ವಿದ್ಯಾರ್ಥಿ ಜೀವನದ (Student Life) ಕೊನೆಯ ಹಂತ ಬಹಳ ಪ್ರಮುಖವಾದದ್ದು ಅಂತಲೇ ಹೇಳಲಾಗುತ್ತದೆ. ಏಕೆಂದರೆ ಮುಂದಿನ ಜೀವನ ರೂಪಿಸಿಕೊಳ್ಳುವುದು ಈ ಹಂತದಲ್ಲಿಯೇ . ಈ ವೇಳೆ ಒಳ್ಳೆಯ ಕಂಪನಿಯ ಆಫರ್ ಪಡೆದರೆ ಜೀವನ ಇನ್ನಷ್ಟು ಸುಲಭವಾಗುತ್ತದೆ. ಅದರಲ್ಲೂ ಕೊನೆಯ ಸೆಮಿಸ್ಟರ್‌ಗಳಲ್ಲಿ ಒಂದು ಒಳ್ಳೆಯ ಪ್ಯಾಕೇಜ್ ನೀಡುವಂಥ ಜಾಬ್ ಆಫರ್ (Job Offer) ಸಿಕ್ಕರಂತೂ ಶ್ರಮಕ್ಕೆ ತಕ್ಕ ಅದೃಷ್ಟ ಕೈಹಿಡಿಯಿತೆಂದೇ ಲೆಕ್ಕ.
ಇಲ್ಲೊಬ್ಬ ಬುದ್ಧಿವಂತ ವಿದ್ಯಾರ್ಥಿಗೆ ಅತ್ಯುತ್ತಮ ಪ್ಯಾಕೇಜ್‌ನ ಜಾಬ್ ಆಫರ್ ದೊರೆತಿದೆ. ಈ ವಿದ್ಯಾರ್ಥಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್ ಪಡೆದಂತಹ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ. ಈತ ಐಐಟಿ ವಿದ್ಯಾರ್ಥಿಯಾಗದೇ ಹೋದರೂ ಬರೋಬ್ಬರಿ 90 ಲಕ್ಷದ ಪ್ಯಾಕೇಜ್‌ನ ಜಾಬ್ ಆಫರ್ ಪಡೆದುಕೊಂಡಿದ್ದಾರೆ. ಅಷ್ಟಕ್ಕೂ ಈ ವಿದ್ಯಾರ್ಥಿಯ ಹೆಸರು ರಕ್ಷಿತ್ ದತ್ತಾತ್ರೇಯ ಹೆಗ್ಡೆ ಅಂತ.
ಐಐಟಿ ವಿದ್ಯಾರ್ಥಿ ಅಲ್ಲ ಈ ರಕ್ಷಿತ್ ಹೆಗ್ಡೆ!
ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೆಂಟರ್‌ಗಳಿಂದ ಮಾತ್ರವಲ್ಲದೆ ಭಾರತದ ಅನೇಕ ಎಂಜಿನಿಯರಿಂಗ್ ಕಾಲೇಜುಗಳ ವಿದ್ಯಾರ್ಥಿಗಳು ಈ ವರ್ಷ ಪ್ಲೇಸ್‌ಮೆಂಟ್ ಸೀಸನ್‌ನಲ್ಲಿ ದೊಡ್ಡ ಉದ್ಯೋಗ ಆಫರ್‌ಗಳನ್ನು ಪಡೆದುಕೊಂಡಿದ್ದಾರೆ.
ಬೆಂಗಳೂರಿನ ಇಂಜಿನಿಯರಿಂಗ್ ಕಾಲೇಜುಗಳಲ್ಲಿ, ಆರ್‌ವಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ರಕ್ಷಿತ್ ದತ್ತಾತ್ರೇಯ ಹೆಗ್ಡೆ ನಗರದಲ್ಲಿ ಅತಿ ಹೆಚ್ಚು ಪ್ಲೇಸ್‌ಮೆಂಟ್ ಪ್ಯಾಕೇಜ್‌ಗಳನ್ನು ಪಡೆದ ವಿದ್ಯಾರ್ಥಿಗಳಲ್ಲಿ ಒಬ್ಬರಾಗಿದ್ದಾರೆ.
ವಾರ್ಷಿಕ 90 ಲಕ್ಷ ಪ್ಯಾಕೇಜ್!
ಅಂದಹಾಗೆ ರಕ್ಷಿತ್ ಹೆಗ್ಡೆ ಅವರು ಆರ್‌ವಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಬ್ಯಾಚುಲರ್ ಆಫ್ ಎಂಜಿನಿಯರಿಂಗ್ (ಬಿಇ) ವ್ಯಾಸಂಗ ಮಾಡುತ್ತಿದ್ದಾರೆ. ಅವರು ಐದನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದಾರೆ.
ಸದ್ಯ ರಕ್ಷಿತ್ ಅವರು 90 ಲಕ್ಷ ರೂ. ವಾರ್ಷಿಕ ಸಂಬಳದೊಂದಿಗೆ ಉದ್ಯೋಗದ ಆಫರ್ ಪಡೆದಿದ್ದಾರೆ. ಯುಎಸ್‌ನ ನ್ಯೂಯಾರ್ಕ್‌ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಬಹುರಾಷ್ಟ್ರೀಯ ಸಾಫ್ಟ್‌ವೇರ್ ಕಂಪನಿಯಾದ ಯುಐಪಾತ್ ರಕ್ಷಿತ್‌ಗೆ ಈ ದಾಖಲೆಯ ಉದ್ಯೋಗದ ಆಫರ್ ನೀಡಿದೆ. ಅಂದಹಾಗೆ ಈ ಕಂಪನಿಯು ರೊಬೊಟಿಕ್ ಪ್ರಕ್ರಿಯೆ ಆಟೊಮೇಷನ್ (RPA) ಸಾಫ್ಟ್‌ವೇರ್‌ಅನ್ನು ರಚಿಸುತ್ತದೆ.
ಬುದ್ಧಿವಂತ ವಿದ್ಯಾರ್ಥಿಯಾಗಿರುವ ರಕ್ಷಿತ್
ಅಷ್ಟಕ್ಕೂ ಕಾಲೇಜು ದಿನಗಳಲ್ಲಿ, ರಕ್ಷಿತ್ "ಕಂಪ್ಯೂಟರ್ ಸೈನ್ಸ್ ಸಂಬಂಧಿತ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಉತ್ಪಾದಕತೆ ವೇದಿಕೆ" ಸ್ಟಡಿಬೇರ್ ಅನ್ನು ಸ್ಥಾಪಿಸಿ, ಅಭಿವೃದ್ಧಿಪಡಿಸಿದ್ದರು.
ಈ ಕುರಿತು ರಕ್ಷಿತ್, "ಸ್ಟಡಿಬೇರ್‌ನ ಗುರಿಯು ಒಬ್ಬ ಇಂಜಿನಿಯರ್ (ಐಟಿ) ಆಗಲು ತೆಗೆದುಕೊಳ್ಳುವ ಮಾರ್ಗವನ್ನು ಬದಲಾಯಿಸುವುದು" ಎಂಬುದಾಗಿ ಬರೆದುಕೊಂಡಿದ್ದಾರೆ.
ಇನ್ನು, ರಕ್ಷಿತ್ ಹೆಗ್ಡೆ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ಯುಐಪಾತ್ (UiPath) ನಲ್ಲಿ ಅವರು 'ಮುಂಬರುವ SWE ಇಂಟರ್ನ್' ಆಗಿದ್ದಾರೆ. ಅವರು ತಮ್ಮ ಕಾಲೇಜಿನ RVCE ನಲ್ಲಿ ವಾಣಿಜ್ಯೋದ್ಯಮ ಕೋಶದಲ್ಲಿ ಹಿರಿಯ ಸಹವರ್ತಿಯೂ ಆಗಿದ್ದಾರೆ.
ಅಲ್ಲದೇ ಅವರು ಮೇಕ್ ಎ ಡಿಫರೆನ್ಸ್‌ಗಾಗಿ ಶೈಕ್ಷಣಿಕ ಬೆಂಬಲ ನೀಡುವ ಸ್ವಯಂಸೇವಕರಾಗಿದ್ದಾರೆ. ಇದೊಂದು ಲಾಭರಹಿತ ಶಿಕ್ಷಣ ಸಂಸ್ಥೆಯಾಗಿದೆ. ಮತ್ತೊಂದು ಲಾಭರಹಿತ ಕೋವಿಡ್ ಸೇವಾಗೂ ಅವರು ಸ್ವಯಂಸೇವಕರಾಗಿದ್ದಾರೆ.
ಸಾಮಾನ್ಯವಾಗಿ ನಮ್ಮಲ್ಲಿ ಐಐಟಿಯಲ್ಲಿ ಓದಿದರೇ ಅತ್ಯುತ್ತಮ ಪ್ಯಾಕೇಜ್ ಹೊಂದಿರುವಂಥ ಜಾಬ್ ಆಫರ್ ಸಿಗುತ್ತದೆ ಅನ್ನೋ ನಂಬಿಕೆ ಇದೆ. ಹಾಗಂತ ಅದು ಸುಳ್ಳಲ್ಲ. ಐಐಟಿ ದೇಶದ ಅತ್ಯುತ್ತಮ ಕಾಲೇಜಾಗಿದೆ. ಅಲ್ಲಿನ ಪ್ರವೇಶ ಪರೀಕ್ಷೆಗಳೂ ಕಠಿಣವಾಗಿರುವುದರ ಜೊತೆಗೆ ಅಲ್ಲಿನ ಶಿಕ್ಷಣವೂ ಗುಣಮಟ್ಟದ್ದಾಗಿದೆ. ಹಾಗಾಗಿಯೇ ಅಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಪ್ಯಾಕೇಜ್ ಹೊಂದಿರುವ ಜಾಬ್ ಆಫರ್ ಪಡೆಯುತ್ತಾರೆ.
ಆದರೆ ಬೇರೆ ಕಾಲೇಜುಗಳ ವಿದ್ಯಾರ್ಥಿಗಳು ಕಡಿಮೆಯೇನಿಲ್ಲ. ಕಠಿಣ ಪರಿಶ್ರಮ, ಬುದ್ಧಿವಂತಿಕೆ ಹಾಗೂ ಅದೃಷ್ಟ ಈ ಮೂರೂ ಸೇರಿದಂತೆ ರಕ್ಷಿತ್ ಹೆಗ್ಡೆ ಅವರಿಗೆ ಅದೃಷ್ಟದ ಬಾಗಿಲು ತೆರೆದಿದೆ. ಹಾಗಂತ ಅವರು ಐಐಟಿ ವಿದ್ಯಾರ್ಥಿಯಲ್ಲ ಎನ್ನುವುದು ಕೂಡ ಪ್ರಮುಖ ಅಂಶ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ