ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಸೋಲಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಆಸ್ಟ್ರೇಲಿಯಾ ಆಟಗಾರರಾದ ಆ್ಯಡಂ ಝಂಪಾ ಹಾಗೂ ಕೇನ್ ರಿಚರ್ಡ್ಸನ್ ಐಪಿಎಲ್ ತೊರೆಯಲು ನಿರ್ಧರಿಸಿದ್ದರು. ಈ ಬಗ್ಗೆ ಈಗಾಗಲೇ ಆರ್ಸಿಬಿ ಮ್ಯಾನೇಜ್ಮೆಂಟ್ ಸ್ಪಷ್ಟನೆ ನೀಡಿದ್ದು, ಶೀಘ್ರದಲ್ಲೇ ಇಬ್ಬರು ಆಸೀಸ್ ಆಟಗಾರರು ತವರಿಗೆ ಹೊರಡಲಿದ್ದಾರೆ ಎಂದು ತಿಳಿಸಿದೆ. ಇಬ್ಬರು ಆಟಗಾರರು ವೈಯುಕ್ತಿಕ ಕಾರಣಗಳನ್ನು ನೀಡಿ ಐಪಿಎಲ್ನಿಂದ ಹೊರಗುಳಿಯಲು ನಿರ್ಧಾರ ಮಾಡಿದ್ದಾರೆ ಎಂದು ಆರ್ಸಿಬಿ ಮ್ಯಾನೇಜ್ಮೆಂಟ್ ತಿಳಿಸಿದೆ.
ಆದರೆ ಈ ಇಬ್ಬರು ಆಟಗಾರರ ಇಂತಹದೊಂದು ದಿಢೀರ್ ನಿರ್ಧಾರಕ್ಕೆ ಮುಖ್ಯ ಕಾರಣ ಭಾರತದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವುದು. ಪರಿಸ್ಥಿತಿ ಹೀಗೆ ಮುಂದುವರೆದರೆ ಭಾರತ ಸಂಪೂರ್ಣ ಲಾಕ್ಡೌನ್ ಆಗಲಿದೆ. ಅತ್ತ ವಿದೇಶಗಳು ಭಾರತದ ನಡುವಣ ವಿಮಾನ ಸೇವೆಯನ್ನು ರದ್ದುಗೊಳಿಸಲಿದೆ. ಇದರಿಂದ ತಮ್ಮ ದೇಶಕ್ಕೆ ಹಿಂತಿರುಗಲು ಕಷ್ಟವಾಗಲಿದೆ. ಅತ್ತ ಆಸ್ಟ್ರೇಲಿಯಾ ಕೂಡ ಭಾರತದಿಂದ ಬರುವವರಿಗೆ ನಿರ್ಬಂಧ ಹೇರಲು ಸಜ್ಜಾಗಿದೆ. ಮುಂದಿನ ದಿನಗಳಲ್ಲಿ ಸಂಪೂರ್ಣ ವಿಮಾನಯಾನ ವ್ಯವಸ್ಥೆ ರದ್ದಾದರೆ ಆಸ್ಟ್ರೇಲಿಯಾಗೆ ಹಿಂತಿರುಗುವುದು ಕಷ್ಟಸಾಧ್ಯವಾಗಲಿದೆ. ಈ ಎಲ್ಲಾ ಕಾರಣಗಳಿಂದ ಭಾರತ ತೊರೆಯಲು ಝಂಪಾ-ರಿಚರ್ಡ್ಸನ್ ನಿರ್ಧರಿಸಿದ್ದಾರೆ.
ಈಗಾಗಲೇ ಕ್ರಿಕೆಟ್ ಆಸ್ಟ್ರೇಲಿಯಾ ಮತ್ತು ಆಸ್ಟ್ರೇಲಿಯಾ ಕ್ರಿಕೆಟಿಗರ ಸಂಘ ಪ್ರಸ್ತುತ ಭಾರತದಲ್ಲಿನ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ತಿಳಿಸಿದೆ. ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಭಾಗವಹಿಸಿರುವ ಆಸ್ಟ್ರೇಲಿಯಾದ ಆಟಗಾರರು ಮತ್ತು ತರಬೇತುದಾರೊಂದಿಗೆ ನಿಯಮಿತವಾಗಿ ಸಂಪರ್ಕದಲ್ಲಿದ್ದೇವೆ. ಪರಿಸ್ಥಿತಿ ಕೈಮೀರುವ ಮೊದಲು ಅವರನ್ನು ವಾಪಸ್ ಕರೆಸಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇದೇ ಕಾರಣದಿಂದ ರಾಜಸ್ಥಾನ್ ರಾಯಲ್ಸ್ ವೇಗಿ ಆ್ಯಂಡ್ರ್ಯೂ ಟೈ ಕೂಡ ಐಪಿಎಲ್ ತೊರೆದಿದ್ದರು. ಐಪಿಎಲ್ನಲ್ಲಿರುವ ಆಸ್ಟ್ರೇಲಿಯಾ ಆಟಗಾರರು ಪರಸ್ಪರ ಸಂಪರ್ಕದಲ್ಲಿದ್ದು, ಕೆಲ ಆಟಗಾರರು ಭಾರತ ತೊರೆಯಲು ಇಚ್ಛಿಸಿದ್ದಾರೆ ಎಂದು ಟೈ ಹೇಳಿದ್ದರು. ಇದರ ಬೆನ್ನಲ್ಲೇ ಝಂಪಾ ಹಾಗೂ ರಿಚರ್ಡ್ಸನ್ ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ. ಭಾರತದಲ್ಲಿ ಕೊರೋನಾ ಪ್ರಕರಣಗಳು ಮಿತಿ ಮೀರುತ್ತಿದ್ದರೆ ಉಳಿದ ಆಸ್ಟ್ರೇಲಿಯಾ ಆಟಗಾರರು ಕೂಡ ಐಪಿಎಲ್ ತೊರೆಯುವ ಸಾಧ್ಯತೆ ಹೆಚ್ಚಿದೆ.
ಅಂದಹಾಗೆ ಈ ಬಾರಿ ಆರ್ಸಿಬಿ ತಂಡದಿಂದ ಮೂವರು ಹೊರುಗಳಿದಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಆಸ್ಟ್ರೇಲಿಯಾ ಆಟಗಾರ ಜೋಶ್ ಫಿಲಿಪೆ ಆರ್ಸಿಬಿ ತಂಡದಿಂದ ಹಿಂದೆ ಸರಿದಿದ್ದರು. ಅವರ ಬದಲಿ ಆಟಗಾರನಾಗಿ ನ್ಯೂಜಿಲೆಂಡ್ನ ಫಿನ್ ಅಲೆನ್ ಅವರಿಗೆ ಚಾನ್ಸ್ ನೀಡಲಾಗಿತ್ತು. ಇದೀಗ ಆ್ಯಡಂ ಝಂಪಾ, ಕೇನ್ ರಿಚರ್ಡ್ಸನ್ ಕೂಡ ಆರ್ಸಿಬಿ ತಂಡವನ್ನು ತೊರೆದಿದ್ದು, ಹೀಗಾಗಿ ಈ ಇಬ್ಬರು ಆಸ್ಟ್ರೇಲಿಯಾ ಆಟಗಾರರ ಬದಲಿಯಾಗಿ ಯಾರು ಎಂಟ್ರಿ ಕೊಡಲಿದ್ದಾರೆ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ