ನವದೆಹಲಿ(ಏ.28): ದೇಶದ ತುಂಬೆಲ್ಲಾ ಲೈಂಗಿಕ ಕಿರುಕುಳದ (Sexual Harassment) ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ (Wrestling Federation of India (WFI) chief Brij Bhushan Singh) ವಿರುದ್ಧ ಕೂಗು ಕೇಳಿಬರುತ್ತಿದೆ. ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕುಸ್ತಿಪಟುಗಳಿಂದಲೇ ಪ್ರತಿಭಟನಾ ಧರಣಿ ನಡೆಯುತ್ತಿದೆ. ಒಲಿಂಪಿಯನ್ ಕುಸ್ತಿಪಟುಗಳಾದ ವಿನೇಶಾ ಫೋಗಟ್, ಬಜರಂಗ್ ಪೂನಿಯಾ ಹಾಗೂ ಸಾಕ್ಷಿ ಮಲಿಕ್ ಅವರು ಧರಣಿಯ ನೇತೃತ್ವ ವಹಿಸಿದ್ದಾರೆ. ಈ ಮಧ್ಯೆ ಬ್ರಿಜ್ ಭೂಷಣ್ ಅವರ ಹೇಳಿಕೆಯ ವಿಡಿಯೋ (Video) ಒಂದು ಬಿಡುಗಡೆಯಾಗಿದೆ.
ಬ್ರಿಜ್ ಭೂಷಣ್ ಹೇಳಿಕೆಯ ವಿಡಿಯೋ ಬಿಡುಗಡೆ
ಈ ವಿಡಿಯೋದಲ್ಲಿ ಬ್ರಿಜ್ ಭೂಷಣ್ ಇಂತಹ ಜೀವನ ನಡೆಸುವುದಕ್ಕಿಂತ ಸಾವು ಬರಲಿ. ನಾನು ಅಸಹಾಯಕ ಎಂಬ ಭಾವನೆ ಬಂದ ದಿನದಂದು ಸಾವಿಗೆ ಶರಣಾಗುತ್ತೇನೆ ಎಂದು ಹೇಳಿದ್ದಾರೆ.
"ಸ್ನೇಹಿತರೇ, ನಾನು ಏನು ಪಡೆದಿದ್ದೇನೆ ಹಾಗೂ ಏನು ಕಳೆದುಕೊಂಡಿದ್ದೇನೆ ಎಂದು ಆತ್ಮಾವಲೋಕನ ಮಾಡಿಕೊಳ್ಳುವ ದಿನ ಮತ್ತು ಹೋರಾಟಕ್ಕೆ ನನ್ನಲ್ಲಿ ಶಕ್ತಿ ಇಲ್ಲ ಎಂದು ಭಾವಿಸಿದ ದಿನ, ನನಗೆ ಅಂಥಹ ಜೀವನ ನಡೆಸಬೇಕಾಗಿಲ್ಲ.
ನಾನು ಸಾವಿಗೆ ಶರಣಾಗುತ್ತೇನೆ. ಅಂಥ ಜೀವನ ನಡೆಸುವ ಬದಲು ಸಾವೇ ನನ್ನನ್ನು ಕರೆದೊಯ್ಯಲಿ ಎಂದು ಬಯಸುತ್ತೇನೆ" ಎಂದು ವಿಡಿಯೋದಲ್ಲಿ ಬ್ರಿಜ್ ಭೂಷಣ್ ಹೇಳಿದ್ದಾರೆ.
ಹಲವರಿಂದ ವಿರೋಧ ಮತ್ತು ಬೆಂಬಲ
ಅಗ್ರಗಣ್ಯ ಕುಸ್ತಿಪಟುಗಳು ಬ್ರಿಜ್ ಭೂಷಣ್ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ವಿರೋಧ ಮತ್ತು ಬೆಂಬಲ ಎರಡನ್ನೂ ವ್ಯಕ್ತಪಡಿಸಿದ್ದಾರೆ.
ಕುಸ್ತಿಪಟುಗಳ ಧರಣಿ ಅಶಿಸ್ತು ತೋರುತ್ತದೆ - ಪಿ.ಟಿ. ಉಷಾ
ಅಗ್ರಗಣ್ಯ ಕುಸ್ತಿಪಟುಗಳು ಬೀದಿಗಿಳಿದು ಧರಣಿ ನಡೆಸುತ್ತಿರುವುದು ಅಶಿಸ್ತು ಎಂದೇ ಪರಿಗಣಿತವಾಗುತ್ತದೆ. ಇದರಿಂದಾಗಿ ದೇಶದ ವರ್ಚಸ್ಸು ಹಾಳಾಗುತ್ತಿದೆ ಎಂದು ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಅಧ್ಯಕ್ಷೆ ಪಿ.ಟಿ. ಉಷಾ ಹೇಳಿದ್ದಾರೆ.
"ಲೈಂಗಿಕ ಕಿರುಕುಳದ ದೂರುಗಳನ್ನು ಎದುರಿಸಲು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (IOA) ಸಮಿತಿಯನ್ನು ಹೊಂದಿದೆ. ಬೀದಿಗಿಳಿಯುವ ಬದಲು, ಕುಸ್ತಿಪಟುಗಳು ನಮ್ಮ ಬಳಿಗೆ ಮೊದಲೇ ಬರಬಹುದಿತ್ತು. ಕ್ರೀಡಾಪಟುಗಳು ಸ್ವಲ್ಪ ಶಿಸ್ತು ತೋರಿಸಬೇಕಿತ್ತು" ಎಂದು ಪಿಟಿ ಉಷಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಕಾಮನ್‌ವೆಲ್ತ್ ಕ್ರೀಡಾಕೂಟದ ಚಿನ್ನದ ಪದಕ ವಿಜೇತೆ ಸಾಕ್ಷಿ ಮಲಿಕ್, ಮಹಿಳಾ ಅಥ್ಲೀಟ್ ಆಗಿರುವ ಉಷಾ ಅವರು ಇತರ ಮಹಿಳಾ ಅಥ್ಲೀಟ್‌ಗಳ ಮಾತನ್ನು ಕೇಳುತ್ತಿಲ್ಲ.
ಬಾಲ್ಯದಿಂದಲೂ ಅವರೇ ನಮಗೆ ಸ್ಪೂರ್ತಿ. ಅವರು ಹೀಗೆ ಹೇಳಬಾರದಿತ್ತು. ನಾವು ಶಾಂತಿಯಿಂದ ಪ್ರತಿಭಟನೆ ನಡೆಸುತ್ತಿದ್ದೇವೆ, ಇಲ್ಲಿ ಅಶಿಸ್ತು ಎಲ್ಲಿದೆ ಎಂದು ಪಿ.ಟಿ. ಉಷಾ ಅವರ ಮಾತಿಗೆ ಪ್ರತಿಕ್ರಿಯಿಸಿದ್ದಾರೆ.
ಅಭಿನವ್ ಬಿಂದ್ರಾ ಬೆಂಬಲ
ಇತ್ತ ಒಲಿಂಪಿಕ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಬುಧವಾರ ಟ್ವೀಟ್ ಮೂಲಕ ಕುಸ್ತಿಪಟುಗಳನ್ನು ಬೆಂಬಲಿಸಿದ್ದಾರೆ. "ಕ್ರೀಡಾಪಟುಗಳಾಗಿ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಲು ನಾವು ಪ್ರತಿದಿನ ಕಠಿಣ ತರಬೇತಿ ನೀಡುತ್ತೇವೆ.
ಭಾರತೀಯ ಕುಸ್ತಿ ಆಡಳಿತದಲ್ಲಿ ಕಿರುಕುಳದ ಆರೋಪಗಳ ಬಗ್ಗೆ ನಮ್ಮ ಕ್ರೀಡಾಪಟುಗಳು ಬೀದಿಗಿಳಿದು ಪ್ರತಿಭಟಿಸುತ್ತಿರುವ ವಿಚಾರ ಬಹಳ ಕಳವಳಕಾರಿಯಾಗಿದೆ" ಎಂದು ಬಿಂದ್ರಾ ಟ್ವೀಟ್ ಮಾಡಿದ್ದಾರೆ.
ಪ್ರತಿಭಟನೆಯ ಸುತ್ತ
ಕಳೆದ ನಾಲ್ಕು ದಿನಗಳಿಂದ ರಾಷ್ಟ್ರ ರಾಜಧಾನಿಯ ಜಂತರ್ ಮಂತರ್ ಬಳಿ ಇರುವ ಪ್ರತಿಭಟನಾ ಸ್ಥಳದಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬುಧವಾರ ಜಂತರ್ ಮಂತರ್‌ನಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಅಧ್ಯಕ್ಷರ ವಿರುದ್ಧ ಕ್ಯಾಂಡಲ್‌ಲೈಟ್ ಮಾರ್ಚ್ ನಡೆಸಿದರು.
ಮೆರವಣಿಗೆಯಲ್ಲಿ ವಿನೇಶ್ ಫೋಘಟ್, ಬಜರಂಗ್ ಪುನಿಯಾ ಮತ್ತು ಸಾಕ್ಷಿ ಮಲಿಕ್ ಉಪಸ್ಥಿತರಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಸಾಕ್ಷಿ ಮಲಿಕ್, "ನಮ್ಮ ಮನ್ ಕಿ ಬಾತ್ ಕೇಳಲು ನಾವು ಪ್ರಧಾನಿ ಮೋದಿಯನ್ನು ಒತ್ತಾಯಿಸುತ್ತೇವೆ, ಸ್ಮೃತಿ ಇರಾನಿ ಅವರು ಕೂಡ ನಮ್ಮ ಮಾತನ್ನು ಕೇಳುತ್ತಿಲ್ಲ, ನಾವು ಈ ಕ್ಯಾಂಡಲ್ ಲೈಟ್ ಮಾರ್ಚ್ ಮೂಲಕ ಅವರಿಗೆ ಬೆಳಕು ತೋರಿಸಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದರು.
ಶುಕ್ರವಾರ ಡಬ್ಲ್ಯುಎಫ್‌ಐ ಮುಖ್ಯಸ್ಥರ ವಿರುದ್ಧ ದೂರು ನೀಡಿದ ನಂತರವೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ ಎಂದು ಕುಸ್ತಿಪಟುಗಳು ಹೇಳಿದ್ದಾರೆ.
ಐಒಎ ರಚನೆಯಾದ 45 ದಿನಗಳಲ್ಲಿ ಚುನಾವಣೆ
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ರಚನೆಯಾದ 45 ದಿನಗಳಲ್ಲಿ ಭಾರತೀಯ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಕಾರ್ಯಕಾರಿ ಸಮಿತಿಯ ಚುನಾವಣೆಯನ್ನು ನಡೆಸಲು ತಾತ್ಕಾಲಿಕ ಸಮಿತಿಯನ್ನು ರಚಿಸಲಿದೆ ಎಂದು ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ ಸೋಮವಾರ ಪ್ರಕಟಿಸಿದೆ.
ಏಳು ಸದಸ್ಯರ ಸಮಿತಿ
ಭಾರತೀಯ ಕುಸ್ತಿ ಒಕ್ಕೂಟದ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಲೈಂಗಿಕ ಕಿರುಕುಳದ ಆರೋಪದ ಕುರಿತು ತನಿಖೆ ನಡೆಸಲು ಭಾರತೀಯ ಒಲಿಂಪಿಕ್ ಸಂಸ್ಥೆ (ಐಒಎ)ಯು ಏಳು ಸದಸ್ಯರ ಸಮಿತಿಯನ್ನು ರಚಿಸಿತ್ತು.
ಒಲಿಂಪಿಕ್ ಪದಕ ವಿಜೇತೆ ಮೇರಿ ಕೋಮ್, ಮಾಜಿ ಆರ್ಚರಿ ಪಟು ಡೋಲಾ ಬ್ಯಾನರ್ಜಿ, ಅಲಕಂಡ ಅಶೋಕ್, ಲಂಡನ್ ಒಲಿಂಪಿಕ್ ಪದಕ ವಿಜೇತ ಯೋಗೇಶ್ವರ್ ದತ್, ಭಾರತದ ವೈಟ್‌ಲಿಫ್ಟಿಂಗ್ ಅಧ್ಯಕ್ಷ ಸಹದೇವ್ ಯಾದವ್ ಹಾಗೂ ಇಬ್ಬರು ವಕೀಲರು ಈ ಸಮಿತಿಯ ಸದಸ್ಯರಾಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ