ಪ್ರಪಂಚದಲ್ಲಿ ವೇಗವಾಗಿ ಬೆಳೆಯುತ್ತಿರುವ ವೃತ್ತಿಗಳಲ್ಲಿ (Career) ಫಿಸಿಯೋಥೆರಪಿ (Physiotherapy) ಅಥವಾ ಭೌತಚಿಕಿತ್ಸೆ ಕೂಡ ಒಂದು. ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವವರಿಗೆ ಇದು ಹಲವಾರು ವೃತ್ತಿ ಆಯ್ಕೆಗಳನ್ನು (Career Options) ನೀಡುತ್ತದೆ. ಇದು ಆರೋಗ್ಯ ಕ್ಷೇತ್ರದಲ್ಲಿ ಶೇ. 5.44 ರಷ್ಟು ಅಂದಾಜು ವಾರ್ಷಿಕ ಬೆಳವಣಿಗೆಯ ದರದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ವೇಗವಾಗಿ ಬೆಳೆಯುತ್ತಿರುವ ವೃತ್ತಿಗಳಲ್ಲಿ ಒಂದಾಗಿದೆ.
ಹಾಗಿದ್ರೆ ಈ ಫಿಸಿಯೋಥೆರಪಿ ಅಥವಾ ಭೌತಚಿಕಿತ್ಸೆ ಎಂದರೇನು ಅನ್ನೋದನ್ನು ನೋಡೋದಾದ್ರೆ, ಗಾಯ, ಅನಾರೋಗ್ಯ ಅಥವಾ ಅಂಗವೈಕಲ್ಯದಿಂದಾಗಿ ಚಲನೆ ಮತ್ತು ಕೆಲಸಗಳನ್ನು ಮಾಡಲು ಸಾಧ್ಯವಾಗದ ಸಂದರ್ಭದಲ್ಲಿ ಈ ಭೌತಚಿಕಿತ್ಸೆಯನ್ನು ನೀಡಲಾಗುತ್ತದೆ. ಪ್ರಸಕ್ತ ಫಿಸಿಯೋಥೆರಪಿಸ್ಟ್‌ಗಳನ್ನು 'ಚಲನೆ ವಿಜ್ಞಾನಿಗಳು' ಎಂದು ಕರೆಯಲಾಗುತ್ತಿದೆ. ಪ್ರತಿ 10,000 ನಾಗರಿಕರಿಗೆ ಒಬ್ಬ ಫಿಸಿಯೋಥೆರಪಿಸ್ಟ್ ಅಗತ್ಯವಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜು ಮಾಡಿದೆ.
ಇನ್ನು, ಶಿಕ್ಷಣ ಮತ್ತು ಅಭ್ಯಾಸದ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ ಮಂಡಳಿಯನ್ನು ಇತ್ತೀಚೆಗೆ ಸ್ಥಾಪಿಸಲಾಗಿದೆ. ಹಾಗಿದ್ದರೆ ಫಿಸಿಯೋಥೆರಪಿ ಕ್ಷೇತ್ರದಲ್ಲಿ ವೃತ್ತಿ ಆಯ್ಕೆ ಹೇಗೆ ಎಂಬುದರ ವಿವರ ಹೀಗಿದೆ ನೋಡಿ.
ಅರ್ಹತೆ ಏನಿರಬೇಕು?
ಪಿಯುಸಿಯಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವಶಾಸ್ತ್ರ ವಿಷಯ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಬಹುದು. ಭಾರತದಲ್ಲಿ ಬ್ಯಾಚುಲರ್ ಆಫ್ ಫಿಸಿಯೋಥೆರಪಿ (B.PT) ನಾಲ್ಕು ವರ್ಷಗಳ ಡಿಗ್ರಿ ಆಗಿದೆ. ನಂತರ ಆರು ತಿಂಗಳ ಇಂಟರ್ನ್‌ಶಿಪ್ ಮಾಡಬೇಕಿರುತ್ತದೆ.
ಇದು ನರಸ್ನಾಯುಕ, ಕಾರ್ಡಿಯೋಪಲ್ಮನರಿ, ವ್ಯಾಯಾಮ ಶರೀರಶಾಸ್ತ್ರ, ವಿವಿಧ ರೋಗ ಪರಿಸ್ಥಿತಿಗಳು ಮತ್ತು ಗಾಯಗಳ ನಿರ್ವಹಣೆ ಸೇರಿದಂತೆ ಮಾನವ ದೇಹದ ಬಗ್ಗೆ ಸಮಗ್ರ ಜ್ಞಾನವನ್ನು ಒದಗಿಸುತ್ತದೆ. ಕೆಲವು ಕಾಲೇಜುಗಳು ಡಿಪ್ಲೊಮಾವನ್ನು ನೀಡುತ್ತವೆ.
ಸ್ನಾತಕೋತ್ತರ ಪದವಿಯನ್ನೂ ಮಾಡಬಹುದು
ಪದವಿಯ ನಂತರ, ಸ್ನಾತಕೋತ್ತರ ಪದವಿ ಪಡೆಯಲು ಬಯಸುವ ವಿದ್ಯಾರ್ಥಿಗಳು ಹೃದ್ರೋಗ, ನರವಿಜ್ಞಾನ, ಮೂಳೆಚಿಕಿತ್ಸೆ, ಕ್ರೀಡೆ, ಮಹಿಳಾ ಆರೋಗ್ಯ, ಪೀಡಿಯಾಟ್ರಿಕ್ಸ್ ಮತ್ತು ಸಮುದಾಯ ಆರೋಗ್ಯದಂತಹ ವಿಶೇಷತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸ್ನಾತಕೋತ್ತರ ಪದವಿ ಎರಡು ವರ್ಷದ್ದಾಗಿರುತ್ತದೆ.
ಇದರಲ್ಲಿ ಅತ್ಯಂತ ಜನಪ್ರಿಯವಾದವು ನರ-ಭೌತಚಿಕಿತ್ಸೆ (ನ್ಯೂರೋ ಫಿಸಿಯೋಥೆರಪಿ)ಮತ್ತು ಆರ್ಥೋ ಫಿಸಿಯೋಥೆರಪಿ. ಇದು ಕೌಶಲ್ಯ-ಆಧಾರಿತ ವಿಭಾಗವಾಗಿರುವುದರಿಂದ, ನ್ಯೂರೋ-ಡೆವಲಪ್‌ಮೆಂಟಲ್ ಥೆರಪಿ (NDT) ನಂತಹ ವಿಭಿನ್ನ ತಂತ್ರಗಳಿಗೆ ಪ್ರಮಾಣಪತ್ರ ಕೋರ್ಸ್‌ಗಳಿವೆ.
ಫಿಸಿಯೋಥೆರಪಿಯಲ್ಲಿ ವೃತ್ತಿ ಆಯ್ಕೆ
ಭೌತಚಿಕಿತ್ಸೆಯ ವಿಭಾಗದಲ್ಲಿ ನಿರ್ದಿಷ್ಟ ವಿಶೇಷತೆಗಳು ಮತ್ತು ವೃತ್ತಿ ಆಯ್ಕೆಗಳಿವೆ. ಫಿಸಿಯೋಥೆರಪಿಸ್ಟ್‌ಗಳು ಈಗ ಅನೇಕ ನರವೈಜ್ಞಾನಿಕ ಪರಿಸ್ಥಿತಿಗಳಾದ ವೆಸ್ಟಿಬುಲರ್ ರಿಹ್ಯಾಬಿಟೇಶನ್ ಮತ್ತು ಸಮತೋಲನ ಮತ್ತು ವಯಸ್ಸಾದವರಿಗೆ ಚಿಕಿತ್ಸೆ ನೀಡುತ್ತಾರೆ.
ಇದು ಕ್ರೀಡೆ ಮತ್ತು ಫಿಟ್ನೆಸ್ನಲ್ಲಿಯೂ ಸಹ ಅಪ್ಲಿಕೇಶನ್‌ಗಳನ್ನು ಹೊಂದಿದೆ. ಪೆಲ್ವಿಕ್ ಫ್ಲೋರ್ ಅಥವಾ ಮಹಿಳೆಯರ ಆರೋಗ್ಯದಂತಹ ತುಲನಾತ್ಮಕವಾಗಿ ಹೊಸ ವಿಶೇಷತೆಗಳನ್ನು ಸೇರಿಸುವುದರೊಂದಿಗೆ, ಅಭ್ಯಾಸದ ವ್ಯಾಪ್ತಿಯು ಸಹ ವಿಸ್ತಾರಗೊಂಡಿದೆ. ಅನಾರೋಗ್ಯ ಅಥವಾ ಗಾಯದ ನಂತರ ರೋಗಿಗಳನ್ನು ನಿರ್ದಿಷ್ಟ ಪರಿಸರದಲ್ಲಿ ಚಿಕಿತ್ಸೆ ನೀಡಲಾಗುವಂಥ ರಿಹ್ಯಾಬಿಟೇಶನ್ ಕೂಡ ಇದರಲ್ಲಿ ಲಭ್ಯವಿರುತ್ತದೆ.
ಇದನ್ನೂ ಓದಿ: Cyber Security: ಸದಾ ಬೇಡಿಕೆಯಲ್ಲಿರುವ ವೃತ್ತಿ ಇದು; ಸೈಬರ್ ಸೆಕ್ಯೂರಿಟಿ ಆಯ್ಕೆಗೆ ಇವೆ 5 ಕಾರಣಗಳು
ರೋಗಿಯ ಮನೆಗೇ ತೆರಳಿ ಚಿಕಿತ್ಸೆ ನೀಡುತ್ತಾರೆ
ಸಂಪೂರ್ಣ ಪುನರ್ವಸತಿ ಕೂಡ ಇತ್ತೀಚಿಗೆ ಜನಪ್ರಿಯವಾಗಿದೆ. ಪರಿಣಾಮವಾಗಿ, ಫಿಸಿಯೋಥೆರಪಿಸ್ಟ್ ಆದವರು ದೀರ್ಘಾವಧಿಯ ಅನಾರೋಗ್ಯ ಅಥವಾ ಬೆನ್ನುಹುರಿಯ ಗಾಯಗಳ ಸಂದರ್ಭದಲ್ಲಿ ಮನೆಯ ವಾತಾವರಣದಲ್ಲಿಯೇ ಚಿಕಿತ್ಸೆ ನೀಡುತ್ತಾರೆ.
ಇನ್ನು, ಸಂಶೋಧನೆ ಮತ್ತು ತಾಂತ್ರಿಕತೆಗಳ ಜೊತೆಗೆ ಗಾಲಿಕುರ್ಚಿಗಳು, ಬಯೋನಿಕ್ ತೋಳುಗಳು ಮತ್ತು ವರ್ಚುವಲ್ ರಿಯಾಲಿಟಿ (AR/VR) ರಿಹ್ಯಾಬ್ ಸಾಧನಗಳಂತಹ ಅನೇಕ ಹೊಸ ಕಾರ್ಯಕ್ರಮಗಳು ಜನರಿಗೆ ಸಿಗಲಿದೆ. ಇದು ರೋಗಿಯಲ್ಲಿ ಉತ್ತಮ ಫಲಿತಾಂಶಗಳನ್ನು ತರುವುದಲ್ಲದೇ ಪರಿಸ್ಥಿತಿಗಳ ಬಗ್ಗೆ ಭೌತಶಾಸ್ತ್ರಜ್ಞರ ತಿಳುವಳಿಕೆಯನ್ನು ಸುಧಾರಿಸುತ್ತದೆ.
ಒಟ್ಟಾರೆ ಫಿಸಿಯೋಥೆರಪಿ ಕ್ಷೇತ್ರದಲ್ಲಿ ಬಹಳಷ್ಟು ವೃತ್ತಿ ಆಯ್ಕೆಗಳಿವೆ. ಅಲ್ಲದೇ ಈ ಕ್ಷೇತ್ರದಲ್ಲಿ ಆರಂಭಿಕವಾಗಿ ಮಧ್ಯಮ ಪ್ರಮಾಣದ ವೇತನವನ್ನೂ ನೀವು ಪಡೆದುಕೊಳ್ಳಬಹುದು. ನಿಮಗೆ ಈ ಕ್ಷೇತ್ರದಲ್ಲಿ ಆಸಕ್ತಿ ಇದ್ದರೆ ಖಂಡಿತಾ ಫಿಸಿಯೋಥೆರಪಿ ಕೋರ್ಸ್ ಮಾಡಬಹುದು. ಈ ಮೂಲಕ ಒಳ್ಳೆಯ ವೃತ್ತಿ ಜೀವನವನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ