ಜೈಲು ಎಂದರೆ ನಾಲ್ಕು ಕೋಣೆಗಳ ನಡುವೆ ಅಪರಾಧಿ ಎಂಬ ಹಣೆಪಟ್ಟಿ ಹಾಕಿಕೊಂಡು ಶಿಕ್ಷೆಗೆ ಗುರಿಯಾಗುವುದು. ಸೆರೆವಾಸ ವ್ಯಕ್ತಿಯನ್ನು ಸಮಾಜದಿಂದ, ಸಂಬಂಧದಿಂದ ದೂರವಿಡುವ, ಜೈಲು ಎಂಬ ಕಾನೂನು ಕಟ್ಟಳೆಯೊಳಗಿನ ನಿಯಮಗಳನ್ನು ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡು ಬದುಕುವುದು. ಆದರೆ ಇಲ್ಲೊಬ್ಬರು ಜೈಲು ಜೀವನ ಹಿಂಸೆಯಲ್ಲ, ಒಲ್ಲದ ಬದುಕಲ್ಲ, ಶಿಕ್ಷಿತರಾಗಲು ಇರುವ ತಾಣ. ಸುಂದರ ಬದುಕು ಕಟ್ಟಿಕೊಳ್ಳಲು ಇರಲು ಮತ್ತೊಂದು ಅವಕಾಶ, ಸ್ವಾವಲಂಬಿ ಬದುಕಿಗೆ ಅಣಿಗೊಳಿಸುವ ತಾಣ, ಪ್ರಬುದ್ಧತೆ ರೂಢಿಸಿಕೊಳ್ಳಲು ಇರುವ ಒಂದು ನೆಲೆ ಎಂದು ಭಾವಿಸಿ ಬದುಕಿದ್ದಾರೆ.
28 ವರ್ಷ ಜೈಲಿನಲ್ಲಿಯೇ ಜೀವನ
ಹೌದು, ಆ ವ್ಯಕ್ತಿ ಸರಿಸುಮಾರು 28 ವರ್ಷ ಜೈಲಿನಲ್ಲಿಯೇ ಜೀವನ ಸಾಗಿಸಿದ್ದಾರೆ. ಜಗತ್ತನ್ನು ಅರಿಯುವ ಮೊದಲು ಜೈಲು ಎಂಬ ನಾಲ್ಕು ಕಂಬಿಗಳ ಬದುಕಿಗೆ ತೆರಳಿದವರು. ಇದೀಗ ಇಡೀ ಸಮಾಜವೇ ಅವರನ್ನು ಶ್ಲಾಘಿಸುತ್ತಿದೆ. ಜೈಲಿನ ವಾಸ ಬದುಕಿನ ಶೂನ್ಯವಾಗಿಸುತ್ತದೆ ಎಂಬ ಭ್ರಮೆಯನ್ನು ಸುಳ್ಳಾಗಿಸಿದ್ದಾರೆ.
ಹತ್ಯೆ ಪ್ರಕರಣದಲ್ಲಿ ಬಾಲಾಪರಾಧಿ
13 ವರ್ಷವಿರುವಾಗಲೇ ಜೈಲು ಸೇರಿದವರು ನಾರಾಯಣ್ ಚೇತನ್‍ರಾಮ್ ಚೌಧರಿ. ಅವರು ಜೈಲಿನಿಂದ ಹೊರಬಂದಾಗ 42 ವರ್ಷ. ವಾಸ್ತವವಾಗಿ ಇವರ ಮೂಲನಾಮ ನಿರಾನಾರಾಮ್ ಚೇತನ್‍ರಾಮ್ ಚೌಧರಿ.
ಇದನ್ನೂ ಓದಿ: ದೇಶದ ಈ ಹಳ್ಳಿಯಲ್ಲಿ ಮಹಿಳೆಯರು ಬಟ್ಟೆನೇ ಧರಿಸಲ್ವಂತೆ!
1994ರ ಸೆಪ್ಟೆಂಬರ್ನಲ್ಲಿ ಪುಣೆಯಲ್ಲಿ ಐವರು ಮಹಿಳೆಯರು, ಒಬ್ಬ ಗರ್ಭಿಣಿ ಮತ್ತು ಇಬ್ಬರು ಮಕ್ಕಳನ್ನು ಹತ್ಯೆಗೈದ ಪ್ರಕರಣದಲ್ಲಿ ನಾರಾಯಣ್ ಚೇತನ್‍ರಾಮ್ ಚೌಧರಿ ಶಿಕ್ಷೆಗೊಳಗಾದರು. ಆಗ ಅವರು ಬಾಲಾಪರಾಧಿ ಎಂದು ಸುಪ್ರೀಂ ಕೋರ್ಟ್ ದೃಢಪಡಿಸಿತು. ಚೌಧರಿ ಎಲ್ಲಾ ಶಿಕ್ಷೆ ಅನುಭವಿಸಿ ಕಳೆದ ತಿಂಗಳು ನಾಗ್ಪುರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಜೈಲೇ ಜೀವನ
ಚೌಧರಿ ಅವರು ಸಾಮಾನ್ಯವಾಗಿ ಸುಮಾರು 25 ವರ್ಷಗಳ ಕಾಲ ಪುಣೆಯ ಯರವಾಡ ಸೆಂಟ್ರಲ್ ಜೈಲು ಹಾಗೂ ನಾಗಪುರ ಸೆಂಟ್ರಲ್ ಜೈಲಿನಲ್ಲಿ ಬದುಕಿದ್ದಾರೆ.
ಆದರೆ ಅವರು ಜೈಲಿನಲ್ಲಿ ಕೊಂಚವೂ ತಮ್ಮ ಜೀವನೋತ್ಸಾಹವನ್ನು ಕಳೆದುಕೊಳ್ಳಲಿಲ್ಲ. ಅಲ್ಲಿನ ಸಮಯದೊಂದಿಗೆ ತಮ್ಮ ಬದುಕನ್ನು ಹಸನುಗೊಳಿಸಿಕೊಂಡರು.
ಕಲಿಕೆಯಲ್ಲಿ ಮಗ್ನರಾದ ಚೌಧರಿ
ಕಂಬಿಗಳ ಹಿಂದೆ ಇದ್ದಾಗಲೂ ಬದುಕಿನ ಬಗ್ಗೆ ಭರವಸೆ ಕಳೆದು ಕೊಳ್ಳದ ಅವರು ಇಂಗ್ಲೀಷ್, ಮರಾಠಿ ಭಾಷೆಗಳನ್ನು ಕಲಿತರು. ದಿನಪತ್ರಿಕೆಗಳನ್ನು ಓದಲು ರೂಢಿಸಿಕೊಂಡರು. ಕೇವಲ ತಮ್ಮ ಓದನ್ನು ದಿನಪತ್ರಿಕೆಗೆ ಮೀಸಲಿರಿಸದೆ, ಸಿನಿಮಾ, ಮ್ಯಾಗಜೀನ್‍ಗಳನ್ನು ಓದುವ ಹವ್ಯಾಸ ರೂಢಿಸಿಕೊಂಡರು.
ಓದು ಬದುಕನ್ನು ರೂಪಿಸುತ್ತದೆ ಎಂಬುದನ್ನು ಅರಿತಿದ್ದ ಚೌಧರಿ ಅವರು ದಿನಕ್ಕೆ ಐದು ದಿನಪತ್ರಿಕೆಗಳನ್ನು ಓದುತ್ತಿದ್ದರು ಮತ್ತು ಚೇತನ್ ಭಗತ್ ಮತ್ತು ದುರ್ಜೋಯ್ ದತ್ತಾ ಅವರಂತಹ ಭಾರತೀಯ ಲೇಖಕರು ಮತ್ತು ಸಿಡ್ನಿ ಶೆಲ್ಡನ್ ಮತ್ತು ಡೇವಿಡ್ ಬಾಲ್ಡಾಕಿಯಂತಹ ವಿದೇಶಿ ಲೇಖಕರು ಸೇರಿದಂತೆ 800ಕ್ಕೂ ಹೆಚ್ಚು ಕಾದಂಬರಿಗಳನ್ನು ಜೈಲಿನಲ್ಲಿದ್ದ ವೇಳೆ ಓದಿ ಮುಗಿಸಿದ್ದಾರೆ.
ಪದವಿ ಗಳಿಕೆ
ಜೈಲಿನಲ್ಲಿದ್ದಾಗ, ಚೌಧರಿ ಸಮಾಜ ವಿಜ್ಞಾನದಲ್ಲಿ ಬಿಎ ಪದವಿ, ಸಮಾಜಶಾಸ್ತ್ರದಲ್ಲಿ ಎಂಎ, ಮುಕ್ತ ವಿಶ್ವವಿದ್ಯಾನಿಲಯದಿಂದ ಪ್ರವಾಸೋದ್ಯಮ ಕೋರ್ಸ್ ಮತ್ತು ಗಾಂಧಿ ಅಧ್ಯಯನದ ಕೋರ್ಸ್‍ಗಳನ್ನು ಪೂರ್ಣಗೊಳಿಸಿ ತಮ್ಮ ಅಧ್ಯಯನಶೀಲತೆಯನ್ನು ಜೀವಂತವಾಗಿರಿಸಿದ್ದರು.
ಬಯಕೆ
ಚೌಧರಿ ಅವರು ಕೇರಳ ಮತ್ತು ಅಮೆರಿಕಾದ ಲಾಸ್ ವೇಗಾಸ್‍ಗೆ ಭೇಟಿ ನೀಡಲು, ಫಾಸ್ಟ್ ಅಂಡ್ ಫ್ಯೂರಿಯಸ್ ಚಲನಚಿತ್ರಗಳನ್ನು ವೀಕ್ಷಿಸಲು ಮತ್ತು ಬಿಹಾರದ ಜನಪ್ರಿಯ ಖಾದ್ಯವಾದ ಲಿಟ್ಟಿ ಚೋಖಾವನ್ನು ಪ್ರಯತ್ನಿಸಲು ಬಯಸುವುದಾಗಿ ಹೇಳಿದ್ದಾರೆ.
ಒಟ್ಟಿನಲ್ಲಿ ಇವರು ನೈಜವಾಗಿ ಜೈಲು ಎಂಬುದು ಕೇವಲ ಶಿಕ್ಷೆ ಅನುಭವಿಸುವ ವಿಧಾನವಲ್ಲ, ಬದಲಾಗಿ ವ್ಯಕ್ತಿಯ ಒಳಗಿನ ಕೆಟ್ಟ ಮನಸ್ಥಿತಿಯನ್ನು ಬದಲಿಸಿ ಅವನಲ್ಲಿ ಒಳ್ಳೆಯ ಸನ್ನಡತೆ ಉಂಟು ಮಾಡುವ ಮಾರ್ಗ ಎಂಬ ವ್ಯಾಖ್ಯಾನವನ್ನು ಸತ್ಯವಾಗಿಸಿ ತೋರಿಸಿದ್ದಾರೆನ್ನಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ