Virat Kohli: ಉಲ್ಟಾ ಬ್ಯಾಟ್ನಲ್ಲಿ ಸಿಕ್ಸ್ ಹೊಡೆದ ವಿರಾಟ್ ಕೊಹ್ಲಿ; ವಿಚಿತ್ರ ಶಾಟ್ ನೋಡಿ ಸಿಎಸ್ಕೆ ಬೌಲರ್ ದಂಗು
Virat Kohli Six: ಈ ನಡುವೆ ವಿರಾಟ್ ಕೊಹ್ಲಿ ತಂಡದ ರನ್ ಗತಿಯನ್ನ ಏರಿಸಲು ಶ್ರಮಿಸಿದರು. ಕೊನೆಯ ಹಂತದಲ್ಲಿ ಶಿವಂ ದುಬೆ ಜೊತೆಯಾಗಿ ವಿರಾಟ ಪ್ರದರ್ಶನ ತೋರಿದ ಕೊಹ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಬ್ಬರದ ಪ್ರದರ್ಶನ ನೀಡಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಸಿಡಿದೆದ್ದ ಕೊಹ್ಲಿ ಬಗ್ಗೆ ಮೆಚ್ಚುಗೆಯ ಮಹಾ ಪೂರವೇ ಹರಿದು ಬಂದಿದೆ. ನಿನ್ನೆಯ ಪಂದ್ಯದಲ್ಲಿ ಆರ್ಸಿಬಿ ಗೆಲ್ಲಲು ಕೊಹ್ಲಿಯ ಪಾತ್ರ ದೊಡ್ಡದಾಗಿದೆ. ಈ ಮಧ್ಯೆ, ಕೊಹ್ಲಿ ಹೊಡೆದ ಚಿತ್ರ-ವಿಚಿತ್ರ ಶಾಟ್ಗಳನ್ನು ನೋಡಿ ಚೆನ್ನೈ ಬೌಲರ್ಗಳು ದಂಗಾಗಿದ್ದಾರೆ. ಆರ್ಸಿಬಿ ಆರಂಭದಲ್ಲೇ ಆ್ಯರೋನ್ ಫಿಂಚ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ದೀಪಕ್ ಚಹಾರ್ ಬೌಲಿಂಗ್ನಲ್ಲಿ ಫಿಂಚ್(2) ಬೌಲ್ಡ್ ಆದರು. ಆದರೆ, ಎರಡನೇ ವಿಕೆಟ್ಗೆ ನಾಯಕ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ಉತ್ತಮ ಆಟ ಪ್ರದರ್ಶಿಸಿದರು. ಈ ಜೋಡಿ ಅರ್ಧಶತಕದ ಜೊತೆಯಾಟ ಆಡಿತು. ಆದರೆ, 11ನೇ ಓವರ್ನಲ್ಲಿ ಪಡಿಕ್ಕಲ್ 34 ಎಸೆತಗಳಲ್ಲಿ 33 ರನ್ ಗಳಿಸಿದ್ದಾಗ ಔಟ್ ಆಗಿ ಶಾಕ್ ನೀಡಿದರು. ಬಂದ ಬೆನ್ನಲ್ಲೇ ಎಬಿ ಡಿವಿಲಿಯರ್ಸ್ ಶೂನ್ಯಕ್ಕೆ ಔಟ್ ಆಗಿದ್ದು ತಂಡಕ್ಕೆ ದೊಡ್ಡ ಹೊಡೆತ ಬಿದ್ದಿತು. ವಾಷಿಂಗ್ಟನ್ ಸುಂದರ್ 10 ರನ್ಗೆ ಬ್ಯಾಟ್ ಕೆಳಗಿಟ್ಟರು. ಈ ನಡುವೆ ವಿರಾಟ್ ಕೊಹ್ಲಿ ತಂಡದ ರನ್ ಗತಿಯನ್ನ ಏರಿಸಲು ಶ್ರಮಿಸಿದರು. ಕೊನೆಯ ಹಂತದಲ್ಲಿ ಶಿವಂ ದುಬೆ ಜೊತೆಯಾಗಿ ವಿರಾಟ ಪ್ರದರ್ಶನ ತೋರಿದ ಕೊಹ್ಲಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.
ಈ ಮಧ್ಯೆ ಕೊಹ್ಲಿ ಹೊಡೆದ ಒಂದು ಶಾಟ್ ಎಲ್ಲರ ಗಮನ ಸೆಳೆದಿದೆ. ಅದು 14ನೇ ಓವರ್ನ ಮೊದಲ ಬಾಲ್. ಸ್ಯಾಮ್ ಕರನ್ ಬೌಲಿಂಗ್ಗೆ ಇಳಿದಿದ್ದರು. ಕರನ್ ಹಾಕಿದ ಬೌಲ್ ಅನ್ನು ಎಡಭಾಗಕ್ಕೆ ಅಟ್ಟಲು ಕೊಹ್ಲಿ ಬ್ಯಾಟ್ ಬೀಸಿದ್ದರು. ಆದರೆ ಬೌಲ್ ಬ್ಯಾಟ್ನ ಮತ್ತೊಂದು ಭಾಗಕ್ಕೆ ತಾಗಿ ಹಿಂಭಾಗದಲ್ಲಿ ಸಿಕ್ಸ್ ಹೋಗಿದೆ. ಈ ವಿಡಿಯೋ ನೋಡಿದವರು ಕೊಹ್ಲಿ ಹೊಸ ಶಾಟ್ ಒಂದನ್ನು ಕಂಡು ಹಿಡಿದಿದ್ದಾರೆ ಎಂದು ಅಚ್ಚರಿ ಹೊರ ಹಾಕಿದ್ದಾರೆ.