ಶ್ರೀಲಂಕಾದ ಸ್ಟಾರ್ ಆಲ್ರೌಂಡರ್ ತಿಸಾರ ಪೆರೆರಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ದೀಢೀರಣೆ ನಿವೃತ್ತಿ ಪ್ರಕಟಿಸಿರುವ ಪೆರೆರಾ ಈ ಮೂಲಕ ಲಂಕಾ ಕ್ರಿಕೆಟ್ ಅಭಿಮಾನಿಗಳಿಗೆ ಆಘಾತ ನೀಡಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಲಂಕಾ ಪರ ಅತ್ಯುತ್ತಮ ಫಾರ್ಮ್ ಪ್ರದರ್ಶಿಸುತ್ತಿರುವ ಪೆರೆರಾ ಭಾರತದಲ್ಲಿ ನಡೆಯಲಿರುವ ಮುಂದಿನ ಟಿ20 ವಿಶ್ವಕಪ್ನಲ್ಲಿ ಅಬ್ಬರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ದಿಢೀರ್ ನಿವೃತ್ತಿ ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
2009 ಡಿಸೆಂಬರ್ 24ರಂದು ಭಾರತ ಮತ್ತು ಶ್ರೀಲಂಕಾ ನಡುವಣ ಏಕದಿನ ಪಂದ್ಯದ ಮೂಲಕ ಪೆರೆರಾ ಅಂತರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಿದ್ದರು. ಅಲ್ಲದೆ ಲಂಕಾ ಪರ 166 ಏಕದಿನ ಪಂದ್ಯಗಳನ್ನಾಡಿ 10 ಅರ್ಧಶತಕ ಹಾಗೂ 1 ಶತಕದೊಂದಿಗೆ 2338 ರನ್ ಕಲೆಹಾಕಿದ್ದರು. ಅದರ ಜೊತೆ ಬೌಲಿಂಗ್ನಲ್ಲೂ ಮಿಂಚಿದ್ದ ಪೆರೆರಾ 175 ವಿಕೆಟ್ಗಳನ್ನು ಕಬಳಿಸಿದ್ದರು. ಹಾಗೆಯೇ 84 ಟಿ20 ಪಂದ್ಯಗಳಿಂದ 1204 ರನ್ ಹಾಗೂ 51 ವಿಕೆಟ್ ಪಡೆದಿದ್ದಾರೆ.
2010 ಚೆನ್ನೈ ಸೂಪರ್ ಕಿಂಗ್ಸ್ ಪರ ಕಣಕ್ಕಿಳಿಯುವ ಮೂಲಕ ಐಪಿಎಲ್ಗೆ ಪದಾರ್ಪಣೆ ಮಾಡಿದ್ದ ಪೆರೆರಾ, ಆ ಬಳಿಕ ಕೊಚ್ಚಿನ್ ಟಸ್ಕರ್ಸ್, ಮುಂಬೈ ಇಂಡಿಯನ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರೈಸಿಂಗ್ ಪುಣೆ ಜೈಂಟ್ಸ್ ಪರ ಆಡಿದ್ದರು. ಅಲ್ಲದೆ ಈ ಬಾರಿ ಐಪಿಎಲ್ನಲ್ಲಿ ಹೆಸರು ನೀಡಿದ್ದರೂ, 32 ವರ್ಷದ ಎಡಗೈ ದಾಂಡಿಗನನ್ನು ಯಾವುದೇ ಫ್ರಾಂಚೈಸಿ ಖರೀದಿಸಿರಲಿಲ್ಲ.
ಅತ್ತ ಲಂಕಾ ದೇಶೀಯ ಟೂರ್ನಿಯಲ್ಲಿ ಪೆರೆರಾ ಒಂದೇ ಓವರ್ನಲ್ಲಿ 6 ಸಿಕ್ಸರ್ ಸಿಡಿಸಿ ಶ್ರೀಲಂಕಾ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ್ದರು. ಅಲ್ಲದೆ ಕ್ರಿಕೆಟ್ ಇತಿಹಾಸದಲ್ಲಿ 6 ಎಸೆತಗಳಲ್ಲೂ ಸಿಕ್ಸರ್ ಸಿಡಿಸಿದ ಸರದಾರರ ಪಟ್ಟಿಯಲ್ಲಿ ಸೇರ್ಪಡೆಯಾದ 9ನೇ ಬ್ಯಾಟ್ಸ್ಮನ್ ಎನಿಸಿಕೊಂಡಿದ್ದರು. ಇದೇ ಕಾರಣದಿಂದ ಮತ್ತೆ ಶ್ರೀಲಂಕಾ ಟಿ20 ತಂಡದಲ್ಲಿ ತಿಸೆರಾ ಪೆರೆರಾ ಈ ಬಾರಿ ಅಬ್ಬರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಇತ್ತೀಚೆಗಷ್ಟೇ ಶ್ರೀಲಂಕಾ ಕ್ರಿಕೆಟ್ ಮಂಡಳಿ, ಬಾಂಗ್ಲಾದೇಶ ಮತ್ತು ಇಂಗ್ಲೆಂಡ್ ವಿರುದ್ದ ಸರಣಿಯಿಂದ ಕೆಲ ಆಟಗಾರರನ್ನು ಕೈಬಿಡುವುದಾಗಿ ತಿಳಿಸಿತ್ತು. ಇದರ ಬೆನ್ನಲ್ಲೇ ತಿಸೆರಾ ಪೆರೆರಾ ತಮ್ಮ ಕ್ರಿಕೆಟ್ ಬದುಕಿಗೆ ಗುಡ್ ಬೈ ಹೇಳಿ ಅಚ್ಚರಿ ಮೂಡಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ