ಅಹ್ಮದಾಬಾದ್: ಐಪಿಎಲ್ ಟೂರ್ನಿಯ ಆರನೇ ಸುತ್ತಿನಲ್ಲಿ ನಿನ್ನೆ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿತು. ಹಲವು ಏರಿಳಿತಗಳನ್ನ ಕಂಡ ಈ ಪಂದ್ಯದಲ್ಲಿ ಬೆಂಗಳೂರು ಕೇವಲ ಒಂದು ರನ್ನಿಂದ ಗೆದ್ದು ಬೀಗಿತು. ಐಪಿಎಲ್ ಅಂಕಪಟ್ಟಿಯಲ್ಲಿ ಐದು ಗೆಲುವುಗಳೊಂದಿಗೆ ಮತ್ತೊಮ್ಮೆ ಅಗ್ರಸ್ಥಾನಕ್ಕೆ ಏರಿತು. ರೋಚಕ ತಿರುವುಗಳಿದ್ದ ಈ ಪಂದ್ಯದಲ್ಲಿ ಬೆಂಗಳೂರು ತಂಡದ 171 ರನ್ಗೆ ಪ್ರತಿಯಾಗಿ ಡೆಲ್ಲಿ ಕ್ಯಾಪಿಟಲ್ಸ್ 170 ರನ್ ಗಳಿಸಿ ವೀರೋಚಿತ ಸೋಲನುಭವಿಸಿತು. ಆಟಕ್ಕೆ ಕುದುರಿಕೊಂಡ ಇಬ್ಬರು ಬ್ಯಾಟುಗಾರರು ಕ್ರೀಸಲ್ಲಿದ್ದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವಿನ ದಡ ಮುಟ್ಟಲು ಸಾಧ್ಯವಾಗಲಿಲ್ಲ. ಆರ್ಸಿಬಿ ತಂಡ ಟಾಸ್ ಸೋತಾಗಲೇ ಪಂದ್ಯವೂ ಕೈತಪ್ಪಬಹುದು ಎಂಬ ನಿರೀಕ್ಷೆ ಇತ್ತು. ಯಾಕೆಂದರೆ, ಅಹ್ಮದಾಬಾದ್ನಲ್ಲಿ ತೇವಾಂಶ ಹೆಚ್ಚಿರುವುದರಿಂದ ಎರಡನೇ ಅವಧಿಯಲ್ಲಿ ಬೌಲಿಂಗ್ ಮಾಡಲು ಕಷ್ಟಕರವಾಗಿರುತ್ತದೆ. ಹೀಗಾಗಿ, ಆರ್ಸಿಬಿ ಬೌಲರ್ಗಳಿಗೆ ಪಂದ್ಯದ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗದೇ ಹೋಗಬಹುದು ಎಂಬ ಎಣಿಕೆ ಇತ್ತು. ಆದರೆ, ಅಂತಿಮವಾಗಿ ಬೆಂಗಳೂರಿಗರು ಗೆಲುವಿನ ನಗೆ ಬೀರಿದರು.
ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯದ ಪ್ರಮುಖ ಅಂಶಗಳು ಇವು:
1) ಎಬಿಡಿ ಇನ್ನಿಂಗ್ಸ್: ಆರ್ಸಿಬಿ ಇನ್ನಿಂಗ್ಸ್ ವೇಳೆ 60 ರನ್ ಆಗುವಷ್ಟರಲ್ಲಿ ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್ ಮತ್ತು ಗ್ಲೆನ್ ಮ್ಯಾಕ್ಸ್ವೆಲ್ ಪೆವಿಲಿಯನ್ಗೆ ಮರಳಿದರು. ಸ್ಕೋರು 139 ರನ್ ಆಗಿದ್ದಾಗ ರಜತ್ ಪಾಟೀದಾರ್ ಮತ್ತು ವಾಷಿಂಗ್ಟನ್ ಸುಂದರ್ ಕೂಡ ಔಟಾಗಿದ್ದರು. ಅಗ ಉಳಿದದ್ದು 2 ಓವರ್. ಆರ್ಸಿಬಿ ಸ್ಕೋರು 160 ರನ್ಗೆ ಸೀಮಿತವಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಮಾರ್ಕಸ್ ಸ್ಟೋಯ್ನಿಸ್ ಅವರು ಮಾಡಿದ ಕೊನೆಯ ಓವರ್ ಆರ್ಸಿಬಿ ಪಾಲಿಗೆ ಗೇಮ್ ಚೇಂಜರ್ ಆಯಿತು. ಆ ಒಮದೇ ಓವರ್ನಲ್ಲಿ ಡೀವಿಲಿಯರ್ಸ್ 3 ಸಿಕ್ಸರ್ ಸಿಡಿಸಿ 23 ರನ್ ದರೋಡೆ ಮಾಡಿದರು. ಇದು ಆರ್ಸಿಬಿ ಹೋರಾಟಕ್ಕೆ ಹೊಸ ಬಲ ನೀಡಿತು.
2) ಮರಳು ಗಾಳಿ: ಅಹ್ಮದಾಬಾದ್ನಲ್ಲಿ ತೇವಾಂಶ ಇದ್ದರಿಂದ ಆರ್ಸಿಬಿ ಬೌಲರ್ಗಳಿಗೆ ನಿಖರವಾಗಿ ಚೆಂಡೆಸೆಯುವುದು ಕಷ್ಟದ ಸ್ಥಿತಿ ಇತ್ತು. ಆದರೆ, ಎರಡನೇ ಅವಧಿ ಪ್ರಾರಂಭಕ್ಕೂ ಮುನ್ನ ಸ್ಯಾಂಡ್ ಸ್ಟಾರ್ಮ್ (ಮರಳು ಬಿರುಗಾಳಿ) ಆಯಿತು. ಇದು ವಾತಾವರಣದ ತೇವಾಂಶ ನೀಗಿಸಿತ್ತು. ಇದರಿಂದ ಆರ್ಸಿಬಿ ಬೌಲರ್ಗಳು ತಮ್ಮ ಬೌಲಿಂಗ್ ಮೇಲೆ ಹೆಚ್ಚು ಹಿಡಿತ ಹೊಂದಲು ಸಾಧ್ಯವಾಯಿತು. ವಿರಾಟ್ ಕೊಹ್ಲಿ ಕೂಡ ಈ ಮರಳು ಬಿರುಗಾಳಿಯ ಅಂಶವನ್ನು ಪ್ರಸ್ತಾಪಿಸಿದ್ದಾರೆ.
3) ಹೆಟ್ಮಯರ್ ಕ್ಯಾಚ್ ಬಿಟ್ಟ ಪಡಿಕ್ಕಲ್: ಶೆಮ್ರಾನ್ ಹೆಟ್ಮಯರ್ ಆಗಮದವರೆಗೂ ಪಂದ್ಯ ಆರ್ಸಿಬಿ ಹಿಡಿತದಲ್ಲೇ ಇತ್ತು. ಹೆಟ್ಮಯರ್ ಬಂದ ಕೆಲ ಹೊತ್ತಿನಲ್ಲೇ ಪಡಿಕ್ಕಲ್ಗೆ ಕ್ಯಾಚಿತ್ತಿದ್ದರು. ಆದರೆ, ಕರ್ನಾಟಕದ ಆಟಗಾರ ಆ ಕ್ಯಾಚ್ ಡ್ರಾಪ್ ಮಾಡಿದ್ದರು. ಅದು ಮುಂದೆ ತೀರಾ ದುಬಾರಿಯಾಗಿ ಪರಿಣಮಿಸುವ ಸಾಧ್ಯತೆ ಇತ್ತು. ಹೆಟ್ಮಯರ್ 25 ಬಾಲ್ನಲ್ಲಿ ಅಜೇಯ 53 ರನ್ ಗಳಿಸಿ, ಡೆಲ್ಲಿ ತಂಡವನ್ನು ಗೆಲುವಿನ ದಡದ ಸಮೀಪ ಕೊಂಡೊಯ್ದಿದ್ದರು.
4) ಹೆಟ್ಮಯರ್-ಪಂತ್ ಜೊತೆಯಾಟ: ಡೆಲ್ಲಿ ಕ್ಯಾಪಿಟಲ್ಸ್ ತಂಡ 172 ರನ್ ಗುರಿ ಬೆನ್ನತ್ತುವ ಹಾದಿಯಲ್ಲಿ 13ನೇ ಓವರ್ನಲ್ಲಿ 92 ರನ್ಗೆ 4 ವಿಕೆಟ್ ಕಳೆದುಕೊಂಡು ಕಷ್ಟಕರ ಸ್ಥಿತಿಯಲ್ಲಿತ್ತು. ನಾಯಕ ರಿಷಭ್ ಪಂತ್ ಮತ್ತು ಶಿಮ್ರಾನ್ ಹೆಟ್ಮಯರ್ ಜೊತೆಯಾಟವು ಡೆಲ್ಲಿ ತಂಡದ ಗೆಲುವಿನ ನಿರೀಕ್ಷೆ ಹುಟ್ಟಿಸಿತ್ತು. ಹೆಟ್ಮಯರ್ ಅವರಂತೂ ಗೇಮ್ ಚೇಂಜರ್ ಎನಿಸಿದ್ದರು. ಎಬಿ ಡೀವಿಲಿಯರ್ಸ್ ಆಟಕ್ಕೆ ಸಮನಾದ ಪ್ರದರ್ಶನ ನೀಡಿದರು. ಒಂದು ಹಂತದಲ್ಲಿ ಡೆಲ್ಲಿ ತಂಡ ಪಂದ್ಯ ಗೆಲ್ಲಲು 3 ಓವರ್ನಲ್ಲಿ 46 ರನ್ ಗಳಿಸುವ ಅಗತ್ಯ ಇತ್ತು. ಮೂರು ಓವರ್ನಲ್ಲಿ ಕೇವಲ 11 ರನ್ನಿತ್ತಿದ್ದ ಕೈಲೆ ಜೇಮಿಸನ್ ಅವರು 18ನೇ ಓವರ್ ಬೌಲ್ ಮಾಡಿದಾಗ ಯಾರೂ ಎಣಿಸಿದ ರೀತಿ ಪಂದ್ಯಕ್ಕೆ ತಿರುವು ಸಿಕ್ಕಿತು. ಹೆಟ್ಮಯರ್ ಸ್ಫೋಟಕ ಆಟದಿಂದಾಗಿ ಆ ಒಂದೇ ಓವರ್ನಲ್ಲಿ 21 ರನ್ ಹರಿದುಬಂತು. ಇದರಿಂದ ಡೆಲ್ಲಿ ಗೆಲುವಿನ ಸಾಧ್ಯತೆ ದಟ್ಟವಾಯಿತು.
5) ಪಂತ್ ಪರದಾಟ: ಒಂದೆಡೆ ಶಿಮ್ರಾನ್ ಹೆಟ್ಮಯರ್ ಗೇಮ್ ಚೇಂಜರ್ ಆಗುವಂಥ ಆಟ ಆಡಿದರೆ, ಮತ್ತೊಂದೆಡೆ ನಾಯಕ ರಿಷಭ್ ಪಂತ್ ರನ್ ಗಳಿಸಲು ತುಸು ಪರದಾಡಿದರು. ಹೀಗಿದ್ದರೂ ಕೊನೆಯ ಓವರ್ನಲ್ಲಿ ಅವರು ಸಿಂಗಲ್ಸ್ ತೆಗೆದುಕೊಂಡು ಹೆಟ್ಮಯರ್ ಅವರಿಗೆ ಸ್ಟ್ರೈಕ್ ಕೊಟ್ಟಿದ್ದರೆ ಡೆಲ್ಲಿ ಗೆಲುವಿನ ಸಾಧ್ಯತೆ ಹೆಚ್ಚಿರುತ್ತಿತ್ತು. ಆದರೂ ಪಂತ್ ಅವರು ತಮ್ಮ ಕೈಲಾದ ಮಟ್ಟಿಗೆ ಪ್ರಯತ್ನವಂತೂ ಮಾಡಿದರು. ಗೆಲ್ಲಲು 2 ಬಾಲ್ನಲ್ಲಿ 10 ರನ್ ಇದ್ದಾಗ ಅವರಿಂದ ಎರಡು ಬೌಂಡರಿ ಬಂದವು. ಸಿಕ್ಸರ್ ಹೊಡೆಯಲು ಸಾಧ್ಯವಾಗಲಿಲ್ಲ.
6) ಹರ್ಷಲ್ ಪಟೇಲ್: ಹಿಂದಿನ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವಿರುದ್ಧ ಒಂದೇ ಓವರ್ನಲ್ಲಿ 37 ರನ್ ಚಚ್ಚಿಸಿಕೊಂಡಿದ್ದ ಹರ್ಷಲ್ ಪಟೇಲ್ ನಿನ್ನೆಯ ಪಂದ್ಯದಲ್ಲಿ ಒಂದಿಷ್ಟೂ ಎದೆಗುಂದದೆ ಬೌಲಿಂಗ್ ಮಾಡಿ 2 ವಿಕೆಟ್ ಕೂಡ ಪಡೆದರು. ಅಲ್ಲದೇ, 19ನೇ ಓವರ್ನಲ್ಲಿ ಕೇವಲ 11 ರನ್ ನೀಡಿದ್ದು ಗಮನಾರ್ಹ. ಆಗ ಹೆಟ್ಮಯರ್ ಬಹಳ ಡೇಂಜರಸ್ ಆಗಿ ಬ್ಯಾಟ್ ಮಾಡುತ್ತಿದ್ದರು. ಆದರೂ ಹೆಚ್ಚು ರನ್ ಹರಿದುಹೋಗದಂತೆ ಹರ್ಷಲ್ ಪಟೇಲ್ ನೋಡಿಕೊಂಡಿದ್ದು ವಿಶೇಷ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ