ಯಶಸ್ವಿ ಇಂಟೀರಿಯರ್ ಡಿಸೈನರ್ (Interior Designer) ಆಗಲು ಕೌಶಲ್ಯ (Skill), ಕ್ರಿಯೇಟಿವಿಟಿ (Creativity) ಹಾಗೂ ನಿಮ್ಮದೇ ಆದ ದೃಷ್ಟಿಕೋನದ ಅಗತ್ಯವಿದೆ. ಇದು ಒಮ್ಮೆ ಕಲಿತುಬಿಟ್ಟರೆ ಮುಗಿಯಿತು ಎನ್ನುವಂಥ ಕ್ಷೇತ್ರವಲ್ಲ. ಬದಲಾಗಿ ದಿನದಿಂದ ದಿನಕ್ಕೆ ಹೊಸತನವನ್ನು ಅಳವಡಿಸಿಕೊಳ್ಳುವಂಥ ಕೆಲಸವಾಗಿದೆ. ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ಜೀವನ ಮಟ್ಟ ಮತ್ತು ಐಷಾರಾಮಿ ಜೀವನದ (Luxury Life) ಬಗ್ಗೆ ಹೆಚ್ಚು ಜಾಗೃತರಾಗುತ್ತಿದ್ದಾರೆ. ಅದಕ್ಕಾಗಿ ಅವರು ಹೆಚ್ಚು ಕನಸು ಕಾಣುತ್ತಾರೆ. ಅದಕ್ಕಾಗಿ ಹೆಚ್ಚು ದುಡಿಯುತ್ತಾರೆ ಕೂಡ. ಹಾಗಾಗಿಯೇ ತಾವು ಇರುವಂಥ ಸ್ಥಳ ವಿಶಿಷ್ಟವಾಗಿ ಕಾಣಲು ಅನೇಕರು ಒಳಾಂಗಣ ವಿನ್ಯಾಸಕಾರರನ್ನು ಅಥವಾ ಇಂಟೀರಿಯರ್ ಡಿಸೈನರ್ ಅನ್ನು ನೇಮಿಸಿಕೊಳ್ಳುತ್ತಾರೆ.
ಇಂಟೀರಿಯರ್ ಡಿಸೈನರ್ ಆಗುವುದರ ಮತ್ತೊಂದು ಲಾಭವೆಂದರೆ ನಿಮ್ಮ ಕೆಲಸ ಸೀಮಿತವಾಗಿರುವುದಿಲ್ಲ. ನಿಮ್ಮ ಕ್ಷೇತ್ರದಲ್ಲಿ ನೀವು ಎಷ್ಟು ಬೇಕಾದರೂ ಅನ್ವೇಷಿಸಬಹುದು. ನೀವು ಈ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದೀರಾ ಎಂದಾದರೆ ಈ 5 ವೃತ್ತಿಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
1) ಕ್ರಿಯೇಟಿವ್ ಇಂಟೀರಿಯರ್ ಡಿಸೈನರ್: ಹೆಸರೇ ಸೂಚಿಸುವಂತೆ ಇದು ಕ್ರಿಯೇಟಿವ್ ಆಗಿ ಮಾಡುವಂಥ ಕೆಲಸವಾಗಿದೆ. ನೀವು ಕೆಫೆ, ಸ್ಟುಡಿಯೋ ಅಥವಾ ಮನೆ, ಅಪಾರ್ಟ್ಮೆಂಟ್ ಮುಂತಾದ ಸ್ಥಳದ ಸೌಂದರ್ಯವನ್ನು ಸುಧಾರಿಸಲು ಕೆಲಸ ಮಾಡುವ ಇಂಟೀರಿಯರ್ ಡಿಸೈನರ್ ಆಗಿರುತ್ತೀರಿ. ನೀವು ಈಗಾಗಲೇ ನಿರ್ಮಿಸಿದ ಖಾಲಿ ಜಾಗವನ್ನು ಪಡೆದು ನಿಮ್ಮ ಸೃಜನಶೀಲತೆ ಮತ್ತು ಕೌಶಲ್ಯಗಳೊಂದಿಗೆ ಆ ಜಾಗವನ್ನು ಇನ್ನಷ್ಟು ಚೆಂದಗಾಣಿಸುತ್ತೀರಿ. ಗೋಡೆಯ ಟೆಕ್ಶ್ಚರ್ಗಳನ್ನು ಸರಿಪಡಿಸುವುದರಿಂದ ಹಿಡಿದು ಅದನ್ನು ಉತ್ತಮ ಲೈಟ್ಗಳಿಂದ ಬೆಳಗಿಸುವವರೆಗೆ ಎಲ್ಲವೂ ನಿಮ್ಮ ಕೈಯ್ಯಲ್ಲಿರುತ್ತದೆ.
2) ಸ್ಪೇಸ್ ಪ್ಲಾನರ್ : ಈ ಕಾರ್ಯವು ತುಂಬಾ ವಿನೋದಮಯವಾಗಿದೆ. ಒಂದು ಜಾಗದಲ್ಲಿ ನೀವು ಒಬ್ಬರ ಕಲ್ಪನೆಯನ್ನು ಜಾರಿಗೆ ತರುತ್ತೀರಿ. ಅಂದರೆ ನೀವು ಎಲ್ಲವೂ ಐಷಾರಾಮಿಯಾಗಿ, ವಿಭಿನ್ನವಾಗಿ ಕಾಣುವ ರೀತಿಯಲ್ಲಿ ಆ ಜಾಗವನ್ನು ಸರಿಪಡಿಸಬೇಕಾಗುತ್ತದೆ. ಉದಾಹರಣೆಗೆ, ಸ್ಥಳಾವಕಾಶದ ನಿರ್ಬಂಧವಿದ್ದರೆ, ನೀವು ಅದನ್ನು ವಿಶಾಲವಾಗಿ ಕಾಣುವಂತೆ ಮಾಡಬೇಕಾಗುತ್ತದೆ. ಆದ್ರೆ ಈ ಕೆಲಸವು ನಿಮಗೆ ಸವಾಲುಗಳನ್ನು ತರುತ್ತದೆ. ಆದ್ರೆ ನಿಮ್ಮಲ್ಲಿ ಒಳ್ಳೆಯ ಕೌಶಲ್ಯಗಳಿದ್ದರೆ ಇಂಥ ಸವಾಲುಗಳಲ್ಲಿಯೂ ನೀವು ವಿನೋದವನ್ನು ಅನುಭವಿಸಬಹುದು.
3) ಮೀಡಿಯಾ ಪ್ರೊಡಕ್ಷನ್ ಡಿಸೈನರ್: ನಾವು ರೀಲ್ ಜೀವನದಿಂದ ಹೆಚ್ಚು ರೋಮಾಂಚನಗೊಳ್ಳುತ್ತೇವೆ. ಪ್ರೊಡಕ್ಷನ್ ಡಿಸೈನರ್ ಅಥವಾ ಸೆಟ್ ಡಿಸೈನರ್ ಆಗುವ ಮೂಲಕ ನೀವು ಅಂಥ ರೀಲ್ ಜೀವನವನ್ನು ಅನುಭವಿಸಬಹುದು. ಥಿಯೇಟರ್ಗಳು, ಚಲನಚಿತ್ರಗಳು, ರಿಯಾಲಿಟಿ ಶೋಗಳು ಮುಂತಾದವುಗಳಿಗಾಗಿ ಸೆಟ್ಗಳನ್ನು ರಚಿಸುವುದು ನಿಮ್ಮ ಕೆಲಸವಾಗಿರುತ್ತದೆ. ಸ್ಕ್ರಿಪ್ಟ್ ಪ್ರಕಾರ ಪ್ರತಿ ದೃಶ್ಯಕ್ಕೆ ಪರಿಪೂರ್ಣ ಸೆಟ್ಟಿಂಗ್ ಅನ್ನು ರಚಿಸಲು ನೀವು ನೇರವಾಗಿ ನಿರ್ದೇಶಕರು ಮತ್ತು ನಿರ್ಮಾಪಕರೊಂದಿಗೆ ಕೆಲಸ ಮಾಡುತ್ತೀರಿ.
4) ಎಕ್ಸಿಬಿಷನ್ ಡಿಸೈನರ್: ಎಕ್ಸಿಬಿಷನ್ ಡಿಸೈನರ್ ಆಗಿ, ನೀವು ಹಲವಾರು ಕಲಾ ಪ್ರದರ್ಶನಗಳಿಗಾಗಿ ಸ್ಥಳಗಳನ್ನು ರೆಡಿ ಮಾಡುತ್ತೀರಿ. ಸಾಮಾನ್ಯವಾಗಿ ಆಡಿಟೋರಿಯಂ ಅಥವಾ ಕ್ರೀಡಾಂಗಣವನ್ನು ಹೊಂದಿಸಬೇಕಾಗುತ್ತದೆ. ಯಾವ ಪ್ರಕಾರದ ಪ್ರದರ್ಶನ ಎಂಬುದರ ಆಧಾರದ ಮೇಲೆ ನೀವು ವಿಭಿನ್ನ ಥೀಮ್ಗಳು ಮತ್ತು ವಿಭಿನ್ನ ಆಲೋಚನೆಗಳ ಮೇಲೆ ಕೆಲಸ ಮಾಡುತ್ತೀರಿ. ಅದು ಶೈಕ್ಷಣಿಕ ಪ್ರದರ್ಶನವಾಗಿದ್ದರೆ, ನಿಮ್ಮಲ್ಲಿರುವ ಚಿಕ್ಕ ಐನ್ಸ್ಟೈನ್ನನ್ನು ಹಾಗೆಯೇ ಅದೊಂದು ಫ್ಯಾಷನ್ ಪ್ರದರ್ಶನವಾಗಿದ್ದರೆ, ನಿಮ್ಮಲ್ಲಿರುವ ಚಿಕ್ಕ ಕಲಾವಿದನನ್ನು ನೀವು ಹೊರತರಬೇಕಾಗುತ್ತದೆ.
5) ರಿಟೇಲ್ ಮರ್ಚಂಡೈಸ್ ಡಿಸೈನರ್: ಇಲ್ಲಿ ನೀವು ಕ್ಲೈಂಟ್ ಜೊತೆಗೆ ವ್ಯವಹರಿಸುವ ಸರಕುಗಳಿಗಾಗಿ ಪ್ರಚಾರಗಳನ್ನು ಯೋಜಿಸುವ ಕೆಲಸ ಮಾಡುತ್ತೀರಿ. ರಿಟೇಲ್ ಮರ್ಚಂಡೈಸ್ ಡಿಸೈನರ್ ಆಗಿ ನಿಮ್ಮ ಕ್ಲೈಂಟ್ನ ಕಂಪನಿಯನ್ನು ಬ್ರ್ಯಾಂಡ್ ಆಗಿ ಪರಿವರ್ತಿಸಲು ನೀವು ಮಾರ್ಕೆಟಿಂಗ್ ತಂತ್ರ ಮತ್ತು ಜಾಹೀರಾತು ಪರಿಕಲ್ಪನೆಗಳನ್ನು ರಚಿಸಬೇಕಾಗುತ್ತದೆ.
ಒಟ್ಟಾರೆ, ಇಂದಿನ ಕಾಲದಲ್ಲಿ ಈ ಉದ್ಯೋಗಕ್ಕೆ ಹೆಚ್ಚಿನ ಬೇಡಿಕೆಯಿದೆ. ನಿಮ್ಮ ಕ್ರಿಯೇಟಿವಿಟಿಯನ್ನು ನಿರೂಪಿಸಲು ಬಯಸಿದರೆ, ಹೊಸತನಕ್ಕೆ ನೀವು ಉತ್ಸುಕರಾಗಿದ್ದರೆ ನೀವು ಒಳಾಂಗಣ ವಿನ್ಯಾಸಕಾರರಾಗಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ