ನೀವು ಮಾಡೋ ಕೆಲಸವನ್ನು (Work) ನೀವು ಎಷ್ಟೇ ಪ್ರೀತಿಸುತ್ತೀರಿ ಎಂದಾದರೂ ಅದು ಆಫೀಸ್ ಅವಧಿಯಲ್ಲಿ ಮಾತ್ರ. ಕೆಲವೊಬ್ಬರು ಆಫೀಸ್ (Office) ಅವಧಿ ಬಿಟ್ಟು ಬೇರೆ ಅವಧಿಯಲ್ಲೂ ಕೆಲಸ ಮಾಡುತ್ತಿರುತ್ತಾರೆ. ಆದ್ರೆ ಪ್ರವಾಸಕ್ಕೋ ಅಥವಾ ಕುಟುಂಬದೊಂದಿಗೆ ಸಮಯ ಕಳೆಯಲೆಂದೋ ರಜೆ ತೆಗೆದುಕೊಂಡಿದ್ದಾಗ ಕೆಲಸ ಮಾಡೋಕೆ ಯಾರೂ ಇಷ್ಟ ಪಡೋದಿಲ್ಲ. ಆದ್ರೆ ಕೆಲವೊಂದು ಅನಿವಾರ್ಯ ಪರಿಸ್ಥಿತಿಯಲ್ಲಿ ಆಫೀಸ್ ಕಾಲ್ ಗಳಿಗೆ, ಇಮೇಲ್ಗಳಿಗೆ (Email), ಮೆಸೇಜ್ಗಳಿಗೆ (Message) ಉತ್ತರಿಸಬೇಕಾಗುತ್ತದೆ. ಸ್ವಲ್ಪ ಹೊತ್ತು ಲ್ಯಾಪ್ ಟಾಪ್ (Laptop) ಮುಂದೆ ಕೂರಬೇಕಾಗುತ್ತದೆ. ಇಷ್ಟವಿಲ್ಲದಿದ್ದರೂ ಇಂತಹ ಕೆಲಸ ಮಾಡಬೇಕಾಗುತ್ತದೆ.
ಆದ್ರೆ ಇಲ್ಲೊಂದು ಟೆಕ್ ಕಂಪನಿ ರಜೆಯ ಮೇಲಿರುವ ತಮ್ಮ ಕಂಪನಿಯ ಉದ್ಯೋಗಿಗಳಿಗೆ ತೊಂದರೆ ಕೊಟ್ಟರೆ ಅಂಥವರಿಗೆ 1 ಲಕ್ಷ ರೂಪಾಯಿ ದಂಡ ವಿಧಿಸುವಂತಹ ನಿಯಮವನ್ನ ಜಾರಿಗೆ ತಂದಿದೆ. ಅದೇ ಡ್ರೀಮ್ 11 ಅನ್ಪ್ಲಗ್ ನೀತಿ.
ಏನಿದು ಡ್ರೀಮ್ 11 ಅನ್ಪ್ಲಗ್ ನೀತಿ?
ಹೌದು ಫ್ಯಾಂಟಸಿ ಸ್ಪೋರ್ಟ್ಸ್ ಕಂಪನಿ ಡ್ರೀಮ್ 11 ಇಂಥದ್ದೊಂದು ನೀತಿಯನ್ನು ಜಾರಿಗೆ ತಂದಿದೆ. ಡ್ರೀಮ್ 11 ಅನ್ಪ್ಲಗ್ ನೀತಿಯ ಪ್ರಕಾರ, ರಜೆಯ ದಿನಗಳಲ್ಲಿ ಸಹೋದ್ಯೋಗಿಗಳಿಗೆ ತೊಂದರೆ ಕೊಡುವ ಉದ್ಯೋಗಿಗಳಿಗೆ ಈ ಟೆಕ್ ಕಂಪನಿ 1 ಲಕ್ಷ ರೂಪಾಯಿ ದಂಡ ವಿಧಿಸಲಿದೆ.
ಇದನ್ನೂ ಓದಿ: ಬಿಇ/ಬಿ.ಟೆಕ್ ಪದವೀಧರರಿಗೆ ಉದ್ಯೋಗಾವಕಾಶ- ತಿಂಗಳಿಗೆ 1.60 ಲಕ್ಷ ಸಂಬಳ
ಇದು ಉದ್ಯೋಗಿಗಳಿಗೆ ಕೆಲಸದ ಇಮೇಲ್ಗಳು, ಸಂದೇಶಗಳು ಮತ್ತು ಕರೆಗಳೊಂದಿಗೆ ವ್ಯವಹರಿಸದೆಯೇ ಅವರು ತಮ್ಮ ರಜಾದಿನಗಳನ್ನು ಆನಂದಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಡ್ರೀಮ್ 11 ಅನ್ಪ್ಲಗ್ ನೀತಿಯ ಪ್ರಕಟಣೆಯನ್ನು ತಮ್ಮ ಲಿಂಕ್ಡ್ಇನ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
“ರಜೆಯಲ್ಲಿದ್ದಾಗ ಯಾರೂ ಸಂಪರ್ಕಿಸುವುದಿಲ್ಲ”
ಡ್ರೀಮ್ 11 ನಲ್ಲಿ, ನಾವು ರಜೆ ತೆಗೆದುಕೊಂಡಿರುವ ಉದ್ಯೋಗಿಯನ್ನು ಲಾಗ್ ಆಫ್ ಮಾಡುತ್ತೇವೆ. ಇಮೇಲ್ಗಳು ಮತ್ತು ವಾಟ್ಸಾಪ್ ಹೀಗೆ ಪ್ರತಿಯೊಂದು ಸಂವಹನ ಪ್ಲಾಟ್ಫಾರ್ಮ್ನಿಂದ ಲಾಗ್ ಆಫ್ ಮಾಡುತ್ತೇವೆ. ಉದ್ಯೋಗಿ ರಜೆಯಲ್ಲಿದ್ದಾಗ ನಮ್ಮ ಕಂಪನಿಯಿಂದ ಯಾರೂ ಅವರನ್ನು ಸಂಪರ್ಕಿಸುವುದಿಲ್ಲ ಎಂದು ಕಂಪನಿ ಹೇಳಿದೆ.
ಇದರಿಂದ ಪ್ರೀತಿಪಾತ್ರರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವುದು ಸಾಧ್ಯವಾಗುತ್ತದೆ. ರಜೆಯಲ್ಲಿ ಸಂಪೂರ್ಣವಾಗಿ ವಿಶ್ರಾಂತಿ ಪಡೆಯುವುದರಿಂದ ಒಟ್ಟಾರೆ ಮನಸ್ಥಿತಿ ಬದಲಾಗುವುದರೊಂದಿಗೆ ದೈಹಿಕವಾಗಿ ಹಾಗೂ ಮಾನಸಿಕವಾಗಿ ವಿಶ್ರಾಂತಿ ಸಿಗುತ್ತದೆ.
ಖುಷಿಯಾಗಿ ರಜಾದಿನ ಕಳೆದರೆ ಕೆಲಸ ಮಾಡುವ ಉತ್ಸಾಹವೂ ಹೆಚ್ಚಾಗುತ್ತದೆ ಎಂದು ನಾವು ಅರ್ಥಮಾಡಿಕೊಳ್ಳುತ್ತೇವೆ ಎಂಬುದಾಗಿ ಕಂಪನಿ ಬರೆದುಕೊಂಡಿದೆ.
“ಕಂಪನಿ ಯಾರೊಬ್ಬರ ಮೇಲೂ ಅವಲಂಬಿತವಾಗಿಲ್ಲ”
ಕಂಪನಿಯ ಸಂಸ್ಥಾಪಕರಾದ ಹರ್ಷ್ ಜೈನ್ ಮತ್ತು ಭವಿತ್ ಸೇಠ್ ಅವರು ರಜಾದಿನದ ಸಮಯದಲ್ಲಿ ಯಾವುದೇ ಉದ್ಯೋಗಿ ಇನ್ನೊಬ್ಬ ಉದ್ಯೋಗಿಯನ್ನು ಸಂಪರ್ಕಿಸಿದರೆ ಅಂಥವರು 1 ಲಕ್ಷ ರೂ. ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ. ಕಂಪನಿಯಲ್ಲಿರುವ ಪ್ರತಿಯೊಬ್ಬರೂ ರಜೆಗಳನ್ನು ಪಡೆಯಬಹುದು. ಕಂಪನಿಯು ಯಾವುದೇ ಉದ್ಯೋಗಿಯ ಮೇಲೆ ಅವಲಂಬಿತವಾಗಿಲ್ಲ ಎಂದು ಖಚಿತಪಡಿಸಲು ನೀತಿಯನ್ನು ರೂಪಿಸಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನು, ಕಂಪನಿಯ ಹೊಸ ನೀತಿಯಿಂದ ಉದ್ಯೋಗಿಗಳು ತುಂಬಾ ಸಂತೋಷಗೊಂಡಿದ್ದಾರೆ. ಇದು ಒಳ್ಳೆಯ ವ್ಯವಸ್ಥೆಯಾಗಿದೆ. ನಾವು ರಜೆಯಲ್ಲಿರುವಾಗ ಕೆಲಸದ ಕರೆಗಳು, ಇಮೇಲ್ಗಳು, ಮೆಸೇಜ್ ಗಳು ಬರುವುದಿಲ್ಲ ಎಂದಾದಲ್ಲಿ ಬಹಳ ಒಳ್ಳೆಯದು. ಇದು ಗುಣಮಟ್ಟದ ಸಮಯವನ್ನು ಕಳೆಯಲು ನಮಗೆ ಸಹಾಯ ಮಾಡುತ್ತದೆ. ಕೆಲವೊಮ್ಮೆ ನಾವು ಪ್ರವಾಸದಲ್ಲಿರುವಾಗ ಅಥವಾ ಹಿಲ್ ಸ್ಟೇಷನ್ ಗಳಿಗೆ ಹೋದಾಗ ಸರಿಯಾಗಿ ನೆಟ್ ವರ್ಕ್ ಸಿಗೋದಿಲ್ಲ.
ಹೀಗಾದಾಗ ಈ ನೀತಿಯಿಂದ ನಮಗೆ ತಪ್ಪಿತಸ್ಥ ಭಾವನೆ ಕಾಡೋದಿಲ್ಲ. ರಜೆ ತೆಗೆದುಕೊಂಡಾಗ ಯಾರೂ ಡಿಸ್ಟರ್ಬ್ ಮಾಡದೇ ಹೋದರೆ ಅದು ಖುಷಿಯ ಭಾವನೆ ನೀಡುತ್ತದೆ. ಅಲ್ಲದೇ ಸಂಪೂರ್ಣವಾಗಿ ವಿಶ್ರಾಂತಿ ಪಡೆಯಲು ಸಹಾಯಕವಾಗುತ್ತದೆ. ಇದರಿಂದ ಮತ್ತೆ ಕೆಲಸ ಮಾಡಲು ಶಕ್ತಿ ಬರುತ್ತದೆ ಎಂಬುದಾಗಿ ಡ್ರೀಮ್ 11 ಉದ್ಯೋಗಿಯೊಬ್ಬರು ಹೇಳುತ್ತಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ