ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದದ ಸೋಲಿನ ಬೆನ್ನಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಭಾನುವಾರ ಮುಂಬೈನ ವಾಂಖೆಡೆ ಸ್ಟೇಡಿಯಂ ನಡೆದ ಸಿಎಸ್ಕೆ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ನಡೆಸಿದಕ್ಕಾಗಿ ಆರ್ಸಿಬಿ ನಾಯಕನಿಗೆ ದಂಡ ವಿಧಿಸಲಾಗಿದೆ. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್ಕೆ 191 ರನ್ ಕಲೆಹಾಕಿತ್ತು. ಈ ರನ್ ಮಳೆಯನ್ನು ನಿಯಂತ್ರಿಸಲು ಕೊಹ್ಲಿ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಹೀಗಾಗಿ ಸ್ಲೋ ಓವರ್ ರೇಟ್ ಶಿಕ್ಷೆಗೆ ಗುರಿಯಾಗಿದ್ದಾರೆ. ಅದರಂತೆ ಕೊಹ್ಲಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.
ಈ ದಂಡದ ಶಿಕ್ಷೆಗೆ ಗುರಿಯಾಗುತ್ತಿರುವ ನಾಲ್ಕನೇ ನಾಯಕ ವಿರಾಟ್ ಕೊಹ್ಲಿ. ಇದಕ್ಕೂ ಮುನ್ನ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ, ಮುಂಬೈ ಇಂಡಿಯನ್ಸ್ ಕ್ಯಾಪ್ಟನ್ ರೋಹಿತ್ ಶರ್ಮಾ ಹಾಗೂ ಕೆಕೆಆರ್ ನಾಯಕ ಇಯಾನ್ ಮೋರ್ಗನ್ ಸ್ಲೋ ಓವರ್ ರೇಟ್ಗೆ ದಂಡ ಪಾವತಿಸಿದ್ದರು.
2021ರ ಇಂಡಿಯನ್ ಪ್ರಿಮಿಯರ್ ಲೀಗ್ನ ಹೊಸ ನೀತಿ ಸಂಹಿತೆ ಪ್ರಕಾರ 20 ಓವರ್ಗಳನ್ನು 90 ನಿಮಿಷಗಳಲ್ಲಿ ಮುಗಿಸಬೇಕು. ಅಂದರೆ ಇನಿಂಗ್ಸ್ವೊಂದಕ್ಕೆ 90 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅದರಂತೆ 90 ನಿಮಿಷಗಳಲ್ಲಿ 20 ಓವರ್ಸ್ ಮುಗಿಯಬೇಕು. ಈ ಹಿಂದೆ 20ನೇ ಓವರ್ನ್ನು 90ನೇ ನಿಮಿಷದಿಂದ ಆರಂಭಿಸಲು ಅವಕಾಶವಿತ್ತು. ಆದರೀಗ 1 ಗಂಟೆ 30 ನಿಮಿಷಗಳ ಒಳಗೆ ಮೊದಲ ಇನಿಂಗ್ಸ್ ಬೌಲಿಂಗ್ ಮುಕ್ತಾಯವಾಗಬೇಕು.
ಹಾಗೆಯೇ ಟೈಮ್-ಔಟ್ಗಳಿಗಾಗಿ ತೆಗೆದುಕೊಂಡ ಸಮಯವನ್ನು ಹೊರತುಪಡಿಸಿ ಮೊದಲ ಒಂದು ಗಂಟೆಯೊಳಗೆ 14.11 ಓವರ್ಗಳನ್ನು ಬೌಲ್ ಮಾಡಲೇಬೇಕು. ಹೊಸ ನಿಯಮದಂತೆ ಯಾವುದೇ ಆಡಚಣೆ ಉಂಟಾಗದ ಪಂದ್ಯದ ಒಂದು ಇನಿಂಗ್ಸ್ 90 ನಿಮಿಷಗಳಲ್ಲಿ ಮುಗಿಸಬೇಕು. ಇಲ್ಲಿ 85 ನಿಮಿಷಗಳನ್ನು ಆಟಕ್ಕೆ ನಿಗದಿಪಡಿಸಲಾಗಿದ್ದರೆ, 5 ನಿಮಿಷಗಳ ಎರಡು ಟೈ ಔಟ್ ಕೂಡ ನೀಡಲಾಗುತ್ತದೆ. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಹೆಚ್ಚಿನ ಸಮಯ ತೆಗೆದುಕೊಂಡಿದ್ದು, ಹೀಗಾಗಿ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.
ಒಂದು ವೇಳೆ ಇದೇ ತಪ್ಪನ್ನು ಮುಂದಿನ ಪಂದ್ಯದಲ್ಲಿ ಮನಪೂರ್ವಕವಾಗಿ ಮುಂದುವರೆಸಿದರೆ 24 ಲಕ್ಷ ರೂ ಫೈನ್ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೆ ಪ್ಲೇಯಿಂಗ್ ಇಲೆವೆನ್ನ ಸದಸ್ಯರು 6 ಲಕ್ಷ ರೂ. ಫೈನ್ ಕಟ್ಟಬೇಕಾಗುತ್ತದೆ. ಹಾಗೆಯೇ ಇದೇ ತಪ್ಪು ಮೂರನೇ ಬಾರಿಗೆ ಕಂಡು ಬಂದರೆ ನಾಯಕನಿಗೆ 30 ಲಕ್ಷ ರೂ. ದಂಡವನ್ನು ವಿಧಿಸಲಾಗುತ್ತದೆ. ಅದರ ಜೊತೆಗೆ ಒಂದು ಪಂದ್ಯಕ್ಕೆ ಬ್ಯಾನ್ ಮಾಡಲಾಗುತ್ತದೆ. ಜೊತೆಗೆ ಪ್ಲೇಯಿಂಗ್ ಇಲೆವೆನ್ ಸದಸ್ಯರಿಗೆ 12 ಲಕ್ಷ ರೂ.ಗಳ ದಂಡ ವಿಧಿಸಲಾಗುತ್ತದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆರ್ಸಿಬಿ ತಂಡ ನಿಧಾನಗತಿ ಬೌಲಿಂಗ್ ಮಾಡಿದರೆ ವಿರಾಟ್ ಕೊಹ್ಲಿಗೆ ಕಂಟಕವಾಗುವ ಸಾಧ್ಯತೆಯಿದೆ. ಹಾಗೆಯೇ ಮುಂದಿನ ಪಂದ್ಯಗಳಲ್ಲಿ ಕೊಹ್ಲಿ ಮೈದಾನದಲ್ಲಿ ತಮ್ಮ ಬೌಲಿಂಗ್ ಪಡೆಯ ಮೇಲೆ ಸದಾ ಕಣ್ಣಿಡುವುದು ಅನಿವಾರ್ಯ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ