ಸ್ವಂತ ಉದ್ಯಮ (Own Business) ಅನ್ನೋದು ಇತ್ತೀಚಿನ ದಿನಗಳಲ್ಲಿ ಬೇಡಿಕೆಯಲ್ಲಿರುವಂತಹ ಒಂದು ವೃತ್ತಿ ಬದುಕು (Career Life). ಅದರಲ್ಲೂ ಮಹಿಳೆಯರು ( Women Entrepreneurs) ಮನೆ, ಕುಟುಂಬ, ಮಕ್ಕಳನ್ನು ನೋಡಿಕೊಳ್ಳುತ್ತಾ ತಮ್ಮದೇ ಉದ್ಯಮ ಕಟ್ಟಿ ಉದ್ಯಮಿಗಳಾಗಲು ಬಯಸುತ್ತಾರೆ. ಅದಕ್ಕೆ ಸಾಕ್ಷಿಯಾಗಿ ಸಾಮಾಜಿಕ ಜಾಕತಾಣಗಳಲ್ಲಿ ಸುಮಾರು ಉದ್ಯಮಗಳನ್ನು ನೋಡಬಹುದಾಗಿದೆ. ಪುರುಷರಿಗೆ ಮಾತ್ರ ಉದ್ಯಮ ಎಂಬ ಕಾಲವೊಂದಿತ್ತು, ಪ್ರಸ್ತುತ ಅದು ಮರೆಮಾಚುತ್ತಾ ಬಂದಿದ್ದು, ಮಹಿಳೆಯರು ಸಹ ಉದ್ಯಮದಲ್ಲಿ ಭಾರೀ ಆಸಕ್ತಿ ತೋರಿಸುವುದರ ಜೊತೆಗೆ ಯಶಸ್ಸನ್ನು ಸಹ ಗಳಿಸುತ್ತಿದ್ದಾರೆ.
ಉದ್ಯಮಶೀಲತೆಯಲ್ಲಿ ಮಹಿಳೆಯರ ಆಸಕ್ತಿಯನ್ನು ಅಧ್ಯಯನ ಮಾಡಲು ಫ್ರಾಂಚೈಸಿ ಇಂಡಿಯಾ ಸಮೀಕ್ಷೆಯೊಂದನ್ನು ನಡೆಸಿತ್ತು. ಈ ಹೊಸ ಸಮೀಕ್ಷೆಯಲ್ಲಿ ಹೆಚ್ಚಿನ ಮಹಿಳೆಯರು ಸ್ವಂತ ಉದ್ಯಮದ ಆಸಕ್ತಿಯನ್ನು ಹೊಂದಿರುವುದು ತಿಳಿದು ಬಂದಿದೆ.
ಸಮೀಕ್ಷೆಯ ಫಲಿತಾಂಶಗಳು
26 ರಿಂದ 35 ವರ್ಷ ವಯಸ್ಸಿನ ಸುಮಾರು 57% ಮಹಿಳೆಯರು ತಮಗೆ ಉದ್ಯಮದಲ್ಲಿ ಆಸಕ್ತಿ ಇದೆ ಎಂದು ತಿಳಿಸಿದರೆ, 36 ಮತ್ತು 45 ವರ್ಷ ವಯಸ್ಸಿನ 27% ಮಹಿಳೆಯರು ತಮ್ಮದೇ ಉದ್ಯಮ ಕಟ್ಟುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇನ್ನೊಂದು ವಿಶೇಷವೆಂದರೆ ಈ ಎಲ್ಲಾ ಮಹಿಳೆಯರಲ್ಲಿ ಹಲವರು ವಿದ್ಯಾವಂತರಾಗಿದ್ದು, 60% ರಷ್ಟು ಮಹಿಳೆಯರು ಪದವಿಯನ್ನು ಹೊಂದಿದ್ದಾರೆ.
10 ರಲ್ಲಿ 3 ಮಹಿಳೆಯರಿಗೆ ಉದ್ಯಮದಲ್ಲಿ ಆಸಕ್ತಿ
ಫ್ರಾಂಚೈಸಿ ಇಂಡಿಯಾ ನಡೆಸಿದ ಸಮೀಕ್ಷೆಯು ಭಾರತದಲ್ಲಿ 10 ರಲ್ಲಿ 3 ಮಹಿಳೆಯರು ಉದ್ಯಮಶೀಲತೆಯ ಪಾತ್ರವನ್ನು ತೆಗೆದುಕೊಳ್ಳಲು ಬಯಸುತ್ತಾರೆ ಎಂದು ಬಹಿರಂಗಪಡಿಸಿದೆ.
ವ್ಯವಹಾರಗಳನ್ನು ಪ್ರಾರಂಭಿಸಲು ಉದಯೋನ್ಮುಖ ಅವಕಾಶಗಳು, ಕಡಿಮೆ-ವೆಚ್ಚದ ಫ್ರ್ಯಾಂಚೈಸಿ ಆಯ್ಕೆಗಳು ಮತ್ತು ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಬ್ರ್ಯಾಂಡ್‌ಗಳ ಹೆಚ್ಚುತ್ತಿರುವ ಆಸಕ್ತಿಯು ಈ ಪ್ರವೃತ್ತಿಯ ಪ್ರಮುಖ ಅಂಶಗಳಾಗಿದೆ ಎಂದು ಸಮೀಕ್ಷೆಯು ಉಲ್ಲೇಖಿಸಿದೆ.
ಸಮೀಕ್ಷೆಯಲ್ಲಿ ಪಾಲ್ಗೊಂಡ 45% ಮಹಿಳಾ ಉದ್ಯಮಿಗಳು ವಿವಾಹಿತರು ಮತ್ತು ತಮ್ಮ ವ್ಯಾಪಾರ ಉದ್ಯಮಗಳೊಂದಿಗೆ ತಮ್ಮ ಕುಟುಂಬದ ಜವಾಬ್ದಾರಿಗಳನ್ನು ಸಹ ನಿರ್ವಹಿಸುತ್ತಿರುವುದಾಗಿ ಸಮೀಕ್ಷೆಯು ಬಹಿರಂಗಪಡಿಸಿದೆ.
ಸಮೀಕ್ಷೆ ಎಲ್ಲೆಲ್ಲಿ ನಡೆದಿದೆ?
ದೆಹಲಿ, ಗುರುಗ್ರಾಮ್, ಭೋಪಾಲ್, ಲೂಧಿಯಾನ, ಲಕ್ನೋ, ಗುವಾಹಟಿ, ಬೆಂಗಳೂರು, ಗೋವಾ, ಜೈಪುರ ಮತ್ತು ಪುಣೆಗಳಂತಹ ಪ್ರಮುಖ ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 500 ಮಹಿಳೆಯರ ಬಳಿ ಪ್ರತಿಕ್ರಿಯೆಯನ್ನು ಪಡೆದುಕೊಳ್ಳಲಾಗಿದೆ.
ಎಲ್ಲಾ ಮಹಿಳಾ ಪ್ರತಿಸ್ಪಂದಕರ ಹೇಳಿಕೆಗಳ ಆಧಾರದ ಮೇಲೆ ಹೆಚ್ಚಿನ ಮಹಿಳೆಯರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಬಯಸುತ್ತಾರೆ ಎಂದು ಸಮೀಕ್ಷೆ ನಿರ್ಣಯಿಸಿದೆ.
"ಫ್ರಾಂಚೈಸಿ ಉದ್ಯಮವು ಭಾರತದಲ್ಲಿ ತೀವ್ರ ಬೆಳವಣಿಗೆಯನ್ನು ಕಾಣುತ್ತಿದೆ ಮತ್ತು ಮಹಿಳಾ ಉದ್ಯಮಿಗಳು ಈ ವಿಸ್ತರಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತಿದ್ದಾರೆ. ಹೆಚ್ಚಿನ ಮಹಿಳೆಯರು ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸುವುದನ್ನು ನಾವು ನೋಡುತ್ತಿದ್ದೇವೆ ಮತ್ತು ಇದು ಆರ್ಥಿಕತೆಗೆ ಧನಾತ್ಮಕವಾಗಿದೆ” ಎಂದು ಫ್ರಾಂಚೈಸಿ ಇಂಡಿಯಾದ ಅಧ್ಯಕ್ಷ ಗೌರವ್ ಮರಿಯಾ ಹೇಳಿದರು.
ಮಾರುಕಟ್ಟೆಯಲ್ಲಿ ಲಭ್ಯವಿರುವ ಹಲವಾರು ಕಡಿಮೆ-ವೆಚ್ಚದ ಫ್ರ್ಯಾಂಚೈಸಿ ಆಯ್ಕೆಗಳೊಂದಿಗೆ, ವ್ಯಾಪಾರವನ್ನು ಪ್ರಾರಂಭಿಸುವುದು ಮಹಿಳೆಯರಿಗೆ ಹೆಚ್ಚು ಸುಲಭವಾಗಿ ಮತ್ತು ಯಶಸ್ಸು ಪಡೆಯಲು ಸಹಕಾರಿಯಾಗಿದೆ.
"ಮಾರುಕಟ್ಟೆಯಲ್ಲಿ ಲಭ್ಯವಿರುವ ಕಡಿಮೆ-ವೆಚ್ಚದ ಫ್ರ್ಯಾಂಚೈಸಿ ಆಯ್ಕೆಗಳು ಮಹಿಳೆಯರಿಗೆ ತಮ್ಮ ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಮತ್ತು ತಮಗೆ ತಾವೇ ಬಾಸ್ ಆಗಲು ಮತ್ತು ವ್ಯಾಪಾರ ಜಗತ್ತಿನಲ್ಲಿ ಛಾಪು ಮೂಡಿಸಲು ಬಯಸುವ ಮಹಿಳೆಯರಿಗೆ ಉತ್ತಮ ಅವಕಾಶವಾಗಿದೆ” ಎಂದು ಮರಿಯಾ ಹೇಳಿದರು.
ಇದನ್ನೂ ಓದಿ: Career Options: ಸೆಕೆಂಡ್ ಪಿಯು ಬಳಿಕ ಯುವತಿಯರು ಈ 4 ವೃತ್ತಿಗಳನ್ನು ಆಯ್ಕೆ ಮಾಡಿದ್ರೆ ಸಖತ್ ಫೇಮಸ್ ಆಗ್ತಾರೆ
ಮಹಿಳೆಯರಿಗೆ ಆಸಕ್ತಿ ಇರುವ ಉದ್ಯಮ ಕ್ಷೇತ್ರಗಳು
ಸಮೀಕ್ಷೆಯಲ್ಲಿ ಸೇವೆ ಮತ್ತು ಚಿಲ್ಲರೆ ಕ್ಷೇತ್ರಗಳಂತಹ ಉದ್ಯಮದಲ್ಲಿ ಮಹಿಳೆಯರು ಆಸಕ್ತಿ ತೋರಿಸಿದ್ದು, ಶಿಕ್ಷಣ, ಸೌಂದರ್ಯ ಮತ್ತು ಆರೋಗ್ಯ ಉದ್ಯಮಗಳಿಗೆ ಹೆಚ್ಚು ಒತ್ತು ನೀಡಿದ್ದಾರೆ ಎಂದು ಫಲಿತಾಂಶಗಳು ತಿಳಿಸಿವೆ.
"ಫ್ರ್ಯಾಂಚೈಸಿ ಉದ್ಯಮದಲ್ಲಿ ಶ್ರೇಣಿ 2 ಮತ್ತು ಶ್ರೇಣಿ 3 ನಗರಗಳು ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತಿವೆ ಮತ್ತು ಮಹಿಳಾ ಉದ್ಯಮಿಗಳು ಈ ಪ್ರವೃತ್ತಿಯ ಲಾಭವನ್ನು ಪಡೆಯಲು ಉತ್ತಮ ಸ್ಥಾನದಲ್ಲಿದ್ದಾರೆ. ಹೊಸ ಅವಕಾಶಗಳು ಮತ್ತು ಸಂಪನ್ಮೂಲಗಳ ಪ್ರವೇಶದೊಂದಿಗೆ ಅವರಿಗಿರುವ ಅಡೆತಡೆಗಳನ್ನು ಮೀರಿ ಮುನ್ನುಗ್ಗುತ್ತಿದ್ದಾರೆ " ಎಂದು ಮರಿಯಾ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ