CSK vs RCB- ಆರ್​ಸಿಬಿ ಸೋಲಿಗೆ ಬೌಲರ್​ಗಳನ್ನ ದೂಷಿಸಿದ ಕೊಹ್ಲಿ; ಗೆಲುವಿಗೆ ಧೋನಿ ಕೊಟ್ಟ ಕಾರಣ ಇದು

Kohli vs Dhoni- ಚೆನ್ನೈ ವಿರುದ್ಧ ಬೆಂಗಳೂರು 6 ವಿಕೆಟ್​ಗಳಿಂದ ಸೋಲನುಭವಿಸಿತು. ತಮ್ಮ ತಂಡದ ಬೌಲರ್​ಗಳು ಅನಗತ್ಯವಾಗಿ ಬೌಂಡರಿಗಳನ್ನ ದಯಪಾಲಿಸಿದ್ದು ಸೋಲಿಗೆ ಕಾರಣ ಎಂದು ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ

ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ

 • Cricketnext
 • Last Updated :
 • Share this:
  ಶಾರ್ಜಾ, ಸೆ. 24: ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಐಪಿಎಲ್ 2021 ಟೂರ್ನಿಯಲ್ಲಿ ಸತತ ಎರಡನೇ ಸೋಲನುಭವಿಸಿತು. ಕೆಕೆಆರ್ ವಿರುದ್ಧ ಹೀನಾಯವಾಗಿ ಸೋತಿದ್ದ ಆರ್​ಸಿಬಿ ಇಂದು ಸಿಎಸ್​ಕೆ ವಿರುದ್ಧವೂ ಪರಾಭವಗೊಂಡಿತು. ಆರ್​ಸಿಬಿ ಒಡ್ಡಿದ 157 ರನ್ ಗುರಿಯನ್ನು ಸಿಎಸ್​ಕೆ ನಿರಾತಂಕವಾಗಿ ಮುಟ್ಟಿತು. ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ತಮ್ಮ ತಂಡದ ಸೋಲಿಗೆ ಬಹುತೇಕ ತಮ್ಮ ಬೌಲರ್​ಗಳನ್ನ ಹೊಣೆಯಾಗಿಸಿದರು. ತಮ್ಮ ಬೌಲರ್​ಗಳು ಅನಗತ್ಯವಾಗಿ ಬ್ಯಾಟರ್ಸ್​ಗೆ ಬೌಂಡರಿಗಳನ್ನ ದಯಪಾಲಿಸಿದರು. ಪವರ್ ಪ್ಲೇನಲ್ಲಿ ನಿರೀಕ್ಷಿತ ಬೌಲಿಂಗ್ ಪ್ರದರ್ಶನ ಬರಲಿಲ್ಲ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

  “ಪಿಚ್​ನಲ್ಲಿ ಸಾಕಷ್ಟು ಜೀವಂತಿಕೆ ಇತ್ತು. ಆದರೆ ಅದನ್ನ ನಮ್ಮ ಬೌಲರ್​ಗಳು ಸರಿಯಾಗಿ ಉಪಯೋಗಿಸಿಕೊಳ್ಳಲಿಲ್ಲ. ಚೆನ್ನೈ ತಂಡದ ಬ್ಯಾಟುಗಾರರಿಗೆ ಹಲವು ಬೌಂಡರಿಗಳನ್ನ ಗಳಿಸುವ ಅವಕಾಶ ಕೊಟ್ಟರು. ಎದುರಾಳಿ ಬ್ಯಾಟುಗಾರರಿಗೆ ಶಾಟ್ ಹೊಡೆಯಲು ಸಾಧ್ಯವಾಗದಂತೆ ಎಲ್ಲಿ ಬಾಲ್ ಎಸೆಯಬೇಕೆಂದು ಮೊದಲೇ ನಿರ್ಧರಿಸಿದ್ದೆವು. ಆದರೆ, ಅದು ಕಾರ್ಯಗತ ಆಗಲಿಲ್ಲ. ಪವರ್ ಪ್ಲೇ ಇದ್ದ ಮೊದಲ ಐದು ಓವರ್​ನಲ್ಲಿ ಎಕ್ಸ್-ಫ್ಯಾಕ್ಟರ್ (ಅಚ್ಚರಿ ಅಂಶ) ಇರಲಿಲ್ಲ. ಬಹಳ ಮುಖ್ಯ ಘಟ್ಟದಲ್ಲಿ ಸರಿಯಾಗಿ ಬೌಲಿಂಗ್ ಮಾಡುವುದು ಮುಖ್ಯ” ಎಂದು ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ಧಾರೆ.

  ಆರ್​ಸಿಬಿ ತಂಡ ಮೊದಲ ವಿಕೆಟ್​ಗೆ 111 ರನ್ ಜೊತೆಯಾಟ ಬಂದರೂ ಅಂತಿಮವಾಗಿ ಗಳಿಸಿದ್ದು ಕೇವಲ 156 ರನ್ ಮಾತ್ರ. ವಿರಾಟ್ ಕೊಹ್ಲಿ ಪ್ರಕಾರ ಬೆಂಗಳೂರು ತಂಡ ಇನ್ನೂ 15-20 ರನ್​ಗಳನ್ನಾದರೂ ಗಳಿಸಬೇಕಿತ್ತು. ಈ ಪಿಚ್​ಗೆ 185 ರನ್ ಉತ್ತಮ ಸ್ಕೋರಾಗಿರುತ್ತಿತ್ತು ಎಂಬುದು ಅವರ ಅನಿಸಿಕೆ.

  ಇದನ್ನೂ ಓದಿ: RCB vs CSK- ಆರ್​ಸಿಬಿಯನ್ನ ಮಣಿಸಿದ ಚೆನ್ನೈ ಸೂಪರ್ ಕಿಂಗ್ಸ್ ಮತ್ತೆ ಅಗ್ರಸ್ಥಾನಕ್ಕೆ

  ಧೋನಿ ಹೇಳಿದ್ದೇನು?

  ಒಂದು ಹಂತದಲ್ಲಿ 200 ರನ್ ಗಡಿ ದಾಟುವ ಕುರುಹು ತೋರಿದ್ದ ಆರ್​ಸಿಬಿ ತಂಡವನ್ನ ಚೆನ್ನೈ ಬೌಲರ್​ಗಳು 156 ರನ್​ಗೆ ಕಟ್ಟಿಹಾಕಿದರು. ಈ ವಿಚಾರದಲ್ಲಿ ಬೌಲರ್​ಗಳನ್ನ ಸಮರ್ಪಕವಾಗಿ ಬಳಕೆ ಮಾಡಿದ ಶ್ರೇಯಸ್ಸು ನಾಯಕ ಎಂಎಸ್ ಧೋನಿಗೆ ಸಲ್ಲಬೇಕು. ಪಂದ್ಯದ ಬಳಿಕ ಮಾತನಾಡಿದ ಧೋನಿ ತಮ್ಮ ಬೌಲರ್ಸ್ ನಿರ್ವಹಣೆ ಬಗ್ಗೆ ಒಂದಷ್ಟು ಮಾಹಿತಿ ನೀಡಿದರು. ಯುಎಇಯಲ್ಲಿ ಅಬುಧಾಬಿ, ದುಬೈನ ಪಿಚ್​ಗಳಿಗೆ ಹೋಲಿಸಿದರೆ ಶಾರ್ಜಾದ ಪಿಚ್ ತುಸು ನಿಧಾನಗತಿಯದ್ದಾಗಿದೆ. ಆರ್​ಸಿಬಿ ಇನ್ನಿಂಗ್ಸ್ ವೇಳೆ 9 ಓವರ್ ಬಳಿಕ ಪಿಚ್ ನಿಧಾನವಾಗತೊಡಗಿತು. ಆಗ ಧೋನಿ ಅವರ ಡಿಸಿಶನ್ ಮೇಕಿಂಗ್ ನಿರ್ಣಾಯಕವಾಗಿ ಪರಿಣಮಿಸಿತ್ತು. ಆ ಬಗ್ಗೆ ಮಾತನಾಡಿದ ಧೋನಿ, ತಮಗೆ ಮೊದಲು ಮೊಯೀನ್ ಅಲಿಗೆ ಬೌಲಿಂಗ್ ಕೊಡಬೇಕೆಂಬ ನಿರ್ಧಾರ ಮನಸಿನಲ್ಲಿತ್ತು. ಆದರೆ, ಡ್ವೇನ್ ಬ್ರಾವೋ ಅವರಿಗೆ ನಾನು ಚೆಂಡು ನೀಡಿದೆ. ಬ್ರಾವೋಗೆ ಒಂದೇ ಓವರ್​ನಲ್ಲಿ ಆರು ವಿಭಿನ್ನ ಎಸೆತ ಹಾಕುವಂತೆ ಹೇಳಿದೆ. ಬ್ರಾವೋ ಆ ಜವಾಬ್ದಾರಿ ಚೆನ್ನಾಗಿ ನಿಭಾಯಿಸಿದರು ಎಂದು ಹೇಳಿದರು.

  ಇನ್ನು, ಚೆನ್ನೈ ಬ್ಯಾಟಿಂಗ್ ಬಗ್ಗೆ ಮಾತನಾಡಿದ ಧೋನಿ, ಕೆಳಗಿನ ಕ್ರಮಾಂಕದವರಗೂ ಉತ್ತಮವಾಗಿ ಬ್ಯಾಟ್ ಮಾಡಬಲ್ಲ ಆಟಗಾರರಿದ್ದಾರೆ. ಬಹುತೇಕ ಆಟಗಾರರು ಯಾವುದೇ ಕ್ರಮಾಂಕದಲ್ಲೂ ಆಡಬಲ್ಲವರಾಗಿದ್ದಾರೆ. ಈ ಪಂದ್ಯದಲ್ಲಿ ಎಡಗೈ ಮತ್ತು ಬಲಗೈ ಬ್ಯಾಟ್ಸ್​ಮನ್ ಕಾಂಬಿನೇಶನ್ ಉತ್ತಮವಾಗಿರುತ್ತದೆಂಬುದು ನನ್ನ ಎಣಿಕೆಯಾಗಿತ್ತು. ಆದ್ದದರಿಂದ ಸುರೇಶ್ ರೈನಾ ಮತ್ತು ಅಂಬಾಟಿ ರಾಯುಡು ಅವರನ್ನ ಕೆಳಗಿನ ಕ್ರಮಾಂಕದಲ್ಲಿ ಆಡಲು ಕಳುಹಿಸಲಾಯಿತು ಎಂದು ಅಭಿಪ್ರಾಯಪಟ್ಟರು.

  ಇದನ್ನೂ ಓದಿ: Navnita Gautam- ಇಡೀ ಐಪಿಎಲ್​ನ ಸಪೋರ್ಟ್ ಸ್ಟಾಫ್​ನಲ್ಲಿ ಏಕೈಕ ಹುಡುಗಿ; ಈಕೆ ಆರ್​ಸಿಬಿ ಮಸಾಜ್ ಥೆರಪಿಸ್ಟ್

  ಅಂದಹಾಗೆ, ಧೋನಿ ಅವರು ಟಾಸ್ ಗೆದ್ದು ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದು ಇಬ್ಬನಿಯ ಕಾರಣಕ್ಕಂತೆ. ಡ್ಯೂ (ಇಬ್ಬನಿ) ಇದ್ದರೆ ಚೇಸಿಂಗ್ ಮಾಡಬೇಕೆಂದು ಮೊದಲೇ ನಿರ್ಧರಿಸಿದ್ದೆವು ಎಂದು ಧೋನಿ ತಿಳಿಸಿದರು. ಇಬ್ಬನಿ ಇದ್ದಾಗ ಎರಡನೇ ಅವಧಿಯಲ್ಲಿ ಚೆಂಡನ್ನ ಗ್ರಿಪ್ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ, ಹ್ಯೂಮಿಡಿಟಿ ಮತ್ತು ಡ್ಯೂ ಇದ್ದಾಗ ಬೌಲರ್​ಗಳು ಒದ್ದೆ ಕೈಯನ್ನ ಒರೆಸಿಕೊಳ್ಳಲು ಹರಸಾಹಸ ಮಾಡುವುದನ್ನು ನೀವು ಗಮನಿಸಿರಬಹುದು.

  ಚೆನ್ನೈ ತಂಡ 9 ಪಂದ್ಯಗಳಿಂದ 14 ಅಂಕಗಳನ್ನ ಹೊಂದಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಅದರ ನಾಕೌಟ್ ಪ್ರವೇಶ ಬಹುತೇಕ ಖಚಿತವೆಂಬಂತಿದೆ. ಸಿಎಸ್​ಕೆ ತನ್ನ ಮುಂದಿನ ಪಂದ್ಯವನ್ನ ಸೆ. 27ರಂದು ಕೆಕೆಆರ್ ವಿರುದ್ಧ ಆಡಲಿದೆ.
  Published by:Vijayasarthy SN
  First published: