Bad Umpiring- ಒಬ್ಬರೇ ಅಂಪೈರ್, ಮೂರು ತಪ್ಪು; ವಿರಾಟ್ ಕೊಹ್ಲಿ ಕೆರಳಿದ ವಿಡಿಯೋ

IPL 2021- ಶಾರ್ಜಾದಲ್ಲಿ ಎಲಿಮಿನೇಟರ್ ಪಂದ್ಯ ಅಂಪೈರ್ ವಿರೇಂದರ್ ಶರ್ಮಾ ಪಾಲಿಗೆ ಮರೆಯಲಾಗದ ಅನುಭವ ಕೊಟ್ಟಿತು. ಒಂದೇ ಪಂದ್ಯದಲ್ಲಿ ಅವರು ಡಿಆರ್​ಎಸ್​ನಿಂದ ಮೂರು ಬಾರಿ ತೀರ್ಪು ಬದಲಿಸುವ ಮುಜುಗರದ ಸಂದರ್ಭಗಳು ಎದುರಾದವು.

ಅಂಪೈರ್ ವಿರೇಂದರ್ ಶರ್ಮಾ ಜೊತೆ ವಾಗ್ವಾದದಲ್ಲಿ ವಿರಾಟ್ ಕೊಹ್ಲಿ

ಅಂಪೈರ್ ವಿರೇಂದರ್ ಶರ್ಮಾ ಜೊತೆ ವಾಗ್ವಾದದಲ್ಲಿ ವಿರಾಟ್ ಕೊಹ್ಲಿ

 • Share this:
  ಬೆಂಗಳೂರು: ನಿನ್ನೆ ಕೋಲ್ಕತಾ ನೈಟ್ ರೈಡರ್ಸ್ (KKR) ತಂಡದ ವಿರುದ್ಧ ಎಲಿಮಿನೇಟರ್ ಪಂದ್ಯದಲ್ಲಿ ಸೋತ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) ಐಪಿಎಲ್​ನಿಂದ ನಿರ್ಗಮಿಸಿತು. ಆರ್​ಸಿಬಿಯ 138 ರನ್ ಮೊತ್ತವನ್ನು ಕೆಕೆಆರ್ 2 ಎಸೆತ ಇರುವಂತೆ ಚೇಸ್ ಮಾಡಿತ ಗೆದ್ದಿತು. ಈ ಮಧ್ಯೆ ಪಂದ್ಯ ಹಲವು ರೋಚಕತೆಯ ಜೊತೆಗೆ ಅನೇಕ ಹೈಡ್ರಾಮಗಳಿಗೂ ಸಾಕ್ಷಿಯಾಯಿತು. ಸುನೀಲ್ ನರೈನ್ (Sunil Narine) ಅವರ ಮ್ಯಾಜಿಕ್ ಸ್ಪಿನ್ ಬಾಲ್​ಗಳು, ಅವರ ಕೆಮಿಯೋ ಬ್ಯಾಟಿಂಗ್ ಇನ್ನಿಂಗ್ಸ್, ಆರ್​ಸಿಬಿ ಫೀಲ್ಡರ್ಸ್ ಕೈಚೆಲ್ಲಿದ ಕ್ಯಾಚ್​ಗಳು, ಅಂಪೈರ್ ತಪ್ಪು ನಿರ್ಧಾರಗಳು, ಆರ್​ಸಿಬಿ ಬೌಲರ್​ಗಳ ಕಂಬ್ಯಾಕ್ ಇತ್ಯಾದಿ ಘಟನೆಗಳು ಕ್ರಿ,ಕೆಟ್ ಪ್ರೇಮಿಗಳಲ್ಲಿ ಕುತೂಹಲ, ರೋಚಕತೆ, ಹತಾಶೆ ಇತ್ಯಾದಿ ಉಳಿಯುವಂತೆ ಮಾಡಿದವು. ಒಂದು ಹಂತದಲ್ಲಿ ಕ್ಯಾಪ್ಟನ್ ಆಗಿ ಕೊನೆಯ ಐಪಿಎಲ್​ನಲ್ಲಿ ಆಡುತ್ತಿದ್ದ ವಿರಾಟ್ ಕೊಹ್ಲಿ ಅಂಪೈರ್ ಮೇಲೆ ಕೆರಳಿ ಕೆಂಡವಾಗಿದ್ದೂ ಆಯಿತು. ಆ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

  ಆರ್​ಸಿಬಿ ನಾಯಕ ವಿರಾಟ್ ಕೊಹ್ಲಿ ಆ ರೀತಿ ಕೆರಳಿದ್ದು ಅಂಪೈರ್ ವಿರೇಂದರ್ ಶರ್ಮಾ (Umpire Virender Sharma) ಅವರ ಮೇಲೆ. ಅದಕ್ಕೆ ಕಾರಣ, ವಿರೇಂದರ್ ಶರ್ಮಾ ಅವರು ಆ ಪಂದ್ಯದಲ್ಲಿ ಮೂರು ತಪ್ಪು ನಿರ್ಧಾರಗಳನ್ನ ತೆಗದುಕೊಂಡಿದ್ದರು. ಆ ಮೂರೂ ಕೂಡ ಆರ್​ಸಿಬಿಗೆ ವಿರುದ್ಧವಾಗಿಯೇ ಇದ್ದವು. ಡಿಆರ್​ಎಸ್ ಮೊರೆಹೋಗಿ ಆರ್​ಸಿಬಿ ಆ ನಿರ್ಧಾರ ಬದಲಿಸುವಂತಾಗಿತ್ತು. ಗೆಲ್ಲಲೇ ಬೇಕಿದ್ದ ಪಂದ್ಯದಲ್ಲಿ ಆರ್​ಸಿಬಿ ಸೋಲಿನ ಹಾದಿಯಲ್ಲಿದ್ದಾಗ ಅಂಪೈರ್ ತೆಗೆದುಕೊಂಡ ತಪ್ಪು ನಿರ್ಧಾರ ಕ್ಯಾಪ್ಟನ್ ಕೊಹ್ಲಿಯನ್ನ ಇನ್ನಿಲ್ಲದಂತೆ ಕೆರಳಿಸಿತ್ತು. ಒಂದಲ್ಲ, ಎರಡಲ್ಲ, ಮೂರು ಬಾರಿ ಅದೇ ಅಂಪೈರ್ ಆರ್​ಸಿಬಿಗೆ ವಿರುದ್ಧವಾಗಿಯೇ ನಿರ್ಣಯ ಕೈಗೊಂಡಿದ್ದ ಕೊಹ್ಲಿಯ ಕೋಪ ಹಿಡಿದಿಡಲು ಆಗಲಿಲ್ಲ.

  ಚಹಲ್ ಬೌಲಿಂಗ್​ನಲ್ಲಿ ಎಲ್​ಬಿಡಬ್ಲ್ಯೂ ಆದರೂ ಔಟ್ ಕೊಡದ ಅಂಪೈರ್: ಕೆಕೆಆರ್ ಚೇಸಿಂಗ್ ಮಾಡುತ್ತಿದ್ದ ಇನ್ನಿಂಗ್ಸ್​ನ ಏಳನೇ ಓವರ್​ನಲ್ಲಿ ಆರ್​ಸಿಬಿಯ ಬೌಲರ್ ಯುಜವೇಂದ್ರ ಚಹಲ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಕೆಕೆಆರ್ ಬ್ಯಾಟರ್ ರಾಹುಲ್ ತ್ರಿಪಾಠಿ ಅವರ ಪ್ಯಾಡ್​ಗೆ ಚೆಂಡು ಬಡಿಯಿತು. ಚಹಲ್ ಸೇರಿದಂತೆ ಆರ್​ಸಿಬಿಯ ಕೆಲ ಆಟಗಾರರು ಎಲ್​ಬಿಡ್ಲ್ಯೂಗೆ ಅಪೀಲ್ ಮಾಡಿದರು. ಆದರೆ, ಅಂಪೈರ್ ವಿರೇಂದರ್ ಶರ್ಮಾ ಔಟ್ ಅಲ್ಲ ಎಂದು ತೀರ್ಪಿತ್ತರು. ಕೊನೆಗೆ ಆರ್​ಸಿಬಿ ಡಿಆರ್​ಎಸ್ ಮೊರೆ ಹೋಯಿತು. ಆಗ ಡಿಆರ್​ಎಸ್​ನಲ್ಲಿ ರಾಹುಲ್ ತ್ರಿಪಾಠಿ ಎಲ್​ಬಿಡಬ್ಲ್ಯೂ ಆಗಿರುವುದನ್ನ ಖಾತ್ರಿಪಡಿಸಿತು. ಅಂಪೈರ್ ಶರ್ಮಾ ಸಾರಿ ಹೇಳಿ ತೀರ್ಪು ಬದಲಿಸಿ, ತ್ರಿಪಾಠಿ ಔಟ್ ಎಂದು ಬೆರಳೆತ್ತಿದರು.

  ಇದನ್ನೂ ಓದಿ: KL Rahul- ಕೆಎಲ್ ರಾಹುಲ್​​ರ ಈ 3 ದಾಖಲೆ ಮುರಿಯಲು ಆಗುತ್ತಾ? ಉಳಿದಿರುವುದು ಎರಡೇ ಪಂದ್ಯ

  ಈ ಹಿಂದೆ ಎರಡು ಬಾರಿ ಆರ್​ಸಿಬಿ ಬ್ಯಾಟರ್ಸ್​ಗೆ ಔಟೆಂದು ತಪ್ಪಾಗಿ ತೀರ್ಪು ನೀಡಿದ್ದ ಅಂಪೈರ್ ಮೇಲೆ ಒಳಗೊಳಗೆ ಕುದ್ದುಹೋಗಿದ್ದ ವಿರಾಟ್ ಕೊಹ್ಲಿ ಈಗ ಕ್ಲಿಷ್ಟಕರ ಸನ್ನಿವೇಶದಲ್ಲಿ ಅಂಪೈರ್ ಮತ್ತೊಮ್ಮೆ ತಪ್ಪೆಸಗಿದ್ದು ಕೆರಳುವಂತೆ ಮಾಡಿತು. ಕೋಪದಿಂದ ಅಂಪೈರ್ ಜೊತೆ ವಾಗ್ವಾದಕ್ಕಿಳಿದ ಅವರು ಯಾಕೆ ಪದೇ ಪದೇ ತಪ್ಪು ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರೆನ್ನಲಾಗಿದೆ. ಈ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.


  ಅಂಪೈರ್ ಮಾಡಿದ ಮೂರು ತಪ್ಪುಗಳು:

  ಆರ್​ಸಿಬಿ ಬ್ಯಾಟಿಂಗ್ ಮಾಡುತ್ತಿದ್ದ ಇನ್ನಿಂಗ್ಸಲ್ಲಿ ಎರಡು ಬಾರಿ ವಿರೇಂದರ್ ಶರ್ಮಾ ತಪ್ಪು ನಿರ್ಣಯ ಕೈಗೊಂಡಿದ್ದರು. ಶಹಬಾಜ್ ಅಹ್ಮದ್ ಮತ್ತು ಹರ್ಷಲ್ ಪಟೇಲ್ ಅವರಿಬ್ಬರನ್ನೂ ಎಲ್​ಬಿಡ್ಲ್ಯೂ ಆಗಿ ಔಟೆಂದು ಬೆರಳೆತ್ತಿದ್ದರು. ಆದರೆ, ಆ ಎರಡು ಸಂದರ್ಭದಲ್ಲೂ ಬ್ಯಾಟರ್​ಗಳು ಡಿಆರ್​ಎಸ್​ಗೆ ಮನವಿ ಮಾಡಿದ್ದರು. ಚೆಂಡು ಮೊದಲು ಬ್ಯಾಟ್​ಗೆ ತಾಗಿ ನಂತರ ಪ್ಯಾಡ್​ಗೆ ಬಡಿದದ್ದು ಡಿಆರ್​ಎಸ್​ನಲ್ಲಿ ಖಾತ್ರಿಯಾಗಿತ್ತು. ಹೀಗಾಗಿ, ಔಟ್ ಅಲ್ಲ ಎಂದು ಅಂಪೈರ್ ತೀರ್ಪು ಬದಲಿಸಿದ್ದರು. ನಂತರ ಕೆಕೆಆರ್ ಇನಿಂಗ್ಸಲ್ಲೂ ಶರ್ಮಾ ತಪ್ಪು ಪುನಾವರ್ತನೆ ಆಗಿತ್ತು.
  SCHEDULE TIME TABLE:
  ಇದೇ ವಿರೇಂದರ್ ಶರ್ಮಾ ಅವರು ಅ. 15ರಂದು ದುಬೈನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ರಿಸರ್ವ್ ಅಂಪೈರ್ ಆಗಿದ್ದಾರೆ. ನಿಗದಿತ ಆನ್​ಫೀಲ್ಡ್ ಅಂಪೈರ್​ನಲ್ಲಿ ಒಬ್ಬರು ಅಲಭ್ಯರಿದ್ದಲ್ಲಿ ಶರ್ಮಾ ಅಂಪೈರಿಂಗ್ ಮಾಡಲಿದ್ದಾರೆ. ಇನ್ನು, ನಿನ್ನೆ ಬೆಂಗಳೂರು ವಿರುದ್ಧ ಗೆದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡ ನಾಳೆ ಶಾರ್ಜಾದಲ್ಲೇ ನಡೆಯಲಿರುವ ಎರಡನೇ ಕ್ವಾಲಿಫಯರ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಇದಿರುಗೊಳ್ಳಲಿದೆ.
  Published by:Vijayasarthy SN
  First published: