ಈ ವ್ಯಕ್ತಿತ್ವ (Personality), ಸ್ವಭಾವ ಅನ್ನೋದು ನಮ್ಮಲ್ಲಿ ವ್ಯಕ್ತಿಯಿಂದ ವ್ಯಕ್ತಿಗೆ ತುಂಬಾನೇ ಭಿನ್ನವಾಗಿರುತ್ತದೆ. ಒಬ್ಬರು ಇದ್ದ ಹಾಗೆ ಪಕ್ಕದಲ್ಲಿ ಇದ್ದೋರು ಇರುವುದಿಲ್ಲ. ಅಷ್ಟು ದೂರ ಏಕೆ ಹೋಗ್ತಿರಾ? ಒಂದು ಮನೆಯಲ್ಲಿಯೇ (Home) ವಾಸ ಮಾಡುತ್ತಿರುವ ಜನರು ಎಲ್ಲರೂ ಒಂದೇ ರೀತಿಯ ಸ್ವಭಾವವನ್ನು ಹೊಂದಿರುವುದಿಲ್ಲ. ಎಲ್ಲರೂ ಒಂದೇ ರೀತಿಯ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಹೊಂದಿರಲೇಬೇಕು ಅಂತ ಯಾವುದೇ ನಿಯಮ ಸಹ ಇಲ್ಲ ಬಿಡಿ. ಆದರೆ ವ್ಯಕ್ತಿತ್ವದ ವಿಚಾರಕ್ಕೆ ಬಂದಾಗ ನಮಗೆ ಮುಖ್ಯವಾಗಿ ಕಾಣುವುದು ಎರಡು ವಿಧಗಳ ವ್ಯಕ್ತಿತ್ವಗಳು.
ಮೊದಲನೆಯವರು ಜಾಸ್ತಿ ಜನರ ಜೊತೆ ಬೆರೆಯದೇ, ತಮ್ಮ ಪಾಡಿಗೆ ತಾವಾಯ್ತು, ತಮ್ಮ ಕೆಲಸ ಆಯ್ತು ಅಂತ ಇರುವ ಜನರು ಮತ್ತು ಅವರಿಗೆ ಎಂತಹದೇ ನೋವಾದರೂ ಸಹ ಯಾರ ಮುಂದೆಯೂ ತುಟಿ ಬಿಚ್ಚಿ ಸಹ ಹೇಳದವರು. ಈ ರೀತಿಯ ವ್ಯಕ್ತಿತ್ವವನ್ನು ಹೊಂದಿರುವ ಜನರನ್ನು ನಾವು ಅಂತರ್ಮುಖಿಗಳು ಅಂತ ಹೇಳುತ್ತೇವೆ.
ಎರಡನೇ ವಿಧದ ವ್ಯಕ್ತಿತ್ವ ಮೊದಲನೆಯದ್ದಕ್ಕೆ ತದ್ವಿರುದ್ಧ. ಸ್ವಲ್ಪ ಕಷ್ಟ ಅಂತ ಅನ್ನಿಸಿದರೂ ನಾಲ್ಕು ಜನಕ್ಕೆ ಹೇಳಿಕೊಳ್ಳಬೇಕು. ತಮಗೆ ಅನ್ನಿಸಿದ್ದನ್ನು ಹಾಗೆಯೇ ನೇರವಾಗಿ, ದಿಟ್ಟತನದಿಂದ ಹೇಳುವ ಜನರು ಇವರು. ಅನೇಕ ಜನರ ಜೊತೆ ಬೆರೆತು ತಮ್ಮ ಕೆಲಸಗಳನ್ನು ಮಾಡಿಕೊಳ್ಳುವ ಜನರನ್ನು ನಾವು ಬಹಿರ್ಮುಖಿಗಳು ಅಂತ ಕರೆಯುತ್ತೇವೆ.
ಮನುಷ್ಯ ಸಮಾಜದಲ್ಲಿ ಬದುಕುತ್ತಿರುವುದರಿಂದ ಅವನ ವ್ಯಕ್ತಿತ್ವ ನಾಲ್ಕು ಜನಕ್ಕೆ ಮುಜುಗರ ತರುವಂತಿರಬಾರದು ಮತ್ತು ಆ ಸ್ವಭಾವದಿಂದ ಬೇರೆಯವರಿಗೆ ತೊಂದರೆ ಆಗಬಾರದು ಅನ್ನೋ ಕಾರಣಗಳಿಗೆ, ಈ ಮನುಷ್ಯನ ವ್ಯಕ್ತಿತ್ವದ ಮತ್ತು ಸ್ವಭಾವದ ಬಗ್ಗೆ ಚರ್ಚೆ ನಡೆಯುತ್ತಲೇ ಇರುತ್ತದೆ. ಹೀಗೆ ಜೀವನದಲ್ಲಿ ಕೆಲಸ ಅಂತ ಮಾಡುವ ವಿಚಾರಕ್ಕೆ ಬಂದಾಗ ನಿಮ್ಮ ವ್ಯಕ್ತಿತ್ವಕ್ಕೆ ಎಂತಹ ಕೆಲಸಗಳು ಬೆಸ್ಟ್ ಅಂತ ತಿಳಿಯುವುದು ಸಹ ಅಷ್ಟೇ ಮುಖ್ಯವಾಗಿರುತ್ತದೆ.
ಏಕೆಂದರೆ ಬಹಿರ್ಮುಖಿ ವ್ಯಕ್ತಿತ್ವದ ವ್ಯಕ್ತಿಗೆ ಯಾರ ಜೊತೆಯೂ ಮಾತನಾಡದೇ ಒಬ್ಬರೇ ಒಂದು ಕಡೆ ಕುಳಿತು ಕೆಲಸ ಮಾಡು ಅಂತ ಹೇಳಿದರೆ ಅದು ಅವರಿಗೆ ಅಸಾಧ್ಯ ಅಂತ ಅನ್ನಿಸಬಹುದು ಮತ್ತು ಆ ಕೆಲಸವನ್ನು ಅವರು ಜಾಸ್ತಿ ದಿನಗಳ ಕಾಲ ಮಾಡುವುದಕ್ಕೂ ಆಗುವುದಿಲ್ಲ.
ಒಂದೇ ಮಾತಲ್ಲಿ ಹೇಳಬೇಕು ಎಂದರೆ ಅಂತರ್ಮುಖಿಗಳು ನಾಚಿಕೆ ಸ್ವಭಾವದಿಂದ ತಮ್ಮಲ್ಲಿರುವ ಕೌಶಲ್ಯಗಳನ್ನು ನಾಲ್ಕು ಜನರ ಜೊತೆಯಲ್ಲಿ ಹಂಚಿಕೊಳ್ಳುವುದು ಕಷ್ಟವಾಗುತ್ತದೆ. ಆದರೆ ಅದೇ ಬಹಿರ್ಮುಖಿಗಳಿಗೆ ಇದೆಲ್ಲವೂ ಕಷ್ಟ ಅಂತ ಅನ್ನಿಸುವುದೇ ಇಲ್ಲ. ಎಲ್ಲೋ ಒಂದು ಕಡೆ ಈ ವ್ಯಕ್ತಿತ್ವಗಳು ನಾವು ಮಾಡುತ್ತಿರುವ ಕೆಲಸದ ಮೇಲೆ ಮತ್ತು ನಮ್ಮ ಕರಿಯರ್ ಮೇಲೂ ಸಹ ತುಂಬಾನೇ ಪರಿಣಾಮ ಬೀರುತ್ತವೆ.
ಹಾಗಂತ ಇಲ್ಲಿ ಈ ವ್ಯಕ್ತಿತ್ವ ಒಳ್ಳೆಯದು ಅಥವಾ ಈ ವ್ಯಕ್ತಿತ್ವ ಕೆಟ್ಟದ್ದು ಅಂತ ನಾವು ಹೇಳಲು ಹೊರಟಿಲ್ಲ. ತಂಡದ ಸಂವಹನ, ತಂಡದ ನಿರ್ಮಾಣ ಮತ್ತು ನಾಯಕತ್ವದ ಗುಣಗಳ ಅಗತ್ಯವಿರುವ ಪಾತ್ರಗಳಲ್ಲಿ ಅಂತರ್ಮುಖಿಗಳು ಯಶಸ್ವಿಯಾಗಲು ಸಾಧ್ಯವಿಲ್ಲ ಅಂತ ಹೇಳಲು ಬರುವುದಿಲ್ಲ.
ಹಾಗೆಯೇ ಬಹಿರ್ಮುಖಿಗಳು ಏಕಾಂತವಾಗಿ ಕುಳಿತುಕೊಂಡು ಮಾಡುವ ಕೆಲಸದಲ್ಲಿ ಯಶಸ್ಸು ಕಾಣಲು ಸಾಧ್ಯವೇ ಇಲ್ಲ ಅಂತ ಸಹ ಹೇಳಲು ಸಾಧ್ಯವೇ ಇಲ್ಲ. ಆದರೆ ಯಾವುದೇ ಪಾತ್ರದಲ್ಲಿ ಯಶಸ್ವಿಯಾಗುವ ನಿಮ್ಮ ಸಾಮರ್ಥ್ಯವು ಹೊಂದಿಕೊಳ್ಳುವ, ಕಲಿಯುವ ಮತ್ತು ಕಲಿಯದಿರುವ ನಿಮ್ಮ ಇಚ್ಛೆಯನ್ನು ಅವಲಂಬಿಸಿರುತ್ತದೆ.
ನಿಮ್ಮ ವ್ಯಕ್ತಿತ್ವದ ಆಧಾರದ ಮೇಲೆ ಉದ್ಯೋಗವನ್ನು ಹುಡುಕಲು ಕಾರಣವೆಂದರೆ ನಿಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಬಳಸಿಕೊಳ್ಳುವುದು. ಇದಲ್ಲದೆ, ನಿಮ್ಮ ಮೂಲ ಸ್ವಭಾವಕ್ಕೆ ಹೊಂದಿಕೆಯಾಗುವ ವೃತ್ತಿಜೀವನವನ್ನು ಮಾಡುವುದು ನಿಮಗೆ ತುಂಬಾನೇ ತೃಪ್ತಿಯನ್ನು ನೀಡುತ್ತದೆ.
ನೀವು ಅಂತರ್ಮುಖಿಯಾಗಿದ್ದರೆ, ನೀವು ಕೆಲಸ ಮಾಡುವ ಸ್ಥಳದಲ್ಲಿ ಈ ಗುಣಗಳನ್ನು ಅಳವಡಿಸಿಕೊಳ್ಳಬೇಕು..
ಅಸಂಖ್ಯಾತ ವೃತ್ತಿ ಆಯ್ಕೆಗಳು ಲಭ್ಯವಿದ್ದರೂ, ನಿಮ್ಮ ವ್ಯಕ್ತಿತ್ವಕ್ಕೆ ಅನುಗುಣವಾಗಿ ಸರಿಯಾದ ಹೊಂದಾಣಿಕೆಯನ್ನು ಕಂಡುಹಿಡಿಯುವುದು ಸ್ವಲ್ಪ ಕಠಿಣವಾದ ಸವಾಲಾಗಿದೆ. ನಿಮ್ಮ ಕೌಶಲ್ಯಗಳು ಮತ್ತು ಸಾಮರ್ಥ್ಯಗಳನ್ನು ಉತ್ತಮವಾಗಿ ಬಳಸಿಕೊಳ್ಳಬಹುದಾದ ವೃತ್ತಿ ಆಯ್ಕೆಗಳ ಪಟ್ಟಿ ಇಲ್ಲಿದೆ ನೋಡಿ.
ಬರಹಗಾರ - ಹೆಚ್ಚಿನ ಅಂತರ್ಮುಖಿಗಳು ಮೌಖಿಕವಾಗಿ ಸಂವಹನ ನಡೆಸುವುದಕ್ಕಿಂತ ತಮ್ಮ ಆಲೋಚನೆಗಳನ್ನು ಬರೆಯುವುದು ಸುಲಭ ಅಂತ ಅಂದುಕೊಳ್ಳುತ್ತಾರೆ. ಆದ್ದರಿಂದ, ಅವರ ಸೃಜನಶೀಲ ಚಿಂತನೆಗಳು ಬರವಣಿಗೆ ರೂಪದಲ್ಲಿ ಹೊರಬರಲು ಈ ವೃತ್ತಿ ಸಹಾಯ ಮಾಡುತ್ತದೆ. ಇವರಿಗೆ ಬರಹಗಾರನ ವೃತ್ತಿಯನ್ನು ತೆಗೆದುಕೊಳ್ಳುವುದಕ್ಕಿಂತ ಉತ್ತಮವಾದುದು ಯಾವುದು ಇದೆ ಹೇಳಿ? ಬರವಣಿಗೆಯ ಕ್ಷೇತ್ರವು ತುಂಬಾನೇ ವಿಶಾಲವಾಗಿದೆ.
ಅಂದರೆ ನಿಮ್ಮ ಜೀವನದುದ್ದಕ್ಕೂ ಅನೇಕ ವಿಷಯಗಳ ಬಗ್ಗೆ ನೀವು ಬರೆಯಲು ಅವಕಾಶಗಳು ಇವೆ. ನೀವು ಸೃಜನಶೀಲ ಬರಹಗಾರ, ತಾಂತ್ರಿಕ ಬರಹಗಾರ, ಸಂಶೋಧನಾ ಬರಹಗಾರ, ಅಂಕಣಕಾರ, ಕಾದಂಬರಿಕಾರ, ವರದಿ ಬರಹಗಾರ, ಶೈಕ್ಷಣಿಕ ಬರಹಗಾರ ಮತ್ತು ಇತ್ಯಾದಿ ಕೆಲಸಗಳಿಗೆ ಹೇಳಿ ಮಾಡಿಸಿದವರು. ಇದಕ್ಕೆ ಬೇಕಾಗಿರುವ ವಿದ್ಯಾರ್ಹತೆ ಎಂದರೆ ಇಂಗ್ಲಿಷ್ ಭಾಷೆ, ಪತ್ರಿಕೋದ್ಯಮ ಅಥವಾ ಸಮೂಹ ಸಂವಹನದಲ್ಲಿ ಪದವಿ ಪಡೆದಿರಬೇಕು.
ಸೋಷಿಯಲ್ ಮೀಡಿಯಾ ಮ್ಯಾನೇಜರ್ - ಆಗಾಗ್ಗೆ ಬಹಿರ್ಮುಖಿಯ ಕೆಲಸವೆಂದು ಇದನ್ನು ಹೇಳಲಾಗುತ್ತದೆ, ಆದರೂ ಸಾಮಾಜಿಕ ಮಾಧ್ಯಮ ನಿರ್ವಹಣೆಯು ಅಂತರ್ಮುಖಿಗಳಿಗೆ ಆದರ್ಶ ಉದ್ಯೋಗವಾಗಿದೆ.
ಕಂಪ್ಯೂಟರ್ ಮುಂದೆ ಕುಳಿತುಕೊಂಡು ವಿವಿಧ ಸಾಮಾಜಿಕ ಮಾಧ್ಯಮ ಚಾನೆಲ್ ಗಳಲ್ಲಿ ನವೀನ ಅಭಿಯಾನಗಳು ಮತ್ತು ತಂತ್ರಗಳನ್ನು ಕಾರ್ಯಗತಗೊಳಿಸುವುದರಿಂದ ಈ ಪಾತ್ರದಲ್ಲಿ ತುಂಬಾನೇ ಕಡಿಮೆ ಜನರೊಂದಿಗೆ ಮಾತಾಡುವ ಅಗತ್ಯವಿರುತ್ತದೆ. ಇದಕ್ಕೆ ನೀವು ಡಿಜಿಟಲ್ ಮಾರ್ಕೆಟಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿದ್ದರೆ ಸಾಕು.
ಡೇಟಾ ಸೈಂಟಿಸ್ಟ್ - ಮೊದಲೇ ಹೇಳಿದಂತೆ, ಅಂತರ್ಮುಖಿಗಳು ಸ್ವತಂತ್ರವಾಗಿ ಕೆಲಸ ಮಾಡುವುದು ಹೆಚ್ಚು ಆರಾಮದಾಯಕವಾಗಿರುತ್ತದೆ ಮತ್ತು ಡೇಟಾ ವಿಜ್ಞಾನಿಯಾಗಿ ಕೆಲಸ ಮಾಡುವುದು ಅವರಿಗೆ ಸರಿ ಹೊಂದುತ್ತದೆ. ಈ ಕೆಲಸವು ಪ್ರಾಥಮಿಕವಾಗಿ ಹಲವಾರು ವಿಶ್ಲೇಷಣಾತ್ಮಕ ಸಾಧನಗಳನ್ನು ಬಳಸಿಕೊಂಡು ಸಂಕೀರ್ಣ ಡೇಟಾವನ್ನು ಸಂಗ್ರಹಿಸುವುದು ಮತ್ತು ವಿಶ್ಲೇಷಿಸುವುದನ್ನು ಒಳಗೊಂಡಿರುತ್ತದೆ.
ಸಂಪೂರ್ಣ ಏಕಾಗ್ರತೆಯಿಂದ ಕಾರ್ಯನಿರ್ವಹಿಸಲು ನೀವು ಏಕಾಂತ ವಾತಾವರಣದಲ್ಲಿ ಗಂಟೆಗಳ ಕಾಲ ಕಳೆಯಬೇಕಾಗುತ್ತದೆ. ಈಗ, ಅಂತರ್ಮುಖಿಗಳು ಅದನ್ನು ತುಂಬಾ ಬಯಸುತ್ತಾರೆ. ಇದಕ್ಕೆ ನೀವು ಡಾಟಾ ಸೈನ್ಸ್, ಕಂಪ್ಯೂಟರ್ ಸೈನ್ಸ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿರಬೇಕು.
ಗ್ರಾಫಿಕ್ ಡಿಸೈನರ್ – ಅಂತರ್ಮುಖಿಗಳಿಗೆ ತುಂಬಾನೇ ಕ್ರಿಯೆಟಿವ್ ಕೆಲಸಗಳು ಇಷ್ಟ ಇರುವುದರಿಂದ ತಂತ್ರಜ್ಞಾನದ ಬಗ್ಗೆ ನಿಮಗೆ ಸ್ವಲ್ಪ ಆಸಕ್ತಿ ಇದ್ದರೆ, ಗ್ರಾಫಿಕ್ ಡಿಸೈನರ್ ಕೆಲಸ ನಿಮಗೆ ತುಂಬಾನೇ ಹೊಂದಿಕೊಳ್ಳುತ್ತದೆ. ಗ್ರಾಫಿಕ್ ಡಿಸೈನ್ ಮಾಡುವುದರಲ್ಲಿ ನೀವು ನಿಸ್ಸೀಮರು ಆಗಬಹುದು. ಗ್ರಾಫಿಕ್ ವಿನ್ಯಾಸಕರು, ತಮ್ಮ ಆಕರ್ಷಕ ವಿನ್ಯಾಸಗಳ ಮೂಲಕ ಗ್ರಾಹಕರನ್ನು ಆಕರ್ಷಿಸುತ್ತಾರೆ.
ಈ ಲೋಗೋಗಳು, ವೆಬ್ ಪುಟಗಳು, ನಿಯತಕಾಲಿಕ ಕವರ್ ಗಳು, ಕ್ಯಾಟಲಾಗ್ ಗಳು, ಕರಪತ್ರಗಳು ಅಥವಾ ಅಭಿಯಾನಗಳಿಗೆ ವಿನ್ಯಾಸಗಳನ್ನು ಮಾಡಿಕೊಡಲು ನಿಮ್ಮನ್ನು ಜನರು ಕೇಳಬಹುದು ಮತ್ತು ಅಷ್ಟೇ ಅಲ್ಲದೆ ಬರವಣಿಗೆಯಂತೆ, ನೀವು ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿನ್ಯಾಸಕರಾಗಿ ಕೆಲಸ ಮಾಡಬಹುದು.
ಅಥವಾ ಅನೇಕ ಯೋಜನೆಗಳಿಗೆ ಸ್ವತಂತ್ರ ವಿನ್ಯಾಸಕರಾಗಿಯೂ ಸಹ ಕೆಲಸ ಮಾಡಬಹುದು. ಗ್ರಾಫಿಕ್ ಡಿಸೈನ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಪದವಿ ಪಡೆದಿದ್ದರೆ ಸಾಕು ನೀವು ಈ ಕೆಲಸವನ್ನು ಮಾಡಬಹುದು.
ಅಕೌಂಟೆಂಟ್ - ಅಕೌಂಟೆಂಟ್ ನ ಕೆಲಸವು ಹಣಕಾಸಿನ ದಾಖಲೆಗಳನ್ನು ತಯಾರಿಸುವುದು ಮತ್ತು ಅವುಗಳಿಗೆ ಸಂಬಂಧಿಸಿದ ಅಪಾಯಗಳು ಮತ್ತು ಅವಕಾಶಗಳನ್ನು ವಿಶ್ಲೇಷಿಸುವುದಾಗಿರುತ್ತದೆ.ಸರಳವಾಗಿ ಹೇಳುವುದಾದರೆ, ಕಂಪನಿಯ ಹಣಕಾಸು ನಿರ್ಧಾರಗಳು ಅಕೌಂಟೆಂಟ್ ಸಿದ್ಧಪಡಿಸಿದ ಹೇಳಿಕೆಗಳು ಮತ್ತು ದಾಖಲೆಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತವೆ.
ಇದು ವಿಶ್ಲೇಷಣಾತ್ಮಕ ಮತ್ತು ವಿವರ ಆಧಾರಿತ ಪಾತ್ರವಾಗಿರುವುದರಿಂದ, ಸಂಖ್ಯೆಗಳೆಂದರೆ ನಿಮಗೆ ಇಷ್ಟವಿದ್ದರೆ, ಅಂತರ್ಮುಖಿಗಳಿಗೆ ಇದು ಹೆಚ್ಚು ಸೂಕ್ತವಾದ ವೃತ್ತಿ ಆಯ್ಕೆಯಾಗಿದೆ. ಅಕೌಂಟಿಂಗ್ ಅಥವಾ ಸಂಬಂಧಿತ ಕ್ಷೇತ್ರದಲ್ಲಿ ಡಿಪ್ಲೊಮಾ, ವಾಣಿಜ್ಯ ಶಿಕ್ಷಣದಲ್ಲಿ ಪದವಿ ಅಥವಾ ಫೈನಾನ್ಸ್ ಮತ್ತು ಅಕೌಂಟಿಂಗ್ ನಲ್ಲಿ ಬಿಬಿಎ ಮಾಡಿರಬೇಕು.
ಇದನ್ನೂ ಓದಿ: Career Tips: ಕೆಲಸ ಮತ್ತು ಜೀವನವನ್ನು ಸರಿದೂಗಿಸಿಕೊಂಡು ಹೋಗಲು 7 ಸಲಹೆಗಳು; ಇದನ್ನು ಪಾಲಿಸಿದ್ರೆ ಟೆನ್ಷನ್ ಇರಲ್ಲ
ಛಾಯಾಗ್ರಾಹಕ - ಅನೇಕ ಅಂತರ್ಮುಖಿಗಳು ಇಷ್ಟಪಡುವ ಮತ್ತೊಂದು ವೃತ್ತಿಜೀವನವೆಂದರೆ ಅದು ಛಾಯಾಗ್ರಹಣ. ಈ ಕ್ಷೇತ್ರವು ನೀಡುವ ಸೃಜನಶೀಲ ಸ್ವಾತಂತ್ರ್ಯದ ಪ್ರಮಾಣದ ಜೊತೆಗೆ, ಇದು ನೀವು ಪರಿಣತಿ ಪಡೆಯಬಹುದಾದ ವಿವಿಧ ಶಾಖೆಗಳನ್ನು ಹೊಂದಿದೆ.
ನೀವು ಮದುವೆ ಸಮಾರಂಭದ ಛಾಯಾಗ್ರಾಹಕ, ವನ್ಯಜೀವಿ ಛಾಯಾಗ್ರಾಹಕ, ಫ್ಯಾಷನ್ ಛಾಯಾಗ್ರಾಹಕ ಮತ್ತು ಉತ್ಪನ್ನ ಛಾಯಾಗ್ರಾಹಕರಾಗಬಹುದು.ಛಾಯಾಗ್ರಾಹಕರು ಕ್ಯಾಮೆರಾದಿಂದ ಫೋಟೋಗಳನ್ನು ಸೆರೆ ಹಿಡಿದಾದ ನಂತರ ಅವುಗಳನ್ನು ಏಕಾಂತದಲ್ಲಿ ಕುಳಿತು ಎಡಿಟ್ ಸಹ ಮಾಡಬೇಕು.
ಯಾವುದಾದರೂ ಸಂಸ್ಥೆಯಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆಯುವುದು ಮತ್ತು ನಿಮ್ಮ ಛಾಯಾಗ್ರಹಣದ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಕೋರ್ಸ್ ಮಾಡುವುದು ಒಳ್ಳೆಯದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ