ಈಗ ತಾನೇ ಪದವಿ (Degree) ಮುಗಿಸಿದ ಹೊಸ ಪದವೀಧರರು (Graduates) ಅಥವಾ ತಮ್ಮ ವೃತ್ತಿಜೀವನವನ್ನು (Career) ಈಗ ಸ್ಟಾರ್ಟ್ ಮಾಡಬೇಕು ಎಂದುಕೊಂಡವರಿಗೆ ಈಗ ಕೆಲಸ ಹುಡುಕುವುದು ಸ್ವಲ್ಪ ಕಷ್ಟವಾದ ಕೆಲಸ ಎಂದೇ ಹೇಳಬಹುದು. ಏಕೆಂದರೆ ಕೊರೋನಾ ಎಂಬ ಮಹಾಮಾರಿಯಿಂದ ಕೆಲಸ ಗಿಟ್ಟಿಸಿಕೊಳ್ಳುವುದು ಇಂದಿನ ಯುಗದಲ್ಲಿ ಅಷ್ಟು ಸುಲಭದ ಕೆಲಸವಲ್ಲ.
ಆದರೆ ನಾವಿಂದು ಈಗ ತಾನೇ ಪದವಿ ಮುಗಿಸಿ ಕೆಲಸ ಹುಡುಕುತ್ತಿರುವ 2023 -2024 ರ ಪದವೀಧರರಿಗೆ ತಮ್ಮ ವೃತ್ತಿ ಜೀವನವನ್ನು ಪ್ರಾರಂಭಿಸಲು ಉತ್ತಮ ಉದ್ಯೋಗಾವಕಾಶಗಳ ಪಟ್ಟಿಗಳನ್ನು ಇಲ್ಲಿ ನಿಮಗಾಗಿ ನೀಡಲಿದ್ದೇವೆ. ಅದರಿಂದ ನಿಮ್ಮ ವೃತ್ತಿ ಜೀವನ ಆರಂಭಿಸಲು ಅಲ್ಪ ಮಟ್ಟಿಗಾದ್ರೂ ಸಹಾಯ ಆಗಬಹುದು.
ಉದ್ಯೋಗ ತಜ್ಞರೇನು ಹೇಳ್ತಿದಾರೆ?
ಈಗ ಜಗತ್ತು ನಿಂತಿರುವುದೇ ತಂತ್ರಜ್ಞಾನ ಮತ್ತು ಕೈಗಾರಿಕೆಗಳ ಮೇಲೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಆಗಿದೆ. ಅದಕ್ಕೆ ಅನುಗುಣವಾಗಿ ಇಂದು ಉದ್ಯೋಗಗಳು ಸೃಷ್ಟಿಯಾಗುತ್ತಿವೆ.
ಆದ್ದರಿಂದ ಅವುಗಳ ಬಗ್ಗೆ ನಾವು ತಿಳಿದುಕೊಳ್ಳುವುದಕ್ಕಿಂತ ಉತ್ತಮ ತಜ್ಞರು ಅವುಗಳ ಬಗ್ಗೆ ತಿಳಿಸಿದ್ರೆ ಇನ್ನು ಉತ್ತಮ ಅಲ್ವಾ. ಅದಕ್ಕಾಗಿ ಇಂದು ನಮ್ಮ ಜೊತೆ ಉದ್ಯೋಗ ಪರಿಣಿತ ಫೈಂಡ್. ಇಂಕ್‌ನ ಸ್ಥಾಪಕ ಮತ್ತು ಸಿಇಒ ಹರಿಯೋಮ್ ಸೇಥ್ ಅವರು ಕೆಲವು ಉತ್ತಮ ಉದ್ಯೋಗವಕಾಶಗಳ ಬಗ್ಗೆ ಇಲ್ಲಿ ತಿಳಿಸಿದ್ದಾರೆ. ಅವುಗಳ ಬಗ್ಗೆ ನೋಡೊಣ ಬನ್ನಿ.
1) ಕೃತಕ ಬುದ್ಧಿಮತ್ತೆ (AI) ಮತ್ತು ಯಂತ್ರ ಕಲಿಕೆ (ML): ಆರೋಗ್ಯ ರಕ್ಷಣೆ, ಬ್ಯಾಂಕಿಂಗ್, ಸಾರಿಗೆ ಮತ್ತು ಗ್ರಾಹಕ ಸೇವೆಗಳು AI ಮತ್ತು ML ತಂತ್ರಜ್ಞಾನದಿಂದ ಪ್ರೋತ್ಸಾಹಿಸಲ್ಪಡುತ್ತಿರುವ ಪ್ರಸಿದ್ದ ಉದ್ಯೋಗ ಕ್ಷೇತ್ರಗಳಾಗಿವೆ.
ಕಂಪ್ಯೂಟರ್ ಸೈನ್ಸ್ ಅಥವಾ ಡೇಟಾ ಅನಾಲಿಟಿಕ್ಸ್ ಪದವೀಧರರು AI ಅಲ್ಗಾರಿದಮ್‌ಗಳನ್ನು ಡಿಸೈನ್ ಮಾಡುವ ಕೆಲಸವನ್ನು ಹುಡುಕಿಕೊಳ್ಳಬಹುದು. AI ಮತ್ತು ML ಭಾರತದಲ್ಲಿ ಹೆಚ್ಚು ಬೇಡಿಕೆಯಿರುವ ವೃತ್ತಿ ಅವಕಾಶಗಳಾಗಿವೆ.
ಈ ಉದ್ಯೋಗ ಕ್ಷೇತ್ರಗಳಲ್ಲಿ ಇರುವ ಸಂಬಳದ ವಿವರ: ಭಾರತದಲ್ಲಿ AI ಮತ್ತು ML ಇಂಜಿನಿಯರ್‌ಗಳ ವೇತನವು ವಾರ್ಷಿಕವಾಗಿ ಅಂದಾಜು ರೂ. 3.7 ಲಕ್ಷದಿಂದ ರೂ. 25.8 ಲಕ್ಷ ಆಗಿವೆ. ಇನ್ನು ಉತ್ತಮ ಕಂಪನಿಯಲ್ಲಿ ಆರಂಭಿಕ ವಾರ್ಷಿಕ ವೇತನವು ಸರಾಸರಿ ರೂ. 7.4 ಲಕ್ಷ ಆಗಿದೆ.
ಇದು ಅವರವರ ಶೈಕ್ಷಣಿಕ ಹಿನ್ನೆಲೆ ಮತ್ತು ಅನುಭವದ ಆಧಾರದ ಮೇಲೆ ಬೇರೆ ಬೇರೆ ಆಗಿರುತ್ತದೆ. ಇನ್ನು ಕೆಲವು ಪ್ರಮುಖ AI ಮತ್ತು ML ಉದ್ಯೋಗಗಳಿಗೆ ಇರುವ ಸಂಬಳದ ವಿವರ ಈ ಕೆಳಗಿನಂತಿದೆ. ಅವುಗಳ ಬಗ್ಗೆ ಇಲ್ಲಿ ಪಟ್ಟಿ ಮಾಡಲಾಗಿದೆ.
AI/ML ಇಂಜಿನಿಯರ್: AI/ML ಇಂಜಿನಿಯರ್ ಆಗಿ, ವೃತ್ತಿಪರರು ವಿವಿಧ ಕೈಗಾರಿಕೆಗಳಿಗೆ ಹೊಸ ಸೊಲ್ಯೂಷನ್‌ಗಳನ್ನು ಡೆವಲಪ್ ಮಾಡಲು AI ಮತ್ತು ML ತಂತ್ರಜ್ಞಾನವನ್ನು ಅಪ್ಲೈ ಮಾಡುತ್ತಾರೆ. ಭಾರತದಲ್ಲಿ AI/ML ಇಂಜಿನಿಯರ್‌ನ ಸರಾಸರಿ ವೇತನ ವಾರ್ಷಿಕವಾಗಿ ಸುಮಾರು ರೂ. 5-7 ಲಕ್ಷಗಳು ಎಂದು ಅಂದಾಜಿಸಲಾಗಿದೆ.
ಡೇಟಾ ಸೈಂಟಿಸ್ಟ್: ಡೇಟಾ ಸೈಂಟಿಸ್ಟ್‌ಗಳು ವ್ಯಾಪಾರ ನಿರ್ಧಾರಗಳನ್ನು ಚಾಲನೆ ಮಾಡಲು ಸಹಾಯ ಮಾಡಲು ದೊಡ್ಡ ಡೇಟಾಸೆಟ್‌ಗಳನ್ನು ವಿಶ್ಲೇಷಿಸಲು ಮತ್ತು ಆಪ್ಟಿಮೈಜ್ ಮಾಡಲು ಕೆಲಸ ಮಾಡುತ್ತಾರೆ. ಭಾರತದಲ್ಲಿ ಡೇಟಾ ಸೈಂಟಿಸ್ಟ್‌ಗಳ ಸರಾಸರಿ ವೇತನ ವಾರ್ಷಿಕವಾಗಿ ಸುಮಾರು ರೂ. 10-12 ಲಕ್ಷಗಳು ಎಂದು ಹೇಳಲಾಗಿದೆ.
ಸೈಬರ್ ಸುರಕ್ಷತೆ: ಭಾರತದಲ್ಲಿ ಸೈಬರ್ ಸೆಕ್ಯುರಿಟಿ ತಜ್ಞರ ಅಗತ್ಯವು ಅನೇಕ ವ್ಯವಹಾರಗಳಲ್ಲಿ ಸೈಬರ್‌ಡಾಕ್‌ಗಳು ಮತ್ತು ಡೇಟಾ ಉಲ್ಲಂಘನೆಗಳ ಹೆಚ್ಚಳದ ಪರಿಣಾಮವಾಗಿ ಬೆಳೆಯುತ್ತಿದೆ.
DSCI-Nasscom ವರದಿಯ ಪ್ರಕಾರ 2025 ರ ವೇಳೆಗೆ ಭಾರತಕ್ಕೆ ಹೆಚ್ಚುವರಿ ಮಿಲಿಯನ್ ಗಳಷ್ಟು ಸೈಬರ್ ಸೆಕ್ಯುರಿಟಿ ಕೆಲಸಗಾರರ ಅಗತ್ಯವಿರುತ್ತದೆ. ಸೈಬರ್ ಭದ್ರತೆಯನ್ನು ವೃತ್ತಿಯಾಗಿ ಉತ್ತೇಜಿಸಲು ಮತ್ತು ವಿದ್ಯಾರ್ಥಿಗಳಿಗೆ ತರಬೇತಿಯನ್ನು ನೀಡಲು ಭಾರತೀಯ ವ್ಯಾಪಾರಗಳು ಶೈಕ್ಷಣಿಕ ಸಂಸ್ಥೆಗಳೊಂದಿಗೆ ಸಹಕರಿಸುತ್ತಿವೆ. ಇದು ಹೆಚ್ಚು ಆಕರ್ಷಕ ವೃತ್ತಿ ಆಯ್ಕೆಯಾಗಿದೆ.
ಇತ್ತೀಚಿನ ಸಮೀಕ್ಷೆಗಳ ಪ್ರಕಾರ, ಹಲವಾರು ಸೈಬರ್ ಸೆಕ್ಯುರಿಟಿ ಉದ್ಯೋಗಗಳಿಗೆ ಇರುವ ವೇತನದ ವಿವರ ಈ ಕೆಳಗಿನಂತಿವೆ:
ಸೈಬರ್ ಸೆಕ್ಯುರಿಟಿ ವಿಶ್ಲೇಷಕರು: ವಾರ್ಷಿಕ ರೂ. 5–7 ಲಕ್ಷಗಳು, ನೆಟ್‌ವರ್ಕ್ ಭದ್ರತಾ ಇಂಜಿನಿಯರ್: ವಾರ್ಷಿಕ ರೂ. 4–9 ಲಕ್ಷಗಳು, ಸೈಬರ್ ಸೆಕ್ಯುರಿಟಿ ಸಲಹೆಗಾರ: ವಾರ್ಷಿಕ ರೂ. 15–25 ಲಕ್ಷಗಳು ಇವೆ.
ಅದರೊಂದಿಗೆ, ಸಂಸ್ಥೆ ಮತ್ತು ಸೈಬರ್ ಸೆಕ್ಯುರಿಟಿ ಸರ್ಟಿಫಿಕೆಟ್‌ಗಳನ್ನು ಅವಲಂಬಿಸಿ ವೇತನಗಳು ಬದಲಾಗಬಹುದು. ಅನೇಕ ಉದ್ಯೋಗದಾತರು CEH, CISSP, CISA, CompTIA ಸೆಕ್ಯುರಿಟಿ+, ಇತ್ಯಾದಿಗಳಂತಹ ಜಾಗತಿಕ ಸೈಬರ್ ಸೆಕ್ಯುರಿಟಿ ಸರ್ಟಿಫಿಕೆಟ್‌ಗಳನ್ನು ಹೊಂದಿರುವ ಅಭ್ಯರ್ಥಿಗಳನ್ನು ಉದ್ಯೋಗದಾತರು ಆಯ್ಕೆ ಮಾಡುತ್ತಿರುವುದು ಇಂದೂ ಚಾಲ್ತಿಯಲ್ಲಿದೆ.
2. ನವೀಕರಿಸಬಹುದಾದ ಶಕ್ತಿಯ ಕ್ಷೇತ್ರದಲ್ಲಿ ಉದ್ಯೋಗ:
ಕಳೆದ ಹತ್ತು ವರ್ಷಗಳಲ್ಲಿ, ರಾಷ್ಟ್ರೀಯ ಸೌರ ಮಿಷನ್ ಮತ್ತು ವಿಂಡ್ ಎನರ್ಜಿ ಮಿಷನ್‌ನಂತಹ ಕಾರ್ಯಕ್ರಮಗಳಿಂದಾಗಿ ಭಾರತದ ನವೀಕರಿಸಬಹುದಾದ ಇಂಧನ ಉದ್ಯಮವು ಗಮನಾರ್ಹವಾಗಿ ಬೆಳೆದಿದೆ.
ಹಸಿರು ಆರ್ಥಿಕತೆಯತ್ತ ಚಾಲನೆ ಮತ್ತು ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಅಗತ್ಯತೆಯಿಂದಾಗಿ ಈ ಕ್ಷೇತ್ರದಲ್ಲಿ ತಜ್ಞರ ಅಗತ್ಯ ಹೆಚ್ಚುತ್ತಿದೆ.
ನೀವು ಪರಿಸರ ವಿಜ್ಞಾನ, ಎಂಜಿನಿಯರಿಂಗ್ ಅಥವಾ ವ್ಯವಹಾರದ ಪದವಿ ಹೊಂದಿದ್ದರೆ ಸೌರ, ಗಾಳಿ ಅಥವಾ ಭೂಶಾಖದ ಶಕ್ತಿಯಂತಹ ಉದ್ಯಮಗಳಲ್ಲಿನ ಅವಕಾಶಗಳು ನಿಮ್ಮನ್ನು ಕೈ ಬೀಸಿ ಕರೆಯುತ್ತವೆ. ಈ ಉದ್ಯಮದಲ್ಲಿ ಸಂಬಳವು ನಿಮ್ಮ ಶಿಕ್ಷಣ ಮತ್ತು ಅನುಭವವನ್ನು ಅವಲಂಬಿಸಿರುತ್ತದೆ.
ನವೀಕರಿಸಬಹುದಾದ ಶಕ್ತಿಯ ಕ್ಷೇತ್ರದಲ್ಲಿ ಸಂಬಳ ಎಷ್ಟಿರಬಹುದು?
ಗ್ಲಾಸ್‌ಡೋರ್ ಪ್ರಕಾರ, ಸೌರ ಇಂಜಿನಿಯರ್‌ನ ಸರಾಸರಿ ವೇತನವು ವರ್ಷಕ್ಕೆ ರೂ.540,000 ಆಗಿದ್ದರೆ, ವಿಂಡ್ ಟರ್ಬೈನ್ ತಂತ್ರಜ್ಞರು ವರ್ಷಕ್ಕೆ ಸರಾಸರಿ ರೂ.359,000 ಗಳಿಸುತ್ತಾರೆ.
ನವೀಕರಿಸಬಹುದಾದ ಶಕ್ತಿಯ ಕ್ಷೇತ್ರದಲ್ಲಿ ಪ್ರಾಜೆಕ್ಟ್ ಮ್ಯಾನೇಜರ್‌ಗಳು ವರ್ಷಕ್ಕೆ ರೂ.900,000 ರಿಂದ ರೂ.2,500,000 ಗಳಿಸಬಹುದು ಮತ್ತು ಸೋಲಾರ್ ಪಿವಿ ಇನ್‌ಸ್ಟಾಲರ್‌ಗಳು ಅಥವಾ ಕಾರ್ಯಾಚರಣೆಗಳು ಮತ್ತು ನಿರ್ವಹಣಾ ತಂತ್ರಜ್ಞರಂತಹ ಆರಂಭಿಕ ಹಂತದ ಉದ್ಯೋಗಗಳಿಗೆ ಸಾಮಾನ್ಯವಾಗಿ ವರ್ಷಕ್ಕೆ ರೂ.200,000 ರಿಂದ ರೂ.400,000 ಇರಬಹುದು.
3. ಡಿಜಿಟಲ್ ಮಾರ್ಕೆಟಿಂಗ್ ಉದ್ಯಮ ಕ್ಷೇತ್ರ:
ಭಾರತದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಲಯದಲ್ಲಿ ಉದ್ಯೋಗ ಬೆಳವಣಿಗೆಯು ಗಣನೀಯವಾಗಿ ಹೆಚ್ಚಿವೆ. KPMG ಪ್ರಕಾರ, ಭಾರತೀಯ ಡಿಜಿಟಲ್ ಜಾಹೀರಾತು ಮಾರುಕಟ್ಟೆಯು 2024 ರ ವೇಳೆಗೆ 32% ರಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ ರೂ. 539.5 ಶತಕೋಟಿ ($7.1 ಶತಕೋಟಿ) ಗೆ ಹೆಚ್ಚುವ ನಿರೀಕ್ಷೆಯಿದೆ. ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಅನುಭವ ಹೊಂದಿರುವ ಅರ್ಹ ವ್ಯಕ್ತಿಗಳ ಅಗತ್ಯತೆ ಹೆಚ್ಚುತ್ತಿದೆ ಎಂದು ಇದು ಸೂಚಿಸುತ್ತದೆ.
ನೀವು ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ಆಸಕ್ತಿ ಹೊಂದಿದ್ದರೆ ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್, ಎಸ್‌ಇಒ ಸ್ಪೆಷಲಿಸ್ಟ್ ಅಥವಾ ಸೋಶಿಯಲ್ ಮೀಡಿಯಾ ಮ್ಯಾನೇಜರ್ ಆಗಿ ಕೆಲಸವನ್ನು ಆರಂಭಿಸುವುದರ ಕಡೆಗೆ ಗಮನ ಕೊಡಿ. ಡಿಜಿಟಲ್ ಮಾರ್ಕೆಟಿಂಗ್‌ನಲ್ಲಿ ವೃತ್ತಿಜೀವನಕ್ಕೆ ಅಗತ್ಯವಾದ ಕೌಶಲ್ಯ ಮತ್ತು ಅರ್ಹತೆಗಳನ್ನು ಅಭಿವೃದ್ಧಿಪಡಿಸಲು, ಹಲವಾರು ಶಿಫಾರಸು ಕೋರ್ಸ್‌ಗಳು ಮತ್ತು ಸರ್ಟಿಫಿಕೆಟ್‌ಗಳು ಇವೆ.
ಉದಾಹರಣೆಗೆ Google Analytics ಸರ್ಟಿಫಿಕೆಟ್ ಮತ್ತು ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್‌ಗಳಿಗೆ HubSpot ಸರ್ಟಿಫಿಕೆಟ್, Yoast SEO ಕೋರ್ಸ್ ಮತ್ತು SEO ತಜ್ಞರಿಗೆ Moz SEO ಕೋರ್ಸ್, ಮತ್ತು Facebook ಬ್ಲೂಪ್ರಿಂಟ್ ಮತ್ತು ಸಾಮಾಜಿಕ ಮಾಧ್ಯಮ ನಿರ್ವಾಹಕರಿಗೆ Hootsuite ಅಕಾಡೆಮಿ ಹೀಗೆ ಹತ್ತು ಹಲವಾರು ಕೋರ್ಸ್‌ಗಳಿವೆ.
ಈ ಕ್ಷೇತ್ರದಲ್ಲಿನ ಸಂಬಳದ ವಿವರ
ಈ ಕ್ಷೇತ್ರದಲ್ಲಿನ ವೇತನಗಳು ಸ್ಪರ್ಧಾತ್ಮಕವಾಗಿದ್ದು, ಡಿಜಿಟಲ್ ಮಾರ್ಕೆಟಿಂಗ್ ಮ್ಯಾನೇಜರ್‌ಗಳು ವಾರ್ಷಿಕವಾಗಿ ರೂ. 5,00,000 ರಿಂದ 12,00,000, ರೂ ನಡುವೆ ಗಳಿಸಬಹುದು.
ಇದರಲ್ಲಿ SEO ತಜ್ಞರು ವರ್ಷಕ್ಕೆ 2,40,000 ರಿಂದ 5,00,000 ಗಳಿಸುತ್ತಾರೆ. ಸಾಮಾಜಿಕ ಮಾಧ್ಯಮ ನಿರ್ವಾಹಕರು ವರ್ಷಕ್ಕೆ 3,00,000 ರಿಂದ 8,00,000 ಗಳಿಸಬಹುದು. ಉತ್ತಮ ಸ್ಕೋಪ್ ಇರುವ ಉದ್ಯೋಗ ಕ್ಷೇತ್ರವಾಗಿದೆ.
4. ಬ್ಲಾಕ್ಚೈನ್ ಉದ್ಯೋಗ ಕ್ಷೇತ್ರ:
ಈಗ ಬಹುತೇಕ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳು ತಮ್ಮ ಕಾರ್ಯಾಚರಣೆಗಳನ್ನು ಸುಗಮಗೊಳಿಸಲು ಮತ್ತು ಅವುಗಳ ಭದ್ರತೆಯನ್ನು ಹೆಚ್ಚಿಸಲು ಬ್ಲಾಕ್ಚೈನ್ ಎಂಬ ತಂತ್ರಜ್ಞಾನವನ್ನು ಬಳಸುವುದರಿಂದ, ಭಾರತದಲ್ಲಿ ಬ್ಲಾಕ್‌ಚೈನ್ ಪರಿಣತಿಗೆ ಬೇಡಿಕೆ ಹೆಚ್ಚುತ್ತಿದೆ.
NASSCOM ಪ್ರಕಾರ, ಭಾರತದಲ್ಲಿ ಬ್ಲಾಕ್‌ಚೈನ್ ವಲಯವು 2025 ರ ವೇಳೆಗೆ 35% ರಷ್ಟು ಹೆಚ್ಚು ಬೆಳೆಯುತ್ತದೆ ಎಂದು ಊಹಿಸಲಾಗಿದೆ. ಇದು ಉದ್ಯೋಗ ಸೃಷ್ಟಿಗೆ ಅಗಾಧವಾದ ಸಾಮರ್ಥ್ಯವನ್ನು ನೀಡುತ್ತದೆ.
ಇದರಲ್ಲಿ ಬ್ಲಾಕ್‌ಚೈನ್ ಡೆವಲಪರ್‌ಗಳು, ವಾಸ್ತುಶಿಲ್ಪಿಗಳು, ವಿಶ್ಲೇಷಕರು, ಪ್ರಾಜೆಕ್ಟ್ ಮ್ಯಾನೇಜರ್‌ಗಳು ಮತ್ತು ಸಂಶೋಧಕರಿಗೆ ಹೆಚ್ಚಿನ ಉದ್ಯೋಗವಕಾಶಗಳು ಇವೆ. ಇವು ಇದರಲ್ಲಿ ಹೆಚ್ಚಿನ ಬೇಡಿಕೆಯಲ್ಲಿರುವ ಕೆಲವು ವೃತ್ತಿಗಳು ಆಗಿವೆ.
ಬ್ಲಾಕ್‌ಚೈನ್ ಉದ್ಯೋಗ ಕ್ಷೇತ್ರದ ಸಂಬಳದ ವಿವರ
ಈ ಉದ್ಯೋಗಗಳಿಗೆ ವಾರ್ಷಿಕವಾಗಿ ವೇತನವು ರೂ. 6 ಲಕ್ಷದಿಂದ ರೂ. 25 ಲಕ್ಷದವರೆಗೆ ಇರುತ್ತದೆ. ಇದು ಉದ್ಯೋಗಿಗಳ ಶೈಕ್ಷಣಿಕ ಹಿನ್ನೆಲೆ ಮತ್ತು ಅನುಭವದ ಆಧಾರದ ಮೇಲೆ ಬೇರೆ ಬೇರೆ ಆಗಿರುತ್ತದೆ.
ಈ ವಿಸ್ತರಿಸುತ್ತಿರುವ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು, ಇತ್ತೀಚಿನ ಪದವೀಧರರು ಅಗತ್ಯವಿರುವ ಕೌಶಲ್ಯಗಳು, ಸರ್ಟಿಫಿಕೆಟ್‌ಗಳು ಮತ್ತು ಕೆಲಸದ ಅನುಭವವನ್ನು ಹೊಂದಿರಲೇಬೇಕಾದ ಅಗತ್ಯತೆ ಇದೆ.
ಅಭ್ಯರ್ಥಿಗಳಿಗೆ ಅಗತ್ಯವಿರುವ ಕೌಶಲ್ಯಗಳನ್ನು ಪಡೆಯಲು ಸಹಾಯ ಮಾಡುವ ಕೆಲವು ಸಲಹೆ ಕಾರ್ಯಕ್ರಮಗಳು ಬ್ಲಾಕ್‌ಚೈನ್ ಡೆವಲಪರ್ ಸರ್ಟಿಫಿಕೆಟ್, ಎಥೆರಿಯಮ್ ಡೆವಲಪರ್ ಸರ್ಟಿಫಿಕೆಟ್ ಮತ್ತು ಸ್ಮಾರ್ಟ್ ಕಾಂಟ್ರಾಕ್ಟ್ ಡೆವಲಪರ್ ಸರ್ಟಿಫಿಕೆಟ್ ಅನ್ನು ಒಳಗೊಂಡಿವೆ.
ಇದನ್ನೂ ಓದಿ: Career After BBA: ಕಾಮರ್ಸ್ ವಿದ್ಯಾರ್ಥಿಗಳಿಗೆ ಬಿಬಿಎ ಪದವಿ ಬಳಿಕ ವೃತ್ತಿ ಆಯ್ಕೆ ಹೇಗಿದ್ದರೆ ಉತ್ತಮ?
ಕೇವಲ ಸರ್ಟಿಫಿಕೆಟ್ ಹೊಂದಿದ್ದರೆ ಮಾತ್ರ ಕೆಲಸ ಸಿಗುತ್ತದೆ ಎಂಬುದು ಇಂದಿನ ಕಾಲಕ್ಕೆ ಅನ್ವಯವಾಗುವುದಿಲ್ಲ. ಏಕೆಂದರೆ ಇಂದು ಎಲ್ಲ ಉದ್ಯೋಗ ಕ್ಷೇತ್ರಗಳು ಪ್ರಾಕ್ಟಿಕಲ್ ಜ್ಞಾನಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತಿವೆ.
ಆದ್ದರಿಂದ ನೀವು ಆಯ್ಕೆ ಮಾಡಿಕೊಳ್ಳುವ ಉದ್ಯೋಗ ಕ್ಷೇತ್ರದಲ್ಲಿ ಪ್ರಾಯೋಗಿಕ ಕೌಶಲ್ಯಗಳ ಅಭಿವೃದ್ಧಿ ಮತ್ತು ಕೈಗಾರಿಕಾ ಅನುಭವಗಳ ಇಂಟರ್ನ್‌ಶಿಪ್‌ಗಳನ್ನು ಮಾಡುವುದು ಉತ್ತಮ. ಇದರಿಂದ ಬ್ಲಾಕ್‌ಚೈನ್ ಯೋಜನೆಗಳಲ್ಲಿ ಕೆಲಸ ಮಾಡಲು ಉಪಯುಕ್ತವಾಗುತ್ತದೆ.
ಕೊನೆಯದಾಗಿ ನಾವಿಂದು ನಿಮಗೆ ತಿಳಿಸಿದ ಉದ್ಯೋಗ ಮಾಹಿತಿ ಸಮಗ್ರ ಅಥವಾ ಅಂತಿಮ ಪಟ್ಟಿಯಲ್ಲ. ಇದು ಕಾಲ ಕಾಲಕ್ಕೆ ಬದಲಾಗುತ್ತಲೇ ಇರುತ್ತದೆ. ಮುಂಬರುವ ವರ್ಷಗಳಲ್ಲಿ ಹೊಸ ಕ್ಷೇತ್ರಗಳು ಅಭಿವೃದ್ಧಿಗೊಳ್ಳಬಹುದು ಅಥವಾ ಇಲ್ಲದೇ ಇರಬಹುದು. ಅದು ಆಗಾಗ ನವೀಕರಣಗೊಳ್ಳುತ್ತಲೇ ಇರುತ್ತದೆ ಎಂಬುದನ್ನು ನೆನಪಿಡಿ.
ಮುಖ್ಯವಾಗಿ ಒಂದು ಉದ್ಯೋಗ ಪಡೆಯಲು ಪದವಿ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ, ಆ ಕ್ಷೇತ್ರದ ಬಗ್ಗೆ ನಿಮಗಿರುವ ಆಸಕ್ತಿ, ಕೌಶಲ್ಯಗಳು, ಪ್ರಾಕ್ಟಿಕಲ್ ಜ್ಞಾನ ಹೀಗೆ ಹತ್ತು ಹಲವು. ಸೋ ಅದರ ಕಡೆಗೆ ಹೆಚ್ಚಿನ ಗಮನ ನೀಡಿ ಉದ್ಯೋಗವನ್ನು ಆದಷ್ಟು ಬೇಗ ಪಡೆಯುವಲ್ಲಿ ಯಶಸ್ವಿಯಾಗುತ್ತಿರಿ ಎಂಬುದು ನಮ್ಮ ಆಶಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ