• ಹೋಂ
 • »
 • ನ್ಯೂಸ್
 • »
 • Jobs
 • »
 • UPSC ಸಂದರ್ಶನದ ವೇಳೆ ಅಭ್ಯರ್ಥಿಗಳು ಈ ತಪ್ಪುಗಳನ್ನು ಮಾಡದಿದ್ದರೆ ಪಾಸ್ ಆಗೋದು ಖಚಿತ

UPSC ಸಂದರ್ಶನದ ವೇಳೆ ಅಭ್ಯರ್ಥಿಗಳು ಈ ತಪ್ಪುಗಳನ್ನು ಮಾಡದಿದ್ದರೆ ಪಾಸ್ ಆಗೋದು ಖಚಿತ

 ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಯುಪಿಎಸ್‌ಸಿ ಸಂದರ್ಶನ ಸಮಯದಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಗಳು ತಪ್ಪಿಸಬೇಕಾದ ಕೆಲ ತಪ್ಪುಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ಇವುಗಳನ್ನು ಮಾಡದಿದ್ದರೆ ನೀವು ಸಂದರ್ಶನದಲ್ಲಿ ಉತ್ತಮ ಅಂಕ ತೆಗೆದುಕೊಂಡು ಭಾರತದ ಉನ್ನತ ಹುದ್ದೆಗೆ ಆಯ್ಕೆಯಾಗಬಹುದು.

 • Share this:

  2022ನೇ ಸಾಲಿನ ಯುಪಿಎಸ್​ ಸಿ ಮುಖ್ಯ ಪರೀಕ್ಷೆಯ ಫಲಿತಾಂಶ (UPSC Mains Result 2022) ಡಿಸೆಂಬರ್ 6, 2022 ರಂದು ಹೊರಬಿದ್ದಿದ್ದು ಇನ್ನೇನು ಸಂದರ್ಶನ (Interview) ಪರೀಕ್ಷೆ ಕೂಡ ನಡೆಯಲಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರಿಲಿಮ್ಸ್‌, ಮೇನ್ಸ್‌ ಪರೀಕ್ಷೆಯಂತೆ ಸಂದರ್ಶನ ಕೂಡ ಪ್ರಮುಖವಾದ ಘಟ್ಟ. ಹಲವು ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಚೆನ್ನಾಗಿ ಬರೆದರೂ ಸಂದರ್ಶನದಲ್ಲಿ ಎಡವಿ ಬಿಡುತ್ತಾರೆ. ಹೀಗಾಗಿ ಈ ಹಂತವನ್ನು ಹಗುರವಾಗಿ ತೆಗೆದುಕೊಳ್ಳದೇ ಇಲ್ಲೂ ಸಹ ಸರಿಯಾದ ಅಭ್ಯಾಸ ಪ್ರಮುಖವಾಗುತ್ತದೆ.


  ಯುಪಿಎಸ್‌ಸಿ ಸಂದರ್ಶನ ಸಮಯದಲ್ಲಿ ಸಾಮಾನ್ಯವಾಗಿ ಅಭ್ಯರ್ಥಿಗಳು ತಪ್ಪಿಸಬೇಕಾದ ಕೆಲ ತಪ್ಪುಗಳ ಪಟ್ಟಿ ಇಲ್ಲಿದ್ದು, ಇವುಗಳನ್ನು ಮಾಡದಿದ್ದ ವೇಳೆ ನೀವು ಸಂದರ್ಶನದಲ್ಲಿ ಉತ್ತಮ ಅಂಕ ತೆಗೆದುಕೊಂಡು ಭಾರತದ ಉನ್ನತ ಹುದ್ದೆಗೆ ಆಯ್ಕೆಯಾಗಬಹುದು.


  * ಸಂದರ್ಶನಕ್ಕೆ ತಡವಾಗಿ ತಯಾರಿ ಆರಂಭಿಸಬೇಡಿ
  ಮುಖ್ಯ ಪರೀಕ್ಷೆ ಬರೆದು ಪಾಸ್‌ ಆದಮೇಲೆ ಎಲ್ಲಾ ಮಗೀತು ಅಂದುಕೊಳ್ಳಬೇಡಿ. ನಿಮ್ಮ ಹುದ್ದೆ ನಿರ್ಧಾರವಾಗುವುದೇ ಸಂದರ್ಶನದ ಹಂತದಲ್ಲಿ. ಹೀಗಾಗಿ ಮುಖ್ಯ ಪರೀಕ್ಷೆಯ ಫಲಿತಾಂಶ ಹೊರ ಬಿದ್ದ ನಂತರ ಕೆಲವರು ಸೋಮಾರಿಗಳಾಗಿ, ತಡವಾಗಿ ಸಂದರ್ಶನಕ್ಕೆ ತಯಾರಿ ಮಾಡಿಕೊಳ್ಳುತ್ತಾರೆ.


  ಕೊನೆಯ ಕ್ಷಣದ ಯುದ್ಧ ಯಾವಾಗಲೂ ನಮ್ಮನ್ನು ಅರ್ಧಂಬರ್ಧವಾಗಿ ತಯಾರಿ ಮಾಡುತ್ತದೆ. ನಿಮ್ಮ ಕೌಶಲ್ಯಗಳನ್ನು ಕಡಿಮೆ ಸಮಯದಲ್ಲಿ ತಯಾರಿ ಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದು ಸಂದರ್ಶನದಲ್ಲಿ ನಮ್ಮ ವಿಫಲತೆಗೆ ಕಾರಣವಾಗಬಹುದು. ಹೀಗಾಗಿ ತಯಾರಿ ಮುಖ್ಯ ಪರೀಕ್ಷೆಯ ಫಲಿತಾಂಶ ಹೊರಬಿದ್ದ ಕ್ಷಣವೇ ಆರಂಭವಾಗಲಿ.
  * ನಿಮ್ಮದಲ್ಲದ ವ್ಯಕ್ತಿತ್ವವನ್ನು ತೋರಿಸಬೇಡಿ: ಸಂದರ್ಶನದ ಪ್ಯಾನೆಲ್‌ ಅನ್ನು ಮೆಚ್ಚಿಸಲು ನಿಮ್ಮ ತನವನ್ನು ಕಳೆದುಕೊಂಡು ಬೇರೆಯವರಾಗಲು ಎಂದಿಗೂ ಪ್ರಯತ್ನಿಸಬೇಡಿ. ಸಂದರ್ಶನದ ಸಮಯದಲ್ಲೂ ನೀವು, ನೀವಾಗಿ ಇದ್ದು ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ.


  ನಿಮ್ಮ ಸ್ವಂತಿಕೆಯನ್ನು ಕಳೆದುಕೊಳ್ಳುವ ಕೆಲಸ ಮಾಡಬೇಡಿ. ಸರಿಯಾದ ಮತ್ತು ನಿಖರವಾದ ಮಾಹಿತಿ ಮತ್ತು ನಿಮ್ಮ ಆಸಕ್ತಿಗಳೊಂದಿಗೆ ನಿಮ್ಮ DAF ಅನ್ನು ಭರ್ತಿ ಮಾಡಿ.


  * ದಿನಪತ್ರಿಕೆ ಓದುವುದನ್ನು ನಿಲ್ಲಿಸಬೇಡಿ: ದಿನಪತ್ರಿಕೆ ಓದುವ ಅಭ್ಯಾಸ ಜಗತ್ತಿನ ಆಗಿ-ಹೋಗುಗಳ ಬಗ್ಗೆ ತಿಳಿಯಲು ಸಹಕಾರಿಯಾಗಿದೆ. ಇದರಿಂದ ನಮ್ಮ ಜ್ಞಾನ ಕೂಡ ವೃದ್ಧಿಸುತ್ತದೆ. ಸಂದರ್ಶನದಲ್ಲಿ ಪ್ರಚಲಿತ ಘಟನೆಯೊಂದರ ಬಗ್ಗೆ ನಿಮ್ಮ ಅಭಿಪ್ರಾಯ, ನಿಲುವನ್ನು ಕೇಳಬಹುದು.


  ಆಗ ಅಲ್ಲಿ ಸುಲಭವಾಗಿ ಉತ್ತರಿಸಲು ದಿನನಿತ್ಯ ಓದುವ ದಿನಪತ್ರಿಕೆ ಸಹಕಾರಿಯಾಗುತ್ತದೆ. ಹೀಗಾಗಿ ಈ ದಿನಪತ್ರಿಕೆ ಓದುವ ಅಭ್ಯಾಸವನ್ನು ನಿಲ್ಲಿಸದೇ ಮುಂದುವರೆಸಿ.


  * ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ: ಸಂದರ್ಶನದ ಪ್ಯಾನೆಲ್‌ನಲ್ಲಿ ಕುಳಿತವರು ಮುಖ್ಯವಾಗಿ ಅಭ್ಯರ್ಥಿಯಲ್ಲಿ ಆತ್ಮವಿಶ್ವಾಸವನ್ನು ಗಮನಿಸುವುದರಿಂದ ಯಾವುದೇ ಸಮಯದಲ್ಲೂ ನಿಮ್ಮ ಕಾನ್ಫಿಡೆನ್ಸ್‌ ಕಳೆದುಕೊಳ್ಳದೇ ಆತ್ಮವಿಶ್ವಾಸದಿಂದ ಇರಿ.


  ನಿಮ್ಮ ಆತ್ಮವಿಶ್ವಾಸ ನಿಮ್ಮ ಮಾತಿನ ಶೈಲಿ, ಬಾಡಿ ಲಾಂಗ್ವೇಜ್‌ ಮೂಲಕ ಪ್ರತಿಫಲಿಸುತ್ತದೆ. ಹೀಗಾಗಿ ಸಂದರ್ಶನಕ್ಕೆ ಹೋಗುವ ಮುನ್ನ ಅಣಕು ಸಂದರ್ಶನಗಳ ತಯಾರಿ ನಡೆಸಿ, ಇದು ನಿಮಗೆ ನಿಮ್ಮ ಮೇಲಿನ ವಿಶ್ವಾಸ ಹೆಚ್ಚಿಸಲು ಸಹಾಯ ಮಾಡುತ್ತದೆ.
  * ಸಂವಹನ ಕೌಶಲ್ಯಗಳ ಕೊರತೆ: ಪ್ಯಾನೆಲ್‌ಗೆ ನಿಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ನಿಮ್ಮ ಸಂವಹನ ಶೈಲಿಯೇ ಮುಖ್ಯ ಸಾಧನ, ಆದ್ದರಿಂದ ಸಂವಹನ ಕೌಶಲ್ಯಗಳ ಕೊರತೆಯನ್ನು ನೀಗಿಸಿ ಸಮರ್ಥವಾದ ಸಂವಹನ ಕೌಶಲ್ಯ ಬೆಳೆಸಿಕೊಳ್ಳಿ.


  ಸಂವಹನ ಎಂದರೆ ಇಲ್ಲಿ ಭಾಷೆ ಗಣನೆಗೆ ಬರುವುದಿಲ್ಲ. ನೀವು ಇಂಗ್ಲೀಷ್‌ ಅಥವಾ ಹಿಂದಿಯಲ್ಲಿ ಸಂದರ್ಶನವನ್ನು ನೀಡಬಹುದು. ಮಾತಿನ ಶೈಲಿ, ಭಾಷೆಯ ಮೇಲಿನ ಹಿಡಿತದ ಮೂಲಕ ಸಂವಹನವನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಸಾಮರ್ಥ್ಯ ಬೆಳೆಸಿಕೊಳ್ಳಿ.


  * ಯೋಚಿಸದೆ ಮಾತನಾಡಬೇಡಿ: ಪ್ರಶ್ನೆಯನ್ನು ಕೇಳಿದಾಗಲೆಲ್ಲಾ ನೀವು ಮೊದಲು ಪ್ರಶ್ನೆಯನ್ನು ಅರ್ಥಮಾಡಿಕೊಳ್ಳಿ ಮತ್ತು ಉತ್ತರಿಸುವ ಮೊದಲು ಅದರ ಬಗ್ಗೆ ಯೋಚಿಸಿ. ತರಾತುರಿಯಲ್ಲಿ ಉತ್ತರಗಳನ್ನು ನೀಡಬೇಡಿ. ಪ್ರಶ್ನೆಯು ನಿಮ್ಮಿಂದ ಏನನ್ನು ನಿರೀಕ್ಷಿಸುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ನಿಮಗೆ ಅದರ ಬಗ್ಗೆ ಯೋಚಿಸಲು ಸಮಯ ಬೇಕಾದರೆ ನಂತರ ಕೆಲವು ಸೆಕೆಂಡುಗಳ ಕಾಲ ಅದರ ಬಗ್ಗೆ ಯೋಚಿಸಲು ಅವಕಾಶ ನೀಡುವಂತೆ ಕೇಳಿಕೊಳ್ಳಿ.


  ನಿಮಗೆ ಉತ್ತರ ತಿಳಿದಿಲ್ಲದಿದ್ದರೆ ಯಾವುದೇ ಪ್ರಶ್ನೆಗೆ ಉತ್ತರಿಸಲು ಪ್ರಯತ್ನಿಸಬೇಡಿ. ಆದಷ್ಟು ಪ್ರಾಮಾಣಿಕವಾಗಿರಿ. ಸರ್ಕಾರ, ರಾಜಕೀಯ ಅಥವಾ ಧರ್ಮಕ್ಕೆ ಸಂಬಂಧಿಸಿದ ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಯಾವಾಗಲೂ ಯಾರ ಪರವಿರದೇ ತಟಸ್ಥವಾಗಿರಲು ಪ್ರಯತ್ನಿಸಿ.


  * ಅಹಂಕಾರ ಮತ್ತು ಅಸಭ್ಯವಾಗಿ ವರ್ತಿಸಬೇಡಿ: ಯಾವುದೇ ಪ್ರಶ್ನೆಗೆ ಉತ್ತರಿಸುವಾಗ ಅಹಂಕಾರ ಅಥವಾ ಅಸಭ್ಯವಾಗಿ ವರ್ತಿಸಬೇಡಿ. ಉತ್ತರಿಸುವಾಗ ಅಥವಾ ಪ್ಯಾನೆಲ್‌ಗೆ ನಿಮ್ಮ ಸಾಧನೆಗಳ ಕುರಿತು ನೀವು ಅವರಿಗೆ ತಿಳಿಸುವಾಗ ಯಾವಾಗಲೂ ಸಭ್ಯರಾಗಿರಿ.


  ಪ್ಯಾನೆಲ್‌ ನಿಮ್ಮನ್ನು ಹೊಗಳುವಾಗಲೂ ವಿನಮ್ರವಾಗಿರಲು ಪ್ರಯತ್ನಿಸಿ. ಮಂಡಳಿಯ ಯಾವುದೇ ಸದಸ್ಯರು ನಿಮ್ಮಿಂದ ಪ್ರಶ್ನೆಗಳನ್ನು ಕೇಳುತ್ತಿರುವಾಗ ಎಂದಿಗೂ ಅಡ್ಡಿಪಡಿಸಬೇಡಿ. ಅವರ ಪ್ರಶ್ನೆ ಮುಗಿದ ನಂತರವೇ ಉತ್ತರವನ್ನು ನಯವಾಗಿ ನೀಡಿ.


  top 5 myths about upsc ias exam
  ಪ್ರಾತಿನಿಧಿಕ ಚಿತ್ರ


  * ಬಾಡಿ ಲಾಂಗ್ವೇಜ್‌ ಗಮನದಲ್ಲಿರಲಿ: ನೀವು ಸಂದರ್ಶನದ ಕೊಠಡಿಗೆ ಪ್ರವೇಶಿಸಿದಾಗ ಪ್ಯಾನೆಲ್ ನೋಡುವ ಮೊದಲ ವಿಷಯವೆಂದರೆ ಬಾಡಿ ಲಾಂಗ್ವೇಜ್‌. ನಿಮ್ಮ ಬಾಡಿ ಲಾಂಗ್ವೇಜ್‌ ಆತ್ಮವಿಶ್ವಾಸ ಮತ್ತು ನಮ್ರತೆಯನ್ನು ಪ್ರತಿಬಿಂಬಿಸುವಂತಿರಬೇಕು.


  ನೀವು ಕೊಠಡಿಗೆ ಪ್ರವೇಶಿಸುವಾಗ ಮೊದಲಿಗೆ ಅನುಮತಿಯೊಂದಿಗೆ ಪ್ರವೇಶಿಸಬೇಕು ಮತ್ತು ಕುಳಿತುಕೊಳ್ಳಲು ಅನುಮತಿ ಕೇಳಬೇಕು. ಅನಗತ್ಯವಾಗಿ ನಗಬೇಡಿ, ನೇರವಾಗಿ ಮತ್ತು ಆರಾಮವಾಗಿ ಕುಳಿತುಕೊಳ್ಳಿ, ಕೈಕಾಲು ಆಡಿಸುತ್ತಾ ಕೂರದೇ ಗಂಭೀರವಾಗಿರಿ.


  * ಅನುಚಿತವಾಗಿ ಡ್ರೆಸ್ ಮಾಡಿಕೊಂಡು ಹೋಗಬೇಡಿ: ಡ್ರೆಸ್ಸಿಂಗ್ ವಿಷಯಕ್ಕೆ ಬಂದರೆ ನೀವು ಫಾರ್ಮಲ್ ಮತ್ತು ಡಿಸೆಂಟ್ ಬಟ್ಟೆಗಳನ್ನು ಹಾಗೂ ಪಾದರಕ್ಷೆಗಳನ್ನು ಮಾತ್ರ ಧರಿಸಬೇಕು. ನಿಮ್ಮ ಬಟ್ಟೆಯ ಆಯ್ಕೆಯು ನಿಮ್ಮ ವೃತ್ತಿಪರತೆಯನ್ನು ಪ್ರತಿಬಿಂಬಿಸುತ್ತದೆ ಆದ್ದರಿಂದ ಅದನ್ನು ಬುದ್ಧಿವಂತಿಕೆಯಿಂದ ಆರಿಸಿಕೊಳ್ಳಿ.

  Published by:Kavya V
  First published: