ಮಹಿಳೆ (Woman) ತಮ್ಮ ವೃತ್ತಿಜೀವನದಲ್ಲಿ (Career) ಅನೇಕ ಸಮಸ್ಯೆಗಳನ್ನು ಎದುರಿಸುತ್ತಾಳೆ. ಅದರಲ್ಲೂ ಮುಖ್ಯವಾಗಿ ವೃತ್ತಿ ಹಾಗೂ ತಾಯ್ತನ (Motherhood) ಎಂಬ ಎರಡು ಆಯ್ಕೆಗಳು ಆಕೆಯ ಮುಂದಿದ್ದಾಗ ಹೆಚ್ಚಿನ ಹೆಣ್ಣುಮಕ್ಕಳು ಒಂದು ರೀತಿಯ ಗೊಂದಲಕ್ಕೆ ಒಳಗಾಗುತ್ತಾರೆ. ಕೆಲವರು ತಾಯ್ತನವನ್ನು ಆರಿಸಿಕೊಂಡರೆ ಇನ್ನು ಕೆಲವರು ಆರ್ಥಿಕವಾಗಿ ಕೂಡ ಪ್ರಬಲರಾಗಿರಬೇಕು ಎಂಬ ಕಾರಣಕ್ಕೆ ವೃತ್ತಿಯನ್ನು ಆರಿಸಿಕೊಳ್ಳುತ್ತಾರೆ.
ತಾಯ್ತನ ಹಾಗೂ ವೃತ್ತಿಜೀವನ ಇವೆರಡನ್ನೂ ಆಯ್ಕೆ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಮಹಿಳೆಯರದ್ದಾಗಿದೆ. ಯಾವುದೇ ಆಯ್ಕೆಯನ್ನೂ ಆಕೆ ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದಾಗಿ ತಜ್ಞರು ತಿಳಿಸುತ್ತಾರೆ. ಅದೇ ರೀತಿ ತಾಯಿಯಾಗುವುದಕ್ಕೂ ಮುನ್ನ ವೃತ್ತಿಜೀವನದಲ್ಲಿ ಸಬಲರಾಗಿರುವುದು ಕೂಡ ಅತಿಮುಖ್ಯ ಎಂಬ ಸಲಹೆಯನ್ನು ನೀಡಿದ್ದಾರೆ.
ವೃತ್ತಿ ಆಯ್ಕೆಯನ್ನೇ ಹೆಚ್ಚಿನ ಮಹಿಳೆಯರು ಆರಿಸಿಕೊಳ್ಳುವುದೇಕೆ?
ಈ ಬಗ್ಗೆ ನಡೆಸಿದ ಸಮೀಕ್ಷೆಯ ಪ್ರಕಾರ ವೃತ್ತಿ ಹಾಗೂ ತಾಯ್ತನದ ವಿಷಯದಲ್ಲಿ ಹೆಚ್ಚಿನವರು ವೃತ್ತಿಗೆ ಆದ್ಯತೆ ನೀಡುತ್ತಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಏಕೆಂದರೆ ವೃತ್ತಿನಿರತ ಮಹಿಳೆಯರಿಗೆ ತಾಯ್ತನವು ಹಲವಾರು ರೀತಿಯಲ್ಲಿ ಹಿನ್ನಡೆಯನ್ನುಂಟು ಮಾಡುತ್ತದೆ ಎಂಬುದಾಗಿ ಸಮೀಕ್ಷೆ ಕಂಡುಕೊಂಡಿದೆ.
ಕರಿಯರ್ ಪ್ರಗತಿಗೆ ಹಿನ್ನಡೆ
ಅವರ ವರಮಾನದ ಮೇಲೆ ಇದು ಪೆಟ್ಟು ನೀಡುವುದಲ್ಲದೆ ಆಕೆಯ ನಾಯಕತ್ವ ಗುಣಗಳು ಹಾಗೂ ಪ್ರಮೋಶನ್ ಮತ್ತು ವೃತ್ತಿ ಜೀವನದ ಮುಂದಿನ ಹಂತಗಳಿಗೆ ತಡೆಯನ್ನೊಡ್ಡುತ್ತದೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ. ಅಂತೆಯೇ ಅಮೆರಿಕಾದಲ್ಲಿರುವ 1000 ಮಹಿಳೆಯರು 35 ರ ಹರೆಯದಲ್ಲಿಯೇ ತಾಯಿಯಾಗುವುದನ್ನು ಮುಂದೂಡಿದ್ದಾರೆ ಹಾಗೂ ತಮ್ಮ ವೃತ್ತಿಗೆ ಪ್ರಾಶಸ್ತ್ಯ ನೀಡಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
ಮಹಿಳೆಯರ ಈ ನಿರ್ಧಾರದ ಮೇಲೆ ಜೀವನ ಶೈಲಿ, ಆರ್ಥಿಕತೆ ಹಾಗೂ ಸಂಬಂಧಗಳು ಪರಿಣಾಮ ಬೀರಿವೆ ಎಂಬುದಾಗಿ ಸಮೀಕ್ಷೆ ತಿಳಿಸಿದೆ. 35 ರ ನಂತರ ತಾಯ್ತನವನ್ನು ಅನುಭವಿಸಲು ಸಿದ್ಧರಾಗಿರುವ 93% ರಷ್ಟು ಮಹಿಳೆಯರು ತಾವು ಜೀವನಶೈಲಿ ಹಾಗೂ ಆರ್ಥಿಕ ಪ್ರಗತಿಯಂತಹ ಗುರಿಗಳನ್ನು ಸಾಧಿಸಿದ್ದೇವೆ ಎಂದು ತಿಳಿಸಿದ್ದಾರೆ.
44% ರಷ್ಟು ಮಹಿಳೆಯರು ಆರ್ಥಿಕ ಕಾರಣವನ್ನು ಮುಂದಿಟ್ಟಿದ್ದು 36% ರಷ್ಟು ಮಹಿಳೆಯರು ವೃತ್ತಿ ಜೀವನದಲ್ಲಿ ಉನ್ನತಿ ಸಾಧಿಸುವ ಗುರಿಯನ್ನು ಹೊಂದಿರುವುದರಿಂದ ತಾಯಿಯಾಗುವುದನ್ನು ಮುಂದೂಡಿದ್ದೇವೆ ಎಂದು ತಿಳಿಸಿದ್ದಾರೆ.
ಆರ್ಥಿಕವಾಗಿಯೂ ಸಬಲರಾಗಿರಬೇಕು
ಅಮೆರಿಕಾ ಹಾಗೂ ಯುರೋಪ್‌ನಂತಹ ದೇಶಗಳಲ್ಲಿ ಮಹಿಳೆಯರು ತಮ್ಮ ವೈಯಕ್ತಿಕ ಜೀವನಕ್ಕಿಂತ ವೃತ್ತಿ ಬದುಕಿಗೆ ಹೆಚ್ಚು ಆದ್ಯತೆ ನೀಡಿರುವುದನ್ನು ಸಮೀಕ್ಷೆ ತಿಳಿಸಿದೆ.
ಪುರುಷರಿಗೆ ಸರಿಸಮನಾಗಿ ವೃತ್ತಿರಂಗದಲ್ಲಿ ಸಾಧನೆ ಸಾಧಿಸಿರುವ ಮಹಿಳೆಯರು ತಾಯ್ತನವನ್ನು ಇದೇ ಕಾರಣಕ್ಕಾಗಿ ಮುಂದೂಡುತ್ತಿದ್ದಾರೆ ಅಂತೆಯೇ ಯುರೋಪ್‌ನಂತಹ ದೇಶಗಳು ಉದ್ಯೋಗಿಗಳಿಗೆ ಕೌಟುಂಬಿಕ ರಜೆಯನ್ನು ನೀಡುತ್ತಿಲ್ಲ ಹಾಗೂ ಶಾಲೆಗಳ ದುಬಾರಿ ಶುಲ್ಕಗಳು ಕೂಡ ಯುವ ಪೋಷಕರಿಗೆ ಆರ್ಥಿಕ ಹೊರೆಯನ್ನು ಹೆಚ್ಚಿಸುತ್ತಿವೆ ಇದರಿಂದಾಗಿಯೇ ಅವರುಗಳು ವೃತ್ತಿಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.
ವೃತ್ತಿನಿರತ ತಾಯಂದಿರ ಅನಿಸಿಕೆ ಏನು?
ಮುಖ್ಯ ಮಾರುಕಟ್ಟೆ ಆಫೀಸರ್ ಆಗಿರುವ ಅನ್ನಾ ಲೆವಿಕೋವಾ ತಮ್ಮ ತಾಯ್ತನದ ಅವಧಿಯನ್ನು 41 ವರ್ಷದವರೆಗೆ ಮುಂದೂಡಿದ್ದರು ಹಾಗೂ ವೃತ್ತಿಜೀವನದಲ್ಲಿ ಒಂದು ಹಂತಕ್ಕೆ ಬರುವವರೆಗೆ ತಾಯಿಯಾಗುವುದನ್ನು ಕೊಂಚ ಕಾಲ ಮುಂದೂಡಿದ್ದರು ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ತಾವು ಕೆಲಸ ಮಾಡುತ್ತಿದ್ದ ಜಾಹೀರಾತು ಸಂಸ್ಥೆ ಪುರುಷ ಪ್ರಧಾನವಾಗಿತ್ತು ಅಂತೆಯೇ ತನ್ನ ಸಹೋದ್ಯೋಗಿ ಪುರುಷರನ್ನು ಹಿಂದಿಕ್ಕೆ ವೃತ್ತಿಯಲ್ಲಿ ಸಾಧನೆ ಮಾಡಲು ಇನ್ನಷ್ಟು ಕಠಿಣ ಪ್ರಯತ್ನಗಳನ್ನು ಮಾಡಬೇಕಾಗಿತ್ತು ಹಾಗಾಗಿ ತಾಯ್ತನವನ್ನು ಮುಂದೂಡಿದೆ ಎಂದು ತಿಳಿಸಿದ್ದಾರೆ.
ಪ್ಲಾನಿಂಗ್ ಅತಿಮುಖ್ಯ
ಮಕ್ಕಳನ್ನು ಹೊಂದುವ ಮೊದಲು ಸರಿಯಾದ ಪ್ಲಾನಿಂಗ್ ಮಾಡಬೇಕಾಗುತ್ತದೆ ಎಂದು ಲೆವಿಕೋವಾ ತಿಳಿಸುತ್ತಾರೆ. ನನ್ನ ಯವ್ವೌನದಲ್ಲಿ ಮಗು ಹಾಗೂ ವೃತ್ತಿ ಎರಡರನ್ನೂ ನಿಭಾಯಿಸುವುದ ಕಷ್ಟವಾಗಿತ್ತು.
ಇದನ್ನೂ ಓದಿ: Working Woman: ಮಹಿಳಾ ಉದ್ಯೋಗಿಗಳು ಕೆಲಸ ಬಿಡಲು ಇದೇ ನಂ.1 ಕಾರಣ; ಹೊಸ ಸರ್ವೆಯಲ್ಲಿ ಬಯಲು
ಹಾಗಾಗಿಯೇ ನಾನು ವೃತ್ತಿಯನ್ನು ಆಯ್ದುಕೊಂಡೆ ಈ ಬಗ್ಗೆ ನನಗೆ ಬೇಸರವಿಲ್ಲ ಅಂತೆಯೇ ವೃತ್ತಿಯಲ್ಲಿ ಒಂದು ಹಂತಕ್ಕೆ ಬಂದ ನಂತರ ಮಗಳನ್ನು ಪಡೆದೆ. ನನ್ನ ಜೀವನದಲ್ಲಿ ನಾನು ಖುಷಿಯಾಗಿರುವೆ ಎಂದು ಸಂದರ್ಶನದಲ್ಲಿ ಆಕೆ ತಿಳಿಸಿದ್ದಾರೆ.
ನನ್ನ ಮಗಳಿಗೆ ಆರ್ಥಿಕವಾಗಿ ಬೆಂಬಲ ನೀಡಲು ನಾನು ಸಾಕಷ್ಟು ಸಮರ್ಥಳಾಗಿರುವೆ ಎಂದು ಹೇಳುವ ಅವರು ನಾನು ಹಿಂದೆಂದಿಗಿಂತಲೂ ಈಗ ಹೆಚ್ಚು ಮಾನಸಿಕ ಹಾಗೂ ದೈಹಿಕವಾಗಿ ಪ್ರಬುದ್ಧಳಾಗಿರುವೆ ಎಂದು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ