T20 World Cup- ಟಿ20 ವಿಶ್ವಕಪ್​ಗೆ ಈ ಆರ್​ಸಿಬಿ ಆಟಗಾರ ಯಾಕೆ ಆಯ್ಕೆಯಾಗಿಲ್ಲ?: ಸೆಹ್ವಾಗ್ ಅಚ್ಚರಿ

Virender Sehwag- ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ಆರ್​ಸಿಬಿಯ ಈ ಆಟಗಾರ ಟಿ20 ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆಯಬೇಕಿತ್ತು. ಯಾಕೆ ಅವರನ್ನ ಕೈಬಿಡಲಾಯಿತು ಎಂದು ಸೆಹ್ವಾಗ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್

  • Cricketnext
  • Last Updated :
  • Share this:
    ನವದೆಹಲಿ, ಸೆ. 27: ಅಕ್ಟೋಬರ್ 17ರಿಂದ ಪ್ರಾರಂಭವಾಗುವ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಕಳೆದ ತಿಂಗಳೇ ಪ್ರಕಟಿಸಲಾಗಿದೆ. ಈ ತಂಡದಲ್ಲಿರುವ 15 ಸದಸ್ಯರಲ್ಲಿ ಆರ್​ಸಿಬಿ ಬೌಲರ್ ಯುಜವೇಂದ್ರ ಚಹಲ್ ಅವರ ಹೆಸರು ಇಲ್ಲದಿರುವುದು ಅನೇಕರ ಹುಬ್ಬೇರಿಸಿತ್ತು. ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಕೂಡ ಇದಕ್ಕೆ ಧ್ವನಿಗೂಡಿಸಿದ್ಧಾರೆ. ಟಿ20 ವಿಶ್ವಕಪ್ ಭಾರತ ತಂಡಕ್ಕೆ ಯುಜವೇಂದ್ರ ಚಹಲ್ ಅವರನ್ನ ಯಾಕೆ ಆಯ್ಕೆ ಮಾಡಿಲ್ಲ ಎಂಬುದಕ್ಕೆ ಕಾರಣವಂತೂ ಗೊತ್ತಾಗಿಲ್ಲ ಎಂದು ಸೆಹ್ವಾಗ್ ಹೇಳಿದ್ದಾರೆ.

    ಐಪಿಎಲ್​ನಲ್ಲಿ ಕಳೆದ ಎರಡು ಪಂದ್ಯಗಳಲ್ಲಿ ಮಾತ್ರವೇ ಚಹಲ್ ಒಳ್ಳೆಯ ಬೌಲಿಂಗ್ ಪ್ರದರ್ಶನ ನೀಡುತ್ತಿಲ್ಲ. ಎಲ್ಲಾ ಪಂದ್ಯಗಳಲ್ಲೂ ಅವರು ಇದನ್ನೇ ಮಾಡುತ್ತಾ ಬರುತ್ತಿದ್ದಾರೆ. ಶ್ರೀಲಂಕಾದಲ್ಲೂ ಅವರ ಬೌಲಿಂಗ್ ಚೆನ್ನಾಗಿತ್ತು. ಈ ಮಾದರಿ ಕ್ರಿಕೆಟ್​ನಲ್ಲಿ ಹೇಗೆ ಬೌಲಿಂಗ್ ಮಾಡಬೇಕೆಂಬ ಕಲೆ ಅವರಿಗೆ ಗೊತ್ತಿದೆ ಎಂದು ಕ್ರಿಕ್ ಬಜ್ ವೆಬ್ ಸೈಟ್​ ಜೊತೆಗಿನ ಸಂವಾದದ ವೇಳೆ ಸೆಹ್ವಾಗ್ ಅಭಿಪ್ರಾಯಪಟ್ಟಿದ್ಧಾರೆ.

    ಮುಂಬೈ ಇಂಡಿಯನ್ಸ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ ಹರ್ಷಲ್ ಪಟೇಲ್ ಜೊತೆ ಯುಜವೇಂದ್ರ ಚಹಲ್ ಅವರು ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದರು. ಕೇವಲ 11 ರನ್ನಿತ್ತು ಅವರು 3 ವಿಕೆಟ್ ಪಡೆದಿದ್ದರು. ಅವರ ಬೌಲಿಂಗ್ ಪ್ರದರ್ಶನವನ್ನು ವಿಶ್ಲೇಷಿಸುವ ವೇಳೆ ಸೆಹ್ವಾಗ್ ಅವರು ಟಿ20 ವಿಶ್ವಕಪ್​ಗೆ ಅವರನ್ನ ಆಯ್ಕೆ ಯಾಕೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. “ಮಿಡಲ್ ಓವರ್​ನಲ್ಲಿ ವಿಕೆಟ್​ಗಳನ್ನ ಪಡೆದು ಗ್ಲೆನ್ ಮ್ಯಾಕ್ಸ್​ವೆಲ್ ಮತ್ತು ಚಹಲ್ ಅವರು ಆರ್​ಸಿಬಿ ಗೆಲುವಿಗೆ ಕಾರಣರಾಗಿದ್ಧಾರೆ. ಮುಂಬೈನಲ್ಲಿ ಕೊನೆಯವರೆಗೂ ಒಳ್ಳೆಯ ಬ್ಯಾಟಿಂಗ್ ಲೈನಪ್ ಇರುವುದರಿಂದ ಈ ಸ್ಕೋರನ್ನು ಸುಲಭವಾಗಿ ಚೇಸ್ ಮಾಡುತ್ತಾರೆಂದು ಎಣಿಸಲಾಗಿತ್ತು. ಆದರೆ, ಈ ಇಬ್ಬರು ಬೌಲರ್​ಗಳು ಪಂದ್ಯದ ಚಹರೆಯನ್ನೇ ಬದಲಿಸಿದರು” ಎಂದು ಚಹಲ್ ಬಗ್ಗೆ ಮಾತನಾಡುತ್ತಾ ಸೆಹ್ವಾಗ್ ಪ್ರಶಂಸಿಸಿದ್ದಾರೆ.

    ಟಿ20 ವಿಶ್ವಕಪ್​ಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸ್ಪಿನ್ನರ್​ಗಳಲ್ಲಿ ಆರ್ ಅಶ್ವಿನ್, ರವೀಂದ್ರ ಜಡೇಜಾ, ರಾಹುಲ್ ಚಾಹರ್ ಮತ್ತು ಅಕ್ಷರ್ ಪಟೇಲ್ ಅವರಿದ್ದಾರೆ. “ಯುಜವೇಂದ್ರ ಚಹಲ್ ಅವರನ್ನ ಭಾರತ ಟಿ20 ತಂಡಕ್ಕೆ ಯಾಕೆ ಆಯ್ಕೆ ಮಾಡಿಲ್ಲ ಎಂಬುದು ನನಗೆ ಈವರೆಗೆ ಅರ್ಥವೇ ಆಗಿಲ್ಲ. ಆಯ್ಕೆ ಮಾಡದೇ ಇರುವುದಕ್ಕೆ ಏನಾದರೂ ಕಾರಣವನ್ನಾದರೂ ಕೊಡಬೇಕಲ್ಲ. ಚಹಲ್ ಫಾರ್ಮ್​ನಲ್ಲಿಲ್ಲವಾ, ಅಥವಾ ಅವರಿಗಿಂತ ಬೇರೆಯವರು ಚೆನ್ನಾಗಿ ಬೌಲಿಂಗ್ ಮಾಡುತ್ತಾರಾ ಎಂಬುದನ್ನಾದರೂ ಹೇಳಬೇಕಲ್ಲ. ಚಹಲ್ ಅವರನ್ನ ಯಾಕೆ ಕೈಬಿಡಲಾಯಿತು ಎಂಬುದೇ ದೊಡ್ಡ ಪ್ರಶ್ನೆ. ಚಹಲ್ ಯಾವುದೇ ತಂಡಕ್ಕೂ ಅಗತ್ಯ ಬೀಳುವ ಬೌಲರ್ ಆಗಿದ್ದಾರೆ” ಎಂದು ವೀರೇಂದ್ರ ಸೆಹ್ವಾಗ್ ತಿಳಿಸಿದ್ಧಾರೆ.

    ಇದನ್ನೂ ಓದಿ: RR vs SRH- ರಾಯಲ್ಸ್​ಗೆ ಶಾಕ್ ಕೊಟ್ಟ ಸನ್​ರೈಸರ್ಸ್; 7 ವಿಕೆಟ್​ಗಳಿಂದ ಜಯಭೇರಿ

    ಕೆಲ ವರದಿಗಳ ಪ್ರಕಾರ, ವಿರಾಟ್ ಕೊಹ್ಲಿ ಅವರು ಯುಜವೇಂದ್ರ ಚಹಲ್ ಅವರನ್ನ ಟಿ20 ತಂಡಕ್ಕೆ ಸೇರಿಸಿಕೊಳ್ಳುವ ಇರಾದೆಯಲ್ಲಿದ್ದರಂತೆ. ಆರ್ ಅಶ್ವಿನ್ ಬದಲು ಚಹಲ್ ಅವರಿಗೆ ಸ್ಥಾನ ಕೊಡಿಸುವುದು ಅವರ ಇಚ್ಛೆಯಾಗಿತ್ತು. ಆದರೆ, ಕೊಹ್ಲಿ ಅವರ ಗಮನಕ್ಕೆ ತಾರದೆಯೇ ಬಿಸಿಸಿಐನಿಂದ ಟಿ20 ವಿಶ್ವಕಪ್ ತಂಡ ಘೋಷಣೆ ಆಗಿತ್ತು ಎಂಬ ಮಾತುಗಳು ಹರಿದಾಡುತ್ತಿವೆ.

    ಇನ್ನು, ಟಿ20 ವಿಶ್ವಕಪ್​ನ ಭಾರತ ತಂಡಕ್ಕೆ ಎಂಎಸ್ ಧೋನಿಯನ್ನ ಮೆಂಟರ್ ಆಗಿ ಬಿಸಿಸಿಐ ಆಯ್ಕೆ ಮಾಡಿದೆ. ಅಗಾಧ ಅನುಭವ ಇರುವ ಹಾಗೂ ಕಾರ್ಯತಂತ್ರಗಳಲ್ಲಿ ನಿಪುಣನೆಂದು ಪರಿಗಣಿಸಲಾಗಿರುವ ಹಾಗೂ ನಾಯಕತ್ವದ ಗುಣ ಇರುವ ಎಂ ಎಸ ಧೋನಿಯನ್ನ ಟಿ20 ವಿಶ್ವಕಪ್ ಭಾರತ ತಂಡಕ್ಕೆ ಮೆಂಟರ್ ಮಾಡಿರುವ ಬಿಸಿಸಿಐ ನಿರ್ಧಾರವನ್ನು ಅನೇಕರು ಮಾಸ್ಟರ್ ಸ್ಟ್ರೋಕ್ ಎಂದು ಬಣ್ಣಿಸಿದ್ಧಾರೆ. ಭಾರತ ಕ್ರಿಕೆಟ್​ನ ಒಳಿತಿಗೆ ಇದು ಅತ್ಯುತ್ತಮ ಕ್ರಮ ಎಂದು ಬಹುತೇಕ ಮಂದಿ ಸ್ವಾಗತಿಸಿದ್ದಾರೆ. ಧೋನಿ ಅವರು ತಮ್ಮಲ್ಲಿ ಇನ್ನೂ ಕ್ರಿಕೆಟ್ ಕ್ಷಮತೆ ಇರುವುದನ್ನು ಯುಎಇಯ ಐಪಿಎಲ್ ಪಂದ್ಯಗಳ ಮೂಲಕ ಸಾಬೀತು ಮಾಡಿಯೂ ತೋರಿಸಿದ್ದಾರೆ.
    Published by:Vijayasarthy SN
    First published: