ಬೀದಿಗೆ ಒಂದು ಹೋಟೆಲ್, ರೆಸ್ಟೋರೆಂಟ್, ಚಹಾ ಅಂಗಡಿ, ಬೊಂಡಾ-ಬಜ್ಜಿ, ಸ್ಟ್ರೀಟ್ ಫುಡ್ (Food Business) ಇದ್ದ ಕಾಲ ಬದಲಾಗಿ ಹೋಟೆಲ್ ಉದ್ಯಮ (Hotel Business) ಹೆಮ್ಮರವಾಗಿ ಬೆಳೆದು ನಿಂತಿದೆ. ಆಹಾರ ರುಚಿಸುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಉದ್ಯಮ ಕೂಡ ಗಣನೀಯವಾಗಿ ಬೆಳೆಯುತ್ತಿದೆ. ಕೇವಲ ಹೋಟೆಲ್‌ಗಳಿಗೆ ಸೀಮಿತವಾಗಿರದೆ ರೆಡಿ ಟು ಈಟ್‌ನಂತಹ ಹಲವು ಆಹಾರೋತ್ಪನ್ನಗಳನ್ನು ತಯಾರಿಸುವಲ್ಲಿ, ಹೊಸ ಬಗೆಯ ತಿನಿಸುಗಳನ್ನು ಸಿದ್ಧ ಪಡಿಸುವಲ್ಲಿ ಹೀಗೆ ಆಹಾರ ಉತ್ಪಾದಕರು, ಮಾರಟಗಾರರು, ಸಂಸ್ಕರಣಾಕಾರರು ಸೇರಿದಂತೆ ಈ ಉದ್ಯಮ ವಿಸ್ತಾರಗೊಳ್ಳುತ್ತಲೇ ಇದೆ.
ಆಹಾರ ಉದ್ಯಮ
ಆಹಾರ ಉದ್ಯಮ ಬೃಹದಾಕಾರವಾಗಿ ಬೆಳೆಯುತ್ತಿದ್ದಂತೆ, ಅವಕಾಶಗಳು ಸಹ ಹೆಚ್ಚುತ್ತಿವೆ. ಆಹಾರ ಉದ್ಯಮ ಎನ್ನುವುದು ಹೆಚ್ಚು ಬೇಡಿಕೆಯಲ್ಲಿರುವ ವ್ಯಾಪಾರ ಮತ್ತು ಕೆಲಸದ ಆಯ್ಕೆಯಾಗಿದೆ.
ಸ್ವಂತವಾಗಿ ಏನನ್ನಾದರೂ ಮಾಡಲು ಬಯಸುವವರ ಮೊದಲ ಆಯ್ಕೆಯಾಗಿ ಈ ಉದ್ಯಮ ಅಗ್ರಗಣ್ಯ ಸ್ಥಾನ ಪಡೆದುಕೊಂಡಿದೆ. ಉತ್ತಮ ಗುಣಮಟ್ಟದ ಪದಾರ್ಥಗಳ ಸೋರ್ಸಿಂಗ್‌ನಿಂದ ಹಿಡಿದು ಆಹಾರದ ವೆಚ್ಚವನ್ನು ಅರ್ಥಮಾಡಿಕೊಳ್ಳುವುದು, ವ್ಯರ್ಥವನ್ನು ಕಡಿಮೆ ಮಾಡುವುದು ಮತ್ತು ಆಹಾರದ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳುವವರೆಗೆ ವ್ಯಾಪಕ ಶ್ರೇಣಿಯ ವಿಭಾಗಗಳನ್ನು ಉದ್ಯಮ ಒಳಗೊಂಡಿದೆ.
ವೃತ್ತಿ ಆಯ್ಕೆಗಳು
ಬಾಣಸಿಗ, ಆಹಾರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ, ಆಹಾರ ತಂತ್ರಜ್ಞಾನ, ಆಹಾರ ಬ್ಲಾಗಿಂಗ್, ಅಡುಗೆ ಪುಸ್ತಕವನ್ನು ರಚಿಸುವುದು, ಆಹಾರ ತಜ್ಞ ಮತ್ತು ಸಲಹೆಗಾರ, ಸಂಸ್ಕರಣಾ ತಜ್ಞ, ಮೇಲ್ವಿಚಾರಕ, ತಂತ್ರಜ್ಞ, ಮಾರ್ಕೆಟಿಂಗ್ ಮ್ಯಾನೇಜರ್, ಆಹಾರ ವಿಜ್ಞಾನಿ, ಫುಡ್ ಇಂಜಿನಿಯರ್, ಬಯೋಕೆಮಿಸ್ಟ್, ಫುಡ್ ಫೋಟೋಗ್ರಫಿ, ಸ್ಟೈಲಿಂಗ್ ಹೀಗೆ ಅನೇಕ ವೃತ್ತಿ ಆಯ್ಕೆಗಳು ಇಲ್ಲಿ ಕೆಲಸ ಮಾಡಲು ಬಯಸುವವರಿಗಿದೆ.
ಶಿಕ್ಷಣ ಅರ್ಹತೆ
ಈ ಉದ್ಯಮದ ಕೆಲ ಕೆಲಸಗಳಿಗೆ ಪದವಿಯಂತಹ ಅವಶ್ಯಕತೆ ಇಲ್ಲ. ಆಸಕ್ತಿ ಇರುವ ಯಾರು ಬೇಕಾದರೂ ಉತ್ತಮ ಚೆಫ್, ಸ್ಟೈಲಿಂಗ್, ಫೋಟೋಗ್ರಫಿ, ಫುಡ್ ಬ್ಲಾಂಗಿಗ್‌ನಲ್ಲಿ ಕೆಲಸ ಆರಂಭಿಸಬಹುದು.
ಇದು ಕಲಾ ವಿಭಾಗಕ್ಕೆ ಸೇರಿರುವ ಒಂದು ಉದ್ಯಮವಾಗಿರುವುದರಿಂದ ಇದಕ್ಕೆ ಡಿಗ್ರಿಯಂತಹ ಕೋರ್ಸ್‌ಗಳ ಅಗತ್ಯವಿಲ್ಲ. ಆದರೆ ಆಹಾರ ವಿಜ್ಞಾನಿ, ಫುಡ್ ಇಂಜಿನಿಯರ್, ಬಯೋಕೆಮಿಸ್ಟ್‌ನಂತಹ ಕೆಲಸಗಳಿಗೆ ಪದವಿ, ಶಿಕ್ಷಣದ ಅರ್ಹತೆಯನ್ನು ಹೊಂದಿರಬೇಕಾಗುತ್ತದೆ.
ಕೋರ್ಸ್
ಪಾಕಶಾಲೆಯಲ್ಲಿ ಹೆಚ್ಚಿನ ಜ್ಞಾನ ಹೊಂದಲು ಕೋರ್ಸ್‌ಗಳನ್ನು ನಡೆಸಲಾಗುತ್ತದೆ. ಈ ಕೋರ್ಸ್‌ಗಳನ್ನು ಕಲಿಸುವಾಗ ಸಂಸ್ಥೆಗಳು ಸಾಮಾನ್ಯವಾಗಿ 12 ನೇ ತರಗತಿಯ ಪ್ರಮಾಣಪತ್ರವನ್ನು ಕೇಳುತ್ತವೆ. ಈ ವಿಭಾಗದಲ್ಲಿ ಕಲಿಯಲು ಬಯಸುವವರು ಅಥವಾ ಇನ್ನು ಪರಿಣಿತರಾಗಲು ಆನ್‌ಲೈನ್ ಅಥವಾ ತರಗತಿಗಳಿಗೆ ಹೋಗಿ ಕಲಿಯುವಂತಹ ಕೋರ್ಸ್‌ಗಳನ್ನು ತೆಗೆದುಕೊಳ್ಳಬಹುದು.
ಈ ಕೋರ್ಸ್‌ಗಳು ಆಹಾರದ ಹಿಂದಿನ ವಿಜ್ಞಾನವನ್ನು ಅರ್ಥಮಾಡಿಕೊಳ್ಳಲು ಕೇಂದ್ರೀಕರಿಸುತ್ತದೆ, ಅದು ರಾಸಾಯನಿಕ ಸಂಯೋಜನೆ, ಉತ್ಪನ್ನದ ತಾಂತ್ರಿಕ ಜ್ಞಾನ, ಪಾಕವಿಧಾನಗಳನ್ನು ಪರಿಕಲ್ಪನೆ ಮಾಡುವುದು ಮತ್ತು ವ್ಯಾಪಾರ ಆಧಾರಿತ ಕೌಶಲ್ಯವನ್ನು ಅಭಿವೃದ್ಧಿಪಡಿಸುವುದು.
ಅಷ್ಟೇ ಅಲ್ಲ, ವಿದ್ಯಾರ್ಥಿಗಳಿಗೆ ಚಾಕು ಹಿಡಿಯುವುದು ಹೇಗೆ, ತರಕಾರಿಗಳನ್ನು ವಿವಿಧ ಬಗೆಯಲ್ಲಿ ಕತ್ತರಿಸುವುದು, ಅಡುಗೆ ವಿಧಾನಗಳು ಮತ್ತು ತಂತ್ರಗಳು, ಇದು ಪಾಕವಿಧಾನಗಳ ಅಭಿವೃದ್ಧಿ ಮತ್ತು ಸೂತ್ರೀಕರಣ ಮತ್ತು ಆಹಾರ ವ್ಯರ್ಥವನ್ನು ಕಡಿಮೆ ಮಾಡುವಂತಹ ಹೆಚ್ಚಿನ ತಾಂತ್ರಿಕ ವಿಷಯಗಳನ್ನು ಕಲಿಸುತ್ತದೆ. ಕೋರ್ಸ್ ಮೂಲಕ ವಿವಿಧ ಪ್ರಾಜೆಕ್ಟ್ ವರ್ಕ್ ಮೂಲಕ ವ್ಯವಹಾರವನ್ನು ನಡೆಸುವ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಕಲಿಸಲಾಗುತ್ತದೆ.
ಡಿಪ್ಲೊಮಾ ಕೋರ್ಸ್‌ಗಳು
ಲಭ್ಯವಿರುವ ಕೋರ್ಸ್‌ಗಳು ಡಿಪ್ಲೊಮಾ ಕೋರ್ಸ್‌ಗಳನ್ನು ಒಳಗೊಂಡಿವೆ, ಇದು ಕೌಶಲ್ಯ ಆಧಾರಿತ ತರಬೇತಿಯನ್ನು ನೀಡುವುದರ ಜೊತೆಗೆ ಈ ಕೋರ್ಸ್‌ಗಳು ಪಾಕಶಾಲೆಯ ಕಲೆಗಳು ಅಥವಾ ಬೇಕಿಂಗ್ ಅಥವಾ ಪೇಸ್ಟ್ರಿ ಕಲೆಗಳಲ್ಲಿಯೂ ಪರಿಣತಿ ಹೊಂದಲು ಅನುವು ಮಾಡಿಕೊಡುತ್ತವೆ. ಅನೇಕ ಪಾಕಶಾಲೆಗಳು ಅಲ್ಪಾವಧಿಯ ಅಂದರೆ ವಾರ, ತಿಂಗಳಿಗೆ ಸೀಮಿತವಾಗಿರುವ ಪ್ರಮಾಣಪತ್ರ ಕೋರ್ಸ್‌ಗಳನ್ನು ಸಹ ನೀಡುತ್ತವೆ.
ಇದನ್ನೂ ಓದಿ: Train Driver: ರೈಲು ಚಾಲಕರಾಗುವುದು ಹೇಗೆ; ಈ ಸರ್ಕಾರಿ ಹುದ್ದೆಯ ನೇಮಕಾತಿ ಪ್ರಕ್ರಿಯೆ-ಸಂಬಳದ ಮಾಹಿತಿ ಇಲ್ಲಿದೆ
ಪಾಕಶಾಲೆಯ ಕಲೆಗಳು ಹೆಚ್ಚು ಕೌಶಲ್ಯ ಆಧಾರಿತವಾಗಿದ್ದರೂ ಗಣಿತ ಮತ್ತು ಲೆಕ್ಕಶಾಸ್ತ್ರದ ಮೂಲಭೂತ ಜ್ಞಾನದ ಜೊತೆಗೆ ವಿಜ್ಞಾನದಲ್ಲಿನ ಮೂಲಭೂತ ಪರಿಕಲ್ಪನೆಗಳ ತಿಳುವಳಿಕೆ ಅಗತ್ಯವಿರುತ್ತದೆ.
ಈ ಉದ್ಯಮ ಯಶಸ್ಸಿಗೆ ಮುಖ್ಯವಾಗಿ ಆಸಕ್ತಿ, ಉತ್ಸಾಹ, ಕ್ರಿಯೇಟಿವಿಟಿ ತುಂಬಾ ಮುಖ್ಯ. ನೀವು ಸಹ ಆಹಾರ ಉದ್ಯಮದಲ್ಲಿ ಆಸಕ್ತಿ ಹೊಂದಿದ್ದರೆ ಇಲ್ಲಿ ಕೆಲ ಬೇಸಿಕ್ ಅಂಶಗಳನ್ನು ತಿಳಿದು ವೃತ್ತಿ ಆರಂಭಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ