ಫ್ರೆಶರ್‌ಗಳಿಗೆ (Freshers) ಉದ್ಯೋಗ (Job) ಪಡೆಯಲು ಹಾಗೂ ಅನುಭವಿ ವೃತ್ತಿಪರರಿಗೆ ಹೊಸ ಕೆಲಸ ಹುಡುಕಲು ಸರಿಯಾದ ರೆಸ್ಯೂಮ್ (Resume) ಬೇಕೇ ಬೇಕು. ನಿಮ್ಮ ರೆಸ್ಯೂಮ್ ಆಕರ್ಷಕವಾಗಿದ್ದರೆ, ಉದ್ಯೋಗದಾತರ ಗಮನ ಸೆಳೆಯುವಂತಿದ್ದರೆ ನಿಮಗೆ ಸಂದರ್ಶನಕ್ಕೆ (Interview) ಕರೆ ಬರುತ್ತದೆ. ಆದ್ದರಿಂದ ಉದ್ಯೋಗ ಪಡೆಯುವಲ್ಲಿ ರೆಸ್ಯೂಮ್ ಪ್ರಮುಖ ಪಾತ್ರ ವಹಿಸುತ್ತದೆ. ರೆಸ್ಯೂಮ್ ಎಂದರೆ ಅದರಲ್ಲಿ ಒಬ್ಬ ವ್ಯಕ್ತಿ ಹೊಂದಿರುವ ಶಿಕ್ಷಣ ಅರ್ಹತೆಗಳು (Qualification) ಮತ್ತು ಹಿಂದಿನ ಕೆಲಸದ ಅನುಭವ, ಕೌಶಲ್ಯಗಳ ವಿವರಗಳಿರುತ್ತವೆ. ಇದು ವ್ಯಕ್ತಿಯ ರುಜುವಾತುಗಳು, ವೃತ್ತಿಪರ ಪ್ರಯತ್ನಗಳು ಸೇರಿದಂತೆ ಎಲ್ಲ ಸಾಮರ್ಥ್ಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಒದಗಿಸುವ ಔಪಚಾರಿಕ ದಾಖಲೆ ಎನ್ನಬಹುದು. ಈ ಸ್ಪರ್ಧಾತ್ಮಕ ಯುಗದಲ್ಲಿ ನಿಮ್ಮ ರೆಸ್ಯೂಮ್ ಎದ್ದು ಕಾಣುವಂತೆ ಮಾಡಲು ಉದ್ಯೋಗದಾತರ ಗಮನವನ್ನು ವೇಗವಾಗಿ ಸೆಳೆಯಲು ಪ್ರೊಫೆಶನಲ್ ಆಗಿ ರೆಸ್ಯೂಮ್ಅನ್ನು ರಚಿಸುವಂತೆ ಹಲವಾರು ತಜ್ಞರು ಸಲಹೆ ನೀಡುತ್ತಾರೆ.
ಅದಕ್ಕಾಗಿ ಸೂಕ್ತವಾದ ರೆಸ್ಯೂಮ್ಅನ್ನು ತಯಾರಿಸಲು ಸರಿಯಾದ ಕೌಶಲ್ಯ ಮತ್ತು ತಾಂತ್ರಿಕ ಜ್ಞಾನದ ಮಾಹಿತಿ ಹೊಂದಿರುವುದು ಮುಖ್ಯ. ತಮ್ಮಿಷ್ಟದ ಉದ್ಯೋಗವನ್ನು ಪಡೆಯಲು ರೆಸ್ಯೂಮ್ ಮಹತ್ವದ ಪಾತ್ರ ವಹಿಸುತ್ತದೆ, ಹಾಗಾಗಿ ಅದನ್ನು ಪರಿಣಾಮಕಾರಿಯಾಗುವಂತೆ ಹೇಗೆ ರಚಿಸುವುದು ಅನ್ನೋ ಪ್ರಶ್ನೆ ಬಹಳ ಜನರಲ್ಲಿರುತ್ತದೆ. ಅಂಥವರಿಗಾಗಿಯೇ ಪ್ರೊಫೆಶನಲ್ ಆಗಿ ರೆಸ್ಯೂಮ್‌ಅನ್ನು ಹೇಗೆ ರಚಿಸುವುದು ಅನ್ನೋ ಬಗ್ಗೆ ಇಲ್ಲಿವೆ ಹತ್ತು ಉಪಯುಕ್ತ ಸಲಹೆಗಳು.
1) ನಿಮ್ಮ ಸಾಧನೆಗಳನ್ನು ಹೈಲೈಟ್ ಮಾಡಿ: ಉದ್ಯೋಗಾಕಾಂಕ್ಷಿಗಳು ತಮ್ಮ ಶೈಕ್ಷಣಿಕ ಸಂಶೋಧನೆ, ವೃತ್ತಿಪರ ಸಂಬಂಧಗಳು, ಪೋರ್ಟ್‌ಫೋಲಿಯೋ ಲಿಂಕ್ ಮತ್ತು ಆನ್‌ಲೈನ್ ಉಪಸ್ಥಿತಿಗಳನ್ನು ತಮ್ಮ ರೆಸ್ಯೂಮ್‌ನಲ್ಲಿ ಹೈಲೈಟ್ ಮಾಡಲು ಸಲಹೆ ನೀಡಲಾಗುತ್ತದೆ. ಅಂದಹಾಗೆ ಈ ಮಾಹಿತಿಯನ್ನು ‘ಕೆಲಸದ ಅನುಭವ’ ವಿಭಾಗದಲ್ಲಿ ಸೇರಿಸುವುದು ಉತ್ತಮ.
2) ಕೆಲಸಕ್ಕೆ ಅರ್ಜಿ ಸಲ್ಲಿಸಲು ಕಾರಣವನ್ನು ತಿಳಿಸಿ: ನೀವು ಆ ಕೆಲಸ ಮಾಡಲು ಏಕೆ ಆಸಕ್ತಿ ಹೊಂದಿದ್ದೀರಿ ಎಂಬುದನ್ನು ಕಂಪನಿಯವರಿಗೆ ತೋರಿಸುವುದು ಬಹಳ ಮುಖ್ಯ. ಕೆಲಸವು ನಿಮಗೆ ಏಕೆ ಸೂಕ್ತವಾಗಿದೆ ಮತ್ತು ಆ ಕಂಪನಿಗೆ ನೀವು ಹೇಗೆ ಉತ್ತಮ ರೀತಿಯಲ್ಲಿ ಕೊಡುಗೆ ನೀಡಬಹುದು ಎಂಬುದನ್ನು ರೆಸ್ಯೂಮ್‌ನಲ್ಲಿ ಹೇಳಿ.
3) ಹೆಚ್ಚು ಸೃಜನಶೀಲತೆಯನ್ನು ತಪ್ಪಿಸಿ: ಮುಖ್ಯವಾಗಿ ನಿಮ್ಮ ರೆಸ್ಯೂಮ್ ಸಂಕ್ಷಿಪ್ತವಾಗಿರಲಿ. ನೇರವಾಗಿರಲಿ. ಹಾಗೆಯೇ ಅಗತ್ಯ ಮಾಹಿತಿಯನ್ನು ಮಾತ್ರ ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏಕೆಂದರೆ ನೇಮಕಾತಿ ಮಾಡುವವರು ಹೆಚ್ಚು ಸೃಜನಶೀಲತೆಯನ್ನು ಇಷ್ಟಪಡದಿರಬಹುದು.
4) ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿರಲಿ: ನಿಮ್ಮ ರೆಸ್ಯೂಮ್‌ನಲ್ಲಿ ಯಾವುದೇ ಕಾಗುಣಿತ ಅಥವಾ ವ್ಯಾಕರಣ ದೋಷಗಳಿಲ್ಲ ಎಂದು ಖಚಿತಪಡಿಸಿಕೊಳ್ಳಿ. ರೆಸ್ಯೂಮ್‌ನಲ್ಲಿ ಸಣ್ಣ ಕಾಗುಣಿತ ತಪ್ಪು ಕೂಡ ಉದ್ಯೋಗದಾತರಿಗೆ ನಕಾರಾತ್ಮಕ ಅಭಿಪ್ರಾಯ ಹೊಂದಲು ದಾರಿ ಮಾಡಿ ಕೊಡಬಹುದು.
5) ನಿಮ್ಮ ರೆಸ್ಯೂಮ್ ಅನ್ನು ಎರಡು ಪುಟಗಳಿಗೆ ಮಿತಿಗೊಳಿಸಿ: ಎಲ್ಲ ಅಂಶಗಳನ್ನು ಹೆಚ್ಚು ವಿವರವಾಗಿ ಬರೆಯದೇ ಮುಖ್ಯವಾದವುಗಳನ್ನು ಹಾಗೂ ಇತ್ತೀಚಿನ ಅನುನಭವಗಳನ್ನು ಹೈಲೈಟ್ ಮಾಡಿ. ನಿಮ್ಮ ರೆಸ್ಯೂಮ್‌ನಲ್ಲಿ, ಉದ್ಯೋಗದಾತರು ಹೆಚ್ಚು ಸಂಬಂಧಿತ ಮಾಹಿತಿಯ ಮೇಲೆ ಗಮನಹರಿಸಬಹುದಾದ್ದರಿಂದ ನೀವು ಅದನ್ನು ಶಾರ್ಟ್ ಆಂಡ್ ಸ್ವೀಟ್ ಆಗಿಡುವುದು ಮುಖ್ಯ. ಹಾಗಾಗಿ ನಿಮ್ಮ ರೆಸ್ಯೂಮ್‌ಅನ್ನು ಎರಡು ಪುಟಗಳಿಗೆ ಮಿತಿಗೊಳಿಸಿ.
6) ಪೋಸ್ಟ್‌ಗೆ ಅನುಗುಣವಾಗಿ ನಿಮ್ಮ ರೆಸ್ಯೂಮ್ ಅನ್ನು ಹೊಂದಿಸಿ: ನೀವು ಅರ್ಜಿ ಸಲ್ಲಿಸುತ್ತಿರುವ ಹುದ್ದೆಗೆ ಸಂಬಂಧಿಸಿದ ಕೆಲಸದ ಅನುಭವ ಅಥವಾ ಸಾಧನೆಗಳನ್ನು ನಿರ್ದಿಷ್ಟಪಡಿಸಿ ನಮೂದಿಸಿ. ಆದ್ದರಿಂದ ನೀವು ಆ ಹುದ್ದೆಗೆ ಹೆಚ್ಚು ಸೂಕ್ತ ಎಂದು ಅವರು ಪರಿಗಣಿಸಬಹುದು.
7) ನಿಮ್ಮ ಸಾಧನೆಗಳನ್ನು ಪ್ರಮಾಣೀಕರಿಸಿ: ನಿಮ್ಮ ರೆಸ್ಯೂಮ್‌ನಲ್ಲಿ ಫರ್ಮ್ ಸಂಖ್ಯೆಗಳನ್ನು ಬಳಸಿ. ಉದಾಹರಣೆಗೆ, ನೀವು ಎಷ್ಟು ಜನರನ್ನು ಮೇಲ್ವಿಚಾರಣೆ ಮಾಡಿದ್ದೀರಿ, ಎಷ್ಟು ಹೊಸ ಉದ್ಯಮಗಳ ಭಾಗವಾಗಿದ್ದೀರಿ ಎಂಬಂತಹ ಮಾಹಿತಿಗಳನ್ನು ನೀಡಿ. ಇದರಿಂದ ಉದ್ಯೋಗದಾತರು ಹೆಚ್ಚು ಪ್ರಭಾವಿತರಾಗಬಹುದು.
8) ಹೆಚ್ಚು ಬುಲೆಟ್‌ಗಳನ್ನು ಬಳಸಬೇಡಿ: ಪ್ರತಿ ರೆಸ್ಯೂಮ್ ವಿಭಾಗ ಅಥವಾ ಉಪ ವಿಭಾಗವನ್ನು 5-7 ಬುಲೆಟ್ ಪಾಯಿಂಟ್‌ಗಳಿಗೆ ಸೀಮಿತಗೊಳಿಸಿ. ಈ ಮೂಲಕ ನಿಮ್ಮ ರೆಸ್ಯೂಮ್ಅನ್ನು ಓದಲು ಸುಲಭವಾಗುತ್ತದೆ. ಅಲ್ಲದೇ ಮಾಹಿತಿಯನ್ನು ಸಂಬಂಧಿತ ಮತ್ತು ಸಂಕ್ಷಿಪ್ತವಾಗಿ ಇಟ್ಟುಕೊಳ್ಳುವ ಮೂಲಕ ಪ್ರತಿಯೊಂದು ಬುಲೆಟ್ ಪಾಯಿಂಟ್ಅನ್ನು ಎಚ್ಚರಿಕೆಯಿಂದ ಬಳಸಬೇಕು.
9) ನಿಮ್ಮ ಸಂಪರ್ಕ ಮಾಹಿತಿಯನ್ನು ಸೇರಿಸಿ: ನಿಮ್ಮ ರೆಸ್ಯೂಮ್ ನಿಮ್ಮ ಹೆಸರು, ವಿಳಾಸ, ಇಮೇಲ್ ಮತ್ತು ಫೋನ್ ಸಂಖ್ಯೆಯನ್ನು ಒಳಗೊಂಡಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅಲ್ಲದೇ ಈ ಮಾಹಿತಿಯನ್ನು ಮೊದಲ ಪುಟದ ಮೇಲ್ಭಾಗದಲ್ಲಿ ಇರಿಸಬೇಕು. ಈ ಮಾಹಿತಿಯು ನಿಖರವಾಗಿದೆ ಎಂಬುದನ್ನು ಮತ್ತೊಮ್ಮೆ ಪರಿಶೀಲಿಸಿಕೊಳ್ಳಿ.
10) ರೆಫರೆನ್ಸ್‌ಗಳನ್ನು ಯಾವಾಗ ಒದಗಿಸಬೇಕೆಂದು ತಿಳಿಯಿರಿ: ಬಹಳಷ್ಟು ರೆಸ್ಯೂಮ್‌ಗಳು ಸಲ್ಲಿಕೆಯಾದಲ್ಲಿ ಕೆಲವೇ ರೆಸ್ಯೂಮ್‌ಗಳನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ. ನಂತರ ಆಯ್ಕೆ ಮಾಡಲಾಗುತ್ತದೆ. ಆದರೆ ಉದ್ಯೋಗದಾತರು ಯಾರನ್ನಾದರೂ ನೇಮಿಸಿಕೊಳ್ಳಲು ಗಂಭೀರವಾಗಿ ಪರಿಗಣಿಸುತ್ತಿದ್ದರೆ ಮಾತ್ರ ರೆಫರೆನ್ಸ್‌ಗಳ ಅಗತ್ಯವಿರುತ್ತದೆ. ಹೆಚ್ಚುವರಿಯಾಗಿ, ರೆಸ್ಯೂಮ್ ಹಾರ್ಡ್ ಸ್ಕಿಲ್ ಮತ್ತು ಸಾಫ್ಟ್ ಸ್ಕಿಲ್‌ಗಳನ್ನು ಒಳಗೊಂಡಿರಬೇಕು.
ಇನ್ನೊಂದು ಮುಖ್ಯವಾದ ಅಂಶವೆಂದರೆ ಸರಳ ಮತ್ತು ಓದಬಲ್ಲ ಫಾಂಟ್ಅನ್ನು ನೀವು ಆಯ್ಕೆ ಮಾಡಬೇಕು. ನೀವು ಸರಿಯಾದ ರೆಸ್ಯೂಮ್ ಸ್ವರೂಪವನ್ನು ಬಳಸುತ್ತಿರುವಿರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಉದ್ಯೋಗಕ್ಕೆ ಸಂಬಂಧಿತ ಶಿಕ್ಷಣ ಸರ್ಟಿಫಿಕೇಟ್‌ಗಳನ್ನು ಪಟ್ಟಿ ಮಾಡಬೇಕು.
ರೆಸ್ಯೂಮ್ ರಚಿಸುವಾಗ ಈ ತಪ್ಪುಗಳನ್ನು ಮಾಡಬೇಡಿ!
ರೆಸ್ಯೂಮ್ ರಚಿಸುವಾಗ ಯಾವೆಲ್ಲ ಅಂಶಗಳನ್ನು ಸೇರಿಸಬೇಕು ಎಂಬ ಬಗ್ಗೆ ಹಲವರು ಜಾಗೃತರಾಗಿರುತ್ತಾರೆ. ಆದರೆ ಕೆಲವೊಮ್ಮ ಸೇರಿಸಬಾರದ ವಿಷಯಗಳನ್ನೂ ಅದರಲ್ಲಿ ಸೇರಿಸಿರುತ್ತಾರೆ. ಆದ್ದರಿಂದ ಯಾವ ವಿಷಯಗಳನ್ನು ರೆಸ್ಯೂಮ್‌ನಲ್ಲಿ ಸೇರಿಸಬಾರದು ಎಂಬುದನ್ನು ತಿಳಿದುಕೊಳ್ಳುವುದೂ ಅಷ್ಟೇ ಮುಖ್ಯ. ಹಾಗಿದ್ರೆ ಯಾವೆಲ್ಲ ಅಂಶಗಳನ್ನು ಅದರಲ್ಲಿ ನಮೂದಿಸಬಾರದು ಅನ್ನೋದನ್ನು ನೋಡೋಣ.
1) ಹಿಂದಿನ ಉದ್ಯೋಗಗಳನ್ನು ತೊರೆಯಲು ಕಾರಣಗಳನ್ನು ಸೇರಿಸಬೇಡಿ: ರೆಸ್ಯೂಮ್ ಸಂಪೂರ್ಣವಾಗಿ ಧನಾತ್ಮಕವಾಗಿರಬೇಕು ಅನ್ನೋದನ್ನು ನೆನಪಿಡಿ. ಆದ್ದರಿಂದ ಬಿಟ್ಟುಹೋಗುವ ಕಾರಣಗಳನ್ನು ಎಂದಿಗೂ ಅದರಲ್ಲಿ ಸೇರಿಸಬಾರದು. ನಿಮ್ಮ ರೆಸ್ಯೂಮ್‌ನ ಮುಖ್ಯ ಉದ್ದೇಶವು ನಿಮ್ಮನ್ನು, ನಿಮ್ಮ ಕೌಶಲ್ಯಗಳು, ಅನುಭವ ಮತ್ತು ಸಾಧನೆಗಳನ್ನು ಉತ್ತೇಜಿಸುವುದು ಮಾತ್ರ.
2) ರೆಫರೆನ್ಸ್‌ಗಳನ್ನು ಸೇರಿಸಬೇಡಿ: ರೆಫರೆನ್ಸ್‌ಅನ್ನು ಪ್ರತ್ಯೇಕ ಪೇಜ್‌ನಲ್ಲಿ ಇರಿಸಿ. ನೇಮಕಾತಿ ಮಾಡುವವರು ನಿರ್ದಿಷ್ಟವಾಗಿ ಕೇಳಿದಾದ ಮಾತ್ರ ಅವುಗಳನ್ನು ನೀಡಿ.
3) ನಿಮ್ಮ ಹವ್ಯಾಸ ಅಥವಾ ಆಸಕ್ತಿಗಳನ್ನು ಸೇರಿಸಬೇಡಿ: ರೆಸ್ಯೂಮ್‌ಗಳಲ್ಲಿ ಹವ್ಯಾಸಗಳು ಅಥವಾ ನಿಮ್ಮ ಆಸಕ್ತಿಗಳನ್ನು ನಮೂದಿಸುವುದು ಸೂಕ್ತವಲ್ಲ. ಆದಾಗ್ಯೂ, ನಿಮ್ಮ ಹವ್ಯಾಸಗಳು ಸ್ಥಾನಕ್ಕೆ ಸಂಬಂಧಿಸಿದ್ದರೆ, ನೀವು ಏಕೆ ಉತ್ತಮ ಫಿಟ್ ಆಗಿದ್ದೀರಿ ಎಂಬುದನ್ನು ಹೇಳಲು ನೀವು ಅವುಗಳನ್ನು ಸೇರಿಸಿಕೊಳ್ಳಬಹುದು.
4) ಸೂಕ್ತವಲ್ಲದ ಇಮೇಲ್ ವಿಳಾಸವನ್ನು ಬಳಸಬೇಡಿ: ಯಾವುದೇ ಅಡ್ಡಹೆಸರುಗಳು, ಸಂಖ್ಯೆಗಳು ಅಥವಾ ವಿಶೇಷ ಅಕ್ಷರಗಳನ್ನು ಹೊರತುಪಡಿಸಿ ನಿಮ್ಮ ಇಮೇಲ್ ವಿಳಾಸವು ನಿಮ್ಮ ಹೆಸರನ್ನು ಆಧರಿಸಿರಬೇಕು. ಆದ್ದರಿಂದ ನಿಮಗೆ ಸೂಕ್ತವಲ್ಲದ ಇಮೇಲ್ ವಿಳಾಸವನ್ನು ಬಳಸಬೇಡಿ.
5) ಅನಗತ್ಯ ವೈಯಕ್ತಿಕ ಮಾಹಿತಿಯನ್ನು ಸೇರಿಸಬೇಡಿ : ವಯಸ್ಸು, ತೂಕ, ಎತ್ತರ, ಧಾರ್ಮಿಕ ಆದ್ಯತೆ, ರಾಜಕೀಯ ದೃಷ್ಟಿಕೋನಗಳು ಅಥವಾ ಯಾವುದೇ ಇತರ ವೈಯಕ್ತಿಕ ವಿವರಗಳನ್ನು ರೆಸ್ಯೂಮ್‌ನಲ್ಲಿ ನಮೂದಿಸಬೇಡಿ.
ಸಿವಿ (ಕರಿಕ್ಯುಲಮ್ ವಿಟೇ) ಹಾಗೂ ರೆಸ್ಯೂಮ್ ನಡುವಿನ ವ್ಯತ್ಯಾಸ
ರೆಸ್ಯೂಮ್
ಇದನ್ನೂ ಓದಿ: Resume Tips-20: ನಿಮ್ಮ ರೆಸ್ಯೂಮ್‌ನಲ್ಲಿ ಇವುಗಳನ್ನು ಹೈಲೈಟ್ ಮಾಡಿ, HR ಕೂಡಲೇ ಶಾರ್ಟ್‌ಲಿಸ್ಟ್ ಮಾಡ್ತಾರೆ
ಒಟ್ಟಾರೆಯಾಗಿ ಇಂದಿನ ಸ್ಪರ್ಧಾತ್ಮಕಯುಗದಲ್ಲಿ ಯಶಸ್ಚಿಯಾಗಬೇಕೆಂದರೆ ನಾವು ನಿತ್ಯವೂ ಹೊಸದನ್ನು ಕಲಿಯಲೇಬೇಕು. ತಂತ್ರಜ್ಞಾನ, ಹೊಸತನಗಳ ಅಳವಡಿಕೆ ಮಾಡಿಕೊಳ್ಳಲೇಬೇಕು. ಅಲ್ಲದೇ ಹೋದರೆ ಜಗತ್ತು ಮುಂದೆ ಹೋಗಿ ನಾವು ಹಿಂದೆ ಬೀಳುವಂಥ ಸ್ಥಿತಿ ಎದುರಾಗಬಹುದು. ಅಲ್ಲದೇ ವೃತ್ತಿ ಜೀವನದಲ್ಲಿ ದಿನವೂ ಅಪ್‌ಡೇಟ್ ಆಗುವುದು ಬಹಳ ಮುಖ್ಯ. ಹಾಗೆಯೇ ವೃತ್ತಿಯಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆಯುವ ರೆಸ್ಯೂಮ್ ಹೆಚ್ಚು ಅಪ್‌ಡೇಟ್ ಆಗುವುದು ಅದಕ್ಕೆ ಪೂರಕ. ಆದ್ದರಿಂದ ನಿಮ್ಮ ರೆಸ್ಯೂಮ್‌ಅನ್ನು ಆದಷ್ಟೂ ವೃತ್ತಿಪರವಾಗಿರಿಸಿ. ಅದಕ್ಕಾಗಿ ನೀವು ಈ ಸಲಹೆಗಳನ್ನು ಅಳವಡಿಸಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್‌ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ