IPL 2021ರ ಲೀಗ್ ಪಂದ್ಯಗಳು ಇನ್ನೇನು ಅಂತ್ಯಗೊಳ್ಳಲಿದೆ. ಈ ಮೂಲಕ ಪ್ಲೇ ಆಫ್ಗೆ ಅವಕಾಶ ಪಡೆಯುವ ನಾಲ್ಕು ತಂಡಗಳು ಮುಂದಿನ ಸುತ್ತಿಗೆ ಆಯ್ಕೆಯಾದರೆ, ಇನ್ನುಳಿದ ನಾಲ್ಕು ತಂಡಗಳು ವಾಪಸಾಗಬೇಕಿದೆ. ಈಗಾಗಲೇ ಡೆಲ್ಲಿ ಕ್ಯಾಪಿಟಲ್ಸ್ (Delhi Capitals), ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಪ್ಲೇ ಆಫ್ಗೆ ಆಯ್ಕೆಯಾಗಿವೆ. ಉಳಿದ ಒಂದು ಸ್ಥಾನಕ್ಕಾಗಿ ಕೋಲ್ಕತ್ತಾ ಮತ್ತು ಮುಂಬೈ ತಂಡಗಳು ಪೈಪೋಟಿಯಲ್ಲಿವೆ. ಎರಡೂ ತಂಡಗಳು ಒಂದು ಪಂದ್ಯವನ್ನು ಆಡಲಿದ್ದು, ಗೆಲುವು ಅನಿವಾರ್ಯ. ಮತ್ತು ಉತ್ತಮ ರನ್ರೇಟ್ ಕೂಡ ಇಬ್ಬರಿಗೂ ಅಗತ್ಯವಿದೆ. ಸದ್ಯದ ಸ್ಥಿತಿಯಲ್ಲಿ ಮುಂಬೈಗಿಂತ ಕೋಲ್ಕತ್ತಾ ರನ್ ರೇಟ್ ಚೆನ್ನಾಗಿದೆ. ಇಬ್ಬರೂ ಉಳಿದ ಒಂದೊಂದು ಪಂದ್ಯದಲ್ಲಿ ಗೆಲುವು ಸಾಧಿಸಿದರೂ 14 ಪಾಯಿಂಟ್ಸ್ ಆಗಲಿದೆ, ಅದರಲ್ಲಿ ಉತ್ತಮ ರನ್ ರೇಟ್ ಯಾರು ಹೊಂದಿರುತ್ತಾರೋ ಅವರೇ ಪ್ಲೇ ಆಫ್ಗೆ ಹೋಗಲಿದ್ದಾರೆ.
ಇದೇ ಗುರುವಾರ ಮತ್ತು ಶುಕ್ರವಾರ ಎರಡೂ ತಂಡಗಳು ಕಡೆಯ ಪಂದ್ಯ ಆಡಲಿದೆ. ಪಂಜಾಬ್ ಕಿಂಗ್ಸ್, ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಈಗಾಗಲೇ ಪ್ಲೇ ಆಫ್ನಿಂದ ಹೊರಗುಳಿದಿದೆ. ಕೋಲ್ಕತ್ತಾ ಮತ್ತು ಮುಂಬೈ ಎರಡೂ ತಂಡಗಳು ಸೋತರೆ ಪಂಜಾಬ್ಗೆ ಮತ್ತು ರಾಜಸ್ಥಾನಕ್ಕೆ ಕೊಂಚ ಅವಕಾಶವಿದೆ. ಆದರೆ ರನ್ರೇಟ್ ಸಮಸ್ಯೆ ಎರಡೂ ತಂಡಗಳನ್ನೂ ಮತ್ತೆ ಕಾಡಲಿದೆ. ಇದರ ಜೊತೆಗೆ ಎರಡೂ ತಂಡಗಳು ಉಳಿದೊಂದು ಪಂದ್ಯದಲ್ಲಿ ಗೆಲ್ಲಲೇಬೇಕು. ಗೆದ್ದರೂ ಪ್ಲೇ ಆಫ್ ಮರೀಚಿಕೆಯೇ.
ಕೆಕೆಆರ್ ಗೆಲುವಿನ ಲೆಕ್ಕಾಚಾರ (Chances of Kolkata Knight Riders to playoffs):
ಕೋಲ್ಕತ್ತಾ ನೈಟ್ ರೈಡರ್ಸ್ ಉಳಿದಿರುವ ಒಂದು ಪಂದ್ಯದಲ್ಲಿ ಗೆದ್ದರೆ ಸಾಕು, ಪ್ಲೇ ಆಫ್ ಸ್ಥಾನ ಗಟ್ಟಿಯಾಗಲಿದೆ. ಯಾಕೆಂದರೆ ಕೆಕೆಆರ್ ರನ್ ರೇಟ್ + ನಲ್ಲಿದ್ದು, ಮುಂಬೈ ರನ್ ರೇಟ್ ಇನ್ನೂ - ನಲ್ಲಿಯೇ ಇದೆ. ನಿನ್ನೆ ನಡೆದ ಪಂದ್ಯದಲ್ಲಿ ಕೇವಲ 8.3 ಓವರ್ಗಳಲ್ಲಿ ಮುಂಬೈ ಟಾರ್ಗೆಟ್ ಚೇಸ್ ಮಾಡಿತ್ತು. ಆದರೆ ಕೇವಲ ಒಂದು ಮ್ಯಾಚ್ನ ರನ್ರೇಟ್ ಸಾಕಾಗುವುದಿಲ್ಲ. ರೋಹಿತ್ ಶರ್ಮ ನೇತೃತ್ವದ ಬಳಗಕ್ಕೆ ಕೋಲ್ಕತ್ತಾ - ರಾಜಸ್ಥಾನದ ವಿರುದ್ಧ ಸೋತಲ್ಲಿ ಮಾತ್ರ ನಿರಾಳ. ಇಲ್ಲದಿದ್ದರೆ, ಗೆದ್ದರೂ ರನ್ ರೇಟ್ ಲೆಕ್ಕಾಚಾರ ಮುಗಿಯುವುದಿಲ್ಲ. ಇನ್ನೂ ಕೆಕೆಆರ್ ಲೀಗ್ನ ಕಡೆಯ ಪಂದ್ಯ ರಾಜಸ್ಥಾನ ರಾಯಲ್ಸ್ ಜೊತೆ ಗುರುವಾರ ಆಡಲಿದೆ. ಗುರುವಾರದ ಪಂದ್ಯದಲ್ಲಿ ಕೋಲ್ಕತ್ತಾಗೆ ಸಂಜು ಸ್ಯಾಮ್ಸನ್ ಪಡೆ ತೀವ್ರ ಪೈಪೋಟಿ ನೀಡುವುದನ್ನು ನಿರೀಕ್ಷಿಸಬಹುದು. ಮುಂಬೈ ವಿರುದ್ಧ ಹೀನಾಯ ಸೋಲು ಕಂಡರೂ, ಚೆನ್ನೈ ವಿರುದ್ಧದ ಪಂದ್ಯದಲ್ಲಿ ಅಮೋಘ ಪ್ರದರ್ಶನವನ್ನು ರಾಜಸ್ಥಾನ ತಂಡ ನೀಡಿತ್ತು. ಆರಂಭಿಕರಾದ ಎವಿನ್ ಲೆವಿಸ್ ಮತ್ತು ಯಶಸ್ವಿ ಜೇಸ್ವಾಲ್ ಉತ್ತಮ ಆರಂಭ ಒದಗಿಸಿಕೊಟ್ಟಿದ್ದರು. ಮಧ್ಯಮ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್, ಶಿವಂ ದುಬೆ ಮತ್ತು ಫಿಲಿಪ್ಸ್ ಉತ್ತಮ ಪ್ರದರ್ಶನ ನೀಡಿದ್ದರು. ರಾಜಸ್ಥಾನ ಇದೇ ರೀತಿಯ ಪ್ರದರ್ಶನ ನೀಡಿದಲ್ಲಿ, ಕೋಲ್ಕತ್ತಾಗೆ ಸುಲಭದ ಜಯ ಅಸಾಧ್ಯ. ಈ ಪಂದ್ಯದ ಮೇಲೆ ಐಪಿಎಲ್ ಅಭಿಮಾನಿಗಳು ಎಷ್ಟು ಕುತೂಹಲದಿಂದ ನೋಡುತ್ತಿದ್ದಾರೋ ಅದಕ್ಕಿಂತ ಹೆಚ್ಚು ಮುಂಬೈ ತಂಡ ಕುತೂಹಲ ಹೊಂದಿದೆ. ಈ ಪಂದ್ಯದ ಫಲಿತಾಂಶದ ಮೇಲೆ ಮುಂಬೈ ಪ್ಲೇ ಆಫ್ ಕನಸು ನಿರ್ಧರಿತವಾಗಿದೆ.
ಮುಂಬೈ ಇಂಡಿಯನ್ಸ್ ಲೆಕ್ಕಾಚಾರ (Mumbai Indians last hope):
ಐಪಿಎಲ್ 2021ರ ಮೊದಲಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್, ದುಬೈನಲ್ಲಿ ಆರಂಭವಾದ ದ್ವಿತೀಯಾರ್ಧದಲ್ಲಿ ಐದು ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿತ್ತು. ಆದರೆ ನಿನ್ನೆ ನಡೆದ ಪಂದ್ಯದಲ್ಲಿ ಲಯ ಕಂಡುಕೊಂಡ ತಂಡ, 70 ಬಾಲ್ಗಳು ಉಳಿದಿರುವಂತೆ ಟಾರ್ಗೆಟ್ ಚೇಸ್ ಮಾಡಿ ಯುಎಇ ಲೆಗ್ನಲ್ಲಿ ಎರಡನೇ ಜಯ ದಾಖಲಿಸಿದೆ. ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಕೋಲ್ಕತ್ತಾ ಮುಗ್ಗರಿಸಿದರೆ ರೋಹಿತ್ ತಂಡದ ಪ್ಲೇ ಆಫ್ ಸ್ಥಾನ ಗಟ್ಟಿಯಾಗಲಿದೆ. ಉತ್ತಮ ಲಯಕ್ಕೆ ವಾಪಸಾಗಿರುವ ಹಿನ್ನೆಲೆಯಲ್ಲಿ ಮುಂದಿನ ಪಂದ್ಯವನ್ನೂ ಗೆಲ್ಲುವ ವಿಶ್ವಾಸದಲ್ಲಿ ಮುಂಬೈ ತಂಡವಿದೆ.
ಒಟ್ಟಿನಲ್ಲಿ ಕೆಕೆಆರ್ ಮತ್ತು ಮುಂಬೈ ಇಬ್ಬರ ನಡುವೆ ಏರ್ಪಟ್ಟಿರುವ ಕಡೆಯ ಪ್ಲೇ ಆಫ್ ಸ್ಥಾನದ ಪೈಪೋಟಿಯಲ್ಲಿ ಯಾರಿಗೆ ಜಯ ಸಿಗಲಿದೆ ಎಂಬುದನ್ನು ಪಂದ್ಯದ ಫಲಿತಾಂಶವೇ ಹೇಳಬೇಕು. ಒಂದು ವೇಳೆ ಮುಂಬೈ ಪ್ಲೇ ಆಫ್ ತಲುಪಿದರೆ, ಮೂರನೇ ಬಾರಿ ಸತತ ಐಪಿಎಲ್ ಟ್ರೋಫಿ ಗೆಲ್ಲುವ ಕನಸಿಗೆ ಮತ್ತೆ ಜೀವ ಬರಲಿದೆ.
Published by:Sharath Sharma Kalagaru
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ