟೇಶನ್ ವಿಭಾಗದ ನಿರ್ದೇಶಕ ಮತ್ತು ಮುಖ್ಯಸ್ಥರಾದ ವಿಜಯ್ ಬತಿನಾ ಅವರು ಹೇಳಿದರು.


ಪ್ರಾತಿನಿಧಿಕ ಚಿತ್ರ


"ಪ್ರತಿಯೊಬ್ಬ ವ್ಯಕ್ತಿಯು ಅವರದ್ದೇ ಆದ ದೈಹಿಕ ಸಾಮರ್ಥ್ಯದ ಮಿತಿಗಳನ್ನು ಹೊಂದಿರುತ್ತಾರೆ ಅನ್ನೋದನ್ನು ವೃತ್ತಿಪರರು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಹೆಚ್ಚು ಕೆಲಸ ಮಾಡುವುದರಿಂದ ನಿದ್ರೆಯ ಕೊರತೆ ಉಂಟಾಗುತ್ತದೆ, ಇದು ಮಾನಸಿಕ ಒತ್ತಡವನ್ನು ಹೆಚ್ಚು ಮಾಡುತ್ತೆ ಮತ್ತು ಅರಿವಿನ ಕಾರ್ಯಕ್ಷಮತೆಯನ್ನು ಸಹ ಕಡಿಮೆ ಮಾಡುತ್ತದೆ. ನಂತರ ಮಾನಸಿಕ ಆರೋಗ್ಯ ತೊಡಕುಗಳಿಗೆ ಇದೆಲ್ಲವೂ ಕಾರಣವಾಗುತ್ತದೆ. ಆದ್ದರಿಂದ, ವೃತ್ತಿಪರರು ತಾವು ಎಷ್ಟು ದೈಹಿಕ ಮತ್ತು ಮಾನಸಿಕ ಒತ್ತಡವನ್ನು ತೆಗೆದುಕೊಳ್ಳಬಹುದು ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಇಲ್ಲದಿದ್ದರೆ, ದೇಹದ ಆರೋಗ್ಯ ಇದ್ದಕ್ಕಿದ್ದಂತೆ ಹದಗೆಡಬಹುದು, ಇದು ತೀವ್ರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು" ಎಂದು ಬತಿನಾ ಹೇಳಿದರು.


ಅಮೋರ್ ಆಸ್ಪತ್ರೆಯ ನ್ಯೂರೋಲಾಜಿಸ್ಟ್ (ನರವಿಜ್ಞಾನಿ) ಮನೋಜ್ ವಾಸಿರೆಡ್ಡಿ ಅವರು "ಮಾನವ ದೇಹವನ್ನು ಒತ್ತಡಕ್ಕೆ ಸಿಲುಕಿಸಿದಾಗ, ಅದು ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನುಗಳನ್ನು ಬಿಡುಗಡೆ ಮಾಡುತ್ತದೆ, ಇದು ಆತಂಕ ಮತ್ತು ಖಿನ್ನತೆಗೆ ಕಾರಣವಾಗುತ್ತದೆ. ಮತ್ತು ಇವೆರಡೂ ಮಾನಸಿಕ ಆರೋಗ್ಯ ಅಸ್ವಸ್ಥತೆಗಳಿಗೆ ಪ್ರಮುಖ ಕಾರಣಗಳಾಗಿವೆ. ನಿರಂತರ ಆತಂಕ ಅಥವಾ ಖಿನ್ನತೆ ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುವ ಸಾಧ್ಯತೆಯಿದೆ, ಇದು ಹೃದಯದ ಮೇಲೆ ನೇರ ಪರಿಣಾಮ ಬೀರುತ್ತದೆ” ಅಂತ ಹೇಳಿದರು.
"ಕಂಪ್ಯೂಟರ್ ಮುಂದೆ ದೀರ್ಘಕಾಲ ಕುಳಿತುಕೊಳ್ಳುವ ಐಟಿ ವೃತ್ತಿಪರರು ತಮ್ಮ ಜೀವನ ಮತ್ತು ಕೆಲಸವನ್ನು ಹೇಗೆ ಸಮತೋಲನದಲ್ಲಿರಿಸಿಕೊಳ್ಳಬೇಕು ಅಂತ ತಿಳಿದಿರುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿ ದಿನನಿತ್ಯ ಎಷ್ಟು ಕೆಲಸ ಮಾಡುತ್ತಾನೋ, ಆ ಒತ್ತಡದಿಂದ ಚೇತರಿಸಿಕೊಳ್ಳಲು ಅವನಿಗೆ ಅಷ್ಟೇ ಸಮಯ ಬೇಕು. ದೀರ್ಘಕಾಲ ಕೆಲಸ ಮಾಡುವ ವೃತ್ತಿಪರರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿರಲು ಕೆಲವು ವ್ಯಾಯಾಮಗಳನ್ನು ಸಹ ಮಾಡಬೇಕು” ಅಂತ ಡಾಕ್ಟರ್ ಮನೋಜ್ ಹೇಳಿದ್ದಾರೆ.


ಯಶೋದಾ ಆಸ್ಪತ್ರೆಯ ಸಮಾಲೋಚಕ ನರಭೌತಶಾಸ್ತ್ರಜ್ಞ ಶಿವರಾಮ್ ರಾವ್ ಕೋಮಂಡ್ಲಾ ಅವರು "ದೀರ್ಘಕಾಲ ಕೆಲಸ ಮಾಡುವುದು ಅಥವಾ ದೈಹಿಕವಾಗಿ ಅಥವಾ ಮಾನಸಿಕವಾಗಿ ಬೇಡಿಕೆಯ ಕೆಲಸದಲ್ಲಿ ತೊಡಗುವುದು ದೀರ್ಘಕಾಲದ ಒತ್ತಡಕ್ಕೆ ಕಾರಣವಾಗಬಹುದು, ಇದು ನರವೈಜ್ಞಾನಿಕ ಸಮಸ್ಯೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ದೀರ್ಘಕಾಲದ ಒತ್ತಡವು ಮೆದುಳಿನಲ್ಲಿನ ಬದಲಾವಣೆಗಳೊಂದಿಗೆ ಸಂಬಂಧ ಹೊಂದಿದೆ, ಇದು ಆತಂಕ, ಖಿನ್ನತೆ ಮತ್ತು ಇತರ ಮಾನಸಿಕ ಆರೋಗ್ಯ ಅಸ್ವಸ್ಥತೆಗಳನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಹೆಚ್ಚಿಸುತ್ತದೆ” ಅಂತ ಹೇಳಿದರು.


ಉದ್ಯೋಗಿಗಳಿಗೆ ವೈದ್ಯರು ನೀಡಿರುವ ಸಲಹೆಗಳು ಇವು..


ಕೆಲಸದ ಮಧ್ಯೆ ಆಗಾಗ ಚಿಕ್ಕ ಪುಟ್ಟ ವಿರಾಮಗಳನ್ನು ತೆಗೆದುಕೊಳ್ಳುವುದು, ರಾತ್ರಿ ಹೊತ್ತು ಸಾಕಷ್ಟು ನಿದ್ರೆ ಮಾಡುವುದು, ಆರೋಗ್ಯಕರ ಆಹಾರವನ್ನು ಸೇವಿಸುವುದು ಮತ್ತು ವ್ಯಾಯಾಮ ಅಥವಾ ಧ್ಯಾನದಂತಹ ಒತ್ತಡವನ್ನು ಕಡಿಮೆ ಮಾಡುವ ಚಟುವಟಿಕೆಗಳಲ್ಲಿ ತೊಡಗುವುದು ಉದ್ಯೋಗಿಗೆ ತುಂಬಾನೇ ಸಹಾಯ ಮಾಡುತ್ತವೆ ಅಂತ ವೈದ್ಯರು ಹೇಳಿದ್ದಾರೆ.

First published: