ಕಾಮರ್ಸ್ ವಿಭಾಗದಲ್ಲಿ ಸೆಕೆಂಡ್ ಪಿಯು (2nd PUC) ಉತ್ತೀರ್ಣರಾದ ನಂತರ, ಹೆಚ್ಚಿನ ವಿದ್ಯಾರ್ಥಿಗಳು ಪದವಿಗಾಗಿ ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (BBA) ಕೋರ್ಸ್ ಅನ್ನು ಆಯ್ಕೆ ಮಾಡುತ್ತಾರೆ. ವ್ಯವಹಾರ ನಿರ್ವಹಣೆಯಲ್ಲಿ ವೃತ್ತಿಜೀವನವನ್ನು (Career) ಮುಂದುವರಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದು ಆದ್ಯತೆಯ ಡಿಗ್ರಿ ಆಯ್ಕೆಯಾಗಿದೆ. ಮೂರು ವರ್ಷಗಳ ವೃತ್ತಿಪರ ಪದವಿ ಕೋರ್ಸ್‌ನ ಮುಖ್ಯ ಉದ್ದೇಶವು ವಿದ್ಯಾರ್ಥಿಗಳಿಗೆ ವ್ಯವಹಾರ ಮತ್ತು ನಿರ್ವಹಣೆಯ ಬಗ್ಗೆ ತಿಳುವಳಿಕೆಯನ್ನು ನೀಡುವುದು. ಬಿಬಿಎ ಕೋರ್ಸ್ ವಿದ್ಯಾರ್ಥಿಗಳಿಗೆ ವಿವಿಧ ಕ್ಷೇತ್ರಗಳಲ್ಲಿ ಪರಿಣತಿಯನ್ನು ಪಡೆಯಲು ಅವಕಾಶವನ್ನು ನೀಡುತ್ತದೆ.
ಪದವಿ ಶಿಕ್ಷಣದಲ್ಲಿ ಆಂತರಿಕ ವ್ಯಾಪಾರ, ರಿಯಲ್ ಎಸ್ಟೇಟ್, ಹಣಕಾಸು, ಮಾರ್ಕೆಟಿಂಗ್, ಲೆಕ್ಕಪತ್ರ ನಿರ್ವಹಣೆ ಮತ್ತು ಕಂಪ್ಯೂಟರ್ ಮಾಹಿತಿ ವ್ಯವಸ್ಥೆಗಳ ಬಗ್ಗೆ ಕಲಿಸಲಾಗುತ್ತೆ. ಆದರೆ, ಅನೇಕ ಬಾರಿ ಪದವಿಯ ಬಳಿಕ ತಮ್ಮ ವೃತ್ತಿಜೀವನವನ್ನು ಹೇಗೆ ಮುಂದುವರಿಸುವುದು ಎಂಬ ಅನುಮಾನ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಇರುತ್ತದೆ. ನೀವು BBA ಮಾಡಿದ್ದರೆ ಅಥವಾ ಅದನ್ನು ಮಾಡಲು ಹೊರಟಿದ್ದರೆ, BBA ನಂತರ ಯಾವ ರೀತಿ ವೃತ್ತಿ ಆಯ್ಕೆ ಮಾಡಬಹುದು ಎಂಬ ಕುರಿತು ಇಲ್ಲಿ ಮಾಹಿತಿಯನ್ನು ನೀಡಲಾಗಿದೆ.
BBA ವೃತ್ತಿ ವ್ಯಾಪ್ತಿ
ಇಂದಿನ ಕಾಲದಲ್ಲಿ ದಿನನಿತ್ಯದ ಹೊಸ ಕಂಪನಿಗಳು ತೆರೆಯುತ್ತಿರುವುದರಿಂದ ಬಿಬಿಎ ಪದವೀಧರರಿಗೆ ಉದ್ಯೋಗದ ಆಯ್ಕೆಗಳು ಹೆಚ್ಚುತ್ತಿವೆ. ಬಿಬಿಎ ಪದವೀಧರರು ಮಾರಾಟ ಮತ್ತು ಮಾರುಕಟ್ಟೆ ವಿಭಾಗದಲ್ಲಿ ಯಾವುದೇ ಕಂಪನಿಯಲ್ಲಿ ಮ್ಯಾನೇಜ್‌ಮೆಂಟ್ ಟ್ರೈನಿಯಾಗಿ ಕೆಲಸ ಪಡೆಯಬಹುದು. ಕೆಲವು ವರ್ಷಗಳ ಅನುಭವದ ನಂತರ, ಯಾವುದೇ ಕಂಪನಿಯಲ್ಲಿ ನಾಯಕತ್ವದ ಸ್ಥಾನವನ್ನು ಸಾಧಿಸಬಹುದು. ಆದಾಗ್ಯೂ, BBA ನಂತರ ಕೆಲವು ಕೋರ್ಸ್‌ಗಳಿವೆ, ಅದನ್ನು ಮಾಡುವುದರಿಂದ ಆರಂಭಿಕ ಸಮಯದಲ್ಲಿಯೇ ಈ ವಲಯದಲ್ಲಿ ಉತ್ತಮ ಸ್ಥಾನದ ಕೆಲಸವನ್ನು ಪಡೆಯಬಹುದು.
ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ (MBA)
BBA ನಂತರ ವಿದ್ಯಾರ್ಥಿಗಳಿಗೆ ಅತ್ಯಂತ ಸಾಮಾನ್ಯ ಮತ್ತು ಆದ್ಯತೆಯ ಕೋರ್ಸ್ MBA ಆಗಿದೆ. ಈ ಪದವಿಯ ನಂತರ ಆಕರ್ಷಕ ಸಂಬಳದೊಂದಿಗೆ ನಿರ್ವಹಣಾ ಸ್ಥಾನವನ್ನು ಪಡೆಯುವುದು ಮಾತ್ರವಲ್ಲದೆ ಬಾಸ್ ಆಗಬಹುದು. ಯಾವುದೇ ಸಮಯದಲ್ಲಿ ತಂಡವನ್ನು ಮುನ್ನಡೆಸಬಹುದು. ಈ ಎರಡು ವರ್ಷದ ಪದವಿ ಕೋರ್ಸ್‌ನಲ್ಲಿ ವಿದ್ಯಾರ್ಥಿಗಳಿಗೆ ಮಾರ್ಕೆಟಿಂಗ್, ಫೈನಾನ್ಸ್, ಎಚ್‌ಆರ್ ಮತ್ತು ಇಂಟರ್‌ನ್ಯಾಶನಲ್ ಟ್ರೇಡ್ ಬಗ್ಗೆ ಮಾಹಿತಿ ನೀಡಲಾಗುತ್ತದೆ. ವಿದ್ಯಾರ್ಥಿಗಳು ಯಾವುದೇ ವಿಶೇಷ ಕೋರ್ಸ್ ಆಯ್ಕೆ ಮಾಡುವ ಮೂಲಕ ಪದವಿ ಪಡೆಯಬಹುದು.
ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ (PGDM)
ಬಿಬಿಎ ಉತ್ತೀರ್ಣರಾಗಿರುವ ವಿದ್ಯಾರ್ಥಿಗಳು ಮ್ಯಾನೇಜ್‌ಮೆಂಟ್‌ನಲ್ಲಿ ಸ್ನಾತಕೋತ್ತರ ಡಿಪ್ಲೊಮಾ (ಪಿಜಿಡಿಎಂ) ಆಯ್ಕೆ ಮಾಡಬಹುದು. ಇದು MBA ಅಂತೆಯೇ ಒಂದು ಅಥವಾ 2 ವರ್ಷಗಳ ಕೋರ್ಸ್ ಆಗಿದೆ. IIM ಗಳು ಮತ್ತು XLRI ಗಳಲ್ಲಿ ಪ್ರವೇಶ ಪಡೆಯದ ವಿದ್ಯಾರ್ಥಿಗಳು ಯಾವುದೇ ಮಧ್ಯಮ ಮಟ್ಟದ MBA ಕಾಲೇಜಿನಿಂದ PGDM ಕೋರ್ಸ್‌ಗಳನ್ನು ಮಾಡಬಹುದು.
ಇದನ್ನೂ ಓದಿ: Networking Tips: ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಬೇಡಿಕೆಯ, ಪ್ರಭಾವಿ ವ್ಯಕ್ತಿ ಆಗುವುದು ಹೇಗೆಂದು ತಿಳಿಯಿರಿ
ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಸ್ನಾತಕೋತ್ತರ ಪದವಿ (MMS)
ಬಿಬಿಎ ನಂತರ, ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ (ಎಂಎಂಎಸ್) ಸ್ನಾತಕೋತ್ತರ ಪದವಿಯ ಆಯ್ಕೆಯೂ ಇದೆ. ಎಂಎಂಎಸ್ ಅವಧಿಯೂ 2 ವರ್ಷಗಳು. ಈ ಕೋರ್ಸ್‌ಗೆ ಪ್ರವೇಶ ಪಡೆಯಲು 50% ಅಂಕಗಳೊಂದಿಗೆ ಪದವಿ ಹೊಂದಿರಬೇಕು. ಎಂಎಂಎಸ್ ಕೋರ್ಸ್ ವಿದ್ಯಾರ್ಥಿಗಳಿಗೆ ನಿರ್ವಹಣಾ ಕೌಶಲ್ಯಗಳನ್ನು ಕಲಿಯಲು ಮತ್ತು ವಿವಿಧ ಹಂತಗಳಲ್ಲಿ ವ್ಯಾಪಾರ ಚಟುವಟಿಕೆಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಬಿಬಿಎ ಕೋರ್ಸ್ ನಂತರ ಉದ್ಯೋಗಗಳು
ವಿದ್ಯಾರ್ಥಿಗಳು ಬಿಬಿಎ ಕೋರ್ಸ್‌ನ ನಂತರ ಉದ್ಯೋಗ ಮಾಡಲು ಬಯಸಿದರೆ, ಇದಕ್ಕಾಗಿ ಹಲವು ಆಯ್ಕೆಗಳಿವೆ. ಕಾರ್ಪೊರೇಟ್ ವಲಯದಲ್ಲಿ ಮ್ಯಾನೇಜ್ಮೆಂಟ್ ವೃತ್ತಿಪರರು ಉತ್ತಮ ಸಂಬಳವನ್ನು ಪಡೆಯುತ್ತಾರೆ. ಬಿಬಿಎ ಕೋರ್ಸ್ ಮುಗಿದ ನಂತರ, ವಿದ್ಯಾರ್ಥಿಗಳು ಮನರಂಜನೆ, ಹಣಕಾಸು, ಆನ್‌ಲೈನ್ ಮಾರ್ಕೆಟಿಂಗ್, ಉತ್ಪಾದನೆ, ಜಾಹೀರಾತು, ಮಾಹಿತಿ ತಂತ್ರಜ್ಞಾನ, ವಿಮೆ, ಮಾಧ್ಯಮ, ವಾಯುಯಾನ, ಬ್ಯಾಂಕಿಂಗ್, ಕನ್ಸಲ್ಟೆನ್ಸಿಯಲ್ಲಿ ವೃತ್ತಿಜೀವನವನ್ನು ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ