Video- ಚಹಲ್ ಮ್ಯಾಜಿಕ್ ಬಾಲ್​ಗೆ ಸರ್ಫರಾಜ್ ಕಕ್ಕಾಬಿಕ್ಕಿ; ಶೇನ್ ವಾರ್ನ್ ಸ್ಪಿನ್ ನೆನಪು

Chahal Magic Ball- ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಮೂರು ವಿಕೆಟ್ ಪಡೆದ ಆರ್​ಸಿಬಿಯ ಯುಜವೇಂದ್ರ ಚಹಲ್ ಅವರ ಒಂದು ಎಸೆತ ಅಕ್ಷರಶಃ ಮ್ಯಾಜಿಕ್ ಬಾಲ್ ಆಗಿ ಸರ್ಫರಾಜ್ ಖಾನ್ ಅವರನ್ನ ಬೌಲ್ಡ್ ಮಾಡಿತ್ತು. ಆ ಸ್ಪಿನ್ ಬಾಲ್​ನ ವಿಡಿಯೋ ಇಲ್ಲಿದೆ.

ಯುಜವೇಂದ್ರ ಚಹಲ್

ಯುಜವೇಂದ್ರ ಚಹಲ್

  • Share this:
    ಶಾರ್ಜಾ: ಪಂಜಾಬ್ ಕಿಂಗ್ಸ್ ವಿರುದ್ಧ ಆರ್​ಸಿಬಿ ರೋಚಕ ಗೆಲುವು ಪಡೆದು ಪ್ಲೇ ಆಫ್ ಪ್ರವೇಶ ಖಚಿತಗೊಳಿಸಿದೆ. ಆರ್​ಸಿಬಿಯ ಬೃಹತ್ ಮೊತ್ತವನ್ನು ಪಂಜಾಬ್ ಯಶಸ್ವಿಯಾಗಿ ಬೆನ್ನತ್ತುತ್ತದೆ ಎಂಬ ನಿರೀಕ್ಷೆ ಗಟ್ಟಿಯಾಗಿದ್ದಾಗಲೇ ಸತತ ವಿಕೆಟ್​ಗಳು ಪತನಗೊಂಡು ಪಂದ್ಯ ತಿರುವು ಪಡೆದಿತ್ತು. ಕನ್ನಡಿಗರಾದ ಕೆಎಲ್ ರಾಹುಲ್ ಮತ್ತು ಮಯಂಕ್ ಅಗರ್ವಾಲ್ ಅವರಿಬ್ಬರ ಓಪನಿಂಗ್ ಪಾರ್ಟ್ನರ್ ಶಿಪ್ ಬಿಟ್ಟರೆ ಉಳಿದಂತೆ ಪಂಜಾಬ್ ಬ್ಯಾಟರ್​ಗಳದ್ದು ನಿರಾಶಾದಾಯಕ ಪ್ರದರ್ಶನ. ಆರ್​ಸಿಬಿಯ ಯುಜವೇಂದ್ರ ಚಹಲ್ ಅವರ ಬೌಲಿಂಗ್ ಮತ್ತು ಗ್ಲೆನ್ ಮ್ಯಾಕ್ಸ್​ವೆಲ್ ಅವರ ಬ್ಯಾಟಿಂಗ್ ಇವತ್ತು ಆರ್​ಸಿಬಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಭರ್ಜರಿ ಚೇಸಿಂಗ್ ವೇಳೆ ಗೆಲುವಿನತ್ತ ದಾಪುಗಾಲಿಕ್ಕುತ್ತಿದ್ದ ಪಂಜಾಬ್ ತಂಡದ ಪತನಕ್ಕೆ ಕಾರಣವಾಗಿದ್ದ ಚಹಲ್ ಅವರ ಬೌಲಿಂಗ್.

    ಮಯಂಕ್ ಅಗರ್ವಾಲ್ ಮತ್ತು ಸರ್ಫರಾಜ್ ಖಾನ್ ಅವರಿಬ್ಬರನ್ನು ಕೆಲವೇ ಬಾಲ್​ಗಳ ಅಂತರದಲ್ಲಿ ಚಹಲ್ ಔಟ್ ಮಾಡಿ ಪೆವಿಲಿಯನ್​ಗೆ ಕಳುಹಿಸಿದರು. ಆಗ ಆರ್​ಸಿಬಿ ಪರವಾಗಿ ಪಂದ್ಯ ವಾಲಿದ್ದು. ಸರ್ಫರಾಜ್ ಖಾನ್ ಅವರನ್ನ ಬಲಿ ತೆಗೆದುಕೊಂಡ ಚೆಂಡು ಮ್ಯಾಜಿಕ್ ಸ್ಪಿನ್ ಬಾಲ್ ಆಗಿತ್ತು. ಚಹಲ್ ಬೌಲ್ ಮಾಡಿದ ಚೆಂಡು ಲೆಗ್ ಸ್ಟಂಪ್ ಆಚೆ ಪಿಚ್ ಆಗಿ ಭಾರೀ ತಿರುವು ಪಡೆದ ಆಫ್ ಸ್ಟಂಪ್ ಎಗರಿಸಿತು. ಬ್ಯಾಟಿಂಗ್ ಮಾಡುತ್ತಿದ್ದ ಸರ್ಫರಾಜ್ ಅಕ್ಷರಶಃ ಕಕ್ಕಾಬಿಕ್ಕಿಯಾದರು. ಚೆಂಡು ಎಲ್ಲಿಂದ ಎಲ್ಲಿಗೆ ಹೋಯಿತು ಎಂದು ಗೊತ್ತಾಗದೇ ಸರ್ಫರಾಜ್ ಗರಬಡಿದುಹೋದರು. ಸ್ಪಿನ್ ಮಾಂತ್ರಿ ಶೇನ್ ವಾರ್ನ್ ಅವರ ಶತಮಾನದ ಮ್ಯಾಜಿಕ್ ಬಾಲನ್ನು ಇದು ನೆನಪಿಸುವಂತಿತ್ತು.


    ಯುಜವೇಂದ್ರ ಚಹಲ್ ಅವರು ಈ ಪಂದ್ಯದಲ್ಲಿ ಸರ್ಫರಾಜ್ ಖಾನ್, ಮಯಂಕ್ ಅಗರ್ವಾಲ್ ಜೊತೆಗೆ ನಿಕೋಲಾಸ್ ಪೂರನ್ ಅವರ ವಿಕೆಟ್ ಅನ್ನೂ ಕಿತ್ತು ಆರ್​ಸಿಬಿ ಗೆಲುವಿನ ರೂವಾರಿಯಾದರು. ಭಾರತದಲ್ಲಿ ನಡೆದ ಈ ಸೀಸನ್​ನ ಐಪಿಎಲ್ ಪಂದ್ಯಗಳಲ್ಲಿ ಹೆಚ್ಚು ವಿಕೆಟ್ ಪಡೆಯಲು ಸಫಲರಾಗದ ಯುಜವೇಂದ್ರ ಚಹಲ್ ಅವರು ಯುಎಇಯಲ್ಲಿ ಭರ್ಜರಿ ಫಾರ್ಮ್​ನಲ್ಲಿದ್ಧಾರೆ. ಆರ್​ಸಿಬಿ ತಂಡದಲ್ಲಿ ಹರ್ಷಲ್ ಪಟೇಲ್ ಬಿಟ್ಟರೆ ಅತಿ ಹೆಚ್ಚು ವಿಕೆಟ್ ಪಡೆದಿರುವುದು ಚಹಲ್ ಅವರೇ. ಕಳೆದ ಕೆಲ ಪಂದ್ಯಗಳಲ್ಲಿ ಅಮೋಘ ಬೌಲಿಂಗ್ ಪ್ರದರ್ಶನ ನೀಡಿರುವ ಚಹಲ್ ಅವರು ಪ್ಲೇ ಆಫ್ ಹಂತದಲ್ಲಿ ಆರ್​ಸಿಬಿಯ ಟ್ರಂಪ್ ಕಾರ್ಡ್ ಆಗುವುದರಲ್ಲಿ ಸಂಶಯ ಇಲ್ಲ.

    ಇದನ್ನೂ ಓದಿ: KKR vs SRH- ಶುಬ್ಮನ್ ಗಿಲ್ ಅಮೋಘ ಆಟ; ಎಸ್ಆರ್​ಎಚ್ ವಿರುದ್ಧ ಕೆಕೆಆರ್ ರೋಚಕ ಗೆಲುವು

    ಈ ಬಾರಿ ಟಿ20 ವಿಶ್ವಕಪ್​ನಲ್ಲಿ ಆಯ್ಕೆಯಾಗಿರುವ ಭಾರತ ತಂಡದಲ್ಲಿ ಯುಜವೇಂದ್ರ ಚಹಲ್ ಅವರ ಹೆಸರು ಇಲ್ಲದಿರುವುದಕ್ಕೆ ಅನೇಕ ಮಾಜಿ ಕ್ರಿಕೆಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದ್ಭುತ ಸ್ಪಿನ್ನರ್ ಆಗಿರುವ ಚಹಲ್ ಅವರು ಟಿ20 ವಿಶ್ವಕಪ್ ತಂಡದಲ್ಲಿ ಆಡಬೇಕಿತ್ತು ಎಂಬುದು ಹಲವರ ಬಲವಾದ ಅನಿಸಿಕೆ. ಇದೇ ಯುಎಇ ದೇಶದಲ್ಲಿ ಟಿ20 ವಿಶ್ವಕಪ್ ಪಂದ್ಯಗಳು ನಡೆಯುತ್ತಿವೆ. ಇಲ್ಲಿ ಐಪಿಎಲ್ ಪಂದ್ಯಗಳಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಚಹಲ್ ಅವರು ಟೀಮ್ ಇಂಡಿಯಾದಲ್ಲಿ ಇದ್ದರೆ ಗೆಲುವಿನ ಅವಕಾಶ ಹೆಚ್ಚಿರುತ್ತಿತ್ತು.

    ಟಿ20 ವಿಶ್ವಕಪ್​ಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದಲ್ಲಿ ರವಿಚಂದ್ರನ್ ಅಶ್ವಿನ್, ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಈ ಮೂವರು ಸ್ಪಿನ್ನರ್​ಗಳು ಇದ್ದಾರೆ. ಅಚ್ಚರಿ ಎಂದರೆ ಈ ಐಪಿಎಲ್​ನ ಬೆಸ್ಟ್ ಬೌಲರ್ ಎನಿಸಿರುವ ವೇಗಿ ಹರ್ಷಲ್ ಪಟೇಲ್ ಅವರೂ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದಿಲ್ಲ. ಆರ್ ಅಶ್ವಿನ್ ಬದಲು ಯುಜವೇಂದ್ರ ಚಹಲ್ ಅವರನ್ನ ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲು ವಿರಾಟ್ ಕೊಹ್ಲಿ ಯತ್ನಿಸಿದ್ದರಂತೆ. ಆದರೆ, ಅಂತಿಮವಾಗಿ ಆಯ್ಕೆಗಾರರು ಚಹಲ್​ಗೆ ಮಣಿಹಾಕಿಲ್ಲ.
    Published by:Vijayasarthy SN
    First published: