CSK Success Secret- ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಕಾರಣವಾದ ಅಂಶಗಳು

How CSK became Champions- ವಯಸ್ಸಾದ ಆಟಗಾರರನ್ನಿಟ್ಟುಕೊಂಡು ಚೆನ್ನೈ ತಂಡ ಪ್ಲೇ ಆಫ್ ಕೂಡ ಪ್ರವೇಶಿಸಲ್ಲ ಎಂದು ಮೂಗುಮುರಿದವರು ಹಲವರಿದ್ದರು. ಆದರೆ ಅದೆಲ್ಲವನ್ನೂ ಮೀರಿ ಸಿಎಸ್​ಕೆ ಚಾಂಪಿಯನ್ ಆಗಲು ಹೇಗೆ ಸಾಧ್ಯವಾಯಿತು?

ಎಂಎಸ್ ಧೋನಿ

ಎಂಎಸ್ ಧೋನಿ

 • Share this:
  ದುಬೈ: ಚೆನ್ನೈ ಸೂಪರ್ ಕಿಂಗ್ಸ್ ತಂಡ ನಾಲ್ಕನೇ ಬಾರಿ ಐಪಿಎಲ್ ಚಾಂಪಿಯನ್ ಎನಿಸಿದೆ. ನಿನ್ನೆ ನಡೆದ ಫೈನಲ್​ನಲ್ಲಿ ಕೆಕೆಆರ್ ತಂಡವನ್ನ ಸಿಎಸ್​ಕೆ 27 ರನ್​ಗಳಿಂದ ಸದೆಬಡಿದು ಪ್ರಶಸ್ತಿ ಪಡೆಯಿತು. ಕಳೆದ ಋತುವಿನಲ್ಲಿ ಏಳನೇ ಸ್ಥಾನಕ್ಕೆ ಕುಸಿದಿದ್ದ, ಹಾಗು ಈ ಐಪಿಎಲ್​ನಲ್ಲಿ ಪ್ಲೇ ಆಫ್​ಗೆ ಮುನ್ನ ಕೆಲ ಪಂದ್ಯಗಳಲ್ಲಿ ಸೋಲನುಭವಿಸಿದ್ದ ಚೆನ್ನೈ ತಂಡ ಪ್ಲೇ ಆಫ್​ನಲ್ಲಿ ಆಡಿದ ರೀತಿ ಬೆಕ್ಕಸಬೆರಗಾಗುವಂತೆ ಮಾಡಿತು. ಫಾರ್ಮ್​ನಲ್ಲಿಲ್ಲದ ಕೆಲ ಆಟಗಾರರು ಪ್ಲೇ ಆಫ್​ನಲ್ಲಿ ಫಾರ್ಮ್ ಕಂಡುಕೊಂಡು ತಂಡದ ಗೆಲುವಿಗೆ ಕೊಡುಗೆ ನೀಡಿದರು.

  ಧೋನಿ ಕ್ಯಾಪ್ಟನ್ಸಿ: ಮಹೇಂದ್ರ ಸಿಂಗ್ ಧೋನಿ ತಮ್ಮ ಆಟದ ಉಚ್ಛ್ರಾಯ ಕಾಲದಲ್ಲಿ ಅದ್ಭುತ ವಿಕೆಟ್ ಕೀಪರ್, ಅತ್ಯುತ್ತಮ ಮ್ಯಾಚ್ ಫಿನಿಶರ್ ಹಾಗೂ ಅತ್ಯುತ್ತಮ ಕ್ಯಾಪ್ಟನ್ ಎನಿಸಿದ್ದರು. ಆದರೆ, ಅಂತರರಾಷ್ಟ್ರೀಯ ಕ್ರಿಕೆಟ್​​ನಿಂದ ನಿವೃತ್ತರಾದ ಬಳಿಕ ಅವರು ಲಯ ಕಳೆದುಕೊಂಡರೇನೋ ಎನಿಸತೊಡಗಿತು. ಅದಕ್ಕೆ ತಕ್ಕಂತೆ ಅವರು ಈ ಐಪಿಎಲ್​ನಲ್ಲಿ ವಿಕೆಟ್ ಕೀಪಿಂಗ್​ನಲ್ಲಿ ಹಲವು ತಪ್ಪು ಮಾಡುತ್ತಿದ್ದರು. ಡಿಆರ್​ಎಸ್ ವಿಚಾರದಲ್ಲಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಬ್ಯಾಟಿಂಗ್​ನಲ್ಲಿ ರನ್ ಗಳಿಸಲು ಪರದಾಡುತ್ತಿದ್ದರು. ಆದರೆ, ಅವರ ಕ್ಯಾಪ್ಟನ್ಸಿ ಯಾವತ್ತೂ ತಂಡವನ್ನ ತಗ್ಗಿಸಲಿಲ್ಲ. ಪ್ಲೇ ಆಫ್​ನಲ್ಲಿ ಎಂಎಸ್ ಧೋನಿ ಲಯ ಕಂಡುಕೊಂಡರು. ಮತ್ತೆ ಮ್ಯಾಚ್ ಫಿನಿಶರ್ ಆಗಿ ಮಿಂಚಿದರು.

  ಅನುಭವಿ ಆಟಗಾರರ ಮೇಲೆ ಭರವಸೆ ಇಟ್ಟಿದ್ದು:

  ಚೆನ್ನೈ ತಂಡ ರಾಬಿನ್ ಉತ್ತಪ್ಪ ಮತ್ತು ಮೊಯೀನ್ ಅಲಿ ಅವರನ್ನ ಸೇರಿಸಿಕೊಂಡಾಗ ಅನೇಕರು ಇವರು ವಯಸ್ಸಾದ ಕುದುರೆ ಇಟ್ಟುಕೊಂಡು ರೇಸ್ ಹೇಗೆ ಗೆಲ್ಲುತ್ತಾರೆ ಎಂದು ಅಣಕಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ತಂಡ ತನ್ನ ಆಟಗಾರರ ಮೇಲೆ ಭರವಸೆ ಕಳೆದುಕೊಳ್ಳಲಿಲ್ಲ. ಪಂದ್ಯಗಳನ್ನ ಸೋತರೂ ತಂಡದಲ್ಲಿ ಹೆಚ್ಚು ಬದಲಾವಣೆ ಮಾಡುವ ಗೋಜಿಗೆ ಹೋಗಲಿಲ್ಲ. ಚೆನ್ನೈ ತಂಡದ ಯಶಸ್ಸಿಗೆ ಇದೂ ಒಂದು ಕಾರಣ ಇರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಸುರೇಶ್ ರೈನಾ ಬದಲು ರಾಬಿನ್ ಉತ್ತಪ್ಪ ಅವರನ್ನ ಕರೆತರಲಾಯಿತು. ಒಂದೆರಡು ಪಂದ್ಯದಲ್ಲಿ ಉತ್ತಪ್ಪ ಬ್ಯಾಟಿಂಗ್​ನಲ್ಲಿ ಪರದಾಡಿದರು. ಆಗ ಅವರನ್ನ ಕೈಬಿಡಲಿಲ್ಲ. ಭರವಸೆ ಮುಂದುವರಿಸಲಾಯಿತು. ಅದು ಕ್ವಾಲಿಫಯರ್ ಮತ್ತು ಫೈನಲ್ ಪಂದ್ಯಗಳಲ್ಲಿ ಫಲ ಕೊಟ್ಟಿತು. ರಾಬಿನ್ ಉತ್ತಪ್ಪ ಅಮೋಘ ಪ್ರದರ್ಶನ ನೀಡಿದರು.

  ಅನುಭವಿಗಳು ಮತ್ತು ಯುವಕರ ಮಧ್ಯೆ ಸ್ಪರ್ಧೆ ನಡೆದರೆ ಅನುಭವಿಗಳೇ ಯಾವತ್ತಿದ್ದರೂ ಗೆಲ್ಲುವುದು ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್​ರೌಂಡರ್ ಡ್ವೇನ್ ಬ್ರಾವೋ ಹೇಳಿದರು. ಕೆಕೆಆರ್ ನಂತರ ನನಗೆ ಬಹಳ ಸಮಾಧಾನ ಕೊಟ್ಟ ಫ್ರಾಂಚೈಸಿ ಯಾವುದಾದರೂ ಇದ್ದರು ಅದು ಚೆನ್ನೈ ಸೂಪರ್ ಕಿಂಗ್ಸ್ ಎಂದು ಫೈನಲ್ ಪಂದ್ಯಕ್ಕೆ ಮುನ್ನವೇ ರಾಬಿನ್ ಉತ್ತಪ್ಪ ಹೇಳಿದ್ದರು.

  ರಾಯುಡು ಮೇಲೂ ಭರವಸೆ: ಚೆನ್ನೈ ತಂಡ ಭರವಸೆ ಇಟ್ಟ ಅನುಭವಿಗಳ ಪೈಕಿ ಯಶಸ್ಸು ಸಿಗದವರೆಂದರೆ ಅಂಬಾಟಿ ರಾಯುಡು ಮಾತ್ರ. ಬೇರೆ ತಂಡದಲ್ಲಾಗಿದ್ದರೆ ರಾಯುಡು ಅವರಿಗೆ ಒಂದೆರಡು ಪಂದ್ಯ ಅವಕಾಶ ಕೊಟ್ಟು ಕೂರಿಸಿಬಿಡುತ್ತಿದ್ದರು. ಆದರೆ, ಫೈನಲ್ ಪಂದ್ಯಕ್ಕೂ ರಾಯುಡುಗೆ ಚಾನ್ಸ್ ಸಿಕ್ಕಿತ್ತು. ಆದರೆ, ದುರ್ದೈವಕ್ಕೆ ಫೈನಲ್​ನಲ್ಲಿ ಕ್ರೀಸ್​ಗೆ ಬರುವ ಅವಕಾಶವೇ ಸಿಗಲಿಲ್ಲ. ಬಹುಶಃ ಅವರು ಆಡಿದ್ದರೆ ಅವರಿಂದಲೂ ಬಿಗ್ ಇನಿಂಗ್ಸ್ ಬರುವ ಸಾಧ್ಯತೆ ಇತ್ತು. ಆ ಮಟ್ಟಿಗೆ ಆಟಗಾರರಿಗೆ ಚೆನ್ನೈ ತಂಡದಲ್ಲಿ ಹುರುಪಿನ ವಾತಾವರಣ ಇರುತ್ತದೆ.

  ಮೊಯೀನ್ ಅಲಿ ಅವರು ಆರಂಭದ ಕೆಲ ಪಂದ್ಯಗಳಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ ಅವರ ಮೇಲಿನ ಭರವಸೆಯನ್ನ ತಂಡ ಕಳೆದುಕೊಳ್ಳಲಿಲ್ಲ. ಪಂದ್ಯಗಳು ಉರುಳಿದಂತೆ ಮೊಯೀನ್ ಅಲಿ ಹೆಚ್ಚೆಚ್ಚು ಅಪಾಯಕಾರಿ ಬ್ಯಾಟರ್ ಎನಿಸತೊಡಗಿದರು. ಇದು ನಂಬಿಕೆಗೆ ಇರುವ ಶಕ್ತಿ.

  ಮಾತು ಕಡಿಮೆ, ಕೆಲಸ ಜಾಸ್ತಿ:

  ತಂಡದ ಮೀಟಿಂಗ್​ಗಳಲ್ಲಿ ಹೆಚ್ಚಿನ ಸಮಯ ರಣತಂತ್ರಗಳ ಬಗ್ಗೆ ಮಾತನಾಡುವುದೇ ಆಗಿರುತ್ತದೆ. ಸಿಎಸ್​ಕೆ ನಾಯಕ ಎಂಎಸ್ ಧೋನಿ ಅವರ ಪ್ರಕಾರ, ಮೀಟಿಂಗ್​ಗಳಲ್ಲಿ ಮಾತೇ ಹೆಚ್ಚಾದರೆ ಆಟಗಾರರ ಮೇಲೆ ಅನಗತ್ಯ ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ಚೆನ್ನೈ ತಂಡದಲ್ಲಿ ಹೆಚ್ಚು ಮಾತಿಗೆ ಅವಕಾಶ ಇಲ್ಲ. ಇದು ತಂಡದ ಯಶಸ್ಸಿಗೆ ಕಾರಣವಾದ ಸಂಗತಿಗಳಲ್ಲಿ ಒಂದಂತೆ.

  “ನಾವು ಜಾಸ್ತಿ ಮಾತನಾಡುವುದಿಲ್ಲ. ಒಬ್ಬೊಬ್ಬ ಆಟಗಾರನತ್ತ ಹೆಚ್ಚು ಗಮನ ಕೊಡಲಾಗುತ್ತದೆ. ನಮ್ಮ ಅಭ್ಯಾಸ ಅವಧಿಯೇ ಮೀಟಿಂಗ್ ಅವಧಿಯಂತೆ ಇರುತ್ತದೆ. ಆಗ ಆಟಗಾರರು ಹೆಚ್ಚು ಮುಕ್ತವಾಗಿರುತ್ತಾರೆ. ಒಂದು ರೂಮ್​ನಲ್ಲಿ ಕೂತು ನೀವು ಮಾತನಾಡಿದಾಗ ಸ್ವಲ್ಪ ಒತ್ತಡ ಹೆಚ್ಚಿದಂತೆ ಆಗುತ್ತದೆ” ಎಂದು ಎಂಎಸ್ ಧೋನಿ ಹೇಳುತ್ತಾರೆ.

  ಇದನ್ನೂ ಓದಿ: MS Dhoni- ಕೆಕೆಆರ್​ಗೆ ಪ್ರಶಸ್ತಿ ಸಿಗಬೇಕಿತ್ತು: ಎಂಎಸ್ ಧೋನಿ ಹೀಗಂದಿದ್ಯಾಕೆ?

  ಫಾರ್ಮ್​ನಲ್ಲಿದ್ದ ಬ್ಯಾಟುಗಾರರಿಂದ ಸ್ಥಿರ ಪ್ರದರ್ಶನ:

  ಈ ಐಪಿಎಲ್​ನಲ್ಲಿ ಕೊನೆಯ ಕೆಲ ಪಂದ್ಯಗಳನ್ನ ಹೊರತುಪಡಿಸಿದರೆ ಉಳಿದ ಸಂದರ್ಭದಲ್ಲಿ ಬ್ಯಾಟಿಂಗ್​ನ ಪ್ರಮುಖ ಆಧಾರ ಸ್ತಂಭವಾಗಿ ನಿಂತದ್ದು ಋತುರಾಜ್ ಗಾಯಕ್ವಾಡ್ ಮತ್ತು ಫ್ಯಾಫ್ ಡುಪ್ಲೆಸಿ ಅವರಿಬ್ಬರೆಯೇ. ಜೊತೆಗೆ ಬ್ರಾವೋ ಮತ್ತು ಜಡೇಜಾ, ಸ್ವಲ್ಪ ಮೊಯೀನ್ ಅಲಿ. ಉಳಿದವರು ಕ್ಲಿಕ್ ಆಗಿದ್ದು ಕಡಿಮೆ. ಆದರೂ ಸಿಎಸ್​ಕೆ ತಂಡ ತನ್ನ ಆಟಗಾರರ ಮೇಲಿಟ್ಟ ನಂಬಿಕೆ ಕಳೆದುಕೊಳ್ಳಲಿಲ್ಲ. ಈ ವಿಚಾರದಲ್ಲಿ ಎಂಎಸ್ ಧೋನಿ ಹೀಗೆ ವಿವರಿಸುತ್ತಾರೆ:

  “ಚೆನ್ನೈ ತಂಡದಲ್ಲಿ ಕೆಲ ಆಟಗಾರರನ್ನ ಅದಲುಬದಲು ಮಾಡಿ ಅವರನ್ನ ವಿಭಿನ್ನ ರೀತಿಯಲ್ಲಿ ಉಪಯೋಗಿಸಿದೆವು… ಫಾರ್ಮ್​ನಲ್ಲಿದ್ದ ಬ್ಯಾಟ್ಸ್​ಮನ್ ಇಡೀ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುವುದು ಮುಖ್ಯವಾಗಿತ್ತು. ಹಾಗೆಯೇ, ಈ ಬ್ಯಾಟರ್ಸ್ ಜೊತೆಗೆ ಇತರ ಆಟಗಾರರೂ ಶಕ್ಯವಿದ್ದಷ್ಟು ರನ್ ಕೊಡುಗೆ ನೀಡುತ್ತಿದ್ದರು…” ಎಂದು ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿಗೆ ಮತ್ತೊಂದು ಕಾರಣವನ್ನು ಧೋನಿ ಬಿಚ್ಚಿಟ್ಟಿದ್ಧಾರೆ.
  Published by:Vijayasarthy SN
  First published: