ಕೋವಿಡ್ ಸಾಂಕ್ರಾಮಿಕದ (Corona Pandemic) ನಂತರ ಉದ್ಯೋಗ ಕ್ಷೇತ್ರ (Job Market) ಇನ್ನಿಲ್ಲದಂತೆ ಕುಸಿದಿದೆ. ಆರ್ಥಿಕ ಸಂಕಷ್ಟದಿಂದ (Recession) ಬಳಲುತ್ತಿರುವ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ (Layoffs) ಹಾಗೂ ಕಡಿಮೆ ಸಂಬಳಕ್ಕೆ ಉದ್ಯೋಗಿಗಳನ್ನು ನೇಮಿಸುತ್ತಿವೆ. ಒಟ್ಟಿನಲ್ಲಿ ಉದ್ಯೋಗ ಕ್ಷೇತ್ರ ತೀರಾ ಕಂಗೆಟ್ಟಿದೆ.
ಹೊಸ ಕೋರ್ಸ್ಗಳನ್ನು ಕಲಿಯುವುದು
ಕೆಲಸ ಕಳೆದುಕೊಂಡ ಉದ್ಯೋಗಿಗಳು ಬೇರೆ ಉದ್ಯೋಗಗಳನ್ನು ಹುಡುಕುತ್ತಿದ್ದರೆ ಇನ್ನು ಕೆಲವರು ಬೇರೆ ಬೇರೆ ಕೋರ್ಸ್ಗಳನ್ನು ಮಾಡುತ್ತಿದ್ದಾರೆ. ಹೊಸ ವರ್ಷದಲ್ಲಿ ವೃತ್ತಿಪರರನ್ನು ಬೆಂಬಲಿಸಲು ಲಿಂಕ್ಡ್ಇನ್ ಉಚಿತ ಕೋರ್ಸ್ಗಳು ಹಾಗೂ ವೃತ್ತಿಪರರ ಸಲಹೆಗಳನ್ನು ಪರಿಚಯಿಸಿದೆ.
ಲಿಂಕ್ಡ್ಇನ್ ನೇಮಕಾತಿ ಡೇಟಾವನ್ನು ಹೊರತಂದಿದ್ದು 2021 ಕ್ಕೆ ಹೋಲಿಸಿದಾಗ 2022 ರಲ್ಲಿ ನೇಮಕಾತಿ ದರವು 23% ದಷ್ಟು ನಿಧಾನವಾಗಿದೆ ಎಂಬ ಅಂಶವನ್ನು ಪ್ರಕಟಿಸಿದೆ. ಉದ್ಯೋಗ ರಂಗವು ಚೇತರಿಸಿಕೊಳ್ಳುತ್ತಿದೆ ಎಂಬ ಧನಾತ್ಮಕ ಅಂಶವನ್ನು ವೇದಿಕೆ ಬಹಿರಂಗಪಡಿಸಿದೆ.
ಆತ್ಮವಿಶ್ವಾಸ ವ್ಯಕ್ತಪಡಿಸಿರುವ ಉದ್ಯೋಗಿಗಳು
ಆರ್ಥಿಕ ಸಂಕಷ್ಟ, ಅನಿಶ್ಚಿತೆಯ ನಡುವೆಯೂ ವೃತ್ತಿಪರರು ತಮ್ಮ ಕೌಶಲ್ಯಗಳನ್ನು ಇನ್ನಷ್ಟು ಮೊನಚಾಗಿಸುವ ನಿಟ್ಟಿನಲ್ಲಿ ವೃತ್ತಿಜೀವನಕ್ಕೆ ಇನ್ನಷ್ಟು ಧನಾತ್ಮಕ ಅಂಶಗಳನ್ನು ಸೇರಿಸುವ ನಿಟ್ಟಿನಲ್ಲಿ ವಿವಿಧ ಕೋರ್ಸ್ಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ.
ಹೀಗೆ ಕೋರ್ಸ್ಗಳಿಂದ ಪರಿಣಿತಿ ಪಡೆದುಕೊಂಡವರು ಉದ್ಯೋಗ ಕಳೆದುಕೊಂಡರೂ ಬೇರೆ ಕ್ಷೇತ್ರದಲ್ಲಿ ಉದ್ಯೋಗ ಕಂಡುಕೊಳ್ಳುವ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಲಿಂಕ್ಡ್ಇನ್ ವರದಿ ಮಾಡಿದೆ.
ಕೌಶಲ್ಯ ಪರಿಣಿತಿ ಏಕೆ ಮುಖ್ಯ?
ಹೊಸ ಉದ್ಯೋಗಗಳನ್ನು ಹುಡುಕಲು ಅದಕ್ಕೆ ತಕ್ಕಂತಹ ಕೌಶಲ್ಯಗಳು, ಪರಿಣಿತಿಗಳನ್ನು ಪಡೆದುಕೊಳ್ಳುವುದು ಮುಖ್ಯ ಎಂಬುದು ಲಿಂಕ್ಡ್ಇನ್ ನೀಡುವ ಸಲಹೆಯಾಗಿದೆ. ಹೆಚ್ಚುತ್ತಿರುವ ಜೀವನ ವೆಚ್ಚ ಹಾಗೂ ಆರ್ಥಿಕ ಭದ್ರತೆಯ ಕಾರಣದಿಂದ ಉದ್ಯೋಗಿಗಳು ಹೊಸ ಉದ್ಯೋಗಗಳನ್ನು ಹುಡುಕುತ್ತಾರೆ.
ವೃತ್ತಿ ಹಾಗೂ ವೈಯಕ್ತಿಕ ಜೀವನಕ್ಕೆ ಸಮಾನ ಆದ್ಯತೆ
ಉದ್ಯೋಗ ಹಾಗೂ ವೈಯಕ್ತಿಕ ಜೀವನಕ್ಕೆ ಸಮಾನತೆಯನ್ನು ಕಂಡುಕೊಳ್ಳುವುದು 33% ದಷ್ಟು ಉದ್ಯೋಗಿಗಳ ಬಯಕೆಯಾಗಿದೆ. ಹೊಸ ಉದ್ಯೋಗವು ವೃತ್ತಿ ಹಾಗೂ ವೈಯಕ್ತಿಕ ಜೀವನ ಎರಡಕ್ಕೂ ಪೂರಕವಾಗಿರಬೇಕು ಎಂಬುದು ಉದ್ಯೋಗಿಗಳ ಆಶಯವಾಗಿದೆ. 32% ದಷ್ಟು ಉದ್ಯೋಗಿಗಳು ತಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಹೊಂದಿದ್ದು ಇನ್ನಷ್ಟು ಉತ್ತಮ ಉದ್ಯೋಗಗಳನ್ನು ಪಡೆದುಕೊಳ್ಳಬಹುದು ಎಂಬ ಆಶಯ ಹೊಂದಿದ್ದಾರೆ.
ಆರ್ಥಿಕ ಕುಸಿತವನ್ನು ನಿಭಾಯಿಸಲು ಉದ್ಯೋಗಿಗಳು ಹೇಗೆ ಸಿದ್ಧರಾಗಿದ್ದಾರೆ?
ಲಿಂಕ್ಡ್ಇನ್ ನಡೆಸಿದ ಸಮೀಕ್ಷೆಯ ಪ್ರಕಾರ ಭಾರತದಲ್ಲಿ 5 ರಲ್ಲಿ 2 ರಂತೆ 43% ವೃತ್ತಿಪರರು ಆರ್ಥಿಕ ಕುಸಿತವನ್ನು ನಿಭಾಯಿಸಲು ಸಿದ್ಧ ಎಂದು ತಿಳಿಸಿದ್ದಾರೆ. ವೃತ್ತಿಪರರು ತಮ್ಮ ಸಾಮರ್ಥ್ಯಗಳನ್ನು ಇನ್ನಷ್ಟು ಉತ್ತಮಗೊಳಿಸಲು ವೃತ್ತಿ ಸಂಬಂಧಿತ ಕೋರ್ಸ್ಗಳೆಡೆಗೆ ಗಮನ ನೀಡಲು ಉತ್ಸುಕರಾಗಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.
2023 ರಲ್ಲಿ ವೃತ್ತಿಬದಲಾವಣೆ ಆದ್ಯತೆಯಾದರೆ ಲಿಂಕ್ಡ್ಇನ್ ನೀಡುತ್ತಿದೆ ಕೆಲವೊಂದು ಟಿಪ್ಸ್
1) ಹೊಸ ಹೊಸ ಕೌಶಲ್ಯಗಳನ್ನು ಕಲಿತುಕೊಳ್ಳಿ
ಹೊಸ ಕೌಶಲ್ಯಗಳನ್ನು ತಿಳಿಸಿಕೊಡುವಲ್ಲಿ ಆನ್ಲೈನ್ ತಾಣಗಳು ಅತ್ಯುತ್ತಮವಾಗಿವೆ. ನಿಮ್ಮ ವೃತ್ತಿ ಸಂಬಂಧಿತ ಜ್ಞಾನವನ್ನು ಈ ಮಾಧ್ಯಮದ ಮೂಲಕ ಸುಧಾರಿಸಿಕೊಳ್ಳಬಹುದು. ವೃತ್ತಿ ಸಂಬಂಧಿತ ಕೌಶಲ್ಯಗಳನ್ನು ಕಲಿತುಕೊಳ್ಳುವುದು ಹೊಸ ಉದ್ಯೋಗಕ್ಕೆ ಅಗತ್ಯವಾಗಿದೆ.
ಈ ನಿಟ್ಟಿನಲ್ಲಿ ಲಿಂಕ್ಡ್ಇನ್ 18,000 ಕ್ಕಿಂತಲೂ ಹೆಚ್ಚಿನ ಕೋರ್ಸ್ಗಳನ್ನು ಒದಗಿಸುತ್ತಿದೆ, ಹೀಗೆ ನಿಮ್ಮಲ್ಲಿರುವ ಕೌಶಲ್ಯಗಳನ್ನು ಸುಧಾರಿಸಿಕೊಳ್ಳುವುದು ಸೇರಿದಂತೆ ಇನ್ನಷ್ಟು ಕೌಶಲ್ಯಗಳನ್ನು ಅರಿತುಕೊಳ್ಳಬಹುದು.
2) ಇತ್ತೀಚಿನ ಅಪ್ಡೇಟ್ಗಳ ಬಗ್ಗೆ ತಿಳಿದುಕೊಳ್ಳುತ್ತಿರಿ
ಸ್ಪರ್ಧಾತ್ಮಕ ಉದ್ಯೋಗ ಮಾರುಕಟ್ಟೆಯಲ್ಲಿ ಇತ್ತೀಚಿನ ಸುದ್ದಿಗಳು ಹೊಸ ಹೊಸ ಉದ್ಯೋಗಗಳ ಬಗ್ಗೆ ಮಾಹಿತಿ ನೀಡುತ್ತಿರುತ್ತದೆ. ಲಿಂಕ್ಡ್ಇನ್ನ ಗೆಟ್ ಹೈಯರ್ಡ್ ನ್ಯೂಸ್ ಲೆಟರ್ ಸರಿಯಾದ ಉದ್ಯೋಗ ಹುಡುಕಾಟ ಹಾಗೂ ಯಾವ ಕಂಪನಿಗಳು ನೇಮಕಾತಿ ನಡೆಸುತ್ತಿವೆ ಎಂಬ ಮಾಹಿತಿಯನ್ನು ಒದಗಿಸುತ್ತದೆ.
3) ಅಪ್ಡೇಟ್ ಆಗಿರುವ ಪ್ರೊಫೈಲ್ ರಚಿಸಿ
ನಿಮ್ಮ ಲಿಂಕ್ಡ್ಇನ್ ಪ್ರೊಫೈಲ್ ಅಪ್ಟುಡೇಟ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ. ಪ್ರೊಫೈಲ್ ಫೋಟೋ ಇದ್ದಲ್ಲಿ ಉದ್ಯೋಗ ಹುಡುಕಾಟ ಇನ್ನಷ್ಟು ಸುಲಭ ಎಂಬುದು ಲಿಂಕ್ಡ್ಇನ್ ಸಲಹೆಯಾಗಿದೆ.
4) ಆದ್ಯತೆ ಇರುವ ಹುದ್ದೆಗಳನ್ನೇ ಅನ್ವೇಷಿಸಿ
ಬ್ಯುಸಿನೆಸ್ ಫಂಕ್ಷನ್ ಹುದ್ದೆಗಳು, ಸೈಬರ್ ಸೆಕ್ಯುರಿಟಿ ಮೊದಲಾದ ಕ್ಷೇತ್ರಗಳಲ್ಲಿ ಬೇಡಿಕೆ ಇರುವುದಾಗಿ ಲಿಂಕ್ಡ್ಇನ್ ಸೂಚಿಸಿದೆ. ವೃತ್ತಿ ಬದಲಾವಣೆ ನಿಮ್ಮ ಆದ್ಯತೆಯಾದರೆ ಯಾವ ಕ್ಷೇತ್ರಕ್ಕೆ ನೀವು ಆದ್ಯತೆ ನೀಡುತ್ತೀರಿ ಎಂಬುದನ್ನು ಕುರಿತು ಒಳ್ಳೆಯ ಆಯ್ಕೆ ಮಾಡಿ.
5) ಸಂದರ್ಶನಕ್ಕೆ ಸಿದ್ಧರಾಗಿ
ಈ ಹುದ್ದೆಗಾಗಿ ನೀವು ಏಕೆ ಅರ್ಜಿ ಸಲ್ಲಿಸುತ್ತಿದ್ದೀರಿ? ಈ ಹುದ್ದೆಯನ್ನು ಹೇಗೆ ನಿಭಾಯಿಸಬಲ್ಲಿರಿ? ನಿಮ್ಮನ್ನೇ ಏಕೆ ನೇಮಿಸಬೇಕು? ಮೊದಲಾದ ಪ್ರಶ್ನೆಗಳಿಗೆ ನಿಮ್ಮಲ್ಲಿ ಉತ್ತರವಿರಲಿ. ಲಿಂಕ್ಡ್ಇನ್ ಸಂದರ್ಶನ ಸಿದ್ಧತೆಯಂತಹ ಪರಿಕರಗಳನ್ನು ಬಳಸಿಕೊಂಡು ಸಂದರ್ಶನಗಳಿಗೆ ಸಿದ್ಧರಾಗಿ.
ಭಾರತದಲ್ಲಿ ಹೆಚ್ಚುತ್ತಿರುವ ಉನ್ನತ ಉದ್ಯೋಗ ಹುದ್ದೆಗಳು
ಲಿಂಕ್ಡ್ಇನ್ ಕಳೆದ ಐದು ವರ್ಷಗಳಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯೋಗ ಹುದ್ದೆಗಳನ್ನು ಪಟ್ಟಿ ಮಾಡುವ 'ಜಾಬ್ಸ್ ಆನ್ ದಿ ರೈಸ್' ವರದಿಯನ್ನು ಬಹಿರಂಗಪಡಿಸಿದೆ. ವ್ಯಾಪಾರ ಕ್ಷೇತ್ರದಲ್ಲಿ ಕೊಡುಗೆ ನೀಡುವ ಹುದ್ದೆಗಳು, ಗ್ರಾಹಕ ಸ್ವಾಧೀನವನ್ನು ಬಲಪಡಿಸುವ ಹುದ್ದೆಗಳು 2023 ರಲ್ಲಿ ಉತ್ತಮ ಉದ್ಯೋಗ ಹುದ್ದೆಗಳಾಗಿವೆ ಎಂಬುದಾಗಿ ಡೇಟಾ ತಿಳಿಸಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ